ಅಲಿಯಾ ವಿಶ್ವವಿದ್ಯಾಲಯ (ಕೋಲ್ಕತ್ತಾ) ಮತ್ತು ಸೇಂಟ್ ಸ್ಟೀಫನ್ಸ್ ಕಾಲೇಜ್‌ನಂತಹ ಕಾಲೇಜುಗಳು ಸರ್ಕಾರದಿಂದ ಸಂಪೂರ್ಣ ನೆರವು ಪಡೆಯುತ್ತವೆ. ಸರ್ಕಾರದಿಂದ ಧನಸಹಾಯ ಪಡದರೂ ಅವು ತನ್ನ ಅಲ್ಪಸಂಖ್ಯಾತ ಸ್ಥಾನಮಾನವನ್ನು ಕಳೆದುಕೊಂಡಿಲ್ಲ. ಹಾಗಿದ್ದಾಗ ಅಲಿಗಢ ವಿಶ್ವವಿದ್ಯಾಲಯ ಮಾತ್ರ ಹೇಗೆ ಪ್ರತ್ಯೇಕವಾಗಿ ನಿಲ್ಲುತ್ತದೆ?
ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯ (ಎಎಂಯು) ಸಂವಿಧಾನದ 30ನೇ ವಿಧಿಯ ಅಡಿಯಲ್ಲಿ ಅಲ್ಪಸಂಖ್ಯಾತ ಸ್ಥಾನಮಾನವನ್ನು ಪಡೆದುಕೊಳ್ಳಬಹುದೇ ಎಂಬ ಬಗ್ಗೆ ಸುಪ್ರೀಂ ಕೋರ್ಟ್ ಶುಕ್ರವಾರ (ನವೆಂಬರ್ 8) ಮಹತ್ವದ ತೀರ್ಪನ್ನು ನೀಡಿದೆ. ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ‘ಅಲ್ಪಸಂಖ್ಯಾತ ಸ್ಥಾನಮಾನ’ವನ್ನು ತೆಗೆದುಹಾಕಿದ್ದ 1967ರ ಆದೇಶವನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿದೆ.
ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರ ನೇತೃತ್ವದ ಏಳು ನ್ಯಾಯಾಧೀಶರನ್ನು ಒಳಗೊಂಡ ಸುಪ್ರೀಂ ಕೋರ್ಟ್ ಪೀಠವು 4:3ರ ಬಹುಮತದ ತೀರ್ಪು ನೀಡಿದೆ. ಸಂಸ್ಥೆಯನ್ನು ಯಾರು ಸ್ಥಾಪಿಸಿದರು ಎಂಬುದರ ಆಧಾರದಲ್ಲಿ ಅಲ್ಪಸಂಖ್ಯಾತ ಸ್ಥಾನಮಾನ ನಿರ್ಧರಿಸಲಾಗುತ್ತದೆ ಎಂದು ಹೇಳಿದೆ. ಮೂವರು ನ್ಯಾಯಾಧೀಶರನ್ನು ಒಳಗೊಂಡ ಪೀಠವು ಅಲ್ಪಸಂಖ್ಯಾತ ಸ್ಥಾನಮಾನ ತೀರ್ಪನ್ನು ನೀಡಲಿದೆ. ಏನಿದು ಪ್ರಕರಣ, ಸಂವಿಧಾನದ 30ನೇ ವಿಧಿ ಏನು ಹೇಳುತ್ತದೆ, ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ಇತಿಹಾಸವೇನು ತಿಳಿಯೋಣ.
