ಸಂಜು – ತಿಲಕ್ ಅಬ್ಬರದ ಅದ್ಭುತ ಆಟದಲ್ಲಿ ಐಪಿಎಲ್ ಹರಾಜಿನ ಸುಳಿವಿದೆಯೇ?

Date:

Advertisements
ಸಂಜು ಸ್ಯಾಮ್ಸನ್ ಮತ್ತು ತಿಲಕ್ ವರ್ಮಾರ ಸಿಡಿಲಬ್ಬರದ ಆಟ, ಈ ಬಾರಿಯ ಐಪಿಎಲ್ ಹರಾಜು ಪ್ರಕ್ರಿಯೆಯನ್ನು ದೃಷ್ಟಿಯಲ್ಲಿಟ್ಟುಕೊಂಡ ಆಟವಾಗಿತ್ತೇ ಎಂಬ ಅನುಮಾನವೂ ಇದೆ. ಹೌ ಟು ಸೆಲ್ ಮೈ ರೈಟಿಂಗ್ ಎನ್ನುವ ಈ ಕಾಲದಲ್ಲಿ, ಆಟ ಮಾರಾಟವಾದರೆ ತಪ್ಪೇನು?

ನವೆಂಬರ್ 15ರಂದು ಜೋಹಾನ್ಸ್ ಬರ್ಗ್‌ನಲ್ಲಿ ನಡೆದ ನಾಲ್ಕನೇ ಟಿ20 ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡ, ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್- ಮೂರೂ ವಿಭಾಗಗಳಲ್ಲಿಯೂ ತಂಡವಾಗಿ ಆಡಿ ಗೆದ್ದಿದೆ. ಬ್ಯಾಟಿಂಗ್‌ನಲ್ಲಂತೂ ಸಂಜು ಸ್ಯಾಮ್ಸನ್ ಮತ್ತು ತಿಲಕ್ ವರ್ಮಾರ ಅಬ್ಬರದ ಆಟ, ನೋಡುಗರಿಗೆ ಹಬ್ಬದೂಟವನ್ನೇ ಉಣಬಡಿಸಿದೆ. ದಾಖಲೆಗಳನ್ನು ಧೂಳೀಪಟ ಮಾಡಿದೆ.

ಅದರಲ್ಲೂ, ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ ಕೃಪೆಯಿಂದ, ಒನ್ ಡೌನ್‌ನಲ್ಲಿ, ಮೂರನೇ ಶ್ರೇಯಾಂಕದಲ್ಲಿ ಆಡಿದ ತಿಲಕ್ ವರ್ಮಾ, ಸಿಕ್ಕ ಅವಕಾಶವನ್ನು ಅತ್ಯುತ್ತಮವಾಗಿ ಬಳಸಿಕೊಂಡರು. ಕೇವಲ 47 ಎಸೆತಗಳಲ್ಲಿ 120 ರನ್ ಪೇರಿಸಿದ ತಿಲಕ್, ಒಂಭತ್ತು ಬೌಂಡರಿಗಳು, ಹತ್ತು ಸಿಕ್ಸರ್‍‌ಗಳನ್ನೆತ್ತಿ ದಾಖಲೆಗಳನ್ನು ಪುಡಿಗಟ್ಟಿದರು. ಅವರ ಆಟದಲ್ಲೊಂದು ಸೊಗಸಿತ್ತು. ಪ್ರತಿ ಶಾಟ್‌ನಲ್ಲೂ ಕಲಾತ್ಮಕತೆ ಇತ್ತು. ಮಂಡಿಯೂರಿ ಬೌಂಡರಿಯಾಚೆಗೆ ಬಾಲ್ ಅಟ್ಟುತ್ತಿದ್ದ ರೀತಿ ಅದ್ಭುತವಾಗಿತ್ತು. ಕ್ಷಣ ಕ್ಷಣಕ್ಕೂ ರೋಚಕತೆಯನ್ನು ಉಣಬಡಿಸುತ್ತಿತ್ತು.

