ಜಾರ್ಖಂಡ್‌ನಲ್ಲಿ ಈಗಾಗಲೇ ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನ ಪ್ರಕ್ರಿಯೆ ಮುಗಿದಿದೆ. ನವೆಂಬರ್ 20ರಂದು ಎರಡನೇ ಹಂತದ ಚುನಾವಣೆ ನಡೆಯಲಿದೆ. ರಾಜ್ಯದಲ್ಲಿ ಎನ್‌ಡಿಎ ಮೈತ್ರಿಕೂಟ, ಇಂಡಿಯಾ ಒಕ್ಕೂಟದ ನಡುವಿನ ಪೈಪೋಟಿಗಳ ಬಗ್ಗೆ ಚರ್ಚಿಸುತ್ತಿರುವ ನಾವು ಇವೆರಡಕ್ಕೂ ಸಂಕಟ ತಂದಿರುವ ಜಾರ್ಖಂಡ್ ನಾಯಕ ‘ಟೈಗರ್’ ಜೈರಾಮ್ ಮಹ್ತೋ ಅವರನ್ನು ಮರೆತಿದ್ದೇವೆ.
ಜಾರ್ಖಂಡ್ ಶಿಕ್ಷಣ ಸಚಿವರಾಗಿದ್ದ ದಿವಂಗತ ಜಗರ್ನಾಥ್ ಮಹ್ತೋ ಅವರನ್ನು ಈ ಹಿಂದೆ ‘ಟೈಗರ್’ ಎಂದು ಕರೆಯಲಾಗುತ್ತಿತ್ತು. 2023ರಲ್ಲಿ ಅವರ ನಿಧನದ ಬಳಿಕ ‘ಟೈಗರ್’ ಎಂಬ ಹೆಸರು 29 ವರ್ಷದ ಯುವ ನಾಯಕ ಜೈರಾಮ್ ಮಹ್ತೋ ಅವರ ಮುಡಿಗೇರಿದೆ. ಟೀ ಶರ್ಟ್, ಜೀನ್ಸ್ ಧರಿಸಿ ಕಾರಿನ ಬಾನೆಟ್‌ನಲ್ಲಿ ನಿಂತು ರಾಜ್ಯದಲ್ಲಿ ಯುವಕರ ಸಮಸ್ಯೆ ಬಗ್ಗೆ ಭಾಷಣ ಮಾಡುವ ಜೈರಾಮ್ ಮಹ್ತೋ ಅವರನ್ನು ಜನರು ಟೈಗರ್ ಎಂದೇ ಕೂಗಿ ಕರೆಯುತ್ತಾರೆ.
ಕುದ್ಮಿ ಮಹ್ತೋ ಜಾತಿಗೆ ಸೇರಿದ ನಾಯಕ ಜೈರಾಮ್, ಜಾರ್ಖಂಡ್ ಲೋಕತಾಂತ್ರಿಕ್ ಕ್ರಾಂತಿಕಾರಿ ಮೋರ್ಚಾ (ಜೆಕೆಎಲ್‌ಎಂ) ಪಕ್ಷದ ಸಂಸ್ಥಾಪಕ. ಆರಂಭದಲ್ಲಿ ಸಂಘಟನೆಯಾಗಿದ್ದ ಜೆಕೆಎಲ್‌ಎಂ ಕಳೆದ ವರ್ಷದಿಂದ ರಾಜಕೀಯ ಪಕ್ಷವಾಗಿ ಬದಲಾಗಿದೆ. 2024ರ ಲೋಕಸಭೆ ಚುನಾವಣೆಯಲ್ಲಿ ಗಮನಾರ್ಹ ಮತಗಳನ್ನು ಕೂಡಾ ಗಳಿಸಿದೆ. ಆದರೆ ವಿಧಾನಸಭೆ ಚುನಾವಣೆಯಲ್ಲಿ ಇಂಡಿಯಾ ಒಕ್ಕೂಟ (ಕಾಂಗ್ರೆಸ್, ಜೆಜೆಎಂ) ಮತ್ತು ಬಿಜೆಪಿ (ಎನ್‌ಡಿಎ), ಜೈರಾಮ್ ಅವರ ಪಕ್ಷವನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಕುದ್ಮಿ ಮಹ್ತೋ ಸಮುದಾಯವಿರುವ ಪ್ರದೇಶದಲ್ಲಿ ಜೈರಾಮ್ ಪ್ರಭಾವ ಮಹತ್ತರವಾಗಿದೆ ಎಂಬುದನ್ನು ಈ ಎರಡೂ ಮೈತ್ರಿಕೂಟವೂ ಮರೆತಿದೆ.
