ವಿದಾಯ | ರಾಫಾ… ರಾಫಾ… ರಾಫಾ… ಅಭಿಮಾನಿಗಳ ಕೂಗಿಗೆ ಕಣ್ಣೀರಾದ ನಡಾಲ್

Date:

Advertisements
ಒಬ್ಬ ಆಟಗಾರನ ಬದುಕಿನಲ್ಲಿ ಎಷ್ಟೆಲ್ಲ ಸೋಲು-ಗೆಲುವುಗಳು, ಏರಿಳಿತಗಳು. ಅವುಗಳನ್ನೆಲ್ಲ ಹಾದು ಬಂದ ಆಟಗಾರ, ಆರಂಭದ ಬಿಂದುವಿಗೇ ಬಂದು ನಿಲ್ಲುವ ಸ್ಥಿತಿ, ಅದು ಆತ ಅನುಭವಿಸುವ ಧನ್ಯತಾಭಾವ. ಆಟದ ರೋಮಾಂಚನ, ಹಣ- ಪ್ರಶಸ್ತಿ-ಪ್ರಚಾರದ ಕಿಕ್- ಎಲ್ಲವನ್ನೂ ನಡಾಲ್ ಅನುಭವಿಸಿದ್ದಾನೆ. ನೋಡುಗರ ಸಂತೋಷ, ಸಡಗರ, ಸಂಭ್ರಮದ ಗಳಿಗೆಗಳಿಗೆ ಸಾಕ್ಷಿಯಾಗಿದ್ದಾನೆ. ಒಬ್ಬ ಆಟಗಾರ, ಇದಕ್ಕಿಂತ ಇನ್ನೇನು ಕೊಡಲು ಸಾಧ್ಯ?

‘ರಾಫಾ… ರಾಫಾ… ರಾಫಾ…’ ಹತ್ತು ಸಾವಿರಕ್ಕೂ ಹೆಚ್ಚು ಅಭಿಮಾನಿಗಳಿಂದ ಕಿಕ್ಕಿರಿದ ಸ್ಟೇಡಿಯಂ. ಕಿವಿಗಡಚಿಕ್ಕುವ ಚಪ್ಪಾಳೆ. ಅವರ ಅಭಿಮಾನದ ಕೂಗಿಗೆ ಕರಗಿ ಕಣ್ಣೀರಾದ 38ರ ಹರೆಯದ ನಡಾಲ್, ತಲೆ ಎತ್ತಿ ಕೈ ಬೀಸುತ್ತ, ಭಾರವಾದ ಹೆಜ್ಜೆಗಳನ್ನಿಡುತ್ತ ಕೋರ್ಟ್‌ನುದ್ದಕ್ಕೂ ನಡೆದಾಡಿದರು. ಸೆಂಟರ್ ಕೋರ್ಟಿಗೆ ಬಂದು ತಲೆ ಬಾಗಿ ನಿಂತರು. ಆ ಸಂದರ್ಭ, ಆ ಚಪ್ಪಾಳೆ ಮರುಕಳಿಸುವುದಿಲ್ಲ ಎಂಬುದು ನಡಾಲ್‌ಗೆ ಮನವರಿಕೆಯಾಗಿತ್ತು. ಅದು ಅವರನ್ನು ಇನ್ನಷ್ಟು ಭಾವುಕರನ್ನಾಗಿಸಿತ್ತು. ಕಣ್ಣಾಲಿಗಳಲ್ಲಿ ನೀರಾಡಿಸುತ್ತಿತ್ತು.

‘ನನಗಿದು ಭಾವನಾತ್ಮಕ ದಿನ. ವೃತ್ತಿಪರನಾಗಿ ಕೊನೆಯ ಬಾರಿಗೆ ರಾಷ್ಟ್ರಗೀತೆ ಕೇಳುವ ಭಾವನೆ ತುಂಬಾ ವಿಶೇಷವಾದದ್ದು. ನಾನು ಇಷ್ಟು ವರ್ಷ ದೇಶಕ್ಕಾಗಿ ಆಡಿರುವ ಖುಷಿ ಇದೆ. ಒಂದು ಪರಂಪರೆಯ ಭಾಗವಾಗಿರುವ ಭಾವ ನನ್ನಲ್ಲಿದೆ’ ಎಂದು ಸೋಲಿನೊಂದಿಗೆ, ‘ಕ್ಲೇ ಕೋರ್ಟ್ ಕಿಂಗ್’ ಎಂದೇ ಖ್ಯಾತರಾದ ಸ್ಪೇನ್‌ನ ಟೆನಿಸ್ ದಿಗ್ಗಜ ರಫೆಲ್ ನಡಾಲ್, ಟೆನಿಸ್ ವೃತ್ತಿಬದುಕಿಗೆ ವಿದಾಯ ಹೇಳಿದರು.

