87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಚಾರಕ್ಕೆ ₹1.30 ಕೋಟಿ ರೂ. ಬಜೆಟ್ ನಿಗದಿಯಾಗಿದ್ದು, ಎಲ್ಲಾ ಉಪ ಸಮಿತಿಗಳು ಪ್ರಚಾರ ಕಾರ್ಯ ಚುರುಕುಗೊಳಿಸಬೇಕೆಂದು ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣಯ್ಯ ಕರೆ ನೀಡಿದ್ದಾರೆ.
ಅವರು ನ.8ರ ಶುಕ್ರವಾರ ಮಂಡ್ಯದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಪ್ರಚಾರ ಸಮಿತಿ ಸಭೆಯಲ್ಲಿ ಮಾತನಾಡಿ, ಸಾಮಾಜಿಕ ಜಾಲತಾಣಗಳ ಬಳಕೆ ಮೂಲಕ ಸಮಿತಿಯು ಹೆಚ್ಚು ಜನರಿಗೆ ತಲುಪುವಂತೆ ಪ್ರಚಾರ ಮಾಡಬೇಕು. ಈ ನಡುವೆ ಪ್ರಚಾರದ ಹಿತೈಷಿಗಳಿಗೆ ಆಕರ್ಷಕವಾಗಿ ವಿನ್ಯಾಸಗೊಳ್ಳುವ ಪೋಸ್ಟರ್, ಕಮಾನು, ಹೆದ್ದಾರಿ ಪಲಕಗಳನ್ನು ಸಿದ್ಧಪಡಿಸುವುದರ ಪ್ರಾಮುಖ್ಯತೆಯನ್ನು ಉಲ್ಲೇಖಿಸಿದರು. ಅಲ್ಲದೆ, ಪ್ರತಿ ದಿನ ವಿವಿಧ ಸಮಿತಿಗಳ ಕಾರ್ಯ ಚಟುವಟಿಕೆಗಳನ್ನು ಕ್ರೋಢೀಕರಿಸಿ ಸುದ್ದಿಗಳನ್ನು ಮಾಧ್ಯಮಗಳಲ್ಲಿ ಬಿಡುಗಡೆ ಮಾಡಲು ಸಲಹೆ ನೀಡಿದರು.
ಪ್ರಚಾರ ಕಾರ್ಯದಲ್ಲಿ ಎದುರಾಗುವ ಸಮಸ್ಯೆಗಳಿಗೆ ಸೂಕ್ತ ಪರಿಹಾರಗಳ ಬಗ್ಗೆ ಚರ್ಚೆ ನಡೆಸಿದರು. ಮುಂದಿನ ಪ್ರಚಾರ ಚಟುವಟಿಕೆಗಳಿಗೆ ಪ್ರತಿ ಸದಸ್ಯರು ಸಮಿತಿಯೊಂದಿಗೆ ನಿರಂತರ ಸಂಪರ್ಕದಲ್ಲಿರಲು ಮತ್ತು ಸಮಿತಿಯ ಉದ್ದೇಶಗಳನ್ನು ಪರಿಣಾಮಕಾರಿಯಾಗಿ ಮುನ್ನಡೆಸಲು ಮಾರ್ಗದರ್ಶನ ನೀಡಿದರು.

ಶಾಸಕ ದರ್ಶನ್ ಪುಟ್ಟಣಯ್ಯ ಹೆಚ್ಚಿನ ಅನುದಾನಕ್ಕೆ ಬೇಡಿಕೆ ಇಟ್ಟು, ಈ ಹಿಂದೆ ರೂಪಿಸಿರುವ ಪ್ರಚಾರ ಯೋಜನೆಗಿಂತಲೂ ಹೆಚ್ಚಿನ ಹಣಕಾಸಿನ ಅಗತ್ಯವಿದೆ ಎಂದು ತಿಳಿಸಿದರು. ಇದಕ್ಕಾಗಿ ಪ್ರಾಯೋಜಕತ್ವದಾರರನ್ನು ಸಂಪರ್ಕಿಸುವುದು ಸಮಿತಿಯ ಪ್ರಾಥಮಿಕ ಕಾರ್ಯವೆಂದು ಹೇಳಿದರು. ಈ ಮೂಲಕ ಹೆಚ್ಚಿನ ಅನುದಾನವನ್ನು ಸೇರಿಸುವ ಉದ್ದೇಶದಿಂದ ಪ್ರಚಾರ ಸಮಿತಿಯ ಸದಸ್ಯರು ಪ್ರಾಯೋಜಕತ್ವದಾರರನ್ನು ಸಂಪರ್ಕಿಸಲು ತಂಡಗಳನ್ನು ರಚಿಸಬೇಕೆಂದು ಸೂಚಿಸಿದರು.
ಇದನ್ನು ಓದಿದ್ದೀರಾ? ಮಂಡ್ಯ | ಲಾಟರಿ ಹಾವಳಿಯ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕಿದೆ: ಜಿಲ್ಲಾಧಿಕಾರಿ ಕುಮಾರ್
ಸಭೆಯಲ್ಲಿ ಕಸಾಪ ಜಿಲ್ಲಾ ಸಂಚಾಲಕಿ ಡಾ. ಮೀರಾ ಶಿವಲಿಂಗಯ್ಯ, ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ರಾಘವೇಂದ್ರ, ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕಿ ನಿರ್ಮಲ, ಕಸಾಪ ಗೌರವ ಕಾರ್ಯದರ್ಶಿ ಡಾ. ಕೃಷ್ಣೇಗೌಡ ಹೂಸ್ಕುರು, ಹರ್ಷ ಸೇರಿದಂತೆ ಹಲವಾರು ಪ್ರಚಾರ ಸಮಿತಿಯ ಸದಸ್ಯರು ಭಾಗವಹಿಸಿದ್ದರು.
