ನಬಾರ್ಡ್ ಸಾಲ ನಿರಾಕರಣೆ | ರೈತರನ್ನು ಸಾಲವೆಂಬ ಶೂಲಕ್ಕೇರಿಸಿದ್ದು ಸರ್ಕಾರಗಳಲ್ಲವೇ?

Date:

Advertisements
ನಬಾರ್ಡ್ ಸಾಲ ನಿರಾಕರಿಸುವುದು- ವಾಣಿಜ್ಯ ಬ್ಯಾಂಕ್‌ಗಳು ಮತ್ತು ಖಾಸಗಿ ಹಣಕಾಸು ಲೇವಾದೇವಿದಾರರತ್ತ ರೈತರನ್ನು ಬಲವಂತವಾಗಿ ಸರ್ಕಾರಗಳೇ ದೂಡಿದಂತಲ್ಲವೇ? ಹೆಚ್ಚಿನ ಬಡ್ಡಿದರವೆಂಬ ಕುಣಿಕೆಗೆ ರೈತರನ್ನು ಸಿಲುಕಿಸಿ, ಆತ್ಮಹತ್ಯೆಯತ್ತ ನೂಕಿದಂತಲ್ಲವೇ? ರೈತರ ಸಾವಿಗೆ ಸರ್ಕಾರವೇ ಹೊಣೆಯಲ್ಲವೇ?

‘ನಬಾರ್ಡ್‌ನಿಂದ ರಾಜ್ಯಕ್ಕೆ ಕಳೆದ ವರ್ಷ 5,600 ಕೋಟಿ ರೂ.ಗಳನ್ನು ಅಲ್ಪಾವಧಿ ಸಾಲ ನೀಡಿದ್ದರು, ಈ ವರ್ಷ 2,340 ಕೊಟಿ ರೂ.ಗಳನ್ನು ನೀಡಿದ್ದಾರೆ. 3,220 ಕೋಟಿ ರೂ.ಗಳನ್ನು ಕಡಿತಗೊಳಿಸಲಾಗಿದೆ’ ಎಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿದರು. 2024-25ನೇ ಸಾಲಿನಲ್ಲಿ ಕರ್ನಾಟಕ ಸರ್ಕಾರ 35 ಲಕ್ಷ ರೈತರಿಗೆ ರೂ. 25 ಸಾವಿರ ಕೋಟಿ ಅಲ್ಪಾವಧಿ ಕೃಷಿ ಸಾಲ ವಿತರಿಸುವ ಗುರಿಯನ್ನು ಹೊಂದಿದೆ. ಹಾಗಾಗಿ ರೂ. 9,162 ಕೋಟಿ ಕೃಷಿ ಸಾಲ ಮಿತಿಗೆ ಅನುಮೋದನೆ ನೀಡುವಂತೆ ಮನವಿ ಸಲ್ಲಿಸಿದರು.

ಆದರೆ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ‘ನಬಾರ್ಡ್‌ನಿಂದ ರಿಯಾಯಿತಿ ಬಡ್ಡಿದರದಲ್ಲಿ ನೀಡಲಾಗುವ ಅಲ್ಪಾವಧಿ ಕೃಷಿ ಸಾಲದ ಮಿತಿಯನ್ನು ಹೆಚ್ಚಿಸಲು ಸಾಧ್ಯವಿಲ್ಲ’ ಎಂದು ರಾಜ್ಯದ ಮನವಿಯನ್ನು ತಿರಸ್ಕರಿಸಿದರು.

ಅಷ್ಟೇ ಅಲ್ಲ, ‘ರಾಷ್ಟ್ರೀಕೃತ ಬ್ಯಾಂಕ್‌ಗಳು ಜನರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುತ್ತಿವೆ. ಹೀಗಾಗಿ, ನಬಾರ್ಡ್‌ ಮೂಲಕ ನೀಡುತ್ತಿರುವ ಕೃಷಿ ಸಾಲದ ಮೊತ್ತವನ್ನು ಕಡಿತಗೊಳಿಸಲಾಗಿದೆ. ಜತೆಗೆ, ಎಲ್ಲ ರಾಜ್ಯಗಳ ಮೊತ್ತವನ್ನು ಕಡಿತಗೊಳಿಸಲಾಗಿದೆ. ಕರ್ನಾಟಕದ ಮೊತ್ತ ಮಾತ್ರ ಕಡಿತವಾಗಿದ್ದಲ್ಲ’ ಎಂದು ನಿರ್ಮಲಾ ಸಮಜಾಯಿಷಿ ನೀಡಿದರು.

Advertisements

ಇದಕ್ಕೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯನವರು, ‘ನಬಾರ್ಡ್ ನೀಡುವ ಸಾಲದ ಮೊತ್ತದಲ್ಲಿ ಅರ್ಧದಷ್ಟು ಕಡಿತಗೊಳಿಸಿರುವುದರಿಂದ ನಾವು ವಾಣಿಜ್ಯ ಬ್ಯಾಂಕುಗಳಿಗೆ ಹೋಗಬೇಕಾಗುತ್ತದೆ. ವಾಣಿಜ್ಯ ಬ್ಯಾಂಕುಗಳಲ್ಲಿ ಶೇ. 10 ರಿಂದ 12 ಬಡ್ಡಿ ಹಾಕುತ್ತಾರೆ. ಇದು ರೈತರಿಗೆ ಮಾಡುತ್ತಿರುವ ಅನ್ಯಾಯವಲ್ಲವೇ? ನಬಾರ್ಡ್ ಕೇಂದ್ರ ಸರ್ಕಾರದ ಕೆಳಗೆ ಕಾರ್ಯನಿರ್ವಹಿಸುತ್ತಿದೆ. ಕೇಂದ್ರ ಸಚಿವರೇ ಅಸಹಾಯಕತೆಯನು ವ್ಯಕ್ತಪಡಿಸಿದರೆ ಹೇಗೆ’ ಎಂದೂ ಪ್ರಶ್ನಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪ್ರಶ್ನೆಯಲ್ಲಿ ಕರ್ನಾಟಕದ ಕೃಷಿಕರ ಕಾಳಜಿ ಅಡಗಿದೆ; ನಿರ್ಮಲಾ ಸೀತಾರಾಮನ್ ಅವರ ಮಾತಿನಲ್ಲಿ ಎಲ್ಲ ರಾಜ್ಯಗಳನ್ನು ಸಮಾನವಾಗಿ ನೋಡುವ ಸಮಷ್ಟಿಪ್ರಜ್ಞೆ ಇದೆ, ಎಂದುಕೊಳ್ಳಬಹುದು. ಅವರೂ ಸರಿ, ಇವರೂ ಸರಿ. ಹಾಗಾದರೆ, ಸರಿ ಇಲ್ಲದವರು ಯಾರು? ಇವರನ್ನು ಆರಿಸಿ ಕಳುಹಿಸಿದ ಮತದಾರರೇ?

ಇದನ್ನು ಓದಿದ್ದೀರಾ?: ಜವಹರಲಾಲ್ ನೆಹರೂ ಕಾಂಗ್ರೆಸ್ ಪಕ್ಷಕ್ಕೆ ಬೇಡವಾದರೇ?

ದೇಶದ ಆರ್ಥಿಕಾಭಿವೃದ್ಧಿಯಲ್ಲಿ ಬ್ಯಾಂಕುಗಳು ಹಾಗೂ ಹಣಕಾಸು ಸಂಸ್ಥೆಗಳ ಪಾತ್ರ ಬಹಳ ಮುಖ್ಯ. ಆದರೆ ಬ್ಯಾಂಕ್‌ಗಳು ಸಣ್ಣ ಉದ್ಯಮಗಳು, ಸ್ವಯಂ ಉದ್ಯೋಗಿಗಳು ಮತ್ತು ರೈತರಿಗೆ ಸಾಲ ಸೌಲಭ್ಯ ನೀಡಲು ಸಿದ್ಧವಿರುವುದಿಲ್ಲ. ಸಾಮಾನ್ಯವಾಗಿ ಇವರು ಸಾಲ ಸಂಸ್ಥೆಗಳು ಅಥವಾ ಸ್ಥಳೀಯ ಲೇವಾದೇವಿದಾರರಂತಹ ಅನೌಪಚಾರಿಕ ಹಣಕಾಸು ಸಂಸ್ಥೆಗಳನ್ನು ಅವಲಂಬಿಸಿದ್ದಾರೆ. ಅನೌಪಚಾರಿಕ ಮೂಲಗಳ ಮೇಲೆ ಅತಿಯಾದ ಹಣಕಾಸಿನ ಅವಲಂಬನೆಯು ಅಭಿವೃದ್ಧಿಗೆ ಅಡ್ಡಿಯಾಗುತ್ತದೆ. ಹೀಗೆಂದು ಸರ್ಕಾರವೇ ಹೇಳುತ್ತದೆ. ಅದರ ಪರಿಹಾರಕ್ಕೆ ಸಹಕಾರ ಕ್ಷೇತ್ರದತ್ತ ನೋಟ ಹರಿಸುತ್ತದೆ.

ಎಲ್ಲರಿಗಾಗಿ ನಾನು, ನನಗಾಗಿ ಎಲ್ಲರೂ -ಇದು ಸಹಕಾರ ತತ್ವದ ಮುಖ್ಯ ಸಂದೇಶ. ಇಂತಹ ಉದಾತ್ತ ತತ್ವದ ಬುನಾದಿಯ ಮೇಲೆ ಕಾರ್ಯಾಚರಿಸುವುದು ಸಹಕಾರ ಕ್ಷೇತ್ರ. ದೇಶದಲ್ಲೇ ಮೊಟ್ಟಮೊದಲ ಬಾರಿಗೆ, 1904ರಲ್ಲಿ ಕೃಷಿ ಪತ್ತಿನ ಸಹಕಾರ ಕ್ಷೇತ್ರಕ್ಕೆ ಬುನಾದಿ ಹಾಕಿದ್ದು ಕರ್ನಾಟಕ ರಾಜ್ಯ. ಗದಗ ಜಿಲ್ಲೆಯ ಎಸ್‌.ಎಸ್‌. ಪಾಟೀಲರು ಅದಕ್ಕೆ ಕಾರಣಕರ್ತರು. ಈಗ ಗದಗ ಜಿಲ್ಲೆಯೊಂದರಲ್ಲಿಯೇ ವ್ಯವಸ್ಥಿತವಾಗಿ ನಡೆಯುತ್ತಿರುವ ಹತ್ತು ಸಹಕಾರಿ ಬ್ಯಾಂಕ್‌ಗಳಿವೆ.

ಪರಸ್ಪರ ಸಹಕಾರ, ನಂಬಿಕೆಯ ತತ್ವಗಳ ಬುನಾದಿಯ ಮೇಲೆ ಅಸ್ತಿತ್ವಕ್ಕೆ ಬಂದ ಸಹಕಾರ ಸಂಘಗಳು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು (ವ್ಯವಸಾಯ ಸೇವಾ ಸಹಕಾರ ಸಂಘಗಳು) ಡಿಸಿಸಿ ಬ್ಯಾಂಕ್‌ನ ತಾಯಿ ಬೇರು. ಗ್ರಾಮೀಣ ಮಟ್ಟದಲ್ಲಿ ಕೃಷಿಕರು ಕಲೆತು ಷೇರು ಹಣ ಹೂಡುವ ಮೂಲಕ ಸಹಕಾರ ಸಂಘಗಳನ್ನು ರಚಿಸಿಕೊಳ್ಳುತ್ತಾರೆ. ಕೃಷಿಗೆ ಬೇಕಾದ ಸಾಲ, ಸೌಲಭ್ಯಗಳನ್ನು ನೇರವಾಗಿ ರೈತರಿಗೆ ವಿತರಿಸುವ ಕೆಲಸವನ್ನು ಈ ಸಹಕಾರ ಸಂಘಗಳು ಮಾಡುತ್ತವೆ. ಈ ಸಂಘಗಳ ವ್ಯವಹಾರ ನೋಡಿಕೊಳ್ಳಲು ಪ್ರತಿ ಸಂಘಕ್ಕೂ ಒಬ್ಬ ಕಾರ್ಯದರ್ಶಿ ಇರುತ್ತಾರೆ.

ಇಂತಹ ಎಲ್ಲ ಪ್ರಾಥಮಿಕ ಸಹಕಾರ ಸಂಘಗಳ ಸದಸ್ಯತ್ವದ ಒಟ್ಟು ರೂಪವೇ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌(ಡಿಸಿಸಿ ಬ್ಯಾಂಕ್). ಪ್ರಾಥಮಿಕ ಸಂಘಗಳು ಡಿಸಿಸಿ ಬ್ಯಾಂಕ್‌ಗೆ ನಿರ್ದೇಶಕರನ್ನು ಆಯ್ಕೆ ಮಾಡುತ್ತವೆ. ಆ ನಿರ್ದೇಶಕರಲ್ಲೇ ಒಬ್ಬ ಅಧ್ಯಕ್ಷ, ಉಪಾಧ್ಯಕ್ಷನನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಕರ್ನಾಟಕ ಸಹಕಾರ ಸೇವೆಯ ಅಧಿಕಾರಿ ಈ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕರಾಗಿರುತ್ತಾರೆ. ಇದರ ರಚನೆ, ನೋಂದಣಿ ಮತ್ತು ಲೆಕ್ಕ ತನಿಖೆಗೆ ರಾಜ್ಯ ಮಟ್ಟದಲ್ಲಿ ರಿಜಿಸ್ಟ್ರಾರ್ ಆಫ್ ಕೋ-ಆಪರೇಟಿವ್ ಸೊಸೈಟೀಸ್ ಇದ್ದಾರೆ. ಸರ್ಕಾರದ ಮಟ್ಟದಲ್ಲಿ ಸಹಕಾರ ಖಾತೆ ನಿರ್ವಹಿಸಲು ಸಹಕಾರ ಸಚಿವರು ಇರುತ್ತಾರೆ.

ಸದ್ಯಕ್ಕೆ ರಾಜ್ಯದಲ್ಲಿ ಒಟ್ಟು 21 ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ಗಳಿವೆ. ರಾಜ್ಯದ ಎಲ್ಲ ಡಿಸಿಸಿ ಬ್ಯಾಂಕ್‌ಗಳು ಲಾಭದಾಯಕವಾಗಿಲ್ಲ. ಶಿವಮೊಗ್ಗ, ದಕ್ಷಿಣ ಕನ್ನಡ, ಬೆಳಗಾವಿ, ಬಾಗಲಕೋಟೆ, ಉತ್ತರ ಕನ್ನಡ, ವಿಜಯಪುರ, ಬಳ್ಳಾರಿ ಸೇರಿದಂತೆ ಕೆಲ ಡಿಸಿಸಿ ಬ್ಯಾಂಕ್‌ಗಳು ಸಾಕಷ್ಟು ಪ್ರಗತಿ ಸಾಧಿಸಿವೆ. ಧಾರವಾಡ ಹಾಗೂ ಕೋಲಾರ ಡಿಸಿಸಿ ಬ್ಯಾಂಕ್‌ಗಳು ನಷ್ಟದ ಹಾದಿಯಲ್ಲಿ ಸಾಗಿ, ಸದಸ್ಯರಿಗೆ ಷೇರು ಹಿಂದಿರುಗಿಸಲೂ ಆಗದ ಸ್ಥಿತಿಗೆ ತಲುಪಿವೆ.

ಎಲ್ಲ ಡಿಸಿಸಿ ಬ್ಯಾಂಕ್‌ಗಳ ಸದಸ್ಯತ್ವ ಹೊಂದಿರುವ ರಾಜ್ಯ ಸಂಸ್ಥೆ ಅಪೆಕ್ಸ್‌ ಬ್ಯಾಂಕ್‌. ಜಿಲ್ಲಾ ಬ್ಯಾಂಕ್‌ಗಳು ಸಂಗ್ರಹಿಸುವ ಠೇವಣಿಯಲ್ಲಿ ಶೇ. 30ರಷ್ಟು ಹಣವನ್ನು ಅಪೆಕ್ಸ್‌ ಬ್ಯಾಂಕ್‌ನಲ್ಲಿ ಮೀಸಲಿಡಲಾಗುತ್ತದೆ. ಅಪೆಕ್ಸ್‌ ಬ್ಯಾಂಕ್‌ ತನ್ನ ಮೂಲನಿಧಿ ಹಾಗೂ ನಬಾರ್ಡ್‌ ನೀಡುವ ಹಣವನ್ನು ಡಿಸಿಸಿ ಬ್ಯಾಂಕ್‌ಗಳಿಗೆ ಹಂಚಿಕೆ ಮಾಡುತ್ತದೆ. ಡಿಸಿಸಿ ಬ್ಯಾಂಕ್‌ಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ರೈತರಿಗೆ ಸಾಲ ನೀಡುತ್ತವೆ. ರಾಜ್ಯದಲ್ಲಿನ 4,848 ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಡಿಸಿಸಿ ಬ್ಯಾಂಕ್‌ಗಳ ಮೂಲಕ ಹಣ ವಿತರಿಸಲಾಗುತ್ತದೆ. 70 ಸಾವಿರಕ್ಕೂ ಹೆಚ್ಚು ಸ್ವಸಹಾಯ ಗುಂಪುಗಳು ಸಹಕಾರ ಕ್ಷೇತ್ರದ ವ್ಯಾಪ್ತಿಯಲ್ಲಿ ಇದ್ದು, ನೂರಾರು ಕೋಟಿ ಹಣಕಾಸಿನ ವಹಿವಾಟು ನಡೆಸುತ್ತಿವೆ.

