ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಮರಕಂದಿನ್ನಿ ಗ್ರಾಮದ ಜನರಲ್ಲಿ ಅಕ್ಷರ ಪ್ರೀತಿ ಬೆಳೆಸುವ ಸಲುವಾಗಿ ಪುಸ್ತಕ ಗೂಡು ರಚನೆಗೊಂಡಿದ್ದು, ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಅವರು ಶುಕ್ರವಾರ ಉದ್ಘಾಟಿಸಿದರು.
ಪುಸ್ತಕ ಗೂಡನ್ನು ಉದ್ಘಾಟಿಸಿ ಮಾತನಾಡಿ, “ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆಯ ವಿನೂತನ ಕಾರ್ಯಕ್ರಮವಾದ ರಾಜೀವ್ ಗಾಂಧಿ ಫೆಲೋಶಿಪ್ ಅಡಿಯಲ್ಲಿ ಸರ್ಕಾರದ ಆದೇಶದಂತೆ ಗ್ರಾಮೀಣ ಪ್ರದೇಶದ ಮಕ್ಕಳಲ್ಲಿ ಮತ್ತು ಸಾರ್ವಜನಿಕರಲ್ಲಿ ಪುಸ್ತಕ ಓದುವ ಹವ್ಯಾಸವನ್ನು ಬೆಳೆಸುವ ಸದುದ್ದೇಶದಿಂದ ತಾಲೂಕಿನ ಜಾಗೀರ ಜಾಡಲದಿನ್ನಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಮರಕಂದಿನ್ನಿ ಗ್ರಾಮದ ಅಗಸಿಯಲ್ಲಿ ಪುಸ್ತಕ ಗೂಡನ್ನು ಸ್ಥಾಪಿಸಲಾಗಿದೆ” ಎಂದರು.
“ಗ್ರಾಮದ ಜನರು ಇದನ್ನು ಸರಿಯಾಗಿ ಸದುಪಯೋಗ ಪಡೆದುಕೊಳ್ಳಬೇಕು. ಅನಾವಶ್ಯಕವಾಗಿ ಮೊಬೈಲ್ ಬಳಸುವುದರಿಂದ ದೂರವಿದ್ದು, ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಪುಸ್ತಕ ಗೂಡಿನಲ್ಲಿ ಕಥೆ, ಕವನ, ಪ್ರಚಲಿತ ಘಟನೆಯ ಮುಂತಾದ ಪುಸ್ತಕಗಳನ್ನು ಇರಿಸಲಾಗಿದೆ. ಗ್ರಾಮಸ್ಥರು ನಿತ್ಯವೂ ಪುಸ್ತಕಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು” ಎಂದು ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಪಾಸ್ಪೋರ್ಟ್ ಅರ್ಜಿ ತಿರಸ್ಕಾರ; ವಾಸ್ತುಶಿಲ್ಪಿ ಕೆ ಜಿ ಶ್ರೀಧರ್ ಏಕಾಂಗಿ ಧರಣಿ
ಈ ಸಂದರ್ಭದಲ್ಲಿ ಪಿಡಿಒ ಜೆ ಮುರಳಿ ಮೋಹನ್, ಗ್ರಾಮ ಪಂಚಾಯಿತಿ ಸಿಬ್ಬಂದಿ, ಶಾಲೆಯ ಮಕ್ಕಳು ಹಾಗೂ ಗ್ರಾಮಸ್ಥರು ಇದ್ದರು.