ಏನಿದು ಅದಾನಿ ಲಂಚದ ಹಗರಣ: ಇಲ್ಲಿದೆ ಸಂಪೂರ್ಣ ಮಾಹಿತಿ

Date:

Advertisements

ಅಮೆರಿಕದ ಷೇರುಪೇಟೆ ನಿಯಂತ್ರಣ ಮಂಡಳಿ ಯುಎಸ್ ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಕಮಿಷನ್ (ಎಸ್‌ಇಸಿ) ಅಮೆರಿಕದ ಹೂಡಿಕೆದಾರರು ಮತ್ತು ಜಾಗತಿಕ ಹಣಕಾಸು ಸಂಸ್ಥೆಗಳಿಂದ ಹಣ ಸಂಗ್ರಹಿಸಲು ವಂಚನೆಯ ಸಂಚು ರೂಪಿಸಿದ್ದಕ್ಕಾಗಿ ಗೌತಮ್ ಅದಾನಿ ಹಾಗೂ ಅವರ ಸೋದರಳಿಯ ಸಾಗರ್ ಅದಾನಿ ಮತ್ತು ಇತರ ಆರು ಮಂದಿ ಭಾರತೀಯ ಉದ್ಯಮಿಗಳನ್ನು ಆರೋಪಿಗಳೆಂದು ದೋಷಾರೋಪ ಪಟ್ಟಿ ಸಲ್ಲಿಸಿದೆ. ಸೌರಶಕ್ತಿಯ ಒಪ್ಪಂದಗಳಿಗೆ ಸಂಬಂಧಿಸಿದ 265 ಮಿಲಿಯನ್‌ ಡಾಲರ್‌ಗೂ ಹೆಚ್ಚು ಲಂಚ ಮತ್ತು ವಂಚನೆ ಪ್ರಕರಣದಲ್ಲಿ ಈ ಉದ್ಯಮಿಗಳು ಆರೋಪಿಯಾಗಿದ್ದಾರೆ.

ಗೌತಮ್ ಅದಾನಿ ಮತ್ತು ಇತರ ಏಳು ಮಂದಿ ಸೌರಶಕ್ತಿ ಇಂಧನದಲ್ಲಿ ಲಾಭದಾಯಕ ವ್ಯವಹಾರಗಳನ್ನು ಪಡೆಯಲು ಭಾರತೀಯ ಅಧಿಕಾರಿಗಳಿಗೆ ಲಂಚ ನೀಡುವ ಮೂಲಕ ವಿದೇಶಿ ಭ್ರಷ್ಟಾಚಾರ ಕಾಯ್ದೆ(ಎಫ್‌ಸಿಪಿಎ)ಯನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಲಾಗಿದೆ. ಆರೋಪಿಗಳ ಪೈಕಿ ಸಾಗರ್ ಅದಾನಿ, ಗೌತಮ್ ಅದಾನಿ ಅವರ ಸೋದರಳಿಯನಾಗಿದ್ದು ಅದಾನಿ ಹಸಿರು ಇಂಧನ ಮಂಡಳಿಯ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದಾರೆ.

ಆರೋಪಿಗಳು ಕಳೆದ ಇಪ್ಪತ್ತು ವರ್ಷಗಳ ಅವಧಿಯಲ್ಲಿ ಸುಮಾರು 2 ಶತಕೋಟಿ ಡಾಲರ್‌ (2024ರಲ್ಲಿ ಅಂದಾಜು 16,328 ಕೋಟಿ ರೂ.) ಲಾಭಕ್ಕಾಗಿ 265 ಮಿಲಿಯನ್ ಡಾಲರ್‌ (2024ರಲ್ಲಿ ಅಂದಾಜು 2,164 ಕೋಟಿ ರೂ.) ಲಂಚ ನೀಡಿಕೆಗೆ ಖರ್ಚು ಮಾಡಿರುವ ಆರೋಪವಿದೆ. ಇವರ ವಿರುದ್ಧ ಅಮೆರಿಕದ ಬ್ರೂಕ್ಲಿನ್‌ನಲ್ಲಿರುವ ಫೆಡರಲ್ ಕೋರ್ಟ್‌ನಲ್ಲಿ ಪ್ರಕರಣ ದಾಖಲಾಗಿದೆ.

Advertisements

ಅಮೆರಿಕಾದಲ್ಲಿ ಫೆಡರಲ್ ಎಂದರೆ ಭಾರತದಲ್ಲಿ ಒಕ್ಕೂಟ ಎಂದರ್ಥ. ಕಾನೂನುಗಳು ಫೆಡರಲ್ ಅಥವಾ ಒಕ್ಕೂಟ ಅಥವಾ ರಾಜ್ಯವಾಗಿರಬಹುದು. ಅಮೆರಿಕದಲ್ಲಿ ಫೆಡರಲ್ ನ್ಯಾಯಾಲಯಗಳು ಫೆಡರಲ್ ಕಾನೂನುಗಳು ಮತ್ತು ಸಂವಿಧಾನವನ್ನು ಒಳಗೊಂಡ ಪ್ರಕರಣಗಳನ್ನು ವಿಚಾರಣೆಗೊಳಪಡಿಸುತ್ತವೆ. ಅದಾನಿ ಪ್ರಕರಣವನ್ನು ಬ್ರೂಕ್ಲಿನ್‌ನ ಫೆಡರಲ್ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ಏಕೆಂದರೆ ಇದು ಅಮೆರಿಕದ ಫೆಡರಲ್ ಸೆಕ್ಯುರಿಟೀಸ್ ಕಾನೂನುಗಳ(ಸೆಬಿ ಕಾನೂನುಗಳನ್ನು ಉಲ್ಲಂಘಿಸಿದ ರೀತಿ) ಉಲ್ಲಂಘನೆಯನ್ನು ಒಳಗೊಂಡಿರುತ್ತದೆ.

ಅಮೆರಿಕದ ಷೇರುಪೇಟೆ ಕಾನೂನುಗಳನ್ನು ಉಲ್ಲಂಘಿಸಿದ್ದಕ್ಕಾಗಿ ಎಸ್‌ಇಸಿಯು ಅದಾನಿ ಮತ್ತು ಅವರ ಕಂಪನಿಯ ನೌಕರರನ್ನು ಹೊಣೆಗಾರರನ್ನಾಗಿ ಮಾಡಲು ದೋಷಾರೋಪಣೆಯ ವ್ಯಾಪ್ತಿಯು ಗಣನೀಯವಾಗಿದೆ. ದೋಷಾರೋಪಣೆಯು ಈಗಾಗಲೇ ಪರಿಣಾಮ ಬೀರಿದ್ದು, ಅದಾನಿ ಸಮೂಹದ ಕಂಪನಿಗಳ ಹಣಕಾಸಿನ ಪರಿಣಾಮಗಳೊಂದಿಗೆ ಕಂಪನಿಯ ಖ್ಯಾತಿಗೆ ಮತ್ತಷ್ಟು ಹಾನಿಯನ್ನು ಉಂಟುಮಾಡುವುದು ಖಚಿತವಾಗಲಿದೆ.

ಪ್ರಕರಣದಲ್ಲಿ ಎಸ್ಇಸಿಯು ಈಗಾಗಲೇ ಔಪಚಾರಿಕ ಸಿವಿಲ್ ಮೊಕದ್ದಮೆಯನ್ನು ಪ್ರಾರಂಭಿಸಿದ್ದು, ದಂಡ, ಹಾನಿ ಮತ್ತು ಅಮೆರಿಕದ ನಿಯಂತ್ರಣ ಕಾನೂನುಗಳನ್ನು ಪ್ರಕ್ರಿಯೆಗೊಳಿಸಲು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದೆ. ದೋಷಾರೋಪಣೆಯು ಗೌತಮ್ ಅದಾನಿ ಮತ್ತು ಅವರ ಸೋದರಳಿಯನಿಗೆ ಬಂಧನ ವಾರಂಟ್‌ಗಳನ್ನು ಹೊರಡಿಸಲು ಕೂಡ ಕಾರಣವಾಗಿದೆ. ಅಮೆರಿಕದ ಹೂಡಿಕೆದಾರರನ್ನು ರಕ್ಷಿಸಲು ಮತ್ತು ಅಮೆರಿಕದ ಷೇರು ಮಾರುಕಟ್ಟೆಗಳ ಸಮಗ್ರತೆಯನ್ನು ಎತ್ತಿಹಿಡಿಯಲು ಎಸ್‌ಇಸಿಯು ಬದ್ಧತೆಯೊಂದಿಗೆ ಕಾನೂನು ಪ್ರಕ್ರಿಯೆಗಳನ್ನು ನಡೆಸುತ್ತದೆ.

ಅದಾನಿಯು ಲಾಭದಾಯಕ ವ್ಯವಹಾರಗಳನ್ನು ಪಡೆಯಲು 600 ಮಿಲಿಯನ್‌ ಡಾಲರ್‌ (2024ರಲ್ಲಿ ಅಂದಾಜು 4920 ಕೋಟಿ ರೂ.) ಲಂಚ ನೀಡಿದ್ದಾರೆ ಎನ್ನುವ ಆರೋಪ ಎಸ್‌ಇಸಿ ದಾಖಲಿಸಿದೆ. ಈ ಆರೋಪಗಳು ಕಾರ್ಪೊರೇಟ್ ಆಡಳಿತ ಮತ್ತು ಅದಾನಿ ಸಮೂಹದ ಭ್ರಷ್ಟಾಚಾರದ ಬಗ್ಗೆ ಕಳವಳವನ್ನು ಮತ್ತಷ್ಟು ಹೆಚ್ಚಿಸಿವೆ. ಅದಾನಿ ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವುದು ಇದೇ ಮೊದಲಲ್ಲ. ಈ ವರ್ಷದ ಆರಂಭದಲ್ಲಿ, ಹಿಂಡೆನ್‌ಬರ್ಗ್ ವರದಿಯು ಅದಾನಿ ಸಮೂಹವು ಷೇರು ಮಾರುಕಟ್ಟೆಯ ಬೆಲೆಗಳನ್ನು ತಿರುಚಿರುವ ಆರೋಪ ಪ್ರಮುಖವಾಗಿ ಕೇಳಿಬಂದಿತ್ತು.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ನಬಾರ್ಡ್ ಸಾಲ ಖೋತಾ ಮಾಡಿದ ಮೋದಿ ಸರ್ಕಾರ ರೈತಪರವೇ?

ಭಾರತ ಮತ್ತು ಅಮೆರಿಕದಲ್ಲಿ ನವ ಉದಾರವಾದಿ ಸಿದ್ಧಾಂತ(ಖಾಸಗಿ ಸಹಭಾಗಿತ್ವದೊಂದಿಗೆ ಸರ್ಕಾರದ ನಿಯಂತ್ರಣವನ್ನು ಕಡಿಮೆ ಮಾಡುವ ಆರ್ಥಿಕ ನೀತಿ) ಮತ್ತು ರಾಷ್ಟ್ರೀಯತೆಯ ಸ್ವರೂಪಗಳ ನಡುವೆ ಉದ್ವಿಗ್ನತೆ ಹೆಚ್ಚುತ್ತಿದೆ. ಒಂದು ಕಡೆ, ಬಂಡವಾಳಶಾಹಿಗಳು ಸರ್ಕಾರಿ ನಿಯಮಗಳು ಮತ್ತು ನ್ಯಾಯೋಚಿತ ಮನೋಭಾವದೊಂದಿಗೆ ವ್ಯವಹಾರ ನಡೆಸುವುದಾಗಿ ಹೇಳಿಕೊಂಡರೆ; ಮತ್ತೊಂದೆಡೆ, ಬಂಡವಾಳಶಾಹಿಗಳು ತಮ್ಮ ಕೆಲಸಗಳನ್ನು ಸಾಧಿಸಲು ಏನು ಬೇಕಾದರೂ ಖರೀದಿಸಲು ಸಾಧ್ಯವಾಗುತ್ತದೆ ಎಂದು ಹೇಳಿಕೊಳ್ಳುತ್ತಾರೆ.

ಅದಾನಿ ಮತ್ತು ಅಂಬಾನಿಯಂತಹ ಭಾರತೀಯ ಬಂಡವಾಳಶಾಹಿಗಳು ಮತ್ತು ಹೊಸದಾಗಿ ಚುನಾಯಿತರಾದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಬ್ಬರೂ ತಮ್ಮ ಭ್ರಷ್ಟಾಚಾರದ ಬಗ್ಗೆ ತುಂಬಾ ಮುಕ್ತರಾಗಿದ್ದಾರೆ. ವ್ಯವಸ್ಥೆಯು ಭ್ರಷ್ಟವಾಗಿದೆ ಮತ್ತು ತಾವು ಚಾಣಾಕ್ಷ ಉದ್ಯಮಿಗಳು ಎಂದು ಅವರು ಘೋಷಿಸಿಕೊಳ್ಳುತ್ತಾರೆ. ಮತ್ತೊಂದೆಡೆ, ನರೇಂದ್ರ ಮೋದಿ ಮತ್ತು ಅಮೆರಿಕದ ಬಂಡವಾಳಶಾಹಿಗಳು ಇಬ್ಬರೂ “ನ್ಯಾಯಯುತ” ಬಂಡವಾಳಶಾಹಿ ಎಂದು ಹೇಳಿಕೊಳ್ಳುತ್ತಾ ಸಮಾಜವಾದವನ್ನು ಅನ್ಯಾಯದ ಮಾರ್ಗವೆಂದು ಕರೆಯುತ್ತಾರೆ.

ಬಂಡವಾಳಶಾಹಿಗಳು ಭಾರತದಲ್ಲಿ ಉತ್ತಮ ನೆಲೆಯನ್ನು ವಿಸ್ತರಿಸಲು ಪ್ರಯತ್ನಿಸುತ್ತಿದ್ದಾರೆ. ಎಲಾನ್ ಮಸ್ಕ್ ಅವರ ಸ್ಟಾರ್‌ಲಿಂಕ್ ಈಗಾಗಲೇ ಇಂಟರ್ನೆಟ್ ಪೂರೈಕೆದಾರರಾಗಿ ಅಂಬಾನಿಯ ಜಿಯೋ ವಿರುದ್ಧ ಸ್ಪರ್ಧೆಗಿಳಿದಿದೆ. ನ್ಯಾಯಯುತ ವ್ಯಾಪಾರದ ವಿಷಯದಲ್ಲಿ ಅದಾನಿ ಅಂತಾರಾಷ್ಟ್ರೀಯ ಬಂಡವಾಳಶಾಹಿಗಳ ವಿರುದ್ಧ ಹೇಗೆ ಸಜ್ಜಾಗಬಹುದು ಎಂಬುದನ್ನು ಹಿಂಡೆನ್‌ಬರ್ಗ್ ವರದಿ ಈಗಾಗಲೇ ತೋರಿಸಿದೆ. ಅಂಬಾನಿ ಮತ್ತು ಅದಾನಿ ಇಬ್ಬರೂ ರಾಷ್ಟ್ರೀಯತೆಯನ್ನು ತಮಗೆ ಅನುಕೂಲವಾದಾಗ ಬಳಸಿಕೊಳ್ಳುತ್ತಾರೆ. ಆದರೆ ರಾಷ್ಟ್ರಕ್ಕೆ ಮಾಡಿದ ದ್ರೋಹ ಹಾಗೂ ಭ್ರಷ್ಟಾಚಾರ ಪ್ರಕರಣಗಳು ದೊಡ್ಡ ಉದ್ಯಮಿಗಳ ವಿರುದ್ಧ ಆಗಾಗ ತೆರೆದುಕೊಳ್ಳುತ್ತಲೇ ಇರುತ್ತವೆ.

ಆರೋಪಗಳು ಮತ್ತು ಆರೋಪಿಗಳ ವಿರುದ್ಧದ ದೂರುಗಳು

ಗೌತಮ್ ಅದಾನಿ, ಸಾಗರ್ ಅದಾನಿ ಮತ್ತು ವಿನೀತ್ ಜೈನ್ ಮಾತ್ರವಲ್ಲದೆ ನವೀಕರಿಸಬಹುದಾದ ಇಂಧನ ಕಂಪನಿಯ ಮಾಜಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಂಜಿತ್ ಗುಪ್ತಾ, ರೂಪೇಶ್ ಅಗರ್‌ವಾಲ್‌, ಸಿರಿಲ್ ಕ್ಯಾಬನೆಸ್, ಸೌರಭ್ ಅಗರ್‌ವಾಲ್‌  ಹಾಗೂ ಕೆನಡಾದ ಹೂಡಿಕೆ ಸಂಸ್ಥೆಯ ಮಾಜಿ ಉದ್ಯೋಗಿಗಳಾದ ದೀಪಕ್ ಮಲ್ಹೋತ್ರಾ ಅವರೂ ಸಂಚಿನಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ವಿಶ್ವದ ಅತಿದೊಡ್ಡ ಸೌರ ಇಂಧನ ಯೋಜನೆಯೊಂದಕ್ಕೆ ಸಂಬಂಧಿಸಿದಂತೆ ಲಂಚದ ಸಂಚು ರೂಪಿಸಲಾಗಿತ್ತು ಎಂದು ಎಸ್‌ಇಸಿ ದೂರಿದೆ. ವಿದೇಶಿ ಭ್ರಷ್ಟಾಚಾರ ಕಾಯಿದೆ (ಎಫ್‌ಸಿಪಿಎ) ಮತ್ತು ವಿದೇಶಿ ಸುಲಿಗೆ ತಡೆ ಕಾಯಿದೆ (ಎಫ್‌ಇಪಿಎ) ಎಂಬ ಅಮೆರಿಕ ಕಾನೂನುಗಳಡಿ ಅದಾನಿ ಹಾಗೂ ಇತರ ಆರೋಪಿಗಳ ವಿರುದ್ಧ ಆರೋಪ ಮಾಡಲಾಗಿದೆ.

ಈ ಸುದ್ದಿ ಓದಿದ್ದೀರಾ? ಮೋದಿ ಪಾಲಿಗೆ ಬಿಸಿ ತುಪ್ಪವಾದ ಅದಾನಿ

ಈ ಆರೋಪಿಗಳು 2020 ಮತ್ತು 2024ರ ನಡುವೆ, ರಂಜಿತ್ ಗುಪ್ತಾ, ಸಿರಿಲ್ ಕ್ಯಾಬನೆಸ್, ಸೌರಭ್ ಅಗರ್‌ವಾಲ್‌, ದೀಪಕ್ ಮಲ್ಹೋತ್ರಾ ಮತ್ತು ರೂಪೇಶ್ ಅಗರ್‌ವಾಲ್‌ ಅವರು ಇಂಧನ ಗುತ್ತಿಗೆ ಪಡೆಯುವುದಕ್ಕಾಗಿ ಭಾರತೀಯ ಅಧಿಕಾರಿಗಳಿಗೆ ಲಂಚ ನೀಡಲು ಸಂಚು ರೂಪಿಸಿದ್ದರು. ಈ ಆರೋಪಿಗಳು ಭಾರತೀಯ ಸರ್ಕಾರಿ ಸಂಸ್ಥೆಗಳು ತಮಗೆ ಅನುಕೂಲಕರವಾದ ತೀರ್ಮಾನ ಕೈಗೊಳ್ಳಲು ಮಧ್ಯವರ್ತಿಗಳು ಮತ್ತು ನಕಲಿ ಕಂಪನಿಗಳನ್ನು ಬಳಸಿಕೊಂಡಿದ್ದರು.  

1: ಆರೋಪಿಗಳು ಲಿಂಕ್ಡ್ ಎನರ್ಜಿ ಪ್ರಾಜೆಕ್ಟ್ ಅಡಿಯಲ್ಲಿ ವಿದ್ಯುತ್ ಖರೀದಿಸಲು ಸರ್ಕಾರಿ ಅಧಿಕಾರಿಗಳನ್ನು “ಪ್ರೇರೇಪಿಸುವ” ಯೋಜನೆ ಚರ್ಚಿಸುವುದಕ್ಕಾಗಿ ಎಲೆಕ್ಟ್ರಾನಿಕ್ ಸಂದೇಶಗಳ ವಿನಿಮಯ ನಡೆದಿದೆ. ಪ್ರತಿವಾದಿಗಳು ಮತ್ತು ವಿದೇಶಿ ಅಧಿಕಾರಿಗಳ ನಡುವಿನ ಸಭೆಗಳಲ್ಲಿ ಲಂಚ ಮತ್ತು ಭ್ರಷ್ಟಾಚಾರದ ಯೋಜನೆಗಳ ಕುರಿತು ಮಾತುಕತೆ ನಡೆಸಲಾಗಿದೆ. ಪಾವತಿ ಅಂತಿಮಗೊಳಿಸಲು ಸಾಂಕೇತಿಕ ಭಾಷೆ ಹಾಗೂ ತಪ್ಪುದಾರಿಗೆಳೆಯುವ ದಾಖಲೆಗಳ ಮೂಲಕ ವಹಿವಾಟುಗಳನ್ನು ಮರೆಮಾಚುವ ಪ್ರಯತ್ನಗಳು ನಡೆದಿವೆ.

2: ಕಂಪನಿಯ ಇತರ ಆರೋಪಿಗಳು ಹಣಕಾಸು ಮಾಹಿತಿ ತಿರುಚಿ ಗೌತಮ್‌ ಅದಾನಿ, ಸಾಗರ್‌ ಅದಾನಿ ಮತ್ತು ವಿನೀತ್‌ ಜೈನ್‌ ಸಂಚಿನ ಮೂಲಕ ಹೂಡಿಕೆದಾರರನ್ನು ವಂಚಿಸಲು ಮುಂದಾಗಿದ್ದರು. ವಾಸ್ತವಾಂಶಗಳನ್ನು ಮರೆಮಾಚಿ ಅಮೆರಿಕದ ಹೂಡಿಕೆದಾರರನ್ನು ತಮ್ಮ ಬಾಂಡ್‌ ಕೊಡುಗೆಗಳ ಮೂಲಕ ಆಕರ್ಷಿಸುವುದು ಕಾರ್ಪೊರೇಟ್‌ ತೀರ್ಪುಗಳನ್ನು ಸುಳ್ಳು ಮಾಡುವಂತಹ ಮೋಸದ ಕ್ರಮಗಳನ್ನು ಬಳಸಿಕೊಳ್ಳಲು ಆರೋಪಿಗಳು ಮುಂದಾಗಿದ್ದರು. ಸಂಚಿನಲ್ಲಿ 750 ಮಿಲಿಯನ್‌ ದಶಲಕ್ಷ ಬಾಂಡ್ ವಿತರಣೆಗೆ ಸಂಬಂಧಿಸಿದ ತಪ್ಪುದಾರಿಗೆಳೆಯುವ ಹಣಕಾಸಿನ ದಾಖಲೆಗಳನ್ನು ಅನುಮೋದನೆಯಾಗಿದೆ. ಅಮೆರಿಕದ ಹೂಡಿಕೆದಾರರಿಗೆ ಕೊಡುಗೆ ನೀಡುವ ಸಮಯದಲ್ಲಿ ಬಾಂಡ್ ಆದಾಯದ ಬಳಕೆಯ ತಪ್ಪು ನಿರೂಪಣೆ ಮಾಡಲಾಗಿದೆ.  

3: ಸಾಲದಾತರು ಮತ್ತು ಹೂಡಿಕೆದಾರರಿಂದ ಸಾಲ ಮತ್ತು ಹೂಡಿಕೆಗಳನ್ನು ಪಡೆದುಕೊಳ್ಳಲು ಸುಳ್ಳು ಭರವಸೆ ಮತ್ತು ಮೋಸ ಮಾಡುವುದಕ್ಕಾಗಿ ಆರೋಪಿಗಳು ಎಲೆಕ್ಟ್ರಾನಿಕ್ ಸಂಚು ರೂಪಿಸಿದ್ದಾರೆ. ಪ್ರಾಸಿಕ್ಯೂಟರ್‌ಗಳು ಷೇರುದಾರರನ್ನು ತಪ್ಪುದಾರಿಗೆಳೆಯಲು ಮತ್ತು ಅವರ ಇಂಧನ ವ್ಯವಹಾರಗಳಿಗೆ ಹಣಕಾಸಿನ ಪ್ರಯೋಜನಗಳನ್ನು ಪಡೆಯಲು ಆರೋಪಿಗಳು ಈ ಪ್ರಯತ್ನ ನಡೆಸಿದ್ದರು.

adani modi

4: ಗೌತಮ್ ಅದಾನಿ, ಸಾಗರ್ ಅದಾನಿ ಮತ್ತು ವಿನೀತ್ ಜೈನ್ ಅವರು 2021ರಲ್ಲಿ ಬಾಂಡ್ ಕೊಡುಗೆಗೆ ಸಂಬಂಧಿಸಿದಂತೆ ಷೇರು ವಂಚನೆ ಎಸಗಿದ್ದಾರೆ. ಆರೋಪಿಗಳು ಮೋಸಗೊಳಿಸುವ ತಂತ್ರಗಳನ್ನು ಬಳಸಿ ನಿರ್ಣಾಯಕ ಹಣಕಾಸಿನ ವಿವರಗಳನ್ನು ಹೊರತುಪಡಿಸಿ ಉದ್ದೇಶಪೂರ್ವಕವಾಗಿ ಹೂಡಿಕೆದಾರರಿಗೆ ತಮ್ಮ ಬಾಂಡ್‌ಗಳತ್ತ ಸೆಳೆಯುವ ಸಂಚಿನಲ್ಲಿ ತೊಡಗಿದ್ದಾರೆ.

5: ಅಮೆರಿಕ ಸರ್ಕಾರ ನಡೆಸುತ್ತಿರುವ ತನಿಖೆಗಳನ್ನು ತಡೆಯಲು ಸಿರಿಲ್ ಕ್ಯಾಬನೆಸ್, ಸೌರಭ್ ಅಗರ್‌ವಾಲ್‌, ದೀಪಕ್ ಮಲ್ಹೋತ್ರಾ ಹಾಗೂ ರೂಪೇಶ್ ಅಗರ್‌ವಾಲ್‌ ಸಂಚು ರೂಪಿಸಿದ್ದಾರೆ. ಆರೋಪಿಗಳು ಲಂಚದ ಯೋಜನೆಯನ್ನು ಮುಚ್ಚಿಹಾಕುವುದಕ್ಕಾಗಿ ಸಾಕ್ಷ್ಯ ನಾಶಪಡಿಸಿದ್ದಾರೆ. ಸಾಕ್ಷಿಗಳನ್ನು ತಡೆಹಿಡಿದಿದ್ದಾರೆ ಮತ್ತು ತನಿಖಾಧಿಕಾರಿಗಳಿಗೆ ಸುಳ್ಳು ಹೇಳಿದ್ದಾರೆ ಎಂದು ಆರೋಪಿಸಲಾಗಿದೆ. ಆರೋಪಿಗಳು ತನಿಖೆಗೆ ತಮ್ಮ ಪ್ರತಿಕ್ರಿಯೆ ಹೇಗಿರಬೇಕು ಎಂಬುದನ್ನು ಸಂಯೋಜಿಸಲೆಂದು ಮತ್ತು ತನಿಖಾಧಿಕಾರಿಗಳನ್ನು ತಪ್ಪುದಾರಿಗೆಳೆಯುವ ತಂತ್ರಗಳನ್ನು ಚರ್ಚಿಸಲೆಂದು ಆರೋಪಿಗಳು ನಡೆಸಿರುವ ಸಭೆಗಳು ಮತ್ತು ವಿದ್ಯುನ್ಮಾನ ಸಂದೇಶಗಳು ಆರೋಪದಲ್ಲಿ ಉಲ್ಲೇಖವಾಗಿದೆ.

6. ಆಂಧ್ರ ಪ್ರದೇಶದ ವಿದ್ಯುತ್‌ ಸರಬರಾಜು ಕಂಪನಿಗಳೊಂದಿಗೆ 7,000 ಮೆಗಾ ವಾಟ್‌ ಸೌರ ವಿದ್ಯುತ್‌ ಪೂರೈಕೆ ಒಪ್ಪಂದವನ್ನು ಕುದುರಿಸುವುದಕ್ಕಾಗಿ ಗೌತಮ್‌ ಅದಾನಿ ಅವರು ಮೂರು ಬಾರಿ (2021 ಆಗಸ್ಟ್‌ 7, ಸೆ.12 ಮತ್ತು ನ.20) ಖುದ್ದಾಗಿ ಆಂಧ್ರ ಪ್ರದೇಶದ ವಿದ್ಯುತ್‌ ಸರಬರಾಜು ಕಂಪನಿಗೆ ಸಂಬಂಧಿಸಿದ ಉನ್ನತ ಅಧಿಕಾರಿಯನ್ನು ಭೇಟಿ ಮಾಡಿದ್ದರು. 1,750 ಕೋಟಿ ರೂ. ಅನ್ನು ಲಂಚವಾಗಿ ನೀಡುವ ಭರವಸೆ ನೀಡಲಾಗಿತ್ತು.

ಇತರ ಪ್ರಮುಖ ಆರೋಪ

ಸೌರ ವಿದ್ಯುತ್‌ ಪೂರೈಕೆ ಒಪ್ಪಂದದಿಂದ ಅದಾನಿ ಗ್ರೀನ್‌ ಎನರ್ಜಿ ಕಂಪನಿಗೆ 20 ವರ್ಷಗಳಲ್ಲಿ 16,800 ಕೋಟಿ ರೂ. (200 ಕೋಟಿ ಡಾಲರ್‌) ಲಾಭವಾಗಲಿದೆ ಎಂದು ಅಂದಾಜಿಸಲಾಗಿತ್ತು. ಭಾರತೀಯ ಸೌರ ಶಕ್ತಿ ನಿಗಮವು 12 ಗಿಗಾ ವಾಟ್‌ ಸೌರ ಶಕ್ತಿಯನ್ನು ಖಾಸಗಿ ಕಂಪನಿಗಳಿಂದ ಖರೀದಿಸಿ, ರಾಜ್ಯಗಳಿಗೆ ಮಾರಾಟ ಮಾಡುವ ಯೋಜನೆ ಮಾಡಿಕೊಂಡಿತ್ತು. ಆದರೆ, ಖಾಸಗಿ ಕಂಪನಿಗಳು ಪ್ರತಿ ಯೂನಿಟ್‌ಗೆ ಹೆಚ್ಚಿನ ದರ ಪ್ರಸ್ತಾಪಿಸಿದ್ದರಿಂದ ಯಾವ ರಾಜ್ಯವೂ ಇದರ ಬಗ್ಗೆ ಆಸಕ್ತಿ ತೋರಿಸಲಿಲ್ಲ. ಹೀಗಾಗಿ, ಖಾಸಗಿ ಕಂಪನಿಗಳೊಂದಿಗೆ ಖರೀದಿ ಒಪ್ಪಂದಕ್ಕೆ ನಿಗಮ ಮನಸ್ಸು ಮಾಡಲಿಲ್ಲ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಪ್ಲಾನ್ ಬಿ ಬಗೆಗಿನ ಮಾತು ಮತ್ತು ನಾಯಕನ ಹಿಂದಿನ ನಾಯಕ

2020ರ ಹೊತ್ತಿಗೆ ಗೌತಮ್ ಅದಾನಿ, ಸಾಗರ್‌ ಅದಾನಿ, ವಿನೀತ್‌ ಜೈನ್‌, ರಂಜಿತ್‌ ಗುಪ್ತಾ ಹಾಗೂ ಪ್ರಮುಖ ಪಿತೂರಿದಾರ ಸೇರಿ ರಾಜ್ಯಗಳ ವಿದ್ಯುತ್‌ ಸರಬರಾಜು ಕಂಪನಿಗಳು ಸೌರಶಕ್ತಿ ನಿಗಮದೊಂದಿಗೆ ಒಪ್ಪಂದ ಮಾಡಿಕೊಳ್ಳುವ ಸಲುವಾಗಿ ಸರ್ಕಾರಿ ಅಧಿಕಾರಿಗಳಿಗೆ ಲಂಚದ ಆಮಿಷ ಒಡ್ಡುವ ಯೋಜನೆಯನ್ನು ರೂಪಿಸಿದರು. ಲಂಚದ ಒಟ್ಟು ಮೊತ್ತದಲ್ಲಿ ಸ್ವಲ್ಪ ಭಾಗವನ್ನು ಅಜ್ಯೂರ್‌ ಪವರ್‌ ಕಂಪನಿ ನೀಡಲು ಒಪ್ಪಿಕೊಂಡಿತು. ನಂತರದಲ್ಲಿ ಗೌತಮ್‌ ಅದಾನಿ ಸೇರಿದಂತೆ ಇತರ ಆರೋಪಿಗಳು ಭಾರತದ ಸರ್ಕಾರಿ ಅಧಿಕಾರಿಗಳಿಗೆ ಒಟ್ಟು 2,029 ಕೋಟಿ ರೂ. ಲಂಚ ನೀಡುವ ಆಮಿಷ ಒಡ್ಡಿದ್ದರು.

ಲಂಚದ ಆಮಿಷ ಒಡ್ಡಿದ ನಂತರ ಒಡಿಶಾ, ಜಮ್ಮು ಮತ್ತು ಕಾಶ್ಮೀರ, ತಮಿಳುನಾಡು, ಛತ್ತೀಸಗಡ ಮತ್ತು ಆಂಧ್ರ ಪ್ರದೇಶ ಸರ್ಕಾರಗಳು ವಿದ್ಯುತ್‌ ಖರೀದಿಗಾಗಿ ಭಾರತೀಯ ಸೌರಶಕ್ತಿ ನಿಗಮದೊಂದಿಗೆ ಒಪ್ಪಂದ ಮಾಡಿಕೊಳ್ಳಲು ಮುಂದೆ ಬಂದವು. ರಾಜ್ಯಗಳೊಂದಿಗೆ ಒಪ್ಪಂದ ಮಾಡಿಕೊಂಡ ಕಾರಣದಿಂದ ನಿಗಮವು ಅದಾನಿ ಗ್ರೀನ್‌ ಎನರ್ಜಿ ಮತ್ತು ಅದರ ಅಂಗಸಂಸ್ಥೆಗಳು ಮತ್ತು ಅಮೆರಿಕದ ಅಜ್ಯೂರ್‌ ಪವರ್‌ ಕಂಪನಿಯೊಂದಿಗೆ ಖರೀದಿ ಒಪ್ಪಂದಕ್ಕೆ ಮುಂದಾಗಿತ್ತು. 2021ರ ಅಕ್ಟೋಬರ್‌ ಮತ್ತು 2022ರ ಫೆಬ್ರುವರಿ ನಡುವೆ ವಿದ್ಯುತ್‌ ಖರೀದಿ ಒಪ್ಪಂದ ನಡೆದಿತ್ತು. ಆಂಧ್ರ ಪ್ರದೇಶವು ಸೌರಶಕ್ತಿ ನಿಗಮದೊಂದಿಗೆ 2021ರ ಡಿ.1ರಂದು 7000 ಮೆಗಾ ವಾಟ್‌ ವಿದ್ಯುತ್‌ ಖರೀದಿ ಒಪ್ಪಂದ ಮಾಡಿಕೊಂಡಿತ್ತು.

ಅದಾನಿ

ಛತ್ತೀಸಗಡ, ತಮಿಳುನಾಡು, ಒಡಿಶಾ ಮತ್ತು ಜಮ್ಮು ಕಾಶ್ಮೀರಕ್ಕೆ ಒಟ್ಟಾಗಿ 650 ಮೆಗಾ ವಾಟ್‌ ಮತ್ತು ಆಂಧ್ರಪ್ರದೇಶಕ್ಕೆ 2.3 ಗಿಗಾವಾಟ್‌ನಷ್ಟು ವಿದ್ಯುತ್‌ ಪೂರೈಸುವುದಕ್ಕಾಗಿ ಸೌರಶಕ್ತಿ ನಿಗಮ ಮತ್ತು ಅಜ್ಯೂರ್‌ ಪವರ್‌ ಕಂಪನಿಯೊಂದಿಗೆ ವಿದ್ಯುತ್‌ ಖರೀದಿ ಒಪ್ಪಂದ ನಡೆದಿತ್ತು. ಅದೇ ರೀತಿ ಅದಾನಿ ಗ್ರೀನ್‌ ಎನರ್ಜಿ ಮತ್ತು ಅದರ ಅಂಗ ಸಂಸ್ಥೆಗಳು ನಿಗಮದೊಂದಿಗೆ ಈ ರಾಜ್ಯಗಳಿಗೆ ವಿದ್ಯುತ್‌ ಪೂರೈಸುವ ಸಂಬಂಧ ಪ್ರತ್ಯೇಕ ಒಪ್ಪಂದ ಮಾಡಿಕೊಂಡಿದ್ದವು.

ವಿವಿಧ ರಾಜ್ಯಗಳಿಗೆ ಸೌರವಿದ್ಯುತ್‌ ಪೂರೈಸುವುದಕ್ಕಾಗಿ ದೇಶದ ವಿವಿಧ ಕಡೆಗಳಲ್ಲಿ ಸೌರ ಘಟಕಗಳನ್ನು ನಿರ್ಮಾಣ ಮಾಡುವುದಕ್ಕಾಗಿ ಅದಾನಿ ಗ್ರೀನ್‌ ಎನರ್ಜಿಯು ಅಮೆರಿಕದಲ್ಲಿ ಬಂಡವಾಳ ಸಂಗ್ರಹ ಮಾಡಲು ಮುಂದಾಗಿತ್ತು.

ಸಾಗರ್‌ ಅದಾನಿ ಮೇಲೆ ಎಫ್‌ಬಿಐ ದಾಳಿ

ಅಮೆರಿಕದ ಷೇರುಪೇಟೆ ನಿಯಂತ್ರಣ ಮಂಡಳಿ ದಾಖಲಿಸಿರುವ ಆರೋಪಪಟ್ಟಿಯಲ್ಲಿ ಗೌತಮ್‌ ಅದಾನಿ ಸೋದರಳಿಯ ಸಾಗರ್ ಅದಾನಿ ಮೇಲೆ 2023 ಮಾರ್ಚ್‌ 17ರಂದು ಅಮೆರಿಕದ ತನಿಖಾ ಸಂಸ್ಥೆ ಎಫ್‌ಬಿಐ ದಾಳಿ ನಡೆಸಿತ್ತು. ವಂಚನೆ ಕಾನೂನುಗಳು ಮತ್ತು ವಿದೇಶಿ ಭ್ರಷ್ಟಾಚಾರ ಕಾಯಿದೆ (ಎಫ್‌ಸಿಪಿಎ) ಕಾಯ್ದೆ ಉಲ್ಲಂಘನೆಗಳಡಿಯಲ್ಲಿ ಅಮೆರಿಕ ಸರ್ಕಾರವು ತನಿಖೆ ನಡೆಸುತ್ತಿದೆ ಎಂದು ಸೂಚಿಸುವ ನ್ಯಾಯಾಧೀಶರು ಹೊರಡಿಸಿದ್ದ ತಪಾಸಣೆ ವಾರಂಟ್‌ ನೀಡಿ ತನಿಖೆ ನಡೆಸಲಾಗಿತ್ತು. ಈ ಸಂದರ್ಭದಲ್ಲಿ ಸಾಗರ್‌ ಅದಾನಿಯ ಎಲೆಕ್ಟ್ರಾನಿಕ್‌ ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಗೌತಮ್‌ ಅದಾನಿ ಕೂಡ 2023ರ ಮಾರ್ಚ್ 18 ರಂದು ತಪಾಸಣೆ ವಾರಂಟ್‌ನ ಪ್ರತಿ ಪುಟದ ಭಾವಚಿತ್ರ ಪ್ರತಿಗಳನ್ನು ಇಮೇಲ್ ಮಾಡಿದ್ದರು.

ಆಸ್ತಿ ಮುಟ್ಟುಗೋಲು, ಹಲವು ತೊಂದರೆ

ಅದಾನಿ ಮತ್ತು ಇತರ ಆರೋಪಿಗಳ ವಿರುದ್ಧ ಈ ಬಾರಿ ಕೇಳಿ ಬಂದಿರುವ ಆರೋಪ ಸಣ್ಣದೇನಲ್ಲ. ವಿದೇಶಿ ನ್ಯಾಯಾಲಯದಿಂದ ಭಾರತದ ದೊಡ್ಡ ಉದ್ಯಮಿಯೊಬ್ಬರ ವಿರುದ್ಧ ಗಂಭೀರ ಆರೋಪ ಕೇಳಿಬಂದಿರುವುದು ಇದೇ ಮೊದಲು. ಆರೋಪ ಸಾಬೀತಾದರೆ ಲಂಚ, ವಂಚನೆ ಮತ್ತು ನ್ಯಾಯಕ್ಕೆ ಅಡ್ಡಿಪಡಿಸುವ ಸಂಚಿನಂತಹ ಕ್ರಿಮಿನಲ್ ಚಟುವಟಿಕೆಯಿಂದ ಪಡೆದ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವಂತೆ ಆರೋಪಪಟ್ಟಿಯಲ್ಲಿ ಕೋರಲಾಗಿದೆ. ಅದಾನಿ ವಿರುದ್ಧ ಅಮೆರಿಕದ ನ್ಯಾಯಾಲಯದಿಂದ ಅಧಿಕೃತ ಲಿಖಿತ ಆರೋಪ ಪ್ರಕಟವಾಗಿದೆ. ಅದಾನಿ ಮತ್ತಿತರರ ಬಂಧನಕ್ಕೆ ಅಮೆರಿಕ ನ್ಯಾಯಾಲಯ ವಾರಂಟ್ ಹೊರಡಿಸಿರುವುದರಿಂದ, ಅದರ ಜಾರಿಗಾಗಿ ಭಾರತೀಯ ರಾಯಭಾರ ಕಚೇರಿಯ ಮೂಲಕ ಕೇಂದ್ರ ಸರ್ಕಾರವನ್ನು ಸಂಪರ್ಕಿಸಬೇಕಾಗುತ್ತದೆ.

ವಿಚಾರಣೆಯ ಕಾರಣದಿಂದ ಅದಾನಿ ಸೇರಿದಂತೆ ಇತರ ಆರೋಪಿಗಳು ಅಮೆರಿಕ ಸೇರಿದಂತೆ ಹಲವು ದೇಶಗಳಿಗೆ ಪ್ರಯಾಣ ಬೆಳೆಸುವುದು ಕಷ್ಟವಾಗಬಹುದು. ಆರೋಪಗಳನ್ನು ರದ್ದುಪಡಿಸಲು ಅದಾನಿ ಸಮೂಹ ಮನವಿ ಮಾಡಬಹುದಾಗಿದೆ. ಒಂದು ವೇಳೆ ಪ್ರಕರಣ ಮುಂದುವರಿದರೆ, ಅಮೆರಿಕದ ಪೊಲೀಸರು ಈ ಬಗ್ಗೆ ತನಿಖೆ ನಡೆಸಿ, ಸಾಕ್ಷ್ಯಾಧಾರ ಸಹಿತ ನ್ಯಾಯಾಧೀಶರ ಸಮಿತಿಗೆ ವರದಿ ಸಲ್ಲಿಸುತ್ತಾರೆ. ಅನಂತರ ಜಾಮೀನು, ಆರೋಪಿಗಳ ತಪ್ಪೊಪ್ಪಿಗೆ ಅಥವಾ ತಪ್ಪು ನಿರಾಕರಣೆ ಮುಂತಾದ ನ್ಯಾಯಾಲಯದ ಪ್ರಕ್ರಿಯೆ ನಡೆಯುತ್ತದೆ.

ಆರೋಪಿಗಳು ಹಾಗೂ ಅವರ ಹುದ್ದೆಗಳು

1. ಗೌತಮ್ ಅದಾನಿ: ಅದಾನಿ ಸಮೂಹದ ಸಂಸ್ಥಾಪಕ

2. ಸಾಗರ್‌ ಅದಾನಿ: ಅದಾನಿ ಗ್ರೀನ್ ಎನರ್ಜಿ ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕ

3. ವಿನೀತ್‌ ಜೈನ್‌: 2020ರ ಜುಲೈನಿಂದ ಮೇ 2023ರವರೆಗೆ ಅದಾನಿ ಗ್ರೀನ್‌ ಎನರ್ಜಿಯ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕ. ಪ್ರಸ್ತುತ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ

4. ರಂಜಿತ್‌ ಗುಪ್ತಾ: 2019ರ ಜುಲೈನಿಂದ 2022ರ ಏಪ್ರಿಲ್‌ವರೆಗೆ ಅಮೆರಿಕದ ಅಜ್ಯೂರ್‌ ಪವರ್‌ ಕಂಪನಿಯ ಸಿಇಒ ಮತ್ತು ಭಾರತದಲ್ಲಿರುವ ಅದರ ಅಂಗಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು

5. ಸಿರಿಲ್‌ ಕ್ಯಾಬೆನ್ಸ್‌: ಆಸ್ಟ್ರೇಲಿಯ ಮತ್ತು ಫ್ರಾನ್ಸ್‌ ಪೌರತ್ವ ಹೊಂದಿರುವ ಇವರು ಸಿಂಗಪುರ ವಾಸಿ. ಕೆನಡಾದ ಹೂಡಿಕೆ ಸಂಸ್ಥೆಗೆ ಸಂಬಂಧಿಸಿದ ಕಂಪನಿಯೊಂದರಲ್ಲಿ 2016ರ ಫೆಬ್ರುವರಿಯಿಂದ 2023ರ ಅಕ್ಟೋಬರ್‌ವರೆಗೆ ಉದ್ಯೋಗಿಯಾಗಿದ್ದರು. 2017ರಿಂದ ಅಕ್ಟೋಬರ್‌ 2023ರವರೆಗೆ ಅಜ್ಯೂರ್‌ ಪವರ್‌ ಹಾಗೂ ಅದರ ಭಾರತದ ಅಂಗ ಸಂಸ್ಥೆಯ ಕಾರ್ಯನಿರ್ವಾಹಕೇತರ ನಿರ್ದೇಶಕ ಆಗಿದ್ದರು

6. ಸೌರಭ್‌ ಅಗರ್ವಾಲ್‌: ಕೆನಡಾದ ಹೂಡಿಕೆ ಸಂಸ್ಥೆಗೆ ಸಂಬಂಧಿಸಿದ ಕಂಪನಿಯೊಂದರಲ್ಲಿ 2017ರ ಮೇನಿಂದ 2023ರ ಜುಲೈ ಅವಧಿಯಲ್ಲಿ ಉದ್ಯೋಗಿದ್ದರು. ಸಿರಿಲ್‌ ಕ್ಯಾಬೆನ್ಸ್‌ ಅವರ ಅಧೀನದಲ್ಲಿ ಕೆಲಸ ಮಾಡುತ್ತಿದ್ದರು

7. ದೀಪಕ್‌ ಮಲ್ಹೋತ್ರಾ: ಕೆನಡಾದ ಹೂಡಿಕೆ ಸಂಸ್ಥೆಗೆ ಸಂಬಂಧಿಸಿದ ಕಂಪನಿಯೊಂದರಲ್ಲಿ 2018ರ ಸೆಪ್ಟೆಂಬರ್‌ನಿಂದ 2023ರ ಅಕ್ಟೋಬರ್‌ವರೆಗೆ ಉದ್ಯೋಗಿಯಾಗಿದ್ದರು. 2019ರ ನವಂಬರ್‌ನಿಂದ 2023ರ ಅಕ್ಟೋಬರ್‌ವರೆಗೆ ಅಜ್ಯೂರ್‌ ಪವರ್‌ ಮತ್ತು ಅದರ ಅಂಗ ಸಂಸ್ಥೆಯ ಕಾರ್ಯನಿರ್ವಾಹಕೇತರ ನಿರ್ದೇಶಕ ಆಗಿದ್ದರು

8. ರೂಪೇಶ್‌ ಅಗರ್ವಾಲ್‌: ಅಜ್ಯೂರ್‌ ಪವರ್‌ ಮತ್ತು ಅದರ ಅಂಗಸಂಸ್ಥೆಯ ಕನ್ಸಲ್ಟೆಂಟ್‌ ಆಗಿ 2022ರ ವರ್ಷಾರಂಭದಿಂದ ಜುಲೈವರೆಗೆ ಕೆಲಸ ಮಾಡಿದ್ದರು. 2022ರ ಜುಲೈ ಮತ್ತು ಆಗಸ್ಟ್‌ನಲ್ಲಿ ಅಜ್ಯೂರ್‌ ಪವರ್‌ನ ಮುಖ್ಯ ಕಾರ್ಯತಂತ್ರ ಮತ್ತು ವಾಣಿಜ್ಯ ಅಧಿಕಾರಿಯಾಗಿದ್ದರು. 2022ರ ಆಗಸ್ಟ್‌ನಿಂದ 2023ರ ಜುಲೈವರೆಗೆ ಕಂಪನಿಯ ಪ್ರಭಾರ ಸಿಇಒ ಆಗಿದ್ದರು.

blank profile picture 973460 640
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

ರಾಜ್ಯ ಶಿಕ್ಷಣ ನೀತಿ ಆಯೋಗ: ಶಾಲಾ ಶಿಕ್ಷಣ ಕುರಿತ ಹೊಸ ಅಂಶಗಳೇನು?

ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಎಂಬುದು ಭಾರತೀಯ ಜ್ಞಾನದ ನೆಲೆಯಲ್ಲಿ ರೂಪಿಸಲಾಗಿದೆ....

Download Eedina App Android / iOS

X