ನಿಮ್ಮಲ್ಲಿರುವ ಲೋಪಗಳನ್ನು ಬಳಸಿಕೊಂಡು ಭಯವನ್ನು ಸೃಷ್ಟಿಸುತ್ತಾರೆ. ಬೆದರಿಕೆಯ ಭಾಷೆಯನ್ನು ಬಳಸುತ್ತಾರೆ. ಬಂಧನ ಮತ್ತು ಕಾನೂನು ಕ್ರಮದ ಬೆದರಿಕೆಯೊಡ್ಡಿ ಮಾನಸಿಕ ಒತ್ತಡಕ್ಕೆ ಸಿಲುಕಿಸುತ್ತಾರೆ. ಇ.ಡಿ, ಐಪಿಎಸ್, ಸಿಬಿಐ ಅಧಿಕಾರಿಗಳಂತೆ ನಟಿಸುವ ವಂಚಕರು ಹಣ ನೀಡಿದರೆ ಕಾನೂನು ಬಿಕ್ಕಟ್ಟಿನಿಂದ ಪಾರಾಗಲು ಸಹಾಯ ಮಾಡುವುದಾಗಿ ಭರವಸೆ ನೀಡುತ್ತಾರೆ. ಈ ತಂತ್ರಗಳಿಂದ ಭಯಭೀತರಾಗುವ ಸಂತ್ರಸ್ತರು ವಂಚಕರ ಮೋಸದ ಜಾಲಕ್ಕೆ ಸಿಲುಕುತ್ತಾರೆ. ಇವೆಲ್ಲವೂ ಕಂಪ್ಯೂಟರ್ ಹಾಗೂ ಮೊಬೈಲ್ ಪರದೆಯ ಮೂಲಕವೇ ನಡೆಯುತ್ತದೆ.
ಡಿಜಿಟಲ್ ತಂತ್ರಜ್ಞಾನ ಮುಂದುವರೆದಂತೆ ವಂಚನೆಯ ಬಗೆಗಳು ಹೆಚ್ಚಾಗುತ್ತವೆ. ಅಂತರ್ಜಾಲ ಜಾಗತಿಕ ವ್ಯಾಪ್ತಿಯಾಗಿದ್ದು, ಇದರೊಂದಿಗೆ ನಾವು ಉಪಯೋಗಿಸುತ್ತಿರುವ ಮಾಹಿತಿ ಮತ್ತು ತಂತ್ರಜ್ಞಾನ ಕೂಡ ನಮ್ಮ ಜೀವನದ ಬಹುಮುಖ್ಯ ಭಾಗವಾಗಿದೆ. ನಮ್ಮ ನಿತ್ಯ ಬದುಕಿನಲ್ಲಿ ಮಾಹಿತಿ ತಂತ್ರಜ್ಞಾನವನ್ನು ಎಷ್ಟು ಅವಲಂಬಿಸಿದ್ದೇವೆಯೋ ಅದಕ್ಕಿಂತ ಹೆಚ್ಚಾಗಿ ಅನಾನುಕೂಲಗಳು ನಮ್ಮ ಮುಂದಿವೆ. ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಜನರನ್ನು ವಂಚಿಸುತ್ತಿರುವ ಡಿಜಿಟಲ್ ಅರೆಸ್ಟ್ ಸರ್ಕಾರಗಳಿಗೆ ಸವಾಲಾಗಿ ಪರಿಣಮಿಸಿದೆ. ಮಾಹಿತಿ ತಂತ್ರಜ್ಞಾನದ ಬಗ್ಗೆ ಅರಿವಿಲ್ಲದವರು ಮಾತ್ರವಲ್ಲದೆ ತಂತ್ರಜ್ಞಾನದ ಬಗ್ಗೆ ಚೆನ್ನಾಗಿ ತಿಳಿದುಕೊಂಡವರು ಕೂಡ ಈ ಮೋಸದ ಜಾಲಕ್ಕೆ ಒಳಗಾಗುತ್ತಿದ್ದಾರೆ.