ಇದನ್ನು ಓದಿದ್ದೀರಾ? ಬುಡಕಟ್ಟು ಸಮುದಾಯ ಮತ್ತು ಮಹಿಳೆಯರ ಮತಗಳೇ ಜಾರ್ಖಂಡ್‌ನಲ್ಲಿ ನಿರ್ಣಾಯಕ: ಅದೇ ಬಿಜೆಪಿಗೆ ಸವಾಲು
ಕಳೆದ ಲೋಕಸಭೆ ಚುನಾವಣೆಯಲ್ಲಿ ಮೊದಲ ಬಾರಿಗೆ ಚುನಾವಣಾ ರಂಗಕ್ಕೆ ಪ್ರವೇಶಿಸಿದ ಜೈರಾಮ್ ಮಹ್ತೋ ಅವರ ಸಂಘಟನೆಯು ಒಟ್ಟು 14 ಕ್ಷೇತ್ರಗಳ ಪೈಕಿ ಎಂಟು ಲೋಕಸಭಾ ಕ್ಷೇತ್ರದಲ್ಲಿ ಕಣಕ್ಕಿಳಿದಿತ್ತು ಮತ್ತು 8.2 ಲಕ್ಷ ಮತಗಳನ್ನು ಪಡೆದಿತ್ತು. ಮಹ್ತೋ ಗಿರಿದೀಹ್ ಲೋಕಸಭಾ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಒಟ್ಟು 3,47,322 ಲಕ್ಷ ಮತವನ್ನು ಪಡೆದು ಮೂರನೇ ಸ್ಥಾನದಲ್ಲಿದ್ದರು. ಗೆದ್ದ ಎಜೆಎಸ್‌ಯು ಮತ್ತು ಎರಡನೇ ಸ್ಥಾನದಲ್ಲಿದ್ದ ಜೆಎಂಎಂ, ಎರಡಕ್ಕೂ ಪ್ರಬಲ ಪೈಪೋಟಿ ನೀಡಿದ್ದರು.
ಇದಾದ ಬಳಿಕ ಈಗ ಮೊದಲ ಬಾರಿಗೆ 81 ವಿಧಾನಸಭಾ ಕ್ಷೇತ್ರಗಳ ಪೈಕಿ 71ರಲ್ಲಿ ಜೈರಾಮ್ ಮಹ್ತೋ ಅವರ ಜಾರ್ಖಂಡ್ ಲೋಕತಾಂತ್ರಿಕ್ ಕ್ರಾಂತಿಕಾರಿ ಮೋರ್ಚಾ (ಜೆಕೆಎಲ್‌ಎಂ) ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಡುಮ್ರಿ ವಿಧಾನಸಭಾ ಕ್ಷೇತ್ರದಲ್ಲಿ ಟೈಗರ್ ಜಗರ್ನಾಥ್ ಮಹ್ತೋ ಅವರ ಪತ್ನಿ ಬೇಬಿ ದೇವಿ ಜೆಎಂಎಂನ ಅಭ್ಯರ್ಥಿಯಾಗಿದ್ದು ಅವರ ಎದುರು ಜೈರಾಮ್ ಮಹ್ತೋ ಸ್ಪರ್ಧಿಸುತ್ತಿದ್ದಾರೆ. ಡುಮ್ರಿಯು ಗಿರಿದೀಹ್ ಲೋಕಸಭಾ ಕ್ಷೇತ್ರದಲ್ಲಿರುವ ನಗರವಾಗಿದೆ. ಲೋಕಸಭಾ ಚುನಾವಣೆಯಲ್ಲಿ ಜೈರಾಮ್ ಡುಮ್ರಿಯಲ್ಲಿ 97,000 ಮತಗಳನ್ನು ಪಡೆದಿದ್ದರು.