ಅಲಿಗಢ ವಿಶ್ವವಿದ್ಯಾಲಯ ಮತ್ತು ಸರ್ ಸಯ್ಯದ್ ಅಹ್ಮದ್ ಖಾನ್
ಬ್ರಿಟಿಷ್ ಆಳ್ವಿಕೆಯ ಸಂದರ್ಭದಲ್ಲಿ ಸರ್ ಸೈಯದ್ ಅಹ್ಮದ್ ಖಾನ್ ಕವಿ, ಬರಹಗಾರ, ಪತ್ರಕರ್ತ, ಇತಿಹಾಸಕಾರ, ಸಮಾಜ ಸೇವಕ ಹೀಗೆ ಹಲವು ಕ್ಷೇತ್ರಗಳಲ್ಲಿ ಗುರುತಿಸಿಕೊಂಡವರು. ಅವರು 1875ರಲ್ಲಿ ಮುಹಮ್ಮದನ್ ಆಂಗ್ಲೋ-ಓರಿಯಂಟಲ್ ಕಾಲೇಜನ್ನು ಸ್ಥಾಪಿಸಿದರು. ಅದೀಗ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯವಾಗಿ ಬದಲಾಗಿದೆ.
1857ರ ದಂಗೆಯ ಬಳಿಕ ಬ್ರಿಟಿಷರು ಭಾರತದಲ್ಲಿ ದಂಗೆಗಳನ್ನು ಹತ್ತಿಕ್ಕುತ್ತಿದ್ದ ಸಂದರ್ಭದಲ್ಲಿ ಸರ್ ಸೈಯದ್ ಅಹ್ಮದ್ ಖಾನ್ ಸಾಮಾಜಿಕ ಮತ್ತು ಶೈಕ್ಷಣಿಕ ಸುಧಾರಣೆಗಾಗಿ ಪಣತೊಟ್ಟರು. ಧಾರ್ಮಿಕ ವಿಚಾರಗಳಲ್ಲಿ ಅವಿತ ಮೂಢನಂಬಿಕೆಗಳನ್ನು ಕಿತ್ತೊಗೆಯುವವರೆಗೂ ಮುಸ್ಲಿಂ ಸಮುದಾಯ ಬೆಳೆಯಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದ ಸೈಯದ್ ಅಹ್ಮದ್ ಖಾನ್, ಮುಸ್ಲಿಮರ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದರು.
ಇದನ್ನು ಓದಿದ್ದೀರಾ? ಮುಸ್ಲಿಂ ಪ್ರಾಬಲ್ಯದ ಶಿಗ್ಗಾವಿ ಗೆಲ್ಲುತ್ತಾ ಕಾಂಗ್ರೆಸ್?
ಭಾರತದಲ್ಲಿ ಮುಸ್ಲಿಮರ ಪುನರುತ್ಥಾನಕ್ಕೆ ಶಿಕ್ಷಣ ಮುಖ್ಯ ಎಂದು ಅರಿತ ಸೈಯದ್ ಅಹ್ಮದ್ ಖಾನ್ ಅವರು, ಶಿಕ್ಷಣವೆಂದರೆ ಮದರಾಸ ಶಿಕ್ಷಣವಲ್ಲ, ವೈಜ್ಞಾನಿಕ ಅಧ್ಯಯನ ಮತ್ತು ಆವಿಷ್ಕಾರಗಳನ್ನು ಪರಿಚಯಿಸುವ ಇಂಗ್ಲಿಷ್ ಶಿಕ್ಷಣ ಮುಖ್ಯ ಎಂಬ ನಿಲುವನ್ನು ತಳೆದರು. ಅವರ ಶ್ರಮದಿಂದಾಗಿಯೇ 1875ರಲ್ಲಿ ನಿರ್ಮಾಣವಾಗಿದ್ದು ಮುಹಮ್ಮದನ್ ಆಂಗ್ಲೋ-ಓರಿಯಂಟಲ್ ಕಾಲೇಜು ಆರಂಭವಾಗಿದೆ. ಆದರೆ ತಮ್ಮ ಸಾಮಾಜಿಕ ಸುಧಾರಣೆಗಳನ್ನು ಪ್ರತಿಪಾದಿಸಿದ್ದರೂ ಕೂಡಾ ತಮ್ಮ ಜೀವನದುದ್ದಕ್ಕೂ ಬ್ರಿಟಿಷರೊಂದಿಗೆ ಉತ್ತಮ ಒಡನಾಟ ಹೊಂದಿದ್ದ ವ್ಯಕ್ತಿ ಎಂದು ಕೂಡಾ ಪರಿಗಣಿಸಲಾಗುತ್ತದೆ. 1920ರಲ್ಲಿ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯ ಕಾಯ್ದೆ ಅಂಗೀಕಾರವಾದ ಬಳಿಕ ಆಂಗ್ಲೋ-ಓರಿಯಂಟಲ್ ಕಾಲೇಜು ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯವಾಗಿ ಬದಲಾಗಿದೆ.