ಕಳೆದ ಒಂದು ದಶಕದಿಂದ ಸೈಬರ್ ಅಪರಾಧವು ಹೆಚ್ಚು ಸಂಘಟಿತ, ಯಾವುದೇ ಶ್ರಮವಿಲ್ಲದೆ ಆದಾಯ ತರುವ ಉದ್ಯಮವಾಗಿ ಬೆಳವಣಿಗೆಗೊಂಡು ಹೊಸ ಸವಾಲುಗಳನ್ನು ಒಡ್ಡಿದೆ. ಸೈಬರ್ ಅಪರಾಧಿಗಳು ಅತ್ಯಾಧುನಿಕತೆಯನ್ನು ಬಳಸಿಕೊಳ್ಳುವುದರ ಜೊತೆ ತಮ್ಮ ವರ್ಚುವಲ್ ಮಾರುಕಟ್ಟೆಯನ್ನು ವಿಸ್ತರಿಸಿಕೊಂಡಿದ್ದಾರೆ. ಆರಂಭದಲ್ಲಿ ವಂಚಕರು, ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಮಾಹಿತಿ, ಆನ್‌ಲೈನ್ ಬ್ಯಾಂಕಿಂಗ್ ಮಾಹಿತಿ ಸೇರಿದಂತೆ ಮುಂತಾದ ಸೈಬರ್ ಅಪರಾಧ ಮಾಡುತ್ತಿದ್ದರು. ಈಗ ಡಿಜಿಟಲ್ ಅರೆಸ್ಟ್ ಎಂಬ ಅಪರಾಧಕ್ಕೆ ಪ್ರವೇಶಿಸಿದ್ದಾರೆ.
ಏನಿದು ಡಿಜಿಟಲ್ ಅರೆಸ್ಟ್?
ಸಾಮಾನ್ಯ ಅರ್ಥದಲ್ಲಿ ‘ಡಿಜಿಟಲ್ ಅರೆಸ್ಟ್’ ಎಂದರೆ ವಂಚಕರು ಅಮಾಯಕರನ್ನು ತಮ್ಮ ಬಲೆಗೆ ಕೆಡವಲು ಪೊಲೀಸ್, ಜಾರಿ ನಿರ್ದೇಶನಾಲಯ (ಇ.ಡಿ), ಸಿಬಿಐ, ಆರ್‌ಬಿಐ, ತೆರಿಗೆ, ನಾರ್ಕೋಟಿಕ್ಸ್ ಅಥವಾ ಕಸ್ಟಮ್ಸ್ ಅಧಿಕಾರಿಗಳಂಥ ಕಾನೂನು ಜಾರಿ ಅಧಿಕಾರಿಗಳ ರೀತಿ ಕರೆ ಮಾಡುತ್ತಾರೆ. ಅಧಿಕಾರಿಗಳು ಎನ್ನುವುದನ್ನು ಸಾಬೀತುಪಡಿಸುವ ಸಲುವಾಗಿ ನಕಲಿ ಗುರುತಿನ ಚೀಟಿಗಳನ್ನು ಕೂಡ ತೋರಿಸುತ್ತಾರೆ. ಕೆಲವೊಮ್ಮೆ ನಕಲಿ ಅರೆಸ್ಟ್ ವಾರಂಟ್‌ಗಳನ್ನೂ ಪ್ರದರ್ಶಿಸುತ್ತಾರೆ. ಇವೆಲ್ಲವನ್ನು ಕುಳಿತಲ್ಲಿಂದಲೇ ವಿಡಿಯೊ ಮೂಲಕ ನೋಡುವ ಸಂತ್ರಸ್ತರು ವಂಚಕರನ್ನು ಸುಲಭದಲ್ಲಿ ನಂಬುತ್ತಾರೆ.