ಆದರೆ ಬಿಜೆಪಿ ಮತ್ತು ಜೆಎಂಎಂ ಇಂದಿಗೂ ಕೂಡಾ ಜೈರಾಮ್ ಮಹ್ತೋ ಪ್ರಭಾವವನ್ನು ಕಡೆಗಣಿಸುತ್ತಿದೆ. ಬಿಜೆಪಿ ವಕ್ತಾರ ಅಜಯ್ ಶಾ, ಜೈರಾಮ್ ಯುವ ಮತ್ತು ಭವಿಷ್ಯದ ನಾಯಕ ಎಂದು ಒಪ್ಪಿಕೊಂಡಿದ್ದಾರೆ. “ಆದರೆ ಜೈರಾಮ್ ಪ್ರಬಲ ನಾಯಕನಾಗಿ ಬೆಳೆಯಲು ಇನ್ನೂ ಕೂಡಾ ಸಮಯ ಬೇಕಾಗುತ್ತದೆ. ಆತನ ಪಕ್ಷದ ಪದಾಧಿಕಾರಿಗಳು ರಾಜೀನಾಮೆ ನೀಡುತ್ತಿದ್ದಾರೆ. ಅಷ್ಟಕ್ಕೂ ಜೈರಾಮ್ ಜೆಎಂಎಂಗೆ ಲಭಿಸುವ ಮತಗಳ ಮೇಲೆ ಪ್ರಭಾವ ಬೀರಬಹುದು. ಆತನಿಂದ ಬಿಜೆಪಿಗೆ ಏನೂ ಸಮಸ್ಯೆ ಆಗಲ್ಲ” ಎಂದು ಹೇಳುತ್ತಾರೆ. ಇತ್ತ ಜೆಎಂಎಂ ನಾಯಕರು “ಜೈರಾಮ್ ಸ್ಪರ್ಧೆ ಬಿಜೆಪಿ ಜೊತೆಗೆ, ನಮ್ಮ ಮತಕ್ಕೆ ಅವರ ಪಕ್ಷದಿಂದ ಯಾವುದೇ ಸಮಸ್ಯೆಯಾಗದು” ಎನ್ನುತ್ತಾರೆ.
ಟೈಗರ್ ಜೈರಾಮ್ ಮಹ್ತೋ ರಾಜಕೀಯ ಜೀವನ
ಆಂಗ್ಲ (ಇಂಗ್ಲೀಷ್) ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಜೈರಾಮ್ ಮಹ್ತೋ ಸದ್ಯ ‘ಲೇಖಕ ಮುಲ್ಕ್ರಾಜ್ ಆನಂದ್ ಮತ್ತು ಕೀನ್ಯಾದ ಲೇಖಕ ಗೂಗಿ ವಾ ಥಿಯೊಂಗ್’ಒ ಅವರ ತುಲನಾತ್ಮಕ ಸಾಹಿತ್ಯದಲ್ಲಿ ಶೋಷಣೆ (exploitation)’ ವಿಷಯದಲ್ಲಿ ಸಂಶೋಧನೆ ನಡೆಸುತ್ತಿರುವ ಸಂಶೋಧನಾ ವಿದ್ಯಾರ್ಥಿ.