ಮತ್ತೊಂದು ತುದಿಯಲ್ಲಿ ಸೌಮ್ಯ ಸ್ವಭಾವದ ಸಂಜು ಸ್ಯಾಮ್ಸನ್, ಮೌನವಾಗಿಯೇ ತನ್ನ ಬ್ಯಾಟ್‌ನಿಂದ ಕೊಡುತ್ತಿದ್ದ ಉತ್ತರ ವಿಶೇಷವಾಗಿತ್ತು. ಆರಂಭಿಕ ಆಟಗಾರನಾಗಿ ಸ್ಕ್ರೀಸ್‌ಗಿಳಿದಿದ್ದ ಸಂಜು, ಮೊದಲ ಟಿ20 ಪಂದ್ಯದಲ್ಲಿ ಸೆಂಚುರಿ ಬಾರಿಸಿ, ಭಾರೀ ನಿರೀಕ್ಷೆ ಹುಟ್ಟಿಸಿದ್ದರು. ಅದೇ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಿಗೆ, ಎರಡು ಮತ್ತು ಮೂರನೇ ಪಂದ್ಯಗಳಲ್ಲಿ ಸಂಜು ಸೊನ್ನೆ ಸುತ್ತಿ ಭ್ರಮನಿರಸನ ಉಂಟುಮಾಡಿದ್ದರು. ಆದರೆ ನಾಲ್ಕನೇ ನಿರ್ಣಾಯಕ ಪಂದ್ಯದಲ್ಲಿ, ಸರಣಿ ಗೆಲ್ಲುವ ಹಾದಿಯಲ್ಲಿ ತಮ್ಮೆಲ್ಲ ಶಕ್ತಿ, ಸಾಮರ್ಥ್ಯಗಳನ್ನು ಪಣಕ್ಕಿಟ್ಟು ಅನುಭವಿ ಆಟಗಾರನಂತೆ ಆಡಿ, 56 ಎಸೆತಗಳಲ್ಲಿ ಆರು ಬೌಂಡರಿ, ಒಂಭತ್ತು ಸಿಕ್ಸರ್‍‌ಗಳನ್ನು ಸಿಡಿಸಿ 109 ರನ್ ಪೇರಿಸಿದ್ದರು.

Advertisements

ಒಂದು ತುದಿಯಿಂದ ಸಂಜು, ಮತ್ತೊಂದು ಬದಿಯಿಂದ ತಿಲಕ್- ಸೌತ್ ಆಫ್ರಿಕಾದ ಬೌಲರ್‍‌ಗಳನ್ನು ಚೆಂಡಾಡಿಬಿಟ್ಟರು. ಅವರಿಬ್ಬರ ಆಟದಲ್ಲಿ ಎಲ್ಲಿಯೂ ಒಬ್ಬರು ಸಂಯಮದಿಂದ, ಮತ್ತೊಬ್ಬರು ಅಬ್ಬರದಿಂದ ಆಟವಾಡಲಿಲ್ಲ. ಅಂಜಿ ಅಳುಕಿ ಆಡುವುದು ಕಾಣಲಿಲ್ಲ. ಅತಿ ಉತ್ಸಾಹ, ಆತ್ಮವಿಶ್ವಾಸ ತುಂಬಿ ತುಳುಕುತ್ತಿತ್ತು. ರನ್ ಹೊಳೆ ಹರಿಯುತ್ತಿತ್ತು.

ಇಂತಹ ಹೊಡಿ ಬಡಿ ಆಟ, ಹೊಸಗಾಲದ ಯುವ ಜನತೆಗೆ ಇಷ್ಟವಾಗುತ್ತದೆ. ಆದರೆ, ಕ್ರಿಕೆಟ್ ಎಂಬ ಸಭ್ಯರ ಆಟವನ್ನು, ಅದರ ಸೊಗಸುಗಾರಿಕೆಯನ್ನು ಸವಿದವರು, ಇದು ಆಟವಲ್ಲ, ಜೂಜಾಟ ಎನ್ನುವುದೂ ಉಂಟು.

ಇದನ್ನು ಓದಿದ್ದೀರಾ?: ಉಚಿತ ಕೊಡುಗೆಗಳ ಬಗ್ಗೆ ಅನುಮಾನವಿರಲಿ; ನಿಮ್ಮ ಮೆದುಳು ವಸಾಹತು ಕಾಲೋನಿಯಾಗದಿರಲಿ… 