‘ನೀವು ಗಂಭೀರವಾದ ಅಪರಾಧ ಮಾಡಿದ್ದೀರಿ, ಹಲವಾರು ವರ್ಷ ಜೈಲು ಶಿಕ್ಷೆ ಮತ್ತು ಕಾನೂನು ಕ್ರಮ ಎದುರಿಸಬೇಕಾಗುತ್ತದೆ’ ಎಂದು ಬೆದರಿಸಿ ನಂತರ ಹಣಕ್ಕೆ ಬೇಡಿಕೆಯಿಡುತ್ತಾರೆ. ಆನ್‌ಲೈನ್ ಬ್ಯಾಂಕಿಂಗ್ ಸೇರಿದಂತೆ ಹಲವು ಮಾರ್ಗಗಳ ಮುಖಾಂತರ ಸಾಮಾನ್ಯರನ್ನು ಡಿಜಿಟಲ್ ಮೂಲಕವೇ ಬಂಧಿಸಿ, ಬಿಡುಗಡೆಗಾಗಿ ಕಾನೂನು ಜಾರಿ ಅಧಿಕಾರಿಗಳಿಗೆ ದೊಡ್ಡ ಮೊತ್ತ ಪಾವತಿಸಬೇಕು ಎಂದು ನಂಬಿಸುತ್ತಾರೆ. ಈ ಸಮಯದಲ್ಲಿ ಬೇರೆ ಯಾರನ್ನೂ ಸಂಪರ್ಕಿಸದಂತೆ ನಿಮ್ಮನ್ನು ಸಿಲುಕಿಸುತ್ತಾರೆ. ಆನ್‌ಲೈನ್ ಬ್ಯಾಂಕಿಂಗ್ ಮತ್ತಿತರ ಮಾರ್ಗಗಳ ಮೂಲಕ ಹಣವನ್ನು ಮೂರನೇ ವ್ಯಕ್ತಿಯ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಿಸಿಕೊಳ್ಳುತ್ತಾರೆ. ವಂಚಕರು ಅಮಾಯಕರಿಂದ ಲಕ್ಷ, ಕೋಟಿಗಳ ಲೆಕ್ಕದಲ್ಲಿ ಹಣ ದೋಚುತ್ತಾರೆ.
ಈ ಸುದ್ದಿ ಓದಿದ್ದೀರಾ? ಬಾಹ್ಯಾಕಾಶದಲ್ಲಿ ಸಿಲುಕಿರುವ ದಿಟ್ಟ ಸುನಿತಾ ವಿಲಿಯಮ್ಸ್ ಭೂಮಿಗೆ ಬರುವುದು ಯಾವಾಗ?
ಸಾರ್ವಜನಿಕರನ್ನು ಸಂಪರ್ಕಿಸಲು ಯಾವುದೇ ಡಿಜಿಟಿಲ್ ಚಾನಲ್ ಅನ್ನು(ವಾಟ್ಸಾಪ್, ಫೇಸ್‌ಬುಕ್, ಸ್ಕೈಪ್, ಝೂಮ್ ಆನ್‌ಲೈನ್ ಕರೆ ಇತ್ಯಾದಿ) ಸೈಬರ್ ವಂಚಕರು ಬಳಸುತ್ತಾರೆ. ನಿಮ್ಮಲ್ಲಿರುವ ಲೋಪಗಳನ್ನು ಬಳಸಿಕೊಂಡು ಭಯವನ್ನು ಸೃಷ್ಟಿಸುತ್ತಾರೆ. ಬೆದರಿಕೆಯ ಭಾಷೆಯನ್ನು ಬಳಸುತ್ತಾರೆ. ಬಂಧನ ಮತ್ತು ಕಾನೂನು ಕ್ರಮದ ಬೆದರಿಕೆಯೊಡ್ಡಿ ಮಾನಸಿಕ ಒತ್ತಡಕ್ಕೆ ಸಿಲುಕಿಸುತ್ತಾರೆ. ಕರೆಗಳ ಸಂದರ್ಭಗಳಲ್ಲಿ ನಕಲಿ ಕಾನ್ಫರೆನ್ಸ್ ಕರೆಗಳನ್ನು ಸಂಪರ್ಕ ಕಲ್ಪಿಸುತ್ತಾರೆ. ಆ ಕರೆಗಳಲ್ಲಿ ಕಾನೂನು ಜಾರಿ, ಐಪಿಎಸ್, ಸಿಬಿಐ ಮುಂತಾದ ಸಂಸ್ಥೆಗಳ ಅಧಿಕಾರಿಗಳಂತೆ ನಟಿಸುವ ವಂಚಕರು ಹಣ ನೀಡಿದರೆ ಕಾನೂನು ಬಿಕ್ಕಟ್ಟಿನಿಂದ ಪಾರಾಗಲು ಸಹಾಯ ಮಾಡುವುದಾಗಿ ಭರವಸೆ ನೀಡುತ್ತಾರೆ. ಈ ತಂತ್ರಗಳಿಂದ ಭಯಭೀತರಾಗುವ ಸಂತ್ರಸ್ತರು ವಂಚಕರ ಮೋಸದ ಜಾಲಕ್ಕೆ ಸಿಲುಕುತ್ತಾರೆ. ಇವೆಲ್ಲವೂ ಕಂಪ್ಯೂಟರ್ ಹಾಗೂ ಮೊಬೈಲ್ ಪರದೆಯ ಮೂಲಕವೇ ನಡೆಯುತ್ತದೆ.