ಇದನ್ನು ಓದಿದ್ದೀರಾ? ಜಾರ್ಖಂಡ್ ಜನತೆಗೆ 25 ಗ್ಯಾರಂಟಿಗಳನ್ನು ಘೋಷಿಸಿದ ಬಿಜೆಪಿ: ಇಲ್ಲಿ ಟೀಕೆ, ಅಲ್ಲಿ ಓಲೈಕೆ!
ಈ ‘ಶೋಷಣೆ’ ಎಂಬುದು ಜೈರಾಮ್ ಅವರ ರಾಜಕೀಯ ಸಂದೇಶದಲ್ಲಿಯೂ ಒಳಗೊಂಡಿದೆ. ಜೈರಾಮ್ ತಮ್ಮ ಭಾಷಣಗಳಲ್ಲಿ ಹೆಚ್ಚಾಗಿ ಹಕ್ಕು ಮತ್ತು ಜಾರ್ಖಂಡ್ ಜನರು ಯಾವುದರಿಂದ ವಂಚಿತರಾಗಿದ್ದಾರೆ, ಯಾರಿಂದ ಶೋಷಣೆಗೆ ಒಳಗಾಗಿದ್ದಾರೆ ಎಂಬುದನ್ನು ವಿವರಿಸುತ್ತಾರೆ. ವಿಶೇಷವಾಗಿ ಕುದ್ಮಿ ಜನಾಂಗದ ಜನರ ಭೂಮಿಯನ್ನು ಗಣಿಗಾರಿಕೆ ದುರ್ಬಳಕೆ ಮಾಡುತ್ತಿರುವ ಬಗ್ಗೆಯೂ ಭಾಷಣ ಮಾಡುತ್ತಾರೆ.
ರಾಜ್ಯದಲ್ಲಿ ಜಿಲ್ಲಾ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭೋಜ್‌ಪುರಿ, ಅಂಗಿಕಾ ಮತ್ತು ಮಾಘಿ ಭಾಷೆಗಳನ್ನು ಸೇರಿಸುವುದನ್ನು ವಿರೋಧಿಸಿ ಚಳವಳಿಯನ್ನು ಆರಂಭಿಸಿದಾಗ ಜೈರಾಮ್ ಮೊದಲ ಬಾರಿಗೆ ಜನಮನ್ನಣೆಯನ್ನು ಪಡೆದರು. ಆ ಭಾಷೆಗಳನ್ನು ಮಾತನಾಡುವ ಜನಸಂಖ್ಯೆಯು ಚಿಕ್ಕದಾಗಿದೆ, ಆದ್ದರಿಂದ ಅದರ ಸೇರ್ಪಡೆ ಸಮರ್ಥನೀಯವಲ್ಲ. ಸಾಮಾನ್ಯವಾಗಿ ಈ ಭಾಷೆಯನ್ನು ಮಾತನಾಡದ ಕಾರಣ ಈ ಪ್ರಸ್ತಾವನೆಯು ಬುಡಕಟ್ಟು ಜನರನ್ನು ಆಡಳಿತಾತ್ಮಕ ಹುದ್ದೆಗಳಿಂದ ಹೊರಗಿಡುತ್ತದೆ ಎಂಬುದು ಜೈರಾಮ್ ವಾದ.
ಅದಾದ ಬಳಿಕ ಜಾರ್ಖಂಡಿಗರು ಮತ್ತು ಹೊರಗಿನವರು ಎಂಬ ವಿಚಾರವನ್ನು ಎತ್ತಿಕೊಂಡು ಜೈರಾಮ್ ಕ್ರಮೇಣ ‘ಟೈಗರ್’ ಎನಿಸಿಕೊಂಡರು. 2000ರಲ್ಲಿ ಜಾರ್ಖಂಡ್ ರಚನೆಯಾದಾಗಿನಿಂದ ನಿಜವಾದ ಜಾರ್ಖಂಡಿಗರು ಯಾರು ಎಂಬ ವಿಚಾರವು ವಿವಾದಾಸ್ಪದವಾಗಿಯೇ ಉಳಿದಿದೆ. 1932ರ ಹೊತ್ತಿಗೆ ರಾಜ್ಯದಲ್ಲಿ ನೆಲೆಸಿದವರು ಮಾತ್ರ ಜಾರ್ಖಂಡಿಗರು ಎಂಬ ವಾದಗಳಿವೆ. ಆದರೆ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ 1975ರಲ್ಲಿ ಬಿಹಾರದಲ್ಲಿ ಜನಿಸಿದವರು. ಅಲ್ಲಿಯೇ ಪ್ರಾಥಮಿಕ ಶಿಕ್ಷಣ ಪಡೆದವರು.
