ಮಂಡ್ಯ ನಗರದ ಆರ್‌ಟಿಓ ಕಚೇರಿ ಮುಂಭಾಗದ ಕಾಳಪ್ಪ ಬಡಾವಣೆಯಲ್ಲಿ ವಸತಿ ರಹಿತ 65 ಮಂದಿ ಶ್ರಮಿಕ ನಿವಾಸಿಗಳಿಗೆ ಮನೆ ಹಕ್ಕುಪತ್ರ ವಿತರಿಸಲು ಕ್ರಮ ಕೈಗೊಂಡಿದ್ದು, ಶಾಸಕರ ಮುಂದಾಳತ್ವದಲ್ಲಿ ಹಕ್ಕು ಪತ್ರವನ್ನು ವಿತರಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.
ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಡ್ಯ ನಗರದ ಕೊಳಚೆ ಪ್ರದೇಶಗಳ ಸಮಸ್ಯೆ ಸಂಬಂಧ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದರು.
“ನ್ಯೂ ತಮಿಳು ಕಾಲೋನಿ ಸರ್ವೆ ನಂಬರ್ 3ರಲ್ಲಿ 1 ಎಕರೆ 39 ಗುಂಟೆ ಘೋಷಿತ ಕೊಳಚೆ ಪ್ರದೇಶದಲ್ಲಿ 169 ಕುಟುಂಬಗಳಿಗೆ ಹಕ್ಕುಪತ್ರ ನೀಡಿದ್ದು, ಫಲಾನುಭವಿಗಳ ಹೆಸರಿಗೆ ಖಾತೆ ಮಾಡಬೇಕು” ಎಂದು ಸೂಚಿಸಿದರು.

“ಹೊನ್ನಯ್ಯ ಬಡಾವಣೆಯಲ್ಲಿ 113 ಕುಟುಂಬಗಳಿಗೆ ಹಕ್ಕುಪತ್ರ ನೀಡಿದ್ದು, ಫಲಾನುಭವಿಗಳ ಹೆಸರಿಗೆ ಖಾತೆಗಳನ್ನು ಮಾಡಲಾಗುತ್ತಿದೆ. ರೈಲ್ವೆ ಹಳಿ ಪಕ್ಕದ ಬೀದಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಹಾಗೂ 16 ಮನೆಗಳಲ್ಲಿ ಶೌಚಾಲಯವಿಲ್ಲದ ಕಾರಣ ಶೌಚಾಲಯ ನಿರ್ಮಿಸಲು ಪೈಪ್‌ಲೈನ್ ಕಾಮಗಾರಿ ಮಾಡಲು ಈ ಹಿಂದೆ ತಿಳಿಸಲಾಗಿತ್ತು. ಸದರಿ ಕಾಮಗಾರಿಯು ಟೆಂಡರ್ ಹಂತದಲ್ಲಿದ್ದು, ಯಾವುದೇ ಟೆಂಡರ್ ಕಾಮಗಾರಿಯನ್ನು ವಿಳಂಬ ಮಾಡದೆ ಪೂರ್ಣಗೊಳಿಸಬೇಕು” ಎಂದು ತಿಳಿಸಿದರು.
ಇದನ್ನು ಓದಿದ್ದೀರಾ? ಕೆಆರ್‌ಪೇಟೆ | ಚಡ್ಡಿ ಗ್ಯಾಂಗ್ ಮಾದರಿಯಲ್ಲೇ ಮಾರಕಾಸ್ತ್ರ ಹಿಡಿದು ದರೋಡೆಗೆ ಯತ್ನ?
“ಸಂತೆಮಾಳ ಪಕ್ಕದ ಸ್ಲಾಟರ್ ಹೌಸ್ ಘೋಷಿತ ಸ್ಲಮ್ ಜಾಗದ ಪಕ್ಕದಲ್ಲಿ ವಾಸ ಮಾಡುತ್ತಿದ್ದ ವಸತಿ ರಹಿತ 6 ಮಂದಿ ಫಲಾನುಭವಿಗಳಿಗೆ ನಿವೇಶನ ನೀಡಲು ಫಲಾನುಭವಿಗಳ ಪಟ್ಟಿಗೆ ಅನುಮೋದನೆ ನೀಡಲು ನಗರಾಶ್ರಯ ಸಮಿತಿಯೊಂದಿಗೆ ಚರ್ಚಿಸಲಾಗುವುದು” ಎಂದರು.
“ಕಾಳಿಕಾಂಬ ದೇವಸ್ಥಾನದ ಹಿಂಭಾಗ ಕೊಳಚೆ ಪ್ರದೇಶದ ನಿವಾಸಿಗಳಿಗೆ ಅದೇ ಸ್ಥಳದಲ್ಲೇ 38 ಮನೆಗಳನ್ನು ಮಂಜೂರು ಮಾಡಲಾಗಿದೆ. ಸದರಿ ಕೊಳಚೆ ಪ್ರದೇಶದಲ್ಲಿ ಮನೆಗಳ ನಿರ್ಮಾಣ ಕಾಮಗಾರಿಗೆ ತಡೆಯಾಜ್ಞೆ ಇದ್ದು, ನ್ಯಾಯಾಲಯದ ಅಂತಿಮ ತೀರ್ಪಿನಂತೆ ಮುಂದಿನ ಕ್ರಮ ವಹಿಸಲಾಗುವುದು” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಪೌತಿಖಾತೆ ಮಾಡಿಕೊಡಲು ಲಂಚ ಸ್ವೀಕಾರ; ಲೋಕಾಯುಕ್ತ ಬಲೆಗೆ ಬಿದ್ದ ಗ್ರಾಮ ಲೆಕ್ಕಾಧಿಕಾರಿ
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ ಹೆಚ್ ಎಲ್ ನಾಗರಾಜು, ಉಪ ವಿಭಾಗಾಧಿಕಾರಿ ಶಿವಮೂರ್ತಿ, ಮಂಡ್ಯ ತಹಶೀಲ್ದಾರ್ ಶಿವಕುಮಾರ್ ಬಿರಾದಾರ, ಮದ್ದೂರು ತಹಶೀಲ್ದಾರ್ ಸ್ಮಿತಾ ರಾಮ್, ನಗರಸಭೆ ಸಹಾಯಕ ಕಾರ್ಯಪಾಲಕ ಅಭಿಯಂತರ ರವಿಕುಮಾರ್, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಕಾರ್ಯಪಾಲಕ ಅಭಿಯಂತರ ಮಹಮ್ಮದ್ ಜಫ್ರುಲ್ಲಾ, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಕುಮಾರ್ ಈಶ್ವರ, ನಾಗೇಂದ್ರ, ಕರ್ನಾಟಕ ಜನಶಕ್ತಿಯ ಸಿದ್ದರಾಜು, ಮದ್ದೂರು ತಮಿಳು ಕಾಲೋನಿಯ ಚಂದ್ರು, ವೈದುನ, ಮಂಡ್ಯ ನ್ಯೂತಮಿಳು ಕಾಲೋನಿಯ ನಿಂಗಮ್ಮ, ರತ್ನ ಸೇರಿದಂತೆ ಇತರರು ಇದ್ದರು.