ಸಂತ್ರಸ್ತರಿಗೆ ಮನೆಗಳಲ್ಲೇ ದಿಗ್ಬಂಧನ ವಿಧಿಸಲಾಗುತ್ತದೆ. ಕೆಲವೊಮ್ಮೆ ಹೊರಗೆ ಬರುವಂತೆ ಮಾಡಿ, ಬೇರೊಂದು ಸ್ಥಳದಲ್ಲಿ ಕೂಡಿಹಾಕಲಾಗುತ್ತದೆ. ಇವೆಲ್ಲವೂ ಫೋನ್ ಮೂಲಕವೇ ನಡೆಯುತ್ತದೆ. ದೇಶದ ವಿವಿಧ ಭಾಗಗಳಲ್ಲಿ ಇತ್ತೀಚಿಗೆ ಕೆಲವು ತಿಂಗಳಿಂದ ದಾಖಲಾದ ಪ್ರಕರಣಗಳಲ್ಲಿ ಟೆಕ್ಕಿ, ದೊಡ್ಡ ದೊಡ್ಡ ಸರ್ಕಾರಿ ಉದ್ಯೋಗಿಗಳನ್ನು(ನಿವೃತ್ತರು ಹೆಚ್ಚಾಗಿ ಸಿಲುಕುತ್ತಾರೆ) ಗುರಿಯಾಗಿಸಿ ಕೋಟಿ, ಲಕ್ಷ ಲಕ್ಷ ರೂ. ಗಳಲ್ಲಿ ವಂಚಿಸಲಾಗಿದೆ. ಬಹುತೇಕ ಡಿಜಿಟಲ್ ಅರೆಸ್ಟ್ ಪ್ರಕರಣಗಳಲ್ಲಿ ವಂಚಕರು ವಿದೇಶದಿಂದ ಕಾರ್ಯಾಚರಿಸುತ್ತಾರೆ. ಆಫ್ರಿಕಾ, ಮಧ್ಯ, ದಕ್ಷಿಣ ಏಷ್ಯಾ ಖಂಡದ ದೇಶಗಳಲ್ಲಿ ಕುಳಿತು ಕರೆ ಮಾಡಿ ಮೋಸ ಮಾಡುತ್ತಾರೆ. ಕೆಲವೊಂದು ಪ್ರಕರಣಗಳಲ್ಲಿ ಸ್ಥಳೀಯ ಪ್ರದೇಶದಿಂದ ವಂಚಕರು ಕರೆ ಮಾಡಿರುವ ಪ್ರಕರಣಗಳು ಉಂಟು.