ಇನ್ನು ಭಾಷೆಯ ವಿಚಾರದಲ್ಲಿ ಜನರಲ್ಲಿ ಇರುವ ಭಾವನೆಯನ್ನೇ ಬಂಡವಾಳವಾಗಿಟ್ಟುಕೊಂಡು ಜೈರಾಮ್ ಮಹ್ತೋ ಜಾರ್ಖಂಡಿ ಭಾಷಾ ಖತಿಯಾನ್ ಸಂಘರ್ಷ ಸಮಿತಿಯನ್ನು (ಜೆಬಿಕೆಎಸ್‌ಎಸ್) ರಚಿಸಿದರು. ಅದಾದ ಬಳಿಕ ತಮ್ಮ ಸಂಘಟನೆಯನ್ನು ವಿಸ್ತರಿಸುತ್ತಾ ಸಮುದಾಯದೊಂದಿಗೆ ಸಕ್ರಿಯವಾಗಿ ತೊಡಗಿಕೊಂಡರು. ಸಮಾಜದ ಎಲ್ಲಾ ವರ್ಗಗಳ ಯುವಕರನ್ನು ಒಳಗೊಂಡಿರುವ ಜೆಬಿಕೆಎಸ್‌ಎಸ್ 2023ರ ಜೂನ್ ತಿಂಗಳಲ್ಲಿ ರಾಜಕೀಯ ವೇದಿಕೆಗೆ ಕಾಲಿಟ್ಟಿತು. ಈ ಸಂಘಟನೆಯು ಜಾರ್ಖಂಡಿಗರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಮನೆ-ಮನೆಗೆ ಭೇಟಿ ನೀಡಿ ಸಮೀಕ್ಷೆಗಳನ್ನು ನಡೆಸಿತು. ಅದಕ್ಕೆ ಅನುಗುಣವಾಗಿ ತಮ್ಮ ಕಾರ್ಯವೈಖರಿಯನ್ನು ಕೂಡಾ ವಿಸ್ತರಿಸಿತು.
ಇದನ್ನು ಓದಿದ್ದೀರಾ? ಜಾರ್ಖಂಡ್ ಚುನಾವಣೆ | ಕಾಂಗ್ರೆಸ್ ಮಾಜಿ ಕಾರ್ಯಾಧ್ಯಕ್ಷ ಮಾನಸ್ ಸಿನ್ಹಾ ಬಿಜೆಪಿ ಸೇರ್ಪಡೆ
ಇದರೊಂದಿಗೆ ಜಾರ್ಖಂಡ್‌ನಲ್ಲಿ ಸ್ಥಳೀಯರಿಗೆ ಉದ್ಯೋಗವಕಾಶ ಸಿಗದಿರುವ ಬಗ್ಗೆಯೂ ಜೈರಾಮ್ ಮಹ್ತೋ ಧ್ವನಿ ಎತ್ತಿದ್ದಾರೆ. ಕರ್ನಾಟಕದ ದಕ್ಷಿಣ ಕನ್ನಡ ಸೇರಿದಂತೆ ವಿವಿಧ ಜಿಲ್ಲೆಗಳ ಬ್ಯಾಂಕು, ಐಟಿ ಸಂಸ್ಥೆ ಮೊದಲಾದವುಗಳಲ್ಲಿ ಸ್ಥಳೀಯರಿಗೆ ಉದ್ಯೋಗ ಲಭ್ಯವಾಗದಿರುವ ಬಗ್ಗೆ ಜನರು, ಸಂಘಟನೆಗಳು ಹೇಗೆ ಧನಿ ಎತ್ತಿದೆಯೋ ಹಾಗೆಯೇ ಜಾರ್ಖಂಡ್‌ನ ಜನರಿಗೆ ಜಾರ್ಖಂಡ್‌ನಲ್ಲಿ ಉದ್ಯೋಗ ಎಂಬ ಘೋಷಣೆಯನ್ನು ಮೊಳಗಿಸಿದರು. ಗಣಿಗಾರಿಕೆಯ ವಾಯುಮಾಲಿನ್ಯದಿಂದ ಮಹಿಳೆಯರಿಗೆ ಕಾಡುವ ಬಂಜೆತನದ ಬಗ್ಗೆಯೂ ಮಾತನಾಡಿದರು. ಆ ಮೂಲಕ ಯುವಕರನ್ನು ತನ್ನತ್ತ ಸೆಳೆದಿದ್ದಾರೆ. ಹೀಗೆ ಹಲವು ಸ್ಥಳೀಯ ವಿಚಾರಗಳನ್ನು ಎತ್ತಿದವರು, ಬಿಜೆಪಿಯ ಕೋಮುವಾದವನ್ನು, ಜೆಎಂಎಂನ ರಾಜಕೀಯವನ್ನು ಒಟ್ಟಾಗಿ ವಿರೋಧಿಸುತ್ತಾ ಬಂದವರು ಜೈರಾಮ್ ಮಹ್ತೋ.
ಮಹ್ತೋ ಭಾಷಣಗಳನ್ನು ಕೇಳಲು ಕೆಲವೊಮ್ಮೆ ಸಾವಿರಾರು ಜನರು ಸೇರಿದರೆ ಒಂದೆರಡು ಬಾರಿ ಲಕ್ಷಾಂತರ ಜನರು ಸೇರಿರುವುದೂ ಇದೆ. ರಾಜ್ಯದ ಜನಸಂಖ್ಯೆಯ ಶೇಕಡ 10-12ರಷ್ಟಿರುವ ಕುದ್ಮಿ (ಮಹ್ತೋ) ಮತಗಳತ್ತ ಸದ್ಯ ಜೈರಾಮ್ ಕಣ್ಣಿದೆ. ಸೊರೇನ್ ಸರ್ಕಾರವು ಜೈರಾಮ್ ಮಹ್ತೋ ಬೇಡಿಕೆಗೆ ಮಣಿದು 1932ರ ಭೂ ದಾಖಲೆಗಳು ಮತ್ತು ನಿವಾಸದ ಆಧಾರದ ಮೇಲೆ ನೇಮಕಾತಿ ನೀತಿಯನ್ನು ರೂಪಿಸುವ ಮಸೂದೆಯನ್ನು ಅಂಗೀಕರಿಸಿದ್ದೆ ಜಾರ್ಖಂಡ್‌ನಲ್ಲಿ ಮಹ್ತೋ ಹೊಂದಿರುವ ಪ್ರಭಾವಕ್ಕೆ ಸಾಕ್ಷಿ. ಜಾರ್ಖಂಡ್ ಹೈಕೋರ್ಟ್ ಈ ಮಸೂದೆಯನ್ನು ಅಸಂವಿಧಾನಿಕ ಎಂದು ಪರಿಗಣಿಸಿದೆ. ಅದು ಬೇರೆ ವಿಚಾರ. ಆದರೆ ಬೆಳೆಯುತ್ತಿರುವ ಮಹ್ತೋ ಜನಪ್ರಿಯತೆಯನ್ನು ಎನ್‌ಡಿಎಯಾಗಲಿ, ಇಂಡಿಯಾ ಒಕ್ಕೂಟವಾಗಲಿ ಕಡೆಗಣಿಸುವಂತಿಲ್ಲ.

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.