87ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನವನ್ನು ಅದ್ದೂರಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲು ಸರ್ಕಾರಿ ನೌಕರರು ಒಂದು ದಿನದ ಸಂಬಳವನ್ನು ನೀಡುವಂತೆ ಜಿಲ್ಲಾಧಿಕಾರಿ ಡಾ ಕುಮಾರ್ ಮನವಿ ಮಾಡಿದ್ದಾರೆ.
ಅವರು ಬುಧವಾರ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಂಬಂಧಿಸಿದಂತೆ ಜಿಲ್ಲಾ ಸರ್ಕಾರಿ ನೌಕರರ ಸಂಘದ ಸಭೆ ನಡೆಸಿ ಮಾತನಾಡಿದರು. ಒಂದು ದಿನದ ಸಂಬಳ ನೀಡುವ ಬಗ್ಗೆ ಜಿಲ್ಲಾಡಳಿತದಿಂದ ಯಾವುದೇ ಒತ್ತಾಯವಿಲ್ಲ. ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಪ್ರೀತಿಪೂರ್ವಕವಾಗಿ ನೀಡುವಂತೆ ಮನವಿ ಮಾಡಿದರು.
87ನೇ ಅಖಿಲ ಭಾರತ ಕನ್ನಡ ಸಾಹಿತ್ಯವು ಡಿಸೆಂಬರ್ 20, 21, 22 ರಂದು ಜಿಲ್ಲೆಯಲ್ಲಿ ನಡೆಯಲಿದೆ. ಸರ್ಕಾರಿ ನೌಕರರುಗಳಲ್ಲದೆ ವಿವಿಧ ಸಂಘ ಸಂಸ್ಥೆಗಳು, ಕನ್ನಡ ಪರ ಹೋರಾಟ ಸಂಘಗಳು ಹಾಗೂ ಸಾರ್ವಜನಿಕರು ಮನಪೂರ್ವಕವಾಗಿ ತಮ್ಮ ಇಚ್ಛೆಯಿಂದ ಸಮ್ಮೇಳನಕ್ಕೆ ಸಹಾಯ ಮಾಡಬಹುದು. ಜಿಲ್ಲೆಯ ಕನ್ನಡಿಗರು ಸಮ್ಮೇಳನದಲ್ಲಿ ಒಬ್ಬ ಕನ್ನಡಿಗನಾಗಿ ಸೇವೆ ಮಾಡಬಹುದಾಗಿದ್ದು, ಈ ಬಗ್ಗೆ ಯಾವುದೇ ಒತ್ತಾಯವಿರುವುದಿಲ್ಲ ಎಂದರು.
ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶೇಖ್ ತನ್ವಿರ್ ಆಸಿಫ್ ಮಾತನಾಡಿ, ಜಿಲ್ಲೆಯ ಎಲ್ಲಾ ಸಿಬ್ಬಂದಿಗಳು ಹಾಗೂ ನಾಗರೀಕ ವರ್ಗದವರಿಗೆ ಕನ್ನಡ ನುಡಿ, ಕನ್ನಡ ಸಾಹಿತ್ಯ, ಸಂಸ್ಕೃತಿಯ ಬಗ್ಗೆ ಹೆಚ್ಚು ಗೌರವವಿದೆ. ಜಿಲ್ಲೆಗೆ ದೊರಕಿರುವ ಕನ್ನಡ ಸಾಹಿತ್ಯ ಸಮ್ಮೇಳನ ಹಬ್ಬದಲ್ಲಿ ಪ್ರತಿಯೊಬ್ಬರೂ ಪಾಲ್ಗೊಂಡು ಜಿಲ್ಲೆಯ ಹಿತಾಸಕ್ತಿಗಾಗಿ ಕಾರ್ಯ ನಿರ್ವಹಿಸೋಣ ಎಂದರು.