ಸಿಬಿಐ, ಇ.ಡಿ ಆನ್‌ಲೈನ್ ಕರೆ ಮಾಡುವುದಿಲ್ಲ
ಒಂದು ವೇಳೆ ಅಪರಿಚಿತ ಅಂತಾರಾಷ್ಟ್ರೀಯ ಫೋನ್ ಕರೆಗಳು ಬಂದರೆ ಎಚ್ಚರ ವಹಿಸಬೇಕು. ಭಯಗೊಳ್ಳದೆ ಧೈರ್ಯದಿಂದ ಮಾತಾಡಬೇಕು. ಇ.ಡಿ, ಸಿಬಿಐ, ಕಸ್ಟಮ್ಸ್ ಮುಂತಾದ ಅಧಿಕಾರಗಳ್ಯಾರು ಫೋನ್ ಕರೆ ಮಾಡಿ ಹಣಕ್ಕೆ ಬೇಡಿಕೆ ಇಡುವುದಿಲ್ಲ. ಸರ್ಕಾರಿ ಸಂಸ್ಥೆಗಳು ತಮ್ಮ ಅಧಿಕೃತ ಸಂವಹನಕ್ಕೆ ಸ್ಕೈಪ್, ಝೂಮ್ ಅಥವಾ ವಾಟ್ಸಾಪ್ ವಿಡಿಯೊ ತಂತ್ರಾಂಶಗಳನ್ನು ಬಳಸುವುದಿಲ್ಲ. ಕಾನೂನು ಜಾರಿ ಸಂಸ್ಥೆಗಳು ಅಧಿಕೃತ ಚಾನೆಲ್‌ಗಳ ಮೂಲಕ ಮಾತ್ರ ಸಂವಹನ ನಡೆಸುತ್ತವೆ. ಪೊಲೀಸರು ಪ್ರಕರಣದ ವಿಚಾರಣೆಯಿದ್ದರೆ ದೂರವಾಣಿ ಮೂಲಕ ಕರೆ ಮಾಡುತ್ತಾರೆ ವಿನಾ ಆನ್‌ಲೈನ್ ಕರೆ ಮಾಡುವುದಿಲ್ಲ. ಖುದ್ದಾಗಿ ಸಿಗದಿದ್ದರೆ ನೋಟಿಸ್ ಮಾತ್ರ ವಾಟ್ಸಾಪ್ ಮೂಲಕ ನೀಡಲಾಗುತ್ತದೆ.
ಎಲ್ಲಕ್ಕಿಂತ ಮೊದಲು ಡಿಜಿಟಲ್ ಅರೆಸ್ಟ್ ಎಂಬ ಕಾನೂನು ಭಾರತ ದೇಶದಲ್ಲಿ ಚಾಲ್ತಿಯಲ್ಲೇ ಇಲ್ಲ. ಅಪರಿಚಿತರೊಂದಿಗೆ ಖಾಸಗಿ ವಿಷಯಗಳನ್ನು ಹಂಚಿಕೊಳ್ಳಬಾರದು. ವಂಚನೆಯ ಬಗ್ಗೆ ಅನುಮಾನ ಬಂದರೆ, ತಕ್ಷಣ ಸೈಬರ್ ಸಹಾಯವಾಣಿ(1930)/ ಪೊಲೀಸರನ್ನು ಸಂಪರ್ಕಿಸಬೇಕು. ವಂಚಕರು ಹೇಗೆ ಸೈಬರ್ ಅಪರಾಧಗಳನ್ನು ಎಸಗುತ್ತಾರೆ ಎಂಬ ಬಗ್ಗೆ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ (ಸಿಆರ್‌ಇಟಿ–ಐಎನ್) ಮಾಹಿತಿ ಪ್ರಕಟಿಸಿದ್ದು, ಅದರಲ್ಲಿ ಡಿಜಿಟಲ್ ಅರೆಸ್ಟ್ ಬಗ್ಗೆಯೂ ವಿವರಗಳನ್ನು ನೀಡಲಾಗಿದೆ. ಸೈಬರ್ ವಂಚನೆ ಯತ್ನ ಮತ್ತು ವಂಚನೆಗೆ ಒಳಗಾದ ಸಂದರ್ಭದಲ್ಲಿ ಅದರ ಬಗ್ಗೆ ದೂರು ನೀಡಲು ರಾಷ್ಟ್ರೀಯ ಮಟ್ಟದಲ್ಲಿ ‘ಸಿಟಿಜನ್ ಫೈನಾನ್ಶಿಯಲ್ ಸೈಬರ್ ಫ್ರಾಡ್ ರಿಪೋರ್ಟಿಂಗ್ ಆ್ಯಂಡ್ ಮ್ಯಾನೇಜ್‌ಮೆಂಟ್ ಸಿಸ್ಟಮ್’ ಸಂಸ್ಥೆಯನ್ನು ರೂಪಿಸಲಾಗಿದೆ. 2021ರಿಂದ ಅಸ್ತಿತ್ವಕ್ಕೆ ಬಂದಿದ್ದು, ಇದರ ಅಡಿಯಲ್ಲಿ ರಾಷ್ಟ್ರೀಯ ಸೈಬರ್ ಅಪರಾಧ ದೂರು ನೀಡುವ ಪೋರ್ಟಲ್ www.cybercrime.gov.in ಕಾರ್ಯನಿರ್ವಹಿಸುತ್ತದೆ. ಈ ವ್ಯವಸ್ಥೆ ಜಾರಿಗೆ ಬಂದ ನಂತರ 7.6 ಲಕ್ಷಕ್ಕೂ ಹೆಚ್ಚು ಸೈಬರ್ ವಂಚನೆ ದೂರು ದಾಖಲಾಗಿದ್ದು, 2,400 ಕೋಟಿ ರೂ.ಗೂ ಹೆಚ್ಚು ಹಣ ವಂಚಕರ ಪಾಲಾಗದಂತೆ ತಡೆಯಲಾಗಿದೆ.