ಅದಕ್ಕೆ ಪೂರಕವಾಗಿ, ಭಾರತದಲ್ಲಿ ಕ್ರಿಕೆಟ್ ಇಂದು ಕೇವಲ ಆಟವಾಗಿ ಉಳಿದಿಲ್ಲ. ಕ್ರಿಕೆಟ್ ಎನ್ನುವುದು ಇವತ್ತಿನ ದಿನಗಳಲ್ಲಿ ಕೋಟ್ಯಂತರ ರೂಪಾಯಿಗಳ ವಹಿವಾಟುಳ್ಳ ಬೃಹತ್ ಉದ್ಯಮವಾಗಿ ಬೆಳೆದು ನಿಂತಿದೆ. ಕ್ರಿಕೆಟ್ ಆಟಗಾರ ರನ್ ಹೊಳೆ ಹರಿಸುವ, ವಿಕೆಟ್ ಉರುಳಿಸುವ, ಕ್ಯಾಚ್ ಹಿಡಿಯುವ ಮಷೀನ್ ಆಗಿದ್ದಾನೆ. ಪ್ರೇಕ್ಷಕರು ಹುಚ್ಚು ಅಭಿಮಾನಿಗಳಾಗಿ ರೂಪಾಂತರಗೊಂಡಿದ್ದಾರೆ. ಗೆದ್ದರೆ ಹೊಗಳುವ, ಸೋತರೆ ಕೆರಳುವ ಜನ, ಅದನ್ನೊಂದು ಆಟ, ಅಲ್ಲಿ ಸೋಲು-ಗೆಲುವು ಸಾಮಾನ್ಯ ಎನ್ನುವುದನ್ನೇ ಮರೆತಿದ್ದಾರೆ. ಇಂತಹ ಒತ್ತಡದಲ್ಲಿ ಆಡಬೇಕಾದ ಆಟಗಾರ, ಆಟದ ಸೊಗಸನ್ನು, ಕಲಾತ್ಮಕತೆಯನ್ನು ಕಡೆಗಣಿಸಿ, ತಂತ್ರಗಾರಿಕೆಗೆ ತಲೆಬಾಗಿದ್ದಾನೆ. ಪ್ರೇಕ್ಷಕರು, ಆಯ್ಕೆದಾರರು, ಮಾಲೀಕರು, ಜಾಹೀರಾತುದಾರರು, ಬೆಟ್ಟಿಂಗ್ ಕಟ್ಟುವವರ ಒತ್ತಡಕ್ಕೆ ಒಳಗಾಗಿ ಜೀವವನ್ನು ಒತ್ತೆಯಿಟ್ಟು ಆಟವಾಡುತ್ತಿದ್ದಾನೆ.

ಇದೇ ತಿಂಗಳು 24 ಮತ್ತು 25ರಂದು, 18ನೇ ಐಪಿಎಲ್ ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದೆ. ಸೌದಿ ಅರೇಬಿಯಾದ ಜೆಡ್ಡಾ ನಗರದಲ್ಲಿ ಆಟಗಾರರನ್ನು ಹರಾಜಿಗಿಟ್ಟು ಖರೀದಿಸುವ ಕುಬೇರರ ಜೂಜಾಟ ಜರುಗಲಿದೆ. ಕೋಟಿಗಟ್ಟಲೆ ಬಿಡ್ ಕೂಗುವ ನವಕುಬೇರರಿಗೆ ಬೇಕಾಗಿರುವುದು ಆಟಗಾರನೂ ಅಲ್ಲ, ಆಟವೂ ಅಲ್ಲ; ರನ್ ಹೊಳೆ ಹರಿಸುವ ಮಷೀನ್. ಆ ಮಷೀನ್ ಮನುಷ್ಯರಂತಿರಬೇಕು, ಎಟಿಎಂನಂತೆ ಹಣ ಹರಿಸಬೇಕು, ಅಷ್ಟೆ.

ಈ ಬಾರಿಯ ಚುಟುಕು ಕ್ರಿಕೆಟ್ ಪಂದ್ಯಗಳತ್ತ ನೋಡುವುದಾದರೆ, ಒಂದು ತಿಂಗಳ ಕಾಲ ನಡೆಯುವ ಈ ಐಪಿಎಲ್‌ನಲ್ಲಿ 12 ಟೀಮ್‌ಗಳು, 574 ಆಟಗಾರರು ಭಾಗವಹಿಸುತ್ತಿದ್ದು, 74 ಮ್ಯಾಚ್‌ಗಳು ನಡೆಯಲಿವೆ. ಮಾಲೀಕರು ಪ್ರತಿ ತಂಡದ ಮೇಲೆ ಹೂಡುವ ಬಂಡವಾಳ 120 ಕೋಟಿ ಎಂದು ಅಂದಾಜು ಮಾಡಲಾಗಿದೆ. ಎರಡು ಟೀಮ್‌ಗಳ ನಡುವೆ ನಡೆಯುವ ಒಂದು ಪಂದ್ಯದ ಸುತ್ತ 5 ಸಾವಿರ ಕೋಟಿ ರೂಪಾಯಿಗಳ ವಹಿವಾಟು ನಡೆಯುತ್ತದೆಂಬ ಲೆಕ್ಕಾಚಾರವಿದೆ. ಒಂದು ಪಂದ್ಯಕ್ಕೆ 5 ಸಾವಿರ ಕೋಟಿಯಾದರೆ, 74 ಪಂದ್ಯಗಳ ಒಟ್ಟು ಮೊತ್ತವೆಷ್ಟು? ಒಂದು ಬಾರಿಯ ಐಪಿಎಲ್‌ನ ಸುತ್ತ ನಡೆಯುವ ಒಟ್ಟು ವಹಿವಾಟು ಎಷ್ಟು? ಅಂದಾಜಿಗೂ ಸಿಗದಂಥದ್ದು.

