ವಯನಾಡ್‌ನ ಸ್ಥಳೀಯರು ಹೇಳುವ ಪ್ರಕಾರ ಸಾವಿರಾರು ಜನರನ್ನು ಸೇರಿಸಿ ಪ್ರಚಾರ ಮಾಡುವ, ಒಮ್ಮೆಲೆ ಗದ್ದಲ ಎಬ್ಬಿಸುವ ಇತರೆ ನಾಯಕರುಗಳ ತಂತ್ರದಿಂದ ಪ್ರಿಯಾಂಕಾ ಗಾಂಧಿ ಕೊಂಚ ದೂರವೇ ಉಳಿದಿದ್ದಾರೆ. ಹಾಗಂತ ಚುನಾವಣಾ ಪ್ರಚಾರವನ್ನೇನೂ ಕಡಿಮೆ ಮಾಡಿಲ್ಲ. ವಯನಾಡ್ ಉಪಚುನಾವಣೆಯಲ್ಲಿ ಬಿಜೆಪಿಯಿಂದ ನವ್ಯಾ ಹರಿದಾಸ್, ಎಡರಂಗದಿಂದ ಸತ್ಯನ್ ಮೊಕೇರಿ ಅವರು ಪ್ರಿಯಾಂಕಾ ಗಾಂಧಿ ಎದುರು ಕಣಕ್ಕಿಳಿದಿದ್ದಾರೆ.
ಸುಮಾರು 35 ವರ್ಷಗಳಿಂದ ತನ್ನ ತಂದೆ, ತಾಯಿ, ಸಹೋದರ ಮತ್ತು ಇತರೆ ಕಾಂಗ್ರೆಸ್ ನಾಯಕರುಗಳಿಗಾಗಿ ಚುನಾವಣಾ ಪ್ರಚಾರ ನಡೆಸುತ್ತಿದ್ದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಇದೇ ಮೊದಲ ಬಾರಿಗೆ ತನಗಾಗಿ ಮತಯಾಚಿಸುತ್ತಿದ್ದಾರೆ. ಇದಕ್ಕಾಗಿ ಎಂದಿನಂತೆ ಸ್ಥಳೀಯ ಜನರೊಂದಿಗೆ ಬೆರೆತು ಅವರ ಸಮಸ್ಯೆಗಳಿಗೆ ಕಿವಿಯಾಗುತ್ತಿದ್ದಾರೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಯ್‌ಬರೇಲಿ ಮತ್ತು ವಯನಾಡ್ ಕ್ಷೇತ್ರದಲ್ಲಿ ಕಣಕ್ಕಿಳಿದಿದ್ದ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ, ಎರಡೂ ಕ್ಷೇತ್ರದಲ್ಲೂ ಗೆಲುವು ಕಂಡರು. ಆದರೆ, ಒಂದು ಕ್ಷೇತ್ರದ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುವುದು ಅನಿವಾರ್ಯವಾದಾಗ ವಯನಾಡ್ ಕೈಬಿಟ್ಟು ರಾಯ್‌ಬರೇಲಿ ಸಂಸದರಾಗಿ ಉಳಿದರು. ಇದೀಗ ವಯನಾಡ್‌ನಲ್ಲಿ ಲೋಕಸಭೆ ಉಪಚುನಾವಣೆ ನಡೆಯುತ್ತಿದ್ದು, ಇದೇ ಮೊದಲ ಬಾರಿಗೆ ಪ್ರಿಯಾಂಕಾ ಗಾಂಧಿ ಕಣಕ್ಕಿಳಿದಿದ್ದಾರೆ. ಪ್ರಚಾರವೂ ಕೂಡ ಭರದಿಂದ ಸಾಗುತ್ತಿದೆ.
