ದೆಹಲಿಯಲ್ಲಿ ವಾಯು ಮಾಲಿನ್ಯವು ಹೆಚ್ಚುತ್ತಲೇ ಇದೆ. ದೀಪಾವಳಿಯ ಸಮಯದಲ್ಲಿ ಗಾಳಿಯ ಪರಿಸ್ಥಿತಿ ಮತ್ತಷ್ಟು ಗಂಭೀರ ಸ್ಥಿತಿಗೆ ತಲುಪಿದೆ. ದೀಪಾವಳಿ ಸಮಯದಲ್ಲಿ ವಿಶ್ವದಲ್ಲೇ ಅತಿ ಹೆಚ್ಚು ಮಾಲಿನ್ಯಕಾರಕ ನಗರವೆಂಬ ಕುಖ್ಯಾತಿಗೆ ದೆಹಲಿ ಗುರಿಯಾಗಿದೆ. ಮಾಲಿನ್ಯವು ಜನರ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತಿದ್ದು, ದೆಹಲಿಯ 69% ಕುಟುಂಬಗಲ್ಲಿ ಕನಿಷ್ಠ ಒಬ್ಬರು ಉಸಿರಾಟ ಮತ್ತು ಮಾಲಿನ್ಯ ಸಂಬಂಧಿತ ಆರೋಗ್ಯ ಸಮಸ್ಯೆಗೆ ತುತುತ್ತಾಗಿದ್ದಾರೆ ಎಂದು ಸಮೀಕ್ಷೆಯೊಂದು ಹೇಳಿದೆ.
ಗುರುವಾರ, ದೀಪಾವಳಿ ಹಬ್ಬದ ರಾತ್ರಿ ದೆಹಲಿಯಲ್ಲಿ ಎಕ್ಯೂಐ (ವಾಯು ಗುಣಮಟ್ಟ ಸೂಚ್ಯಂಕ) 999 ತಲುಪಿತ್ತು. ಇದು ದೆಹಲಿ ಮತ್ತು ಸುತ್ತಲಿನ ಪ್ರದೇಶದಲ್ಲಿ ಅತ್ಯಧಿಕ ದಾಖಲೆಯಗಿದೆ. ಈ ಬೆನ್ನಲ್ಲೇ, ಲೋಕಲ್ ಸರ್ಕಲ್ಸ್ ಸಮೀಕ್ಷೆ ನಡೆಸಿದೆ. ದೆಹಲಿ, ನೋಯ್ಡಾ, ಗುರುಗ್ರಾಮ್, ಫರಿದಾಬಾದ್ ಮತ್ತು ಗಾಜಿಯಾಬಾದ್‌ನ ಸುಮಾರು 21,000 ಕ್ಕೂ ಹೆಚ್ಚು ಮಂದಿಯನ್ನು ಮಾತನಾಡಿಸಿದೆ. ಸಮೀಕ್ಷೆಯ ಪ್ರಕಾರ, ದೆಹಲಿ ಮತ್ತು ಸುತ್ತಲಿನ 69% ಕುಟುಂಬಗಳಲ್ಲಿ ಒಬ್ಬರು ಅಥವಾ ಹೆಚ್ಚಿನ ಸದಸ್ಯರು ಗಂಟಲು ನೋವು ಅಥವಾ ಕೆಮ್ಮು ಸಮಸ್ಯೆಯಿಂದ ಬಳಲುತ್ತಿದ್ದಾರೆ. 62% ಕುಟುಂಬಗಳಲ್ಲಿ ಕನಿಷ್ಠ ಒಬ್ಬರು ಕಣ್ಣು ಉರಿ ಸಮಸ್ಯೆ ಎದುರಿಸುತ್ತಿದ್ದಾರೆ. ಹಾಗೂ ದೆಹಲಿಯ ಒಟ್ಟು ಜನರಲ್ಲಿ 46% ಮಂದಿ ‘ಮೂಗು ಕಟ್ಟುವ’ ಬಾಧೆಗೆ ತುತ್ತಾಗಿದ್ದರೆ. ಸಮೀಕ್ಷೆಗೆ ಒಳಪಟ್ಟವರಲ್ಲಿ ಹಲವರು ಒಂದಕ್ಕಿಂತ ಹೆಚ್ಚು ರೋಗಲಕ್ಷಣಗಳನ್ನು ಹೊಂದಿದ್ದಾರೆ.
ದೆಹಲಿಯಲ್ಲಿ 31% ಮಂದಿ ಉಸಿರಾಟದ ತೊಂದರೆ ಅಥವಾ ಆಸ್ತಮಾದಿಂದ ಬಳಲುತ್ತಿದ್ದಾರೆ. ಆತಂಕ (ಆ್ಯಂಸೈಟಿ)ಯಂತಹ ಸಮಸ್ಯೆಗೆ 23% ಮಂದಿ ತುತ್ತಾಗಿದ್ದರೆ, 15% ಮಂದಿ ನಿದ್ರಾಬಾಧೆ ಅನುಭವಿಸುತ್ತಿದ್ದಾರೆ. ಆದಾಗ್ಯೂ, ದೆಹಲಿ ಹೊರ ಭಾಗದ 31% ರಷ್ಟು ಜನರು ತಮ್ಮ ಕುಟುಂಬಗಳಲ್ಲಿ ಯಾರೂ ಮಾಲಿನ್ಯದ ಕಾರಣದಿಂದಾಗಿ ಯಾವುದೇ ಸಮಸ್ಯೆಗಳನ್ನು ಹೊಂದಿಲ್ಲ ಎಂದು ಹೇಳಿದ್ದಾರೆ.
ಈ ವರದಿ ಓದಿದ್ದೀರಾ?: ‘ವಕ್ಫ್ ಆಸ್ತಿ ಅಲ್ಲಾಹನದ್ದು, ಮರಳಿ ಪಡೆಯಲು ಕಾಂಪ್ರಮೈಸ್ ಬೇಡ’ ಎಂದಿದ್ದ ಬೊಮ್ಮಾಯಿ; ಇಲ್ಲಿದೆ ದಾಖಲೆ
ದೆಹಲಿಯ ಮೇಲೆ GRAP-1 (ಶ್ರೇಣೀಕೃತ ಪ್ರತಿಕ್ರಿಯೆ ಕ್ರಿಯಾ ಯೋಜನೆ) ಅನ್ನು ವಿಧಿಸಿದ ದಿನಗಳ ನಂತರ ಅಕ್ಟೋಬರ್ 19 ರಂದು ಇದೇ ರೀತಿಯ ಸಮೀಕ್ಷೆ ನಡೆಸಲಾಗಿತ್ತು. ಆ ಸಮೀಕ್ಷೆಗೆ ಹೋಲಿಸಿದರೆ ಹೊಸ ಸಮೀಕ್ಷೆ ನಡೆಯುವ ವೇಳೆಗೆ, ಅಂದರೆ, ಕೇವಲ ಎರಡು ವಾರಗಳಲ್ಲಿ ಗಂಟಲು ನೋವು ಮತ್ತು ಕೆಮ್ಮು ಹೊಂದಿರುವ ಸಂಖ್ಯೆಯು 36%ನಿಂದ 69%ಗೆ ಏರಿಕೆಯಾಗಿದೆ.
ಗಮನಾರ್ಹವೆಂದರೆ, ಸಮೀಕ್ಷೆ ಒಳಪಟ್ಟಿವರ ಪೈಕಿ ಕೇವಲ 23% ಜನರು ಮಾತ್ರ ವಾಯು ಶುದ್ಧಿಕಾರಕಗಳನ್ನು (ಏರ್ ಪಿಲ್ಟರ್) ಬಳಸುತ್ತಿದ್ದಾರೆ. 15% ಜನರು ತಮ್ಮ ದಿನನಿತ್ಯದ ಚಟುವಟಿಕೆಗಳಿಗಾಗಿ ಹೊರಹೋಗುವಾಗ ಮಾಸ್ಕ್‌ಗಳನ್ನು ಧರಿಸುತ್ತಿದ್ದಾರೆ. 15% ಜನರು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಹಾರ ಅಥವಾ ಪಾನೀಯಗಳನ್ನು ಹೆಚ್ಚಾಗಿ ಬಳಸಲು ಯೋಜಿಸುತ್ತಿದ್ದಾರೆ. ಅಲ್ಲದೆ, ಹಲವು ಮಂದಿ ದೆಹಲಿಯನ್ನು ತೊರೆಯಲು ಮುಂದಾಗಿದ್ದಾರೆ.