ಅಲ್ಪಸಂಖ್ಯಾತ ಸ್ಥಾನಮಾನ ವಿವಾದ
ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ಅಲ್ಪಸಂಖ್ಯಾತ ಸ್ಥಾನಮಾನದ ಕಾನೂನು ವಿವಾದವು ಅರ್ಧ ಶತಮಾನಕ್ಕೂ ಹಳೆಯ ವಿವಾದವಾಗಿದೆ. 1967ರಲ್ಲಿ ಸುಪ್ರೀಂ ಕೋರ್ಟ್ ವಿಶ್ವವಿದ್ಯಾನಿಲಯದ ಸಂಸ್ಥಾಪನಾ ಕಾಯ್ದೆಯ ಎರಡು ತಿದ್ದುಪಡಿಗಳನ್ನು ಪ್ರಶ್ನಿಸಿ ತೀರ್ಪು ನೀಡಿತ್ತು. ಎಎಂಯು ಅನ್ನು ಸ್ಥಾಪಿಸಿದ ಮುಸ್ಲಿಂ ಸಮುದಾಯವನ್ನು ಆರ್ಟಿಕಲ್ 30ರ ಅಡಿಯಲ್ಲಿ ಅದನ್ನು ನಿರ್ವಹಿಸುವ ಹಕ್ಕನ್ನು ಕಸಿದುಕೊಳ್ಳುತ್ತದೆ ಎಂದು ವಾದಿಸಿತು.
ಈ ತಿದ್ದುಪಡಿಗಳಲ್ಲಿ ಮೊದಲನೆಯದ್ದು 1951ರಲ್ಲಿ, ಮುಸ್ಲಿಮೇತರರು ವಿಶ್ವವಿದ್ಯಾನಿಲಯ ನ್ಯಾಯಾಲಯದ ಸದಸ್ಯರಾಗಲು ಅವಕಾಶ ಮಾಡಿಕೊಟ್ಟಿದ್ದು ಆಗಿದೆ. ವಿಶ್ವವಿದ್ಯಾನಿಲಯದ ಲಾರ್ಡ್ ರೆಕ್ಟರ್ (ಬ್ರಿಟಿಷ್ ಆಳ್ವಿಕೆಯಲ್ಲಿ ವಿಶ್ವವಿದ್ಯಾಲಯದ ಮುಖ್ಯಸ್ಥರು) ಅನ್ನು ಬದಲಾಯಿಸಿತು. ಎರಡನೆಯದಾಗಿ 1965ರಲ್ಲಿ ಎಎಂಯುನ ಕಾರ್ಯಕಾರಿ ಮಂಡಳಿಯ ಅಧಿಕಾರವನ್ನು ವಿಸ್ತರಿಸಿತು. ಇದರಿಂದಾಗಿ ವಿಶ್ವವಿದ್ಯಾಲಯದ ಕೋರ್ಟ್ ವಿಶ್ವವಿದ್ಯಾಲಯಕ್ಕೆ ಸರ್ವೋಚ್ಚ ನ್ಯಾಯಾಲಯ ಎಂಬುದು ಕೊನೆಯಾಯಿತು.