ಸೈಬರ್ ವಂಚನೆಗೆ ‘ಎಐ ಎಪಿಕೆ’ ಬಳಕೆ
ಡಿಜಿಟಲ್ ಮೋಸಕ್ಕೆ ವಂಚಕರು ‘ಎಐ'(ಕೃತಕ ಬುದ್ಧಿಮತ್ತೆ) ಅನ್ನು ಬಳಸಿಕೊಳ್ಳುತ್ತಿದ್ದಾರೆ. ‘ಎಐ ಎಪಿಕೆ’ ಎನ್ನುವ ಸಾಫ್ಟ್‌ವೇರ್ ಮೂಲಕ ವಾಟ್ಸಾಪ್ ಗ್ರೂಪ್‌ಗಳಿಗೆ ಲಗ್ಗೆ ಇಟ್ಟು ಇಡೀ ಗ್ರೂಪ್‌ನ ಸದಸ್ಯರನ್ನು ವಂಚಿಸುತ್ತಿದ್ದಾರೆ.
ಎಐ ಎಪಿಕೆ ಸಾಫ್ಟವೇರ್ ರವಾನಿಸುವ ವಂಚಕರು, ಅದೊಂದು ಅಧಿಕೃತ ಸಾಫ್ಟ್‌ವೇರ್ ಎಂದು ನಂಬಿ ಬಳಕೆದಾರರು ಡೌನ್‌ಲೋಡ್ ಮಾಡಿದರೆ, ಮೊದಲಿಗೆ ಮೊಬೈಲ್ ಹ್ಯಾಕ್ ಆಗುತ್ತದೆ. ಅದರಲ್ಲಿರುವ ಸದಸ್ಯರ ಹಣಕಾಸು ವಹಿವಾಟು, ವೈಯಕ್ತಿಕ ಸೇರಿದಂತೆ ಎಲ್ಲ ಮಾಹಿತಿ ಪಡೆದು ವಂಚನೆ ಮಾಡುತ್ತಾರೆ. ಇತ್ತೀಚಿನ ದಿನಗಳಲ್ಲಿ ಇದೊಂದು ಹೊಸ ಪಿಡುಗಾಗಿ ಮಾರ್ಪಟ್ಟಿದೆ.