ರನ್ ಹೊಳೆ ಹರಿಸುವ, ವಿಕೆಟ್ ಬೇಟೆಯಾಡುವ, ಕ್ಷಣಕ್ಷಣಕ್ಕೂ ರೋಚಕ ಕ್ಷಣವನ್ನು ಕಟ್ಟಿಕೊಡುವ ಚುಟುಕು ಕ್ರಿಕೆಟ್, ಅಭಿಮಾನಿಗಳಿಗೆ ಥ್ರಿಲ್ ಕೊಡುವ ಆಟ. ಮನರಂಜನೆ ನೀಡುವ ಆಟ. ಹಾಗೆಯೇ ಕ್ರಿಕೆಟ್ ಆಟಗಾರರಿಗೆ, ಸಿನಿಮಾ ನಟ-ನಟಿಯರಿಗೆ, ಪ್ರಾಯೋಜಕರಿಗೆ, ಜಾಹೀರಾತುದಾರರಿಗೆ, ಸುದ್ದಿ ಮಾಧ್ಯಮಗಳಿಗೆ, ಉದ್ಯಮಿಗಳಿಗೆ, ಸ್ಟೇಡಿಯಂ ಮಾಲೀಕರಿಗೆ ಹಣ ತರುವ ಆಟ.

ಇದಕ್ಕೆ ಪರ್ಯಾಯವಾಗಿ, ಕ್ರಿಕೆಟ್ ಬೆಟ್ಟಿಂಗ್ ಜಾಲವೂ ತಳಕು ಹಾಕಿಕೊಂಡಿದೆ. ಆ ದಂಧೆಯಲ್ಲಿ ಬಡವರಷ್ಟೇ ಅಲ್ಲ, ಮಧ್ಯಮವರ್ಗ, ಶ್ರೀಮಂತರು, ಅಧಿಕಾರಿಗಳು, ರಾಜಕಾರಣಿಗಳು, ರೌಡಿಗಳು, ಪೊಲೀಸರೂ ಇದ್ದಾರೆ. ಇವರೊಂದಿಗೆ ಆನ್‌ಲೈನ್ ಬುಕ್ಕಿಗಳು, ಮ್ಯಾಚ್ ಫಿಕ್ಸರ್‍‌ಗಳು, ಮಾಫಿಯಾ ಡಾನ್‌ಗಳೂ ಇದ್ದಾರೆ. ಇವರೆಲ್ಲರಿಗೂ ಐಪಿಎಲ್ ಹಬ್ಬದಂತೆ ಕಾಣುತ್ತದೆ.

ಐಪಿಎಲ್1

ನಿನ್ನೆಯ ಸಂಜು ಸ್ಯಾಮ್ಸನ್ ಮತ್ತು ತಿಲಕ್ ವರ್ಮಾರ ಸಿಡಿಲಬ್ಬರದ ಆಟ, ಈ ಬಾರಿಯ ಐಪಿಎಲ್ ಹರಾಜು ಪ್ರಕ್ರಿಯೆಯನ್ನು ದೃಷ್ಟಿಯಲ್ಲಿಟ್ಟುಕೊಂಡ ಆಟವಾಗಿತ್ತೇ ಎಂಬ ಅನುಮಾನವೂ ಇದೆ. ಹೌ ಟು ಸೆಲ್ ಮೈ ರೈಟಿಂಗ್ ಎನ್ನುವ ಈ ಕಾಲದಲ್ಲಿ, ಆಟ ಮಾರಾಟವಾದರೆ ತಪ್ಪೇನು ಎನ್ನುವ ವಾದವೂ ಇದೆ, ಇರಲಿ.

Basavaraju Megalkeri
+ posts

ಲೇಖಕ, ಪತ್ರಕರ್ತ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಬಸವರಾಜು ಮೇಗಲಕೇರಿ
ಬಸವರಾಜು ಮೇಗಲಕೇರಿ
ಲೇಖಕ, ಪತ್ರಕರ್ತ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಮಹಿಳಾ ವಿಶ್ವಕಪ್‌, ಆಸೀಸ್‌ ಪ್ರವಾಸಕ್ಕೆ ಟೀಂ ಇಂಡಿಯಾ ತಂಡ ಪ್ರಕಟ

ಮುಂದಿನ ತಿಂಗಳು ಭಾರತ ಹಾಗೂ ಶ್ರೀಲಂಕಾದಲ್ಲಿ ನಡೆಯಲಿರುವ ಮಹಿಳೆಯರ ಏಕದಿನ ವಿಶ್ವಕಪ್‌ಗೆ...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

Download Eedina App Android / iOS

X