ಇದನ್ನು ಓದಿದ್ದೀರಾ? ಮುಸ್ಲಿಂ ಯುವಕರಿಗೆ ಸಾರ್ವಜನಿಕವಾಗಿ ಥಳಿಸಿದ ಪೊಲೀಸರಿಗೆ 14 ದಿನ ಜೈಲು; ಗುಜರಾತ್ ಹೈಕೋರ್ಟ್
ಹಾಗೆಯೇ ಎಎಂಯು ಅನ್ನು ಮುಸ್ಲಿಂ ಅಲ್ಪಸಂಖ್ಯಾತರು ಸ್ಥಾಪಿಸಿರುವುದಲ್ಲ ಅಥವಾ ಅವರು ನಿರ್ವಹಣೆ ಮಾಡಿರುವುದಲ್ಲ, ಬದಲಾಗಿ ಕೇಂದ್ರದ ಕಾಯ್ದೆಯಿಂದಾಗಿ (ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯ ಕಾಯ್ದೆ) ಅಸ್ತಿತ್ವಕ್ಕೆ ಬಂದಿರುವುದು ಎಂದು ಸುಪ್ರೀಂ ಕೋರ್ಟ್ (ಅಜೀಜ್ ಬಾಷಾ ತೀರ್ಪು) ಅಭಿಪ್ರಾಯಿಸಿತು. ಇದಾದ ಬಳಿಕ 1981ರಲ್ಲಿ ಎಎಂಯು ಕಾಯ್ದೆಯನ್ನು ಸರ್ಕಾರವು ತಿದ್ದುಪಡಿ ಮಾಡಿತು. ಈ ಮೂಲಕ ಈ ವಿಶ್ವವಿದ್ಯಾಲಯವು ಭಾರತದಲ್ಲಿ ಮುಸ್ಲಿಮರ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಪ್ರಗತಿಯನ್ನು ಉತ್ತೇಜಿಸಲು ಮುಸ್ಲಿಂ ಸಮುದಾಯ ಸ್ಥಾಪಿಸಿದೆ ಎಂದು ಒತ್ತಿ ಹೇಳಿತು.
2005ರಲ್ಲಿ ಎಎಂಯು ಮೊದಲ ಬಾರಿಗೆ ಸ್ನಾತಕೋತ್ತರ ವೈದ್ಯಕೀಯ ವಿದ್ಯಾಭ್ಯಾಸಕ್ಕೆ ಶೇಕಡ 50ರಷ್ಟು ಮುಸ್ಲಿಮರಿಗೆ ಮೀಸಲಾತಿಯನ್ನು ಒದಗಿಸಿತು. ಇದಾದ ಒಂದು ವರ್ಷದಲ್ಲೇ ಅಲಹಾಬಾದ್ ಹೈಕೋರ್ಟ್ ಅಜೀಜ್ ಬಾಷಾ ತೀರ್ಪಿನ ಆಧಾರದಲ್ಲಿ ಎಎಂಯು ಅಲ್ಪಸಂಖ್ಯಾತ ಸಂಸ್ಥೆಯಲ್ಲ. ಆದ್ದರಿಂದ ವಿಶ್ವವಿದ್ಯಾಲಯದ ಈ ಮೀಸಲಾತಿ ಆದೇಶವನ್ನು ಮತ್ತು 1981ರ ತಿದ್ದುಪಡಿ ಎರಡನ್ನೂ ರದ್ದುಪಡಿಸಿತು.
ಇದಾದ ಕೆಲವೇ ದಿನಗಳಲ್ಲಿ ಅಲಹಾಬಾದ್ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ. 2019ರಲ್ಲಿ ಈ ಪ್ರಕರಣವನ್ನು ಏಳು ನ್ಯಾಯಾಧೀಶರ ಪೀಠ ಕೈಗೆತ್ತಿಕೊಂಡಿದೆ. 1967ರ ಆದೇಶವನ್ನು ರದ್ದುಗೊಳಿಸಿ ಪೀಠ ಆದೇಶಿಸಿದೆ.
ಏನಿದು ಅಲ್ಪಸಂಖ್ಯಾತ ಸ್ಥಾನಮಾನ?
ಸುಪ್ರೀಂ ಕೋರ್ಟ್ ಪ್ರಕರಣದಲ್ಲಿ ಎರಡು ಅಂಶಗಳನ್ನು ತೀರ್ಮಾನಿಸುತ್ತದೆ. ಒಂದು ಶಿಕ್ಷಣ ಸಂಸ್ಥೆಯ ಅಲ್ಪಸಂಖ್ಯಾತ ಸ್ಥಾನಮಾನವನ್ನು ನಿರ್ಧರಿಸುವುದು ಮತ್ತೊಂದು ಕಾನೂನಿನ ಅಡಿಯಲ್ಲಿ ಸ್ಥಾಪಿಸಲಾದ ಸಂಸ್ಥೆ ಅಲ್ಪಸಂಖ್ಯಾತ ಸ್ಥಾನಮಾನವನ್ನು ಪಡೆಯಬಹುದೇ ಎಂಬುದಾಗಿದೆ.
2006ರಲ್ಲಿ ಸಂವಿಧಾನದಲ್ಲಿ ಪರಿಚಯಿಸಲಾದ ಆರ್ಟಿಕಲ್ 15 (5) ಅಡಿಯಲ್ಲಿ, ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಸೀಟುಗಳನ್ನು ಮೀಸಲಿಡುವುದರಿಂದ ವಿನಾಯಿತಿ ನೀಡಲಾಗಿದೆ. 2006ರಲ್ಲಿ ಸುಪ್ರೀಂ ಕೋರ್ಟ್ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ನಿರ್ದೇಶನ ನೀಡಿರುವುದರಿಂದ ವಿಶ್ವವಿದ್ಯಾನಿಲಯ ಎಸ್‌ಸಿ/ ಎಸ್‌ಟಿ ಮೀಸಲಾತಿಗಳನ್ನು ಹೊಂದಿಲ್ಲ.
ಇದನ್ನು ಓದಿದ್ದೀರಾ? ಆಧುನಿಕ ಭಾರತದ ಮೊದಲ ಮುಸ್ಲಿಂ ಶಿಕ್ಷಕಿ ಫಾತೀಮಾ ಶೇಖ್
ಎಎಂಯು ಅಲ್ಪಸಂಖ್ಯಾತ ಸ್ಥಾನಮಾನಕ್ಕೆ ಅರ್ಹವಾಗಿದೆ ಎಂದು ಅರ್ಜಿದಾರರು ವಾದಿಸಿದರೂ ಕೂಡಾ ಕೇಂದ್ರ ಸರ್ಕಾರವು ಈಗ ಎಸ್. ಅಜೀಜ್ ಬಾಷಾ ತೀರ್ಪನ್ನು ಅನುಮೋದಿಸಿದೆ. “ಎಎಂಯು ಅನ್ನು ಅಲ್ಪಸಂಖ್ಯಾತ ಸಂಸ್ಥೆ ಎಂದು ಘೋಷಿಸಿದರೆ ಇದು ಎಸ್‌ಸಿ/ ಎಸ್‌ಟಿ/ ಒಬಿಸಿ ಮೊದಲಾದ ಮೀಸಲಾತಿಗಳನ್ನು ಹೊಂದಿರುವುದಿಲ್ಲ, ಬದಲಾಗಿ ಶೇಕಡ 50 ಅಥವಾ ಅದಕ್ಕಿಂತ ಅಧಿಕ ಮುಸ್ಲಿಮರೇ ಮೀಸಲಾತಿ ಪಡೆಯುತ್ತಾರೆ ಎಂದು ಕೇಂದ್ರವು ಈ ವರ್ಷ ಸುಪ್ರೀಂ ಕೋರ್ಟ್‌ನಲ್ಲಿ ವಾದಿಸಿತು. ಹಾಗೆಯೇ “ಎಎಂಯುನಂತಹ ದೊಡ್ಡ ರಾಷ್ಟ್ರೀಯ ಸಂಸ್ಥೆಯು ತನ್ನ ಜಾತ್ಯತೀತ ಮೂಲವನ್ನು ಕಾಪಾಡಿಕೊಳ್ಳಬೇಕು ಮತ್ತು ರಾಷ್ಟ್ರದ ಹಿತಾಸಕ್ತಿಯನ್ನು ಮೊದಲು ಪೂರೈಸಬೇಕು” ಎಂದು ಕೇಂದ್ರ ಸರ್ಕಾರ ವಾದಿಸಿತ್ತು.
