ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ, ರಜತ್ ಪಾಟೀದಾರ್, ಯಶ್ ದಯಾಳ್ ಅವರನ್ನು ರಿಟೈನ್ ಮಾಡಿಕೊಂಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಹರಾಜು ಪ್ರಕ್ರಿಯೆಯಲ್ಲಿ ಒಟ್ಟು 19 ಆಟಗಾರರನ್ನು ಖರೀದಿಸಿದೆ.
ಎಲ್ಲ ಫ್ರಾಂಚೈಸಿಗಳಂತೆ ಆರ್‌ಸಿಬಿ ಕೂಡ ಈ ಬಾರಿ ಅಳೆದು ತೂಗಿ ಹಲವು ಸ್ಟಾರ್ ಕ್ರಿಕೆಟಿಗರನ್ನು ಖರೀದಿಸಿದೆ. ಅವರಲ್ಲಿ ಯಾರು ಪ್ಲೇಯಿಂಗ್ 11 ರಲ್ಲಿ ಸ್ಥಾನ ಪಡೆಯಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.
ಅರ್‌ಸಿಬಿ ತಂಡದಲ್ಲಿ 22 ಆಟಗಾರರಿದ್ದಾರೆ. ಇವರಲ್ಲಿ 14 ಭಾರತೀಯ ಆಟಗಾರಾಗಿದ್ದು, ಒಂದು ಫ್ರಾಂಚೈಸಿಗೆ ಎಂಟು ವಿದೇಶಿ ಆಟಗಾರರ ಕೋಟಾ ನಿಗದಿಪಡಿಸಲಾಗಿದೆ. ಅಷ್ಟನ್ನೂ ಆರ್‌ಸಿಬಿ ಭರ್ತಿ ಮಾಡಿಕೊಂಡಿದೆ.
ಮೊದಲ ದಿನ ಹೆಚ್ಚು ಖರ್ಚು ಮಾಡದೆ ಎಚ್ಚರಿಕೆ ಹೆಜ್ಜೆ ಹಾಕಿದ್ದ ಆರ್‌ಸಿಬಿಯ ಪರ್ಸ್‌ನಲ್ಲಿ ಎರಡನೇ ದಿನದ ಹರಾಜು ಆರಂಭಕ್ಕೂ ಮುನ್ನ ₹ 83 ಕೋಟಿ ಇತ್ತು. ಹೀಗಾಗಿ, ವಿಶ್ವಾಸದಿಂದ ಖರೀದಿಯಲ್ಲಿ ಪಾಲ್ಗೊಂಡಿತು. ಆರಂಭದಲ್ಲೇ, ಆಲ್‌ರೌಂಡರ್ ಕೃಣಾಲ್ ಪಾಂಡ್ಯ ಅವರನ್ನು ತೆಕ್ಕೆಗೆ ಹಾಕಿಕೊಂಡ ಆರ್‌ಸಿಬಿ, ನಂತರ ಅನುಭವಿ ವೇಗಿ ಭುವನೇಶ್ವರ್ ಕುಮಾರ್, ಸ್ಪೋಟಕ ಬ್ಯಾಟರ್‌ಗಳಾದ ಟಿಮ್ ಡೇವಿಡ್, ಜೇಕಬ್ ಬೆಥಲ್ ಸೇರಿದಂತೆ ಹಲವು ಪ್ರಮುಖ ಆಟಗಾರರನ್ನು ಕೊಂಡುಕೊಂಡಿದೆ.
ಇಬ್ಬರು ಕನ್ನಡಿಗರಿಗೆ ಮಣೆ
ಮೊದಲ ದಿನದ ಹರಾಜಿನಲ್ಲಿ ಕನ್ನಡಿಗರು ಯಾರೂ ಇಲ್ಲ ಎಂಬುದು ಕರ್ನಾಟಕದ ಆರ್‌ಸಿಬಿ ಅಭಿಮಾನಿಗಳ ನೋವಾಗಿತ್ತು. ದೇವದತ್ ಪಡಿಕ್ಕಲ್ ಮತ್ತು ಮನೋಜ್ ಭಾಂಡಗೆ ಅವರನ್ನು ಹರಾಜಿನಲ್ಲಿ ಖರೀದಿಸುವ ಮೂಲಕ ಕರ್ನಾಟಕದ ಇಬ್ಬರು ಆಟಗಾರರನ್ನು ತಂಡಕ್ಕೆ ಸೇರಿಸಿಕೊಂಡಿದೆ.
ವಿರಾಟ್ ಕೊಹ್ಲಿಗೆ ನಾಯಕ ಪಟ್ಟ!
ಇಡೀ ತಂಡವನ್ನು ಹುಡುಕಿ ತೆಗೆದರೂ ವಿರಾಟ್ ಕೊಹ್ಲಿಯನ್ನು ಹೊರತುಪಡಿಸಿದರೆ ತಂಡದ ನಾಯಕನನ್ನಾಗಿ ಮಾಡಬಲ್ಲ ಮತ್ತೊಬ್ಬ ಆಟಗಾರನನ್ನು ಕಾಣುತ್ತಿಲ್ಲ. ಹೀಗಾಗಿ ಅವರೇ ನಾಯಕನಾಗುವುದು ಬಹುತೇಕ ಖಚಿತ ಆಗಿದೆ. ಕಳೆದ ಬಾರಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದು ಅಬ್ಬರ ಸೃಷ್ಟಿಸಿದ್ದ ಇಂಗ್ಲೆಂಡ್ನ ಸ್ಟಾರ್ ವಿಕೆಟ್ಕೀಪರ್ ಪಿಲ್ ಸಾಲ್ಟ್, ಆರ್‌ಸಿಬಿ ಪರ ಆರಂಭಿಕನಾಗಿ ಕಣಕ್ಕಿಳಿಯುವುದು ಖಚಿತವಾಗಿದೆ. ಇದರ ಜೊತೆಗೆ ಸಾಲ್ಟ್ ವಿಕೆಟ್ ಕೀಪರ್ ಆಗಿಯೂ ಕಾಣಿಸಿಕೊಳ್ಳಲಿದ್ದಾರೆ.

ಈಗಾಗಲೇ ತಂಡದಲ್ಲಿ ಉಳಿದುಕೊಂಡಿದ್ದ ಭಾರತದ ಆಟಗಾರ ರಜತ್ ಪಾಟೀದರ್, ಮುಂದಿನ ಆವೃತ್ತಿಯಲ್ಲೂ ಆರ್‌ಸಿಬಿ ಪರ ಕಣಕ್ಕಿಳಿಯಲಿದ್ದು, ಅವರು ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಬಹುದು. ಹಾಗೆಯೇ ಕಳೆದ ಆವೃತ್ತಿಯಲ್ಲಿ ಪಂಜಾಬ್ ಕಿಂಗ್ಸ್ ತಂಡದ ಪರ ಆಡಿದ್ದ ಇಂಗ್ಲೆಂಡ್ನ ಸ್ಟಾರ್ ಆಲ್‌ರೌಂಡರ್ ಲಿಯಾಮ್ ಲಿವಿಂಗ್ಸ್ಟೋನ್, ಈ ಬಾರಿ ಆರ್‌ಸಿಬಿ ತಂಡವನ್ನು ಸೇರಿಕೊಂಡಿದ್ದಾರೆ. ಮಧ್ಯಮ ಕ್ರಮಾಂಕಕ್ಕೆ ಹೇಳಿ ಮಾಡಿಸಿದ ಆಟಗಾರನಾಗಿರುವ ಲಿವಿಂಗ್ಸ್ಟೋನ್ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿದ್ದು, ಬೌಲಿಂಗ್ನಲ್ಲೂ ನೆರವಾಗಲಿದ್ದಾರೆ.
ಲಿಯಾಮ್ ಲಿವಿಂಗ್ಸ್ಟೋನ್ರಂತೆ ಕಳೆದ ಬಾರಿ ಪಂಜಾಬ್ ಕಿಂಗ್ಸ್ ಪರ ಆಡಿದ್ದ ಭಾರತದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಜಿತೇಶ್ ಶರ್ಮಾ ಐದನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸುವ ಸಾಧ್ಯತೆಗಳಿವೆ. ವಿಕೆಟ್ ಕೀಪರ್ ಆಗಿ ಪಿಲ್ ಸಾಲ್ಟ್ ಇರುವ ಕಾರಣ, ಜಿತೇಶ್ ಆಟಗಾರನಾಗಿ ಕಣಕ್ಕಿಳಿಯಲಿದ್ದಾರೆ. ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸ್‌ಮನ್ ಟಿಮ್ ಡೇವಿಡ್ ಮತ್ತೆ ಆರ್‌ಸಿಬಿ ತಂಡವನ್ನು ಸೇರಿಕೊಂಡಿದ್ದು, ಎಂದಿನಂತೆ ಅವರ ಗೇಮ್ ಫಿನಿಶರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಂದರೆ ಆರನೇ ಕ್ರಮಾಂಕದಲ್ಲಿ ಟಿಮ್ ಡೇವಿಡ್ ಆಡಲಿದ್ದಾರೆ.
ಕಳೆದ ಆವೃತ್ತಿಯಲ್ಲಿ ಲಕ್ನೋ ಸೂಪರ್ಜೈಂಟ್ಸ್ ತಂಡದ ಪರ ಆಡಿದ್ದ ಸ್ಪಿನ್ ಆಲ್‌ರೌಂಡರ್ ಕೃನಾಲ್ ಪಾಂಡ್ಯ ಇದೇ ಮೊದಲ ಬಾರಿಗೆ ಆರ್‌ಸಿಬಿ ಜೆರ್ಸಿಯಲ್ಲಿ ಕಾಣಿಸಿಕೊಳ್ಳಲಿದ್ದು, ಅವರು 7ನೇ ಕ್ರಮಾಂದಲ್ಲಿ ಕಣಕ್ಕಿಳಿಯಲಿದ್ದಾರೆ. ಟೀಂ ಇಂಡಿಯಾ ವೇಗಿ ಭುವನೇಶ್ವರ್ ಕುಮಾರ್ 14 ವರ್ಷಗಳ ನಂತರ ಮತ್ತೆ ಆರ್‌ಸಿಬಿ ತಂಡವನ್ನು ಸೇರಿಕೊಂಡಿದ್ದಾರೆ. ಅವರು ತಂಡದ ಬೌಲಿಂಗ್ ದಾಳಿಯನ್ನು ಮುನ್ನಡೆಸುವುದರ ಜೊತೆಗೆ 8ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಲಿದ್ದಾರೆ. ಆಸ್ಟ್ರೇಲಿಯಾದ ವೇಗದ ಬೌಲರ್ ಜೋಶ್ ಹೇಜಲ್ವುಡ್ ತಂಡದ ಪ್ರಮುಖ ವಿದೇಶಿ ಬೌಲರ್ಗಳಲ್ಲಿ ಒಬ್ಬರಾಗಿದ್ದು, ಅವರು ಪ್ಲೇಯಿಂಗ್ 11 ರಲ್ಲಿ ಕಾಣಿಸಿಕೊಳ್ಳುವುದು ಖಚಿತ. ಹೀಗಾಗಿ ಅವರು 9ನೇ ಕ್ರಮಾಂಕದಲ್ಲಿ ಆಡಬಹುದು.
ಈ ಮೊದಲೇ ಆರ್‌ಸಿಬಿ ತಂಡದಲ್ಲಿರುವ ಭಾರತದ ಯುವ ವೇಗದ ಬೌಲರ್ ಯಶ್ ದಯಾಳ್ ತಂಡದಲ್ಲಿ ಆಡುವುದು ಖಚಿತವಾಗಿದ್ದು, ಅವರು 10ನೇ ಕ್ರಮಾಂಕದಲ್ಲಿ ಆಡಬಹುದು. 11ನೇ ಆಟಗಾರನಾಗಿ ಸುಯೇಶ್ ಶರ್ಮಾ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಕಳೆದ ಬಾರಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪರ ಆಡಿದ್ದ ಸುಯೇಶ್ ತಮ್ಮ ಗೂಗ್ಲಿ ಸ್ಪಿನ್ ದಾಳಿಯ ಮೂಲಕವೇ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು.

ರಿಟೈನ್ ಆದ ಆಟಗಾರರು
1 ವಿರಾಟ್ ಕೊಹ್ಲಿ(21 ಕೋಟಿ ರೂಪಾಯಿ)
2 ರಜತ್ ಪಾಟೀದಾರ್ (11 ಕೋಟಿ ರೂಪಾಯಿ)
3 ಯಶ್ ದಯಾಳ್ (5 ಕೋಟಿ ರೂಪಾಯಿ)
ಹರಾಜಿನಲ್ಲಿ ಖರೀದಿ ಆದವರು
1 ಜೋಶ್ ಹೇಝಲ್ ವುಡ್- 12.50 ಕೋಟಿ ರೂಪಾಯಿ
2 ಫಿಲ್ ಸಾಲ್ಟ್ – 11.50 ಕೋಟಿ ರೂಪಾಯಿ
3 ಜಿತೇಶ್ ಶರ್ಮಾ 11 ಕೋಟಿ ರೂಪಾಯಿ
4 ಲಿಯಮ್ ಲಿವಿಂಗ್ ಸ್ಟೋನ್ 8.75 ಕೋಟಿ ರೂಪಾಯಿ
5 ರಸಿಕ್ ಧರ್ – 6 ಕೋಟಿ ರೂಪಾಯಿ
6 ಸುಯೇಶ್ ಶರ್ಮಾ 2.2 ಕೋಟಿ ರೂಪಾಯಿ
7 ಕೃನಾಲ್ ಪಾಂಡ್ಯ -5.76 ಕೋಟಿ ರೂಪಾಯಿ
8 ಭುವನೇಶ್ವರ್ ಕುಮಾರ್ – 10 ಕೋಟಿ ರೂಪಾಯಿ
9 ಸ್ವಪ್ನಿಲ್ ಸಿಂಗ್ – 50 ಲಕ್ಷ ರೂಪಾಯಿ
10 ಟಿಂ ಡೇವಿಡ್ – 3 ಕೋಟಿ ರೂಪಾಯಿ
11 ನುವಾನ್ ತುಷಾರಾ – 1.6 ಕೋಟಿ ರುಪಾಯಿ
12 ರೋಮಾರಿಯೋ ಶೆಫರ್ಡ್ – 1.5 ಕೋಟಿ ರೂಪಾಯಿ
13 ಮನೋಜ್ ಭಾಂಡಗೆ- 30 ಲಕ್ಷ ರೂಪಾಯಿ
14 ಜಾಕೋಬ್ ಬೆಥೆಲ್ – 2.6 ಕೋಟಿ ರೂಪಾಯಿ
15 ದೇವದತ್ ಪಡಿಕ್ಕಲ್- 2 ಕೋಟಿ ರೂಪಾಯಿ
16 ಸ್ವಸ್ತಿಕ್ ಚಿಕಾರ- 30 ಲಕ್ಷ ರೂಪಾಯಿ
17 ಲುಂಗಿ ಎನ್ ಗಿಡಿ- 1 ಕೋಟಿ ರೂಪಾಯಿ
18 ಮೋಹಿತ್ ರಾಠಿ- 30 ಲಕ್ಷ ರುಪಾಯಿ
19 ಅಭಿನಂದನ್ ಸಿಂಗ್ -30 ಲಕ್ಷ ರುಪಾಯಿ
With out Karnataka star cricketers, they will be never reach qualify round. Tukali RCB management.