ಮಂಡ್ಯ ಜಿಲ್ಲೆಯಲ್ಲಿ ವ್ಯಾಪಕವಾಗಿರುವ ಅಕ್ರಮ ಜೂಜು ಅಡ್ಡೆಗಳು, ಕ್ರಿಕೆಟ್ ಬೆಟ್ಟಿಂಗ್, ಹುಕ್ಕಾ ಸರಬರಾಜು ಹಾಗೂ ಜೂಜು ದಂಧೆಗಳನ್ನು ತಡೆಗಟ್ಟುವಂತೆ ಆಗ್ರಹಿಸಿ ವಿವಿಧ ಪ್ರಗತಿಪರ ಸಂಘಟನೆಗಳು ಮಂಡ್ಯದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದವು.
ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕಚೇರಿ ಎದುರು ವಿವಿಧ ಸಂಘಟನೆಯ ಕಾರ್ಯಕರ್ತರು ಪ್ರತಿಭನೆ ನಡೆಸಿ, ನಂತರ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿ ಮನವಿ ಪತ್ರ ಸಲ್ಲಿಸಿದರು.
“ಮಂಡ್ಯ ತಾಲೂಕಿನ ಬೂದನೂರು ಗ್ರಾಮದ ತ್ಯಾಗ ಎಂಬ ಯುವಕ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೇಲ್ನೋಟಕ್ಕೆ ಇದೊಂದು ಆತ್ಮಹತ್ಯೆಯೆಂದು ಸುಲಭವಾಗಿ ತಳ್ಳಿ ಹಾಕಿಬಿಡಬಹುದಾದ ಪ್ರಕರಣ ಎನಿಸಿಬಹುದಾದರೂ, ಆತ್ಮಹತ್ಯೆಗೆ ಕಾರಣವಾಗಿರುವ ಅಂಶಗಳು ನಾಗರಿಕ ಸಮಾಜದ ಸ್ವಾಸ್ಥ್ಯವನ್ನು ಒಳಗಿನಿಂದಲೇ ಹಾಳು ಮಾಡುವಂತಹವು” ಎಂದು ಆಕ್ರೋಶ ವ್ಯಕ್ತಪಡಿಸಿದರು.

“ಮಂಡ್ಯ ತಾಲೂಕು ಸೇರಿದಂತೆ ಜಿಲ್ಲೆಯಲ್ಲಿ ವ್ಯಾಪಕವಾಗಿರುವ ಕ್ರಿಕೆಟ್ ಬೆಟ್ಟಿಂಗ್ ಗದ್ದೆ ಬಯಲುಗಳಲ್ಲಿ ಅಕ್ರಮವಾಗಿ ನಡೆಯುತ್ತಿರುವ ಇಸ್ಪೀಟು ಜೂಜುಗಳು ನಗರ ಹಾಗೂ ಗ್ರಾಮೀಣಾ ಭಾಗದ ಸಾವಿರಾರು ಯುವಕರನ್ನು ಲಕ್ಷಾಂತರ ರೂಪಾಯಿ ಸಾಲದ ಬಲೆಗೆ ಕೆಡವಿವೆ. ಮೃತ ತ್ಯಾಗ ಎಂಬಾತನೂ ಕೂಡಾ ಈ ರೀತಿಯ ಕರಾಳ ದಂಧೆಗೆ ಸಿಲುಕಿ ಸರಿಸುಮಾರು ಒಂದೂವರೆ ಕೋಟಿ ರೂಪಾಯಿ ಸಾಲದ ಬಲೆಗೆ ಸಿಲುಕಿದ್ದ. ಕೊನೆಗೆ ಬೆಟ್ಟಿಂಗ್ ದಂಧೆಕೋರರು, ಇಸ್ಪೀಟು ಜೂಜು ಮಾಫಿಯದವರ ಒತ್ತಡ ತಾಳಲಾರದೆ ಆತ್ಮಹತ್ಯೆಗೆ ಶರಣಾಗಿದ್ದಾನೆ” ಎಂದು ಪ್ರತಿಭಟನಾಕಾರರು ಕಿಡಿಕಾರಿದರು.
