ಮಂಡ್ಯ ನಗರದ ಬಟ್ಟೆ ವ್ಯಾಪಾರಿಯೊಬ್ಬರ ಮೇಲೆ ಕಳೆದ ನ.6ರಂದು ಬಡ್ಡಿ ದಂಧೆ ನಡೆಸುತ್ತಿದ್ದ ವ್ಯಕ್ತಿಯೊಬ್ಬ ಹಲ್ಲೆ ನಡೆಸಿದ್ದು, ಈ ಬಗ್ಗೆ ಮಂಡ್ಯ ಪೊಲೀಸರಿಗೆ ದೂರು ನೀಡಿದ್ದರೂ, ಎಫ್ಐಆರ್ ದಾಖಲಿಸಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಮಂಡ್ಯ ನಗರದ ಕೆ.ಆರ್.ರಸ್ತೆಯಲ್ಲಿ ಬಟ್ಟೆ ಅಂಗಡಿ ನಡೆಸುತ್ತಿದ್ದ ವಾಸೀಂವುಲ್ಲಾ ಷರೀಫ್ ಎಂಬಾತನ ಮೇಲೆ ಲೇವಾದೇವಿದಾರ ರಘು ಎಂಬಾತ ಹಲ್ಲೆ ನಡೆಸಿರುವ ಬಗ್ಗೆ ಹಲವು ದಾಖಲಾತಿಗಳ ಜತೆಯಲ್ಲಿ ಮಂಡ್ಯದ ಪಶ್ಚಿಮ ಠಾಣೆಗೆ ದೂರು ನೀಡಲಾಗಿದೆ. ಆದರೆ ಪೊಲೀಸರು ಎಫ್ಐಆರ್ ದಾಖಲಿಸದೇ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆಂಬ ಮಾಹಿತಿಯನ್ನು ಸಂಬಂಧಿತ ವಕೀಲರು ಈ ದಿನ.ಕಾಮ್ ಜೊತೆ ಮಾತನಾಡಿ ನೀಡಿದ್ದಾರೆ.
ಮಂಡ್ಯದಲ್ಲಿ ಬಡ್ಡಿ, ಲೇವಾದೇವಿ ಅಕ್ರಮ ದಂಧೆ ಯಾವುದೇ ಕಡಿವಾಣ ಇಲ್ಲದೆ ಜರುಗುತ್ತಿದೆ. ಆದರೆ ಇಂತಹ ಅಕ್ರಮ ದಂಧೆ ವಿರುದ್ಧ ಕ್ರಮ ಕೈಗೊಳ್ಳಬೇಕಾದ ಪೊಲೀಸರು ಕಣ್ಮಚ್ಚಿ ಕುಳಿತಿದ್ದಾರೆಂದು ಹಲ್ಲೆಗೊಳಗಾದ ವಾಸೀಂವುಲ್ಲಾ ಷರೀಫ್ ದೂರಿದ್ದಾರೆ.
ರಘು ಸಾಲವಾಗಿ ಹಣವನ್ನು ನೀಡಿದ ಸಂದರ್ಭದಲ್ಲಿ ಖಾಲಿ ಚೆಕ್‌ಗಳನ್ನು ಪಡೆದಿದ್ದಾನೆ. ಆದರೆ ಸಾಲ ತೀರಿಸಿದ ನಂತರವೂ ಖಾಲಿ ಚೆಕ್‌ಗಳನ್ನು ನೀಡದೇ, ಇನ್ನೂ ಸಾಲ ಬಾಕಿ ಉಳಿದಿದೆ, ತೀರಿಸು ಎಂದು ಅವಾಚ್ಯ ಶಬ್ದಗಳಿಂದ ಬೈದು, ಒತ್ತಡ ಹೇರುತ್ತಿದ್ದಾನೆ, ಹಾಗೇ ಹಣ ವಸೂಲಿ ನೆಪದಲ್ಲಿ ಬಂದಿದ್ದು, ಈ ಸಂದರ್ಭದಲ್ಲಿ ತನ್ನ ಮೇಲೆ ಹಲ್ಲೆ ನಡೆಸಿದ್ದಾನೆಂದು ಆರೋಪಿಸಿದ್ದಾರೆ.
ರಘು ತನ್ನ ಮೇಲೆ ಬಲವಾಗಿ ಹಲ್ಲೆ ನಡೆಸಿದ ಬಗ್ಗೆ ಮಂಡ್ಯ ಜಿಲ್ಲಾಸ್ಪತ್ರೆಯಲ್ಲಿ ಎಂ.ಎಲ್.ಸಿ ದಾಖಲಿಸಿ, ದೂರು ನೀಡಿದ್ದರೂ, ರಘು ಮೇಲೆ ಎಫ್ಐಆರ್ ದಾಖಲಿಸಲು ಪೊಲೀಸರು ಮೀನಮೇಷ ಎಣಿಸುತ್ತಿದ್ದಾರೆಂದು ವಾಸೀಂವುಲ್ಲಾ ಷರೀಫ್ ತಿಳಿಸಿದ್ದು, ಪೊಲೀಸರು ಕೂಡಲೇ ಎಫ್ಐಆರ್ ದಾಖಲಿಸಿ ಆರೋಪಿ ವಿರುದ್ಧ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದ್ದಾರೆ.
ಇದನ್ನು ಓದಿದ್ದೀರಾ? ಉಡುಪಿ | ಹಿಂದಕ್ಕೆ ಚಲಿಸಿ ಗ್ಯಾರೇಜಿಗೆ ನುಗ್ಗಿದ ಗ್ರಾನೈಟ್ ತುಂಬಿದ್ದ ಲಾರಿ: ಕೂದಲೆಳೆ ಅಂತರದಲ್ಲಿ ಇಬ್ಬರು ಪಾರು!
ಹಲ್ಲೆ ಸಂಬಂಧ ಮಂಡ್ಯ ಪಶ್ಚಿಮ ಠಾಣೆಯಲ್ಲಿ ದೂರನ್ನು ಹಲ್ಲೆಗೊಳಗಾದ ಬಟ್ಟೆ ವ್ಯಾಪಾರಿ ವಕೀಲರ ಜೊತೆಗೆ ಹೋಗಿ ದಾಖಲು ಮಾಡಿರುತ್ತಾನೆ. ಆ ಪ್ರಕರಣದಲ್ಲಿ ಇನ್ನೂ ಎಫ್ಐಆರ್ ದಾಖಲಾಗದಿರುವುದು ಅಚ್ಚರಿಯ ಸಂಗತಿ. ಇದುವರೆಗೆ ಎಫ್‌ಐಆರ್ ದಾಖಲು ಆಗದಿರಲು ಕಾರಣ ಏನು? ಪಶ್ಚಿಮ ಠಾಣೆಯ ಪೊಲೀಸರು ಉತ್ತರಿಸಬೇಕಿದೆ.