ಮೊಬೈಲ್‌ನಲ್ಲಿ ಎಐ ಎಪಿಕೆ ಸಾಫ್ಟ್‌ವೇರ್ ಡೌನ್ಲೋಡ್ ಆಗುತ್ತಿದ್ದಂತೆ ಮೊಬೈಲ್ ಹ್ಯಾಕ್ ಆಗುತ್ತದೆ. ಆಗ ವಂಚಕರು ಮೊಬೈಲ್‌ನ ಆಕ್ಸೆಸ್ ಪಡೆದುಕೊಂಡು ನಂತರ ಹ್ಯಾಕ್ ಆದ ಮೊಬೈಲ್‌ನಲ್ಲಿನ ವಾಟ್ಸಾಪ್ ಗ್ರೂಪ್ ಅಡ್ಮಿನ್ ಆದವರೇ ಹೆಸರು ಸೇರ್ಪಡೆ ಮಾಡಿದಂತೆ ವಂಚಕರು ತಮ್ಮ ನಂಬರ್ ಸೇರಿಸುತ್ತಾರೆ. ಅದಾದ ಮೇಲೆ ವಂಚಕರೇ ಅವರ ಮೊಬೈಲ್‌ನಿಂದ ಬ್ಯಾಂಕ್, ಗೇಮ್ಸ್ ಅಥವಾ ವಿವಿಧ ಬಗೆಯ ಆನ್‌ಲೈನ್ ಸಾಫ್ಟ್‌ವೇರ್‌ಗಳನ್ನು ಎಪಿಕೆ ಸಾಫ್ಟ್‌ವೇರ್ ಮೂಲಕ ಹರಿಬಿಟ್ಟು ಆ ಮೂಲಕ ಕೆವೈಸಿ ಅಪ್‌ಡೇಟ್, ಗೇಮ್ ಡೌನ್‌ಲೋಡ್ ಮಾಡಿಕೊಳ್ಳಲು ಇದನ್ನು ಕ್ಲಿಕ್ ಮಾಡುವಂತೆ ಸೂಚಿಸುತ್ತಾರೆ. ಅಲ್ಲದೇ, ಗ್ರೂಪ್‌ನ ಸದಸ್ಯರ ಡಿಜಿಟಲ್ ವಹಿವಾಟಿನ ಮಾಹಿತಿ ಸಂಗ್ರಹಿಸಿ ಹಣ ವರ್ಗಾವಣೆ ಮಾಡಿಕೊಂಡು ವಂಚಿಸುತ್ತಾರೆ.
ಈ ಹಿನ್ನೆಲೆಯಲ್ಲಿ ಮೆಸೇಜ್, ವಾಟ್ಸಾಪ್ ಸೇರಿ ಮೊಬೈಲ್‌ಗೆ ಬರುವ ಅನಗತ್ಯ ಆ್ಯಪ್, ಸಾಫ್ಟ್‌ವೇರ್ ಮೇಲೆ ಕ್ಲಿಕ್ ಮಾಡುವುದನ್ನು ನಿಲ್ಲಿಸಬೇಕು ಮತ್ತು ಅವುಗಳನ್ನು ನಿರ್ಲಕ್ಷಿಸಬೇಕು. ಇಂತಹ ಆ್ಯಪ್‌ಗಳ ಬಗ್ಗೆ ಜಾಗೃತರಾಗಿರುವುದೊಂದೇ ಪರಿಹಾರವಾಗಿದೆ. ಒಂದು ವೇಳೆ ಎಪಿಕೆ ಸಾಫ್ಟ್‌ವೇರ್ ಮೇಲೆ ಕ್ಲಿಕ್ ಮಾಡಿದ ತಕ್ಷಣ ಡೌನ್ಲೋಡ್ ಆದರೆ, ಆತಂಕಕ್ಕೆ ಒಳಗಾಗದೆ, ಎಪಿಕೆ ಸಾಫ್ಟ್‌ವೇರ್ ಡಿಲೀಟ್ ಮಾಡಿ, ಮೊಬೈಲ್ ಸ್ವಿಚ್ ಆಫ್ ಮಾಡಿ ಆನ್ ಮಾಡಬೇಕು. ನಂತರ ವಾಟ್ಸಾಪ್ ಗ್ರೂಪ್‌ನಲ್ಲಿ ಅನಗತ್ಯ ಆ್ಯಪ್, ಸಾಫ್ಟ್‌ವೇರ್ ಹರಿಬಿಡುತ್ತಿರುವ ಮೊಬೈಲ್ ಸಂಖ್ಯೆ ಮಾಹಿತಿಯನ್ನು ಸೈಬರ್ ಅಪರಾಧ ಠಾಣೆಗೆ ಮಾಹಿತಿ ನೀಡಬೇಕು.