ಅಪರ ಜಿಲ್ಲಾಧಿಕಾರಿ ಡಾ ಹೆಚ್ ಎಲ್ ನಾಗರಾಜು ಮಾತನಾಡಿ, 30 ವರ್ಷಗಳ ನಂತರ ಜಿಲ್ಲೆಗೆ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಅವಕಾಶ ಸಿಕ್ಕಿದೆ. ಈ ಅದ್ಭುತ ಸಮ್ಮೇಳನಕ್ಕೆ ಎಲ್ಲರು ತನು, ಮನ ಹಾಗೂ ಧನದ ನೀಡಿ ಸಹಕಾರ ನೀಡಬೇಕಿದೆ. ಕಾರ್ಯಕ್ರಮಕ್ಕೆ ಎಲ್ಲಾ ಅಧಿಕಾರಿ, ಸಿಬ್ಬಂದಿಗಳು, ಕನ್ನಡ ಸಾಹಿತ್ಯ ಪರಿಷತ್ತು, ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಪಾಲ್ಗೊಂಡು ಸಹಕರಿಸಬೇಕು ಎಂದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ನಾಗೇಶ್‌ಗೌಡ ಮಾತನಾಡಿ, ಸಮ್ಮೇಳನಕ್ಕೆ ಸಂಪೂರ್ಣ ಬೆಂಬಲ ನೀಡಲಾಗುವುದು. ನಮ್ಮ ಜಿಲ್ಲೆಯ ಹಿರಿಮೆಯನ್ನು ಹೆಚ್ಚಿಸುವ ಜವಾಬ್ದಾರಿ ಎಲ್ಲಾ ನೌಕರರುಗಳ ಮೇಲಿದ್ದು ಒಂದು ದಿನದ ವೇತನವನ್ನು ನೀಡಲು ಸಿದ್ಧರಿದ್ದೇವೆ. ಸಮ್ಮೇಳನದ ಅಂಗವಾಗಿ ನಮ್ಮ ಜಿಲ್ಲೆಯಲ್ಲಿ ಕನ್ನಡ ಭವನದ ನಿರ್ಮಾಣ ಮಾಡಬೇಕು. ಸಮ್ಮೇಳನದಲ್ಲಿ ಸಾಧನೆ ಮಾಡಿದ ಸರ್ಕಾರಿ ನೌಕರರುಗಳನ್ನು ಸನ್ಮಾನಿಸಬೇಕು ಎಂದು ತಮ್ಮ ಅಭಿಪ್ರಾಯವನ್ನು ತಿಳಿಸಿದರು.
ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಶಂಭುಗೌಡ ಮಾತನಾಡಿ ಅಖಿಲ ಭಾರತ ಸಮ್ಮೇಳನ ಹಬ್ಬವನ್ನು ನಾವೆಲ್ಲರೂ ಆಚರಿಸುತ್ತಿದ್ದು, ಮಂಡ್ಯ ಜಿಲ್ಲೆಯ ಸರ್ಕಾರಿ ನೌಕರರ ಸಂಘವು ಎಲ್ಲಾ ರೀತಿಯ ಬೆಂಬಲ ಹಾಗೂ ಸಹಕಾರವನ್ನು ಜಿಲ್ಲಾಡಳಿತಕ್ಕೆ ನೀಡಲಾಗುವುದು. ಎಲ್ಲಾ ನೌಕರರು ಸಹಕಾರ ಮನೋಭಾವ ಹಾಗೂ ಧನಾತ್ಮಕ ನಿಲುವನ್ನು ಹೊಂದಿದ್ದು, ಸಿಕ್ಕಿರುವ ಅವಕಾಶದಲ್ಲಿ ನಮ್ಮ ಅಳಿಲು ಸೇವೆ ಮಾಡಲು ಸಿದ್ಧರಿದ್ದೇವೆ ಎಂದರು.
ಇದನ್ನು ಓದಿದ್ದೀರಾ: ಮಂಡ್ಯ | ಬೆಟ್ಟಿಂಗ್ ದಂಧೆಯ ನಿಯಂತ್ರಣಕ್ಕೆ ನಿರ್ದಿಷ್ಟ ಕಾಯ್ದೆ ಜಾರಿಗೆ ಬಿ ಟಿ ವಿಶ್ವನಾಥ್ ಆಗ್ರಹ
ಇಡೀ ನಾಡಿನಲ್ಲಿ ಕನ್ನಡ ನುಡಿಯನ್ನು ಹೆಚ್ಚು ಮಾತನಾಡುವ ಜಿಲ್ಲೆ ಮಂಡ್ಯವಾಗಿದ್ದು, ಇದು ಹೆಮ್ಮೆಯ ಸಂಗತಿಯಾಗಿದೆ. ಎಲ್ಲಾ ಜಿಲ್ಲೆಯು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಜಿಲ್ಲೆ ಹೇಗೆ ಮಾಡುತ್ತದೆ ಎಂದು ಅನೇಕ ನಿರೀಕ್ಷೆಗಳನ್ನು ಇಟ್ಟುಕೊಂಡಿರುತ್ತದೆ. ಆದ್ದರಿಂದ ಎಲ್ಲರೂ ಒಗ್ಗೂಡಿ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಗೊಳಿಸಿ ಇಡೀ ರಾಜ್ಯಕ್ಕೆ ಮಾದರಿಯಾಗೋಣ ಎಂದರು.
ಸಭೆಯಲ್ಲಿ ಕಸಾಪ ಸಮ್ಮೇಳನದ ಸಂಚಾಲಕಿ ಡಾ ಮೀರಾಶಿವಲಿಂಗಯ್ಯ ಸೇರಿದಂತೆ ವಿವಿಧ ನೌಕರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.