ಎಎಂಯು ಪರವಾಗಿ ಸಲ್ಲಿಸಲಾದ ಅರ್ಜಿಯಲ್ಲಿ ಕೇಂದ್ರದ ವಾದವು ತಪ್ಪು. ಸಾಂವಿಧಾನಿಕ ನಿಬಂಧನೆಗಳನ್ನು ಮೀರುತ್ತದೆ ಎಂದು ಹೇಳಿದೆ. ಸಂವಿಧಾನದ 30ನೇ ವಿಧಿಯ ಅಡಿಯಲ್ಲಿ ಅಲ್ಪಸಂಖ್ಯಾತ ಸ್ಥಾನಮಾನವನ್ನು ಪಡೆಯಬಹುದು ಎಂದು ಹೇಳಿದೆ.
ಏನಿದು ಸಂವಿಧಾನದ 30ನೇ ವಿಧಿ?
ಭಾರತೀಯ ಸಂವಿಧಾನದ 30ನೇ ವಿಧಿಯು ಸಮಾನತೆಯ ತತ್ವವನ್ನು ಗಮನದಲ್ಲಿಟ್ಟುಕೊಂಡು ದೇಶದಲ್ಲಿ ಅಲ್ಪಸಂಖ್ಯಾತ ಸಮುದಾಯದ ವಿವಿಧ ಹಕ್ಕುಗಳನ್ನು ರಕ್ಷಿಸುವ ನಿಬಂಧನೆಗಳನ್ನು ಒಳಗೊಂಡಿದೆ. ಸಂವಿಧಾನದ ಭಾಗ IIIರಲ್ಲಿನ ಆರ್ಟಿಕಲ್ 30(1) ಎಲ್ಲಾ ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತರಿಗೆ ಅವರ ಆಯ್ಕೆಯ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಲು ಮತ್ತು ನಿರ್ವಹಿಸಲು ಅವಕಾಶ ನೀಡುತ್ತದೆ.
ಆರ್ಟಿಕಲ್ 30(1ಎ) ಅಲ್ಪಸಂಖ್ಯಾತರು ಸ್ಥಾಪಿಸಿದ ಯಾವುದೇ ಶಿಕ್ಷಣ ಸಂಸ್ಥೆಯ ಆಸ್ತಿಯನ್ನು ಸ್ವಾಧೀನಪಡಿಸಿಕೊಳ್ಳಲು ಮೊತ್ತವನ್ನು ನಿಗದಿಪಡಿಸುತ್ತದೆ. ಆರ್ಟಿಕಲ್ 30(2) ಸರ್ಕಾರವು ಯಾವುದೇ ಶಿಕ್ಷಣ ಸಂಸ್ಥೆಯು ಅಲ್ಪಸಂಖ್ಯಾತರ ನಿರ್ವಹಣೆಯಲ್ಲಿದ್ದರೆ ಧರ್ಮ ಅಥವಾ ಭಾಷೆಯ ಆಧಾರದಲ್ಲಿ ತಾರತಮ್ಯ ಮಾಡಬಾರದು ಎಂದು ಹೇಳುತ್ತದೆ.