ಇದನ್ನು ಓದಿದ್ದೀರಾ? 35 ವರ್ಷಗಳಲ್ಲಿ ಇದೇ ಮೊದಲು ನನಗಾಗಿ ಚುನಾವಣೆ ಪ್ರಚಾರ ಮಾಡುತ್ತಿದ್ದೇನೆ: ಪ್ರಿಯಾಂಕಾ ಗಾಂಧಿ
ಅಕ್ಟೋಬರ್ 23ರಂದು ಪ್ರಿಯಾಂಕಾ ಗಾಂಧಿ ವಯನಾಡ್ ಉಪಚುನಾವಣೆಗೆ ನಾಮಪತ್ರ ಸಲ್ಲಿಸಿದ್ದು ಅಂದಿನಿಂದ ನಿರಂತರವಾಗಿ ಪ್ರಚಾರ ನಡೆಸುತ್ತಿದ್ದಾರೆ. ಜನರನ್ನು ಸ್ಥಳೀಯವಾಗಿ ಹಿಡಿದಿಟ್ಟುಕೊಳ್ಳುವ ಪ್ರಿಯಾಂಕಾ ಗಾಂಧಿ ತಂತ್ರ ಫಲಿಸುತ್ತದೆಯೋ ಇಲ್ಲವೋ ಎಂಬುದು ನವೆಂಬರ್ 13ರಂದು ನಡೆದ ಚುನಾವಣೆ ಮತ್ತು ನವೆಂಬರ್ 23ರಂದು ಘೋಷಣೆಯಾಗುವ ಫಲಿತಾಂಶದಿಂದ ತಿಳಿಯಲಿದೆ.
ಗಾಂಧಿ ಕುಟುಂಬದ ಬಗ್ಗೆ ವಯನಾಡ್‌ನಲ್ಲಿರುವ ಗೌರವವನ್ನು ಬಳಸಿಕೊಂಡು ಸದ್ಯ ಪ್ರಿಯಾಂಕಾ ಗಾಂಧಿ ಅಲ್ಲಲ್ಲಿ ಸಣ್ಣ ಸಭೆಗಳನ್ನು ನಡೆಸುತ್ತಿದ್ದಾರೆ. ರೈತರ ಸಮಸ್ಯೆ, ಭೂಕುಸಿತದಿಂದ ನಿರಾಶ್ರಿತರಾದ ವಯನಾಡ್ ಜನರಿಗೆ ಪುನರ್ ವಸತಿ, ಕೇಂದ್ರ ಸರ್ಕಾರ ಈವರೆಗೂ ವಯನಾಡ್ ಸಂತ್ರಸ್ತರಿಗೆ ಪರಿಹಾರ ಬಿಡುಗಡೆ ಮಾಡದಿರುವುದು, ಇತರೆ ವಿಚಾರಗಳ ಜೊತೆಗೆ ರಾಷ್ಟ್ರೀಯ ವಿಚಾರಗಳನ್ನು ಸೇರಿಸಿ ಪ್ರಿಯಾಂಕಾ ಅಬ್ಬರದ ಪ್ರಚಾರದಲ್ಲಿದ್ದಾರೆ.
ಏನೇ ಆದರೂ, ಪ್ರಿಯಾಂಕಾ ಗಾಂಧಿ ಅವರ ಚುನಾವಣಾ ಪ್ರಚಾರದ ವೈಖರಿ ಜನರ ಮನಸ್ಸನ್ನು ತಟ್ಟಿದೆ ಎಂಬುದನ್ನು ನಾವು ನಿರಾಕರಿಸುವಂತಿಲ್ಲ. 2024ರ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ strike rate (ಪ್ರಚಾರ ನಡೆಸಿದ ಸ್ಥಳದಲ್ಲಿ ಗೆಲುವು) ಶೇ.53 ಆಗಿದೆ. ಪ್ರಿಯಾಂಕಾ ಗಾಂಧಿ strike rate ಶೇ.46 ಇದೆ. ಮೋದಿಗಿಂತ ಪ್ರಿಯಾಂಕಾ ಕೊಂಚವಷ್ಟೇ ಕಡಿಮೆ strike rate ಹೊಂದಿದ್ದಾರೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸೇರಿದಂತೆ ಹಲವು ಪ್ರಬಲ ನಾಯಕರುಗಳ ಚುನಾವಣಾ ಗೆಲುವಿಗೆ ತನ್ನ ಪಾಲು ನೀಡಿದ್ದಾರೆ. ಈವರೆಗೆ ಇತರರ ಗೆಲುವಿನ ಫಲ ನೀಡಿದ ಪ್ರಿಯಾಂಕಾ ಶ್ರಮ ಈಗ ಅವರ ಜಯಕ್ಕೆ ಕೊಡುಗೆ ನೀಡುವ ನಿರೀಕ್ಷೆ ಕಾಂಗ್ರೆಸ್ ನಾಯಕರಿಗಿದೆ.