ವಂಚನೆಯಿಂದ ಪಾರಾಗಲು ಒಂದಿಷ್ಟು ಮಾಹಿತಿ
- ಡಿಜಿಟಲ್ ವಂಚನೆಯಿಂದ ಪಾರಾಗಲು ಸಾರ್ವಜನಿಕರು ಕೆಲವೊಂದು ಮಾರ್ಗೋಪಾಯಗಳನ್ನು ಅನುಸರಿಸಬೇಕು. ಅಪರಿಚಿತ ಕರೆಗಳು ಮತ್ತು ಸಂದೇಶಗಳು ಬಂದರೆ ಪರಿಶೀಲಿಸಬೇಕು. ಒಂದು ವೇಳೆ ಕರೆ ಸ್ವೀಕರಿಸಿದ ಬೆದರಿಕೆಯ ಸಂಭಾಷಣೆಗಳು ಮುಂದುವರಿದರೆ ಕರೆಯನ್ನು ಸ್ಥಗಿತಗೊಳಿಸಿ ಪೊಲೀಸರಿಗೆ ಮಾಹಿತಿ ನೀಡಬೇಕು. ಅಂತಹ ಕರೆಗಳನ್ನು ಬ್ಲಾಕ್ ಮಾಡಬೇಕು. ಕೆಲವೊಂದು ಟೆಲಿಕಾಂ ಸಂಸ್ಥೆಗಳು ವಿದೇಶಿ ಕರೆಗಳನ್ನು ಸ್ವಯಂಚಾಲಿತವಾಗಿ ಸ್ಥಗಿತಗೊಳಿಸುತ್ತವೆ.
- ಯಾವುದೇ ಅಪರಿಚಿತ ವ್ಯಕ್ತಿಗಳೊಂದಿಗೆ ಅಥವಾ ಪರಿಶೀಲಿಸದ ಇಮೇಲ್‌ಗಳೊಂದಿಗೆ ನಿಮ್ಮ ವೈಯಕ್ತಿಕ ಮಾಹಿತಿಗಳನ್ನು ಹಂಚಿಕೊಳ್ಳಬೇಡಿ. ನಿಮ್ಮ ಆಧಾರ್ ಕಾರ್ಡ್‌ನಲ್ಲಿ ಬಯೋಮೆಟ್ರಿಕ್‌ಗಳನ್ನು ಲಾಕ್ ಮಾಡಿ ಮತ್ತು ಅಗತ್ಯವಿದ್ಯಾಗ ಮಾತ್ರ ಅದನ್ನು ಅನ್ ಲಾಕ್ ಮಾಡಿ.
- ವಾಟ್ಸಾಪ್ ಅಪರಿಚಿತ ಸಂಖ್ಯೆಗಳಿಂದ ವಿಡಿಯೋ ಕರೆಗಳಿಗೆ ಉತ್ತರಿಸುವಾಗ ಮುನ್ನೆಚ್ಚರಿಕೆ ತೆಗೆದುಕೊಳ್ಳಿ. ಹಣವನ್ನು ಸುಲಿಗೆ ಮಾಡಲು ವಂಚಕರು ನಿಮ್ಮ ವಿಡಿಯೋ ಕರೆಯ ಸ್ಟ್ರೀನ್‌ಶಾಟ್‌ಗಳನ್ನು ದುರುಪಯೋಗಪಡಿಸಿಕೊಳ್ಳಬಹುದು. ಈ ಹಿನ್ನಲೆಯಲ್ಲಿ ಅಪರಿಚಿತ ಸಂಖ್ಯೆಗಳಿಂದ ವಿಡಿಯೋ ಕರೆಗಳನ್ನು ತಪ್ಪಿಸಲು ಸೆಟ್ಟಿಂಗ್‌ನಲ್ಲಿ ಅಪರಿಚಿತ ಕರೆ ಬಾರದ ಸೆಟ್ಟಿಂಗ್‌ಅನ್ನು ಸಕ್ರಿಯಗೊಳಿಸಿ
- ನಿಮ್ಮ ವೈಯಕ್ತಿಕ ವಿವರಗಳು, ಫೋಟೋಗಳು ಮತ್ತು ವಿಡಿಯೋಗಳಿಗೆ ಸಾರ್ವಜನಿಕ ಪ್ರವೇಶವನ್ನು ತಡೆಯಲು ನಿಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಪ್ರೈವೇಟ್ ಮೋಡ್ ಸೆಟ್ಟಿಂಗ್ ಸಕ್ರಿಯಗೊಳಿಸಿ.