ಸಂವಿಧಾನದ 30 ಮತ್ತು 29ನೇ ವಿಧಿಯು ಭಾರತದಲ್ಲಿ ‘ಅಲ್ಪಸಂಖ್ಯಾತರನ್ನು’ ನಿರ್ದಿಷ್ಟಪಡಿಸದಿದ್ದರೂ, ಅದನ್ನು ಧಾರ್ಮಿಕ ಅಲ್ಪಸಂಖ್ಯಾತರು ಮತ್ತು ಭಾಷಾ ಅಲ್ಪಸಂಖ್ಯಾತರು ಎಂದು ವರ್ಗೀಕರಿಸಲಾಗಿದೆ. ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗ ಕಾಯ್ದೆಯ ಸೆಕ್ಷನ್ 2 (ಸಿ) ಮುಸ್ಲಿಮರು, ಕ್ರಿಶ್ಚಿಯನ್ನರು, ಬೌದ್ಧರು, ಸಿಖ್ಖರು, ಜೈನರು ಮತ್ತು ಜೊರಾಸ್ಟ್ರಿಯನ್ನರು (ಪಾರ್ಸಿಗಳು) ಹೀಗೆ ಆರು ಸಮುದಾಯಗಳನ್ನು ಅಲ್ಪಸಂಖ್ಯಾತ ಸಮುದಾಯಗಳೆಂದು ಘೋಷಿಸುತ್ತದೆ.
ಇದನ್ನು ಓದಿದ್ದೀರಾ? ದೆಹಲಿ ಜಾಮಿಯಾ ಮಿಲ್ಲೀಯಾ ವಿವಿ ಎಲ್‌ಎಲ್‌ಎಂ ಪ್ರವೇಶ ಪರೀಕ್ಷೆ: ಮಂಗಳೂರಿನ ನಿಹಾಲ್‌ಗೆ 7ನೇ ರ‍್ಯಾಂಕ್
ಸುಪ್ರೀಂ ಕೋರ್ಟ್‌ನ ತ್ರಿಸದಸ್ಯ ಪೀಠ ಅಂತಿಮ ತೀರ್ಪು ನೀಡಿದ ಬಳಿಕವೇ ಈ ಪ್ರಕರಣ ಅಂತ್ಯ ಕಾಣಬಹುದು. ಆದರೆ ಪ್ರಸ್ತುತ ಆಡಳಿತದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ಅಲ್ಪಸಂಖ್ಯಾತ ಸಮುದಾಯದ ವಿಶ್ವವಿದ್ಯಾಲಯಗಳನ್ನು ಭಯೋತ್ಪಾದಕರ ತಾಣದಂತೆ ಬಿಂಬಿಸುತ್ತಿದೆ. ಅಲ್ಪಸಂಖ್ಯಾತ ವಿರೋಧಿಯಾದ ಅದರಲ್ಲೂ ಪ್ರಮುಖವಾಗಿ ಮುಸ್ಲಿಂ ವಿರೋಧಿಯಾದ ಬಿಜೆಪಿ ಸರ್ಕಾರ ಸಾಮಾನ್ಯವಾಗಿಯೇ ಒಂದು ಸಂಸ್ಥೆಗೆ ಅಲ್ಪಸಂಖ್ಯಾತ ಸ್ಥಾನಮಾನ ನೀಡುವುದನ್ನು ವಿರೋಧಿಸುತ್ತಿದೆ.
ಅಲಿಯಾ ವಿಶ್ವವಿದ್ಯಾಲಯ (ಕೋಲ್ಕತ್ತಾ) ಮತ್ತು ಸೇಂಟ್ ಸ್ಟೀಫನ್ಸ್ ಕಾಲೇಜ್‌ನಂತಹ ಕಾಲೇಜುಗಳು ಸರ್ಕಾರದಿಂದ ಸಂಪೂರ್ಣ ನೆರವು ಪಡೆಯುತ್ತವೆ. ಸರ್ಕಾರದಿಂದ ಧನಸಹಾಯ ಪಡದರೂ ಅವು ತನ್ನ ಅಲ್ಪಸಂಖ್ಯಾತ ಸ್ಥಾನಮಾನವನ್ನು ಕಳೆದುಕೊಂಡಿಲ್ಲ. ಹಾಗಿದ್ದಾಗ ಅಲಿಗಢ ವಿಶ್ವವಿದ್ಯಾಲಯ ಮಾತ್ರ ಹೇಗೆ ಪ್ರತ್ಯೇಕವಾಗಿ ನಿಲ್ಲುತ್ತದೆ?

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.