“ಮಂಡ್ಯ ಜಿಲ್ಲೆಯಲ್ಲಿ ಅತ್ಯಂತ ವ್ಯವಸ್ಥಿತ ಹಾಗೂ ಸಂಘಟಿತವಾಗಿ ನಡೆಯುತ್ತಿರುವ ಕ್ರಿಕೆಟ್ ಬೆಟ್ಟಿಂಗ್ ಮತ್ತು ಗದ್ದೆ ಬಯಲುಗಳ ಜೂಜು ಅಡ್ಡೆಗಳಿಗೆ ರಾಜಕೀಯ ನಾಯಕರು, ಪೊಲೀಸ್ ಇಲಾಖೆಯೇ ಮಹಾ ಪೋಷಕರೆಂಬ ಮಾತು ಸಾರ್ವಜನಿಕ ವಲಯದಲ್ಲಿ ಚರ್ಚೆಯಲ್ಲಿರುವುದು ಸುಳ್ಳೇನಲ್ಲ. ಈ ದಂಧೆಕೋರರಿಂದ ನಿಯಮಿತವಾದ ಕಪ್ಪ ಕಾಣಿಕೆ ಪೋಲಿಸ್ ಠಾಣೆಗಳಿಗೆ ಸಂದಾಯವಾಗುತ್ತಿರುವುದರಿಂದಲೇ ಈ ಧಂಧೆಗಳನ್ನು ಸುಗಮವಾಗಿ ನಡೆಸಲು ಸಾಧ್ಯವಾಗಿದೆ. ಇದಲ್ಲದೆ ನಗರ ಹಾಗೂ ಗ್ರಾಮಾಂತರ ಭಾಗದಲ್ಲಿ ವ್ಯಾಪಕವಾಗಿರುವ ಅಕ್ರಮ ಮದ್ಯ ಮಾರಾಟ, ಹುಕ್ಕಾ ಸರಬರಾಜು ನಾಗರಿಕ ಸಮಾಜವನ್ನು ದಿಗ್ಬ್ರಮೆ ಹುಟ್ಟಿಸುವಂತೆ ಮಾಡಿದೆ” ಎಂದು ಕಿಡಿಕಾರಿದರು.
“ಮಂಡ್ಯದ ರೈತರು ಕೃಷಿ ನಷ್ಟದ ಜತೆಗೆ ವ್ಯವಸ್ಥೆ ಸೃಷ್ಟಿಸಿರುವ ಈ ಹೊಡೆತದಿಂದಲೂ ಬಲಿಪಶುವಾಗುತ್ತಿದ್ದಾರೆ. ಈ ದಂಧೆಕೋರರ ಹಾವಳಿಯಿಂದ ರೈತಾಪಿಗಳು ತಮ್ಮ ವಂಶಪಾರಂಪರ್ಯ ಕೃಷಿ ಭೂಮಿಯನ್ನು ಕಳೆದುಕೊಳ್ಳುವಂತಹ ಸ್ಥಿತಿ ಸೃಷ್ಟಿಯಾಗಿದೆ. ಸಾವಿರಾರು ಯುವಕರು ಊರು ತೊರೆಯುವಂತೆ ಇಲ್ಲವೆ ಆತ್ಮಹತ್ಯೆಯ ದಾರಿ ಹಿಡಿಯುವಂತಹ ವಾತಾವರಣ ನಿರ್ಮಾಣವಾಗಿದೆ. ನಾಗರಿಕರಿಗೆ ಆತ್ಮವಿಶ್ವಾಸ ತುಂಬಬೇಕಿರುವ ಇಲಾಖೆಯೇ ಅಪಾದಿತರ ಜತೆ ನಿಂತಿರುವುದು ನಾಚಿಕೆಗೇಡಿನ ಪರಮಾವಧಿಯಾಗಿದೆ” ಎಂದರು.
“ಬೂದನೂರು ಯುವಕನ ಆತ್ಮಹತ್ಯೆ ಘಟನೆಯಲ್ಲಿ ಪೊಲೀಸರ ವೈಫಲ್ಯದ ಕಾರಣಕ್ಕೆ ಗ್ರಾಮಾಂತರ ಠಾಣೆ ಅರಕ್ಷಕ ನಿರೀಕ್ಷಕರನ್ನು ಅಮಾನತು ಮಾಡಬೇಕು. ಈ ಮೂಲಕ ಬೆಟ್ಟಿಂಗ್ ಹಾಗೂ ಜೂಜು ಮಾಫಿಯಾಕ್ಕೆ ಬಲವಾದ ಸಂದೇಶ ರವಾನಿಸಬೇಕು” ಎಂದು ಆಗ್ರಹಿಸಿದರು.
“ಬೆಟ್ಟಿಂಗ್ ದಂಧೆಕೋರರು ಹಾಗೂ ಗದ್ದೆ ಬಯಲು ಜೂಜೂಕೋರರರನ್ನು ಮುಂದಿನ ಹದಿನೈದು ದಿನಗಳೊಳಗೆ ತಹಬದಿಗೆ ತರಬೇಕು. ತಪ್ಪಿದಲ್ಲಿ ಮಂಡ್ಯ ಜಿಲ್ಲೆಯಲ್ಲಿ ವಿವಿಧ ಸಂಘಟನೆಗಳೊಗೂಡಿ ಅನಿರ್ದಿಷ್ಟಾವಧಿ ಧರಣಿ ಆರಂಭಿಸಲಾಗುವುದು” ಎಂದು ಪ್ರತಿಭಟನಾನಿರತರು ಎಚ್ಚರಿಕೆ ನೀಡಿದರು.
“ಮಂಡ್ಯ ಜಿಲ್ಲೆಯಲ್ಲಿ ನಡೆಯುತ್ತಿರುವ ಬೆಟ್ಟಿಂಗ್, ಜೂಜಾಟ, ಮಾದಕ ವಸ್ತು ಜಾಲದ ವಿರುದ್ದ ಪ್ರಗತಿಪರ ಸಂಘಟನೆಗಳ ಇಂದು ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಗಮನ ಸೆಳೆದ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲಾಧಿಕಾರಿ ಡಾ ಕುಮಾರ ಅವರು ಸಂಜೆ 4 ಗಂಟೆಗೆ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ತುರ್ತು ಸಭೆ ಕರೆದಿದ್ದಾರೆ.
ಈ ಸುದ್ದಿ ಓದಿದ್ದೀರಾ? ಉಡುಪಿ | ಗಂಡನನ್ನೇ ಕೊಂದ ಪ್ರಕರಣ; ಹಣದ ಪ್ರಭಾವದಿಂದ ಕೇಸ್ ಮುಚ್ಚಿಹಾಕುವ ಹುನ್ನಾರ
“ಬೆಟ್ಟಿಂಗ್ ದಂಧೆಯಿಂದ ನೊಂದಿರುವವರು, ಇದರ ಬಗ್ಗೆ ಮಾಹಿತಿ ಇರುವವರು, ಇತರೆ ಸಮಸ್ಯೆಗಳನ್ನು ಎದುರಿಸುತ್ತಿರುವವರು ಸಭೆಯಲ್ಲಿ ನೇರವಾಗಿ ಜಿಲ್ಲಾಧಿಕಾರಿ ಅಥವಾ ಎಸ್‌ಪಿಯವರಿಗೆ ದೂರು ನೀಡಬಹುದು” ಎಂದು ತಿಳಿಸಲಾಗಿದೆ.
ಸಭೆಯಲ್ಲಿ ಜಿ ಪಂ ಸಿಇಒ ಸೇರಿದಂತೆ ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರು, ಪ್ರಜ್ಞಾವಂತ ನಾಗರಿಕರು ಭಾಗವಹಿಸಿದ್ದಾರೆ.
ಕರುನಾಡು ಸೇವಕರು ಸಂಘಟನೆಯ ವಿಭಾಗೀಯ ಅಧ್ಯಕ್ಷ ಎಂ ಬಿ ನಾಗಣ್ಣ, ನಗರ ಸಂಚಾಲಕ ಚಂದ್ರು, ಮೃತನ ತಂದೆ ಮಾದಪ್ಪ, ಚಿತ್ರಕೂಟದ ಅರವಿಂದ ಪ್ರಭು, ಕೆಂಪೇಗೌಡ ಒಕ್ಕಲಿಗರ ಸಂಘದ ಸತ್ಯಮೂರ್ತಿ, ಸಿಐಟಿಯು ಸಿ ಕುಮಾರಿ, ಕೃಷ್ಣೇಗೌಡ, ಬೂದನೂರು ಸತೀಶ್, ವಕೀಲ ರಾಮಯ್ಯ, ಬಾಬು, ಅಲ್ ಇಂಡಿಯಾ ಲಾಯರ್ಸ್ ಯೂನಿಯನ್ ಮಂಡ್ಯ ಜಿಲ್ಲಾಧ್ಯಕ್ಷ ಬಿ ಟಿ ವಿಶ್ವನಾಥ್, ರೈತ ಸಂಘದ ತಾಲೂಕು ಅಧ್ಯಕ್ಷ ಚಂದ್ರುಶಿವಳ್ಳಿ, ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ) ಜಿಲ್ಲಾಧ್ಯಕ್ಷ ಹೆಚ್ ಡಿ ಜಯರಾಂ, ರೈತರ ಶಾಲೆ ಸಂಸ್ಥಾಪಕ ಪ್ರೊ ಸತ್ಯಮೂರ್ತಿ ಗಂಜಾಂ ಸೇರಿದಂತೆ ರೈತ ಸಂಘದ ಕಾರ್ಯಕರ್ತರು ಇದ್ದರು.