ಇದನ್ನು ಓದಿದ್ದೀರಾ? ವಯನಾಡು ಉಪಚುನಾವಣೆ | ನಾಮಪತ್ರ ಸಲ್ಲಿಸಿದ ಪ್ರಿಯಾಂಕಾ ಗಾಂಧಿ
ವಯನಾಡ್‌ನ ಸ್ಥಳೀಯರು ಹೇಳುವ ಪ್ರಕಾರ ಸಾವಿರಾರು ಜನರನ್ನು ಸೇರಿಸಿ ಪ್ರಚಾರ ಮಾಡುವ, ಒಮ್ಮೆಲೆ ಗದ್ದಲ ಎಬ್ಬಿಸುವ ಇತರೆ ನಾಯಕರುಗಳ ತಂತ್ರದಿಂದ ಪ್ರಿಯಾಂಕಾ ಗಾಂಧಿ ಕೊಂಚ ದೂರವೇ ಉಳಿದಿದ್ದಾರೆ. ಹಾಗಂತ ಚುನಾವಣಾ ಪ್ರಚಾರವನ್ನೇನೂ ಕಡಿಮೆ ಮಾಡಿಲ್ಲ. ಅಲ್ಲಲ್ಲಿ ಸುಮಾರು 500-1000 ಜನರನ್ನು ಸೇರಿಸಿ ಸಭೆ, ಪ್ರಚಾರ ಮಾಡುತ್ತಿದ್ದಾರೆ. ಪ್ರಚಾರ ಹೆಚ್ಚಾಗಿ ಕಾರ್ಯಕರ್ತರು ಮತ್ತು ಇತರೆ ಮಿತ್ರ ಪಕ್ಷಗಳ ಮೇಲೆ ಅವಲಂಬಿಸಿದೆ ಎನ್ನುತ್ತಾರೆ ಸ್ಥಳೀಯ ಕಾಂಗ್ರೆಸ್ ಮುಖಂಡರು. ಇನ್ನು ಪ್ರಿಯಾಂಕ ಮಾತ್ರವಲ್ಲ ಇನ್ನೂ ಹಲವು ನಾಯಕರುಗಳು ಪ್ರಚಾರ ನಡೆಸುತ್ತಿದ್ದಾರೆ.
ವಯನಾಡ್ ಉಪಚುನಾವಣೆಯಲ್ಲಿ ಬಿಜೆಪಿಯಿಂದ ನವ್ಯಾ ಹರಿದಾಸ್, ಎಡರಂಗದಿಂದ ಸತ್ಯನ್ ಮೊಕೇರಿ ಅವರು ಪ್ರಿಯಾಂಕಾ ಗಾಂಧಿ ಎದುರು ಕಣಕ್ಕಿಳಿದಿದ್ದಾರೆ. 2019 ಮತ್ತು 2024ರ ಲೋಕಸಭೆ ಚುನಾವಣೆಯಲ್ಲಿ ವಯನಾಡ್‌ನಲ್ಲಿ ಸ್ಪರ್ಧಿಸಿದ್ದ ರಾಹುಲ್ ಗಾಂಧಿ ಎರಡೂ ಬಾರಿಯೂ ಗೆದ್ದಿದ್ದರು. 2024ರಲ್ಲಿ 6,47,445 ಮತಗಳನ್ನು ಪಡೆದು, ತಮ್ಮ ಪ್ರತಿಸ್ಪರ್ಧಿ ಎಡರಂಗದ ಅಭ್ಯರ್ಥಿಯನ್ನು ಸುಮಾರು 3.64 ಲಕ್ಷ ಮತಗಳ ಅಂತರದಿಂದ ಸೋಲಿಸಿದ್ದರು. ಈ ಉಪಚುನಾವಣೆಯಲ್ಲಿ ಪ್ರಿಯಾಂಕಾ ಗಾಂಧಿಯ ಸ್ಥಳೀಯ ತಂತ್ರ ಫಲಿಸುತ್ತಾ ಕಾದುನೋಡಬೇಕಿದೆ. ಪ್ರಿಯಾಂಕಾ ಗೆದ್ದರೆ ಎಡರಂಗಕ್ಕೆ ಹಿನ್ನಡೆ, ಸೋತರೆ ಕಾಂಗ್ರೆಸ್‌ಗೆ ಮುಖಭಂಗವಾಗಲಿದೆ.

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.