ನಡಾಲ್, ಅಕ್ಟೋಬರ್ ತಿಂಗಳಲ್ಲಿಯೇ ವೃತ್ತಿಪರ ಟೆನಿಸ್‌ನಿಂದ ನಿವೃತ್ತಿಯಾಗುವುದಾಗಿ ಘೋಷಿಸಿದ್ದರು. ಗಾಯಗಳಿಂದ ಬಳಲುತ್ತಿದ್ದ ಅವರು ಆ ನಿರ್ಧಾರಕ್ಕೆ ಬಂದಿದ್ದರು. ತಮ್ಮ ವೃತ್ತಿಬದುಕಿನಲ್ಲಿ ಡೇವಿಸ್ ಕಪ್ ಕೊನೆಯ ಪಂದ್ಯವಾಗಲಿದೆ ಎಂದು ಹೇಳಿದ್ದರು. ಘೋಷಿಸಿದಂತೆಯೇ ಡೇವಿಸ್ ಕಪ್‌ನಲ್ಲಿ ಸ್ಪೇನ್ ತಂಡವನ್ನು ಕೊನೆಯ ಬಾರಿ ಪ್ರತಿನಿಧಿಸಿ, ನೆದರ್ಲೆಂಡ್ಸ್‌ನ ಬೋಟಿಕ್ ವ್ಯಾನ್ ಡೆ ಝಾಂಡ್ ಸ್ಕಲ್ ವಿರುದ್ಧ 6-4, 6-4 ಅಂತರದಲ್ಲಿ ಸೋಲನನುಭವಿಸಿದರು.

Advertisements

ಮೈದಾನಕ್ಕಿಳಿದ ನಡಾಲ್‌ರಲ್ಲಿ ಎಂದಿನ ಉತ್ಸಾಹ, ಲವಲವಿಕೆಗಳಿದ್ದರೂ, ಆಡುವಾಗ ತುಸು ಮಂಕಾದಂತೆ ಕಂಡರು. ಪಂದ್ಯ ಆರಂಭಕ್ಕೂ ಮುನ್ನವೇ ಒತ್ತಡಕ್ಕೊಳಗಾದರು. ಭಾವುಕರಾದರು. ತಮ್ಮ ತವರು ನೆಲ ಮಲಗಾದ ಅಭಿಮಾನಿಗಳ ಮುಂದೆ ಆಡಿದ ನಡಾಲ್, ಗೆಲುವಿಗಾಗಿ ತಮ್ಮಿಂದ ಸಾಧ್ಯವಾದ ಅತ್ಯುತ್ತಮ ಪ್ರಯತ್ನ ಹಾಕಿದರು. ಪುನರಾಗಮನಕ್ಕಾಗಿ, ತಮ್ಮ ಬತ್ತಳಿಕೆಯಲ್ಲಿದ್ದ ಅಸ್ತ್ರಗಳಂತಹ ಎಲ್ಲಾ ರೀತಿಯ ಹೊಡೆತಗಳನ್ನು ಪ್ರಯೋಗಿಸಿದರೂ, ಗೆಲ್ಲಲು ಸಾಧ್ಯವಾಗಲಿಲ್ಲ. ನಡಾಲ್ ವಿದಾಯದೊಂದಿಗೆ ಸ್ಪೇನ್ ಹೋರಾಟವೂ ಅಂತ್ಯಗೊಂಡಿತು.

ನಡಾಲ್‌ರ 23 ವರ್ಷಗಳ ಟೆನಿಸ್ ಬದುಕಿನಲ್ಲಿ, 22 ಗ್ರ್ಯಾನ್‌ಸ್ಲ್ಯಾಮ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. 92 ಸಿಂಗಲ್ಸ್ ಪ್ರಶಸ್ತಿಗಳ ಪೈಕಿ 63 ಸಿಂಗಲ್ಸ್ ಪ್ರಶಸ್ತಿಗಳು, ಅವರ ಅಚ್ಚುಮೆಚ್ಚಿನ ಕ್ಲೇ ಕೋರ್ಟ್ ಪ್ರಶಸ್ತಿಗಳೇ ಆಗಿವೆ. ಅದರಲ್ಲೂ 14 ಫ್ರೆಂಚ್ ಓಪನ್ ಸಿಂಗಲ್ಸ್ ಪ್ರಶಸ್ತಿಗಳಾಗಿವೆ. 4 ಯುಸ್ ಓಪನ್, 2 ಆಸ್ಟ್ರೇಲಿಯನ್ ಓಪನ್, 2 ವಿಂಬಲ್ಡನ್, 2 ಒಲಿಂಪಿಕ್ಸ್ ಚಿನ್ನದ ಪದಕಗಳನ್ನು ಗೆದ್ದ ಅಪರೂಪದ ಆಟಗಾರ ಎನಿಸಿಕೊಂಡಿದ್ದಾರೆ.

