ಬಿಜೆಪಿ ಅವಧಿಯಲ್ಲೂ ವಕ್ಫ್ ವಿಚಾರಕ್ಕೆ ನೋಟಿಸ್ ನೀಡಿದ್ದರು. ಆ ಹಿನ್ನೆಲೆಯಲ್ಲಿ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದಾಗ ಒತ್ತುವರಿಯಾಗಿರುವ ಇಂಚಿಂಚು ವಕ್ಫ್ ಆಸ್ತಿಯನ್ನು ಕಾಪಾಡುವುದಾಗಿ ಹೇಳಿದ್ದರು, ಈಗ ವಿರುದ್ಧವಾಗಿ ಮಾತನಾಡುತ್ತ ಉಳ್ಟಾ ಹೊಡೆದಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹುಬ್ಬಳ್ಳಿಯಲ್ಲಿ ಹೇಳಿದರು.
ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ವಕ್ಫ್ ಆಸ್ತಿ ವಿಚಾರ ನಿನ್ನೆ ಮೊನ್ನೆಯದಲ್ಲ. ವಿಚಾರಣೆ ಇಲ್ಲದೆಯೇ ಯಾವುದಾದರೂ ಪಹಣಿ ದಾಖಲೆ ಬದಲಾವಣೆಯಾಗಿದ್ದರೆ ಅದನ್ನು ರದ್ದು ಮಾಡಬೇಕು ಮತ್ತು ಯಾವುದೇ ಕಾರಣಕ್ಕೂ ರೈತರನ್ನು ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಯಾರೇ ಆಗಿರಲಿ ಒಕ್ಕಲೆಬ್ಬಿಸಬಾರದು. ವಕ್ಫ್ ಆಸ್ತಿ ವಿಚಾರ ನಮಗೆ ಗೊತ್ತಾದ ತಕ್ಷಣವೇ ನೋಟಿಸ್ ಹಿಂಪಡೆಯಲಾಗಿದೆ. ಬಿಜೆಪಿ ಅವಧಿಯಲ್ಲಿಯು 216 ಪ್ರಕರಣಗಳಲ್ಲಿ ನೋಟಿಸ್ ಕೊಟ್ಟಿದ್ದರು. ಯಡಿಯೂರಪ್ಪ, ಸದಾನಂದ ಗೌಡ, ಜಗದೀಶ್ ಶೆಟ್ಟರ್, ಹೆಚ್.ಡಿ ಕುಮಾಸ್ವಾಮಿ ಇದ್ದಾಗ ಏಕೆ ನೋಟೀಸು ಕೊಟ್ಟಿದ್ದಾರೆ? ಬಿಜೆಪಿಯ ಈ ಡಬ್ಬಲ್ ಗೇಮ್ ವಿಚಾರವನ್ನು ಜನರಿಗೆ ನಾವು ತಲುಪಿಸುತ್ತೇವೆ ಎಂದರು.
15ನೇ ಹಣಕಾಸು ಆಯೋಗದವರು ₹5,495 ಕೋಟಿ ರೂಪಾಯಿಗಳನ್ನು ವಿಶೇಷ ಅನುದಾನ ನೀಡಬೇಕೆಂದು, ಪೇರಿಫೆರಲ್ ರಿಂಗ್ ರೋಡ್ ಹಾಗೂ ಕೆರೆಗಳ ಅಭಿವೃದ್ಧಿಗೆ ತಲಾ 3000 ಕೋಟಿ ರೂಪಾಯಿ ನೀಡಲು ಶಿಫಾರಸ್ಸು ಮಾಡಿದ್ದರು. ಒಟ್ಟು ₹11,495 ಕೋಟಿಗಳನ್ನು ಕೊಡಬೇಕಿತ್ತು, ಕೊಟ್ಟಿಲ್ಲ. ಪ್ರಹ್ಲಾದ ಜೋಶಿಯವರು ಇದನ್ನು ಕೇಂದ್ರದಿಂದ ಕೇಳಬೇಕಲ್ಲವೇ? ₹11,495 ಕೋಟಿ ಕೊಟ್ಟಿದ್ದಾರೆಯೇ? ಎಂದು ಪ್ರಶ್ನಿಸಿ, ಕೊಟ್ಟಿದ್ದರೆ ನಾನು ರಾಜಕೀಯ ಬಿಟ್ಟುಬಿಡುವೆ. ಈ ಸವಾಲು ಸ್ವೀಕರಿಸಿ ಪ್ರಹ್ಲಾದ್ ಜೋಶಿ ರಾಜಕೀಯ ಬಿಡುತ್ತಾರೆಯೇ? ಎಂದು ಸವಾಲೆಸೆದರು.
ಸುಮಾರು 4.50 ಲಕ್ಷ ಕೋಟಿ ರೂಪಾಯಿಗಳಿಗೂ ಹೆಚ್ಚು ಮೊತ್ತವನ್ನು ವರ್ಷಕ್ಕೆ ಕೇಂದ್ರಕ್ಕೆ ತೆರಿಗೆ ನೀಡುತ್ತಿದ್ದೇವೆ. ಅದರಲ್ಲಿ ನಮಗೆ ವಾಪಸ್ಸು ಬರುವುದು ₹55 ರಿಂದ ₹60 ಸಾವಿರ ಕೋಟಿ ಮಾತ್ರ. ಈ ಬಗ್ಗೆ ನಾವು ನ್ಯಾಯಕ್ಕಾಗಿ ಹೋರಾಡುತ್ತಿದ್ದೇವೆ.
ಬಿಜೆಪಿಯ ಪ್ರಹ್ಲಾದ್ ಜೋಶಿ, ಬಸವರಾಜ ಬೊಮ್ಮಾಯಿ, ಜಗದೀಶ್ ಶೆಟ್ಟರ್ ಈ ಬಗ್ಗೆ ಮಾತನಾಡಿದ್ದಾರೆಯೇ? ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದರೆ ಅದು ರಾಜಕೀಯ ಅನ್ನುತ್ತಾರೆ. 5 ವರ್ಷಕ್ಕೊಮ್ಮೆ ಸಂವಿಧಾನದ ಪ್ರಕಾರ ಹಣಕಾಸಿನ ಆಯೋಗ ರಚನೆಯಾಗುತ್ತದೆ. ಅವರ ಶಿಫಾರಸ್ಸಿನ ಮೇಲೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಹೋಗಬೇಕಾದ ತೆರಿಗೆ ಬಗ್ಗೆ ನಿರ್ಧಾರವಾಗುತ್ತದೆ.
ಈ ವರದಿ ಓದಿದ್ದೀರಾ? ಧಾರವಾಡ | ಸರ್ದಾರ ವಲ್ಲಭಭಾಯಿ ಪಟೇಲ್ ದೇಶಕ್ಕೆ ಮಾದರಿ: ಡಾ. ಎನ್ ಎಮ್ ಮಕಾಂದರ್
3 ಲಕ್ಷದ 71 ಸಾವಿರ ಕೋಟಿ ರೂಪಾಯಿಗಳಲ್ಲಿ 52 ಸಾವಿರ ಕೋಟಿ ಗ್ಯಾರಂಟಿಗಳಿಗೆ ವೆಚ್ಚ ಮಾಡುತ್ತಿದ್ದೇವೆ. ಸುಮಾರು 60 ಸಾವಿರ ಕೋಟಿ ಅಭಿವೃದ್ಧಿಗೆ ವೆಚ್ಚ ಮಾಡುತ್ತಿದ್ದೇವೆ. ನೀರಾವರಿ, ಲೋಕೋಪಯೋಗಿ, ಗ್ರಾಮೀಣಾಭಿವೃದ್ಧಿ, ರಸ್ತೆ, ಸೇತುವೆ, ನಿರ್ಮಾಣಕ್ಕಾಗಿ ವೆಚ್ಚವಾಗುತ್ತಿದೆ. ಇವೆಲ್ಲ ಅಭಿವೃದ್ದಿಯಲ್ಲವೇ? ಎಂದರು.