ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾಗಿದೆ. ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದೆ. ಮುಖ್ಯಮಂತ್ರಿ ಗಾದಿಗಾಗಿ ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ಹಗ್ಗಜಗ್ಗಾಟ ನಡೆಸುತ್ತಿದ್ದರೆ, ಕೆಲವರು ಮಂತ್ರಿಗಿರಿ ತಮಗೇಬೇಕೆಂದು ಹೇಳುತ್ತಾ ಓಡಾಡುತ್ತಿದ್ದಾರೆ. ಇದೆಲ್ಲದರ ನಡುವೆ, ವಿಧಾನಸೌಧ ಪ್ರವೇಶಿಸಿರುವ ಶಾಸಕರಲ್ಲಿ ಕ್ರಿಮಿನಲ್ ಹಿನ್ನೆಲೆಯವರು ಎಷ್ಟು ಮಂದಿಯಿದ್ದಾರೆ ಎಂದು ನೋಡಿದರೆ, ಬರೋಬ್ಬರಿ 55%ರಷ್ಟು ಅಂದರೆ, 122 ಮಂದಿ ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಅವರೆಲ್ಲರೂ ತಮ್ಮ ನಾಮಪತ್ರ ಸಲ್ಲಿಕೆಯ ವೇಳೆ, ಬಹಿರಂಗ ಪಡಿಸಿದ್ದಾರೆ.
ಎಲ್ಲ ಶಾಸಕ ಹಿನ್ನಲೆಗಳ ಕುರಿತು ಅಧ್ಯಯನ ನಡೆಸಿರುವ ಅಸೋಸಿಯೇಷನ್ ಫಾರ್ ಡೆಮೊಕ್ರಟಿಕ್ ರಿಫಾಮ್ಸ್‌ರ್ (ಎಡಿಆರ್) ವರದಿ ಬಿಡುಗಡೆ ಮಾಡಿದೆ. “ರಾಜ್ಯದ ಒಟ್ಟು 224 ಶಾಸಕರಲ್ಲಿ 122 ಮಂದಿ ಕ್ರಿಮಿನಲ್ ಮೊಕದ್ದಮೆಗಳನ್ನು ಎದುರಿಸುತ್ತಿದ್ದಾರೆ. ಅವರಲ್ಲಿ, 71 ಮಂದಿ ವಿರುದ್ಧ ಗಂಭೀರ ಸ್ವರೂಪದ ಕ್ರಿಮಿನಲ್ ಪ್ರಕರಣಗಳಿವೆ ಎಂದು ಹೇಳಿದೆ.
ಒಬ್ಬರು ಕೊಲೆ ಪ್ರಕರಣವನ್ನು ಎದುರಿಸುತ್ತಿದ್ದರೆ, ಮೂವರು ಕೊಲೆ ಯತ್ನ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಮಹಿಳೆಯರ ಮೇಲಿನ ದೌರ್ಜನ್ಯ ಅಥವಾ ಅಪರಾಧಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಏಳು ಮಂದಿ ಎದುರಿಸುತ್ತಿದ್ದಾರೆ. ಅವರಲ್ಲಿ ಒಬ್ಬರು ಅತ್ಯಾಚಾರ ಪ್ರಕರಣದ ಆರೋಪಿಯಾಗಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಓದಿದ್ದು ಪಿಯುಸಿ, ವೃತ್ತಿ ಮೆಡಿಕಲ್ ಮೇಷ್ಟ್ರು; ‘ದೈತ್ಯ ಸಂಹಾರಿ’ ಪ್ರದೀಪ್ ಈಶ್ವರ್ ನಿಜಕ್ಕೂ ಎಂಥವರು?
122 ಮಂದಿ ಕ್ರಿಮಿನಲ್ ಆರೋಪ ಉಳ್ಳವರ ಪೈಕಿ, 78 ಮಂದಿ ಕಾಂಗ್ರೆಸ್, 34 ಮಂದಿ ಬಿಜೆಪಿ, 9 ಮಂದಿ ಜೆಡಿಎಸ್ ಶಾಸಕರಾಗಿದ್ದಾರೆ. ಕೆಆರ್‌ಪಿಪಿಯಿಂದ ಸ್ಪರ್ಧಿಸಿ ಗೆದ್ದಿರುವ ಜನಾರ್ದನ ರೆಡ್ಡಿ ಕೂಡ ಕ್ರಿಮಿನಲ್ ಪ್ರಕರಣವನ್ನು ಎದುರಿಸುತ್ತಿದ್ದಾರೆ. ಪ್ರಮುಖ ಮೂರು ಪಕ್ಷಗಳ 55%ರಷ್ಟು ಶಾಸಕರು ಕ್ರಿಮಿನಲ್ ಹಿನ್ನೆಲೆಯನ್ನು ಹೊಂದಿದ್ದಾರೆ.
2018ರ ಚುನಾವಣೆಯಲ್ಲಿ ಆಯ್ಕೆಯಾಗಿದ್ದ ಶಾಕರಿಗೆ ಹೋಲಿಸಿದರೆ, ಈ ವರ್ಷ ಅಧಿಕ ಮಂದಿ ಕ್ರಿಮಿನಲ್ ಪ್ರಕರಣವುಳ್ಳವರು ವಿಧಾನಸೌಧಕ್ಕೆ ಪ್ರವೇಶಿಸಿದ್ದಾರೆ. 2018ರಲ್ಲಿ 77 ಮಂದಿ ಶಾಸಕರು ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದೇವೆಂದು ಘೋಷಿಸಿದ್ದರು. ಅವರಲ್ಲಿ, 54 ಮಂದಿ ಗಂಭೀರ ಸ್ವರೂಪದ ಪ್ರಕರಣಗಳನ್ನು ಉಳ್ಳವರಾಗಿದ್ದರು.