ವಿಶ್ವ ಟೆನಿಸ್‌ ಲೋಕದಲ್ಲಿ ಅತಿ ಹೆಚ್ಚು ಗ್ರ್ಯಾಂಡ್ ಸ್ಲ್ಯಾಮ್‌ಗಳನ್ನು ಹೊಂದಿರುವ ಕೀರ್ತಿ ಸರ್ಬಿಯಾದ ನೋವಾಕ್‌ ಜೋಕೊವಿಚ್‌ ಅವರಿಗೆ ಸಲ್ಲುತ್ತದೆ. ಕುತೂಹಲಕರ ಸಂಗತಿ ಎಂದರೆ, ಜೋಕೊವಿಚ್‌ರ ಸಾಂಪ್ರದಾಯಿಕ ಎದುರಾಳಿ ರಫೆಲ್ ನಡಾಲ್, ಎರಡನೇ ಸ್ಥಾನದಲ್ಲಿದ್ದಾರೆ.  

‘ಸರಿ ಸುಮಾರು 20 ವರ್ಷಗಳ ನನ್ನ ವೃತ್ತಿಬದುಕಿನಲ್ಲಿ ಮರೆಯಲಾರದ ಕ್ಷಣಗಳಿಗೆ ನೀವು ಕಾರಣರಾಗಿದ್ದೀರಿ, ಒಳ್ಳೆಯ ಕಾಲದಲ್ಲಿ ಹೊತ್ತು ಮೆರೆಸಿದ್ದೀರಿ, ಕೆಟ್ಟ ಕಾಲದಲ್ಲಿ ಕೂಡ ಮುಂದೆ ದಬ್ಬಿ ಆಡಿಸಿದ್ದೀರಿ’ ಎಂದು ಮತ್ತೆ ಮತ್ತೆ ಭಾವುಕರಾದ ನಡಾಲ್, ಅಭಿಮಾನಿಗಳನ್ನೂ ಭಾವಯಾನಕ್ಕೆ ಕರೆದೊಯ್ದರು. ನಡಾಲ್ ವಿದಾಯವನ್ನು ಅವಿಸ್ಮರಣೀಯವಾಗಿಸಲು ಆತನ ತಂಡದ ಸದಸ್ಯರು ‘ರೇಜಿಂಗ್ ಬುಲ್’ ಎಂಬ ಟೀ-ಶರ್ಟ್ ತೊಟ್ಟು, ಆತನ ಆಕ್ರಮಣಕಾರಿ ಆಟವನ್ನು ನೆನಪಿಸುತ್ತಿದ್ದರು.

Rafael Nadal retirement

ಅದಕ್ಕೆ ಪ್ರತಿಯಾಗಿ ತಮ್ಮ ಆಟಕ್ಕೆ ನೆರವಾದ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸಿದ ನಡಾಲ್, ಚಿಕ್ಕಪ್ಪ ಟೋನಿ ನಡಾಲ್ ಮತ್ತು ತಮ್ಮ ಕುಟುಂಬದ ನೆರವನ್ನು ನೆನೆಯದೆ ಇರಲಿಲ್ಲ. ‘ನನ್ನ ಅದೃಷ್ಟವೋ ಏನೋ, ಚಿಕ್ಕವನಿರುವಾಗ ನನ್ನ ಪುಟ್ಟ ಹಳ್ಳಿಯಾದ ಮಲ್ಲೋರ್ಕದಲ್ಲಿ ನನ್ನ ಚಿಕ್ಕಪ್ಪ ನನಗೆ ಟೆನಿಸ್ ಹೇಳಿಕೊಟ್ಟರು. ಅದಕ್ಕೆ ನನ್ನ ಕುಟುಂಬ ಬೆಂಬಲಿಸಿ, ಪ್ರೋತ್ಸಾಹಿಸಿತು. ಮಗು ತನ್ನ ಕನಸನ್ನು ನನಸು ಮಾಡಿಕೊಳ್ಳುವ ಹಾದಿಯಲ್ಲಿ, ಕನಸಿಗಿಂತಲೂ ದೊಡ್ಡದಾದದ್ದನ್ನು ಇಂದು ಗಳಿಸಿದ್ದೇನೆ’ ಎಂದು ಕೃತಾರ್ಥರಾದರು.

ನಡಾಲ್, ಮೂರು ವರ್ಷದವನಾಗಿದ್ದಾಗಲೇ ಟೆನ್ನಿಸ್ ಆಟದತ್ತ ಆಕರ್ಷಿತನಾದ. ಎಂಟು ವರ್ಷದವನಾಗಿದ್ದಾಗಲೇ 12 ವರ್ಷದ ಕೆಳಗಿನವರೆಗೆ ನಡೆಯುವ ಟೆನಿಸ್ ಟೂರ್ನಿಯಲ್ಲಿ ಪ್ರಶಸ್ತಿ ಗಿಟ್ಟಿಸಿಕೊಂಡ. ಬಾಲಕನ ಈ ಬೆಳವಣಿಗೆಯನ್ನು ನೋಡಿ ಇವರ ಚಿಕ್ಕಪ್ಪ ಟೋನಿ ನಡಾಲ್, ಆಡುತ್ತಿದ್ದ ಶೈಲಿಯನ್ನು ಗಮನಿಸಿ, ಬದಲಿಸಿ ಎಡಗೈ ಆಟಗಾರನನ್ನಾಗಿ ರೂಪಿಸಿದರು. ಆ ವಯಸ್ಸಿನಲ್ಲಿಯೇ ಎರಡೂ ಕೈಗಳಲ್ಲಿಯೂ ಉತ್ತಮವಾಗಿ ಆಟವಾಡುವ ಚತುರತೆಯನ್ನು ಹೊಂದಿದ್ದನು. ನಡಾಲ್ ಹನ್ನೆರಡನೇ ವಯಸ್ಸಿನವನಾಗಿದ್ದಾಗ ಸ್ಪಾನಿಷ್ ಹಾಗೂ ಯುರೋಪಿಯನ್ ಟೆನಿಸ್ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡನು.

ಇದನ್ನು ಓದಿದ್ದೀರಾ?: ಸಂಜು – ತಿಲಕ್ ಅಬ್ಬರದ ಅದ್ಭುತ ಆಟದಲ್ಲಿ ಐಪಿಎಲ್ ಹರಾಜಿನ ಸುಳಿವಿದೆಯೇ?

ನಡಾಲ್ ವಿಶೇಷವೆಂದರೆ, ಓದಿಗಿಂತ ಹೆಚ್ಚಾಗಿ ಆಟದತ್ತ ಆಕರ್ಷಿತರಾಗಿದ್ದರು. ಅದರಲ್ಲೂ ಟೆನಿಸ್ ಹಾಗೂ ಫುಟ್‌ಬಾಲ್ ಆಟಗಳನ್ನು ಆಡುವುದಕ್ಕಾಗಿ ಸಮಯವನ್ನು ಮೀಸಲಿರುಸುತ್ತಿದ್ದರು. ಆಗ ಗೊಂದಲಕ್ಕೊಳಗಾದ ನಡಾಲ್ ಅವರ ತಂದೆ, ‘ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೋ’ ಎಂದರು. ಅಲ್ಲಿಂದ ನಡಾಲ್ ಟೆನಿಸ್ ಆಟವನ್ನೇ ಮೈಗೂಡಿಸಿಕೊಂಡರು.

ನಡಾಲ್ ವಿದಾಯಕ್ಕೆ ವಿಶ್ವದ ಖ್ಯಾತ ಟೆನಿಸ್ ಆಟಗಾರರಾದ ರೋಜರ್ ಫೆಡರರ್, ನೋವಾಕ್‌ ಜೋಕೊವಿಚ್‌, ಆಂಡಿ ಮುರ್‍ರೆ, ಸೆರೆನಾ ವಿಲಿಯಮ್ಸ್ ಸೋಷಿಯಲ್ ಮೀಡಿಯಾಗಳಲ್ಲಿ ವಿಡಿಯೋ ಮೆಸೇಜ್ ಮೂಲಕ ಹಾರೈಸಿದ್ದಾರೆ. ಅಷ್ಟೇ ಅಲ್ಲ, ‘ಆತ ವಿದಾಯ ಕುರಿತು ಮಾತನಾಡುವಾಗ ನನ್ನ ಕಣ್ಣಲ್ಲಿ ನೀರಾಡಿದವು. ಎಂತಹ ಆಟಗಾರ, ಎಂತಹ ಆಟದ ಕಾಲ… ಮತ್ತೊಬ್ಬ ನಡಾಲ್ ಸಿಗುವುದಿಲ್ಲ’ ಎಂದು ವಿಶ್ವದ ನಂಬರ್ ಒನ್ ಆಟಗಾರ ಬೋರಿಸ್ ಬೆಕರ್ ಹೇಳಿದ್ದು, ಅರ್ಥಪೂರ್ಣವಾಗಿದೆ.

ಒಬ್ಬ ಆಟಗಾರನ ಬದುಕಿನಲ್ಲಿ ಎಷ್ಟೆಲ್ಲ ಸೋಲು-ಗೆಲುವುಗಳು, ಏರಿಳಿತಗಳು. ಅವುಗಳನ್ನೆಲ್ಲ ಹಾದು ಬಂದ ಆಟಗಾರ, ಆರಂಭದ ಬಿಂದುವಿಗೇ ಬಂದು ನಿಲ್ಲುವ ಸ್ಥಿತಿ, ಅದು ಆತ ಅನುಭವಿಸುವ ಧನ್ಯತಾಭಾವ. ಆಟದ ರೋಮಾಂಚನ, ಹಣ- ಪ್ರಶಸ್ತಿ-ಪ್ರಚಾರದ ಕಿಕ್- ಎಲ್ಲವನ್ನೂ ನಡಾಲ್ ಅನುಭವಿಸಿದ್ದಾನೆ. ನೋಡುಗರ ಸಂತೋಷ, ಸಡಗರ, ಸಂಭ್ರಮದ ಗಳಿಗೆಗಳಿಗೆ ಸಾಕ್ಷಿಯಾಗಿದ್ದಾನೆ. ಒಬ್ಬ ಆಟಗಾರ, ಇದಕ್ಕಿಂತ ಇನ್ನೇನು ಕೊಡಲು ಸಾಧ್ಯ?

Basavaraju Megalkeri
+ posts

ಲೇಖಕ, ಪತ್ರಕರ್ತ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಬಸವರಾಜು ಮೇಗಲಕೇರಿ
ಬಸವರಾಜು ಮೇಗಲಕೇರಿ
ಲೇಖಕ, ಪತ್ರಕರ್ತ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಲೆಮಾರಿಗಳಿಗೆ ಅನ್ಯಾಯ; ಸರ್ಕಾರದ ವಿರುದ್ಧ ಭುಗಿಲೆದ್ದ ಜನಾಕ್ರೋಶ

ಮೀಸಲು ಹಂಚಿಕೆಯ ವಿವರಗಳು ಸ್ಪಷ್ಟವಾಗುತ್ತಿದ್ದಂತೆ ಸಂಭ್ರಮದ ಮನೆಯಲ್ಲಿ ಸಾವಿನ ಸೂತಕ ಆವರಿಸತೊಡಗಿತು....

ಅರಸು ಪತ್ರಕರ್ತರನ್ನು ಹಚ್ಚಿಕೊಳ್ಳಲೂ ಇಲ್ಲ, ಓಲೈಸಲೂ ಇಲ್ಲ: ಕಲ್ಲೆ ಶಿವೋತ್ತಮರಾವ್

2025-26ನೇ ಸಾಲಿನ ಡಿ.ದೇವರಾಜ ಅರಸು ಪ್ರಶಸ್ತಿಗೆ ಹಿರಿಯ ಪತ್ರಕರ್ತ ಕಲ್ಲೆ ಶಿವೋತ್ತಮರಾವ್...

ಹರೀಶ್‌ ಪೂಂಜಾ ಪ್ರಕರಣ | ಹೈಕೋರ್ಟ್‌ ನೀಡಿದ ತಡೆ ತೆರವಿಗೆ ಪ್ರಯತ್ನಿಸುವುದೇ ಸರ್ಕಾರ?

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪ್ರಕಾರ ರಾಜಕೀಯ ಕಾರಣಕ್ಕೆ ಹಾಗೆಲ್ಲ ಮಾತನಾಡಿದ್ರೆ ಸುಮ್ಮನಿದ್ದು ಬಿಡಬೇಕು,...

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

Download Eedina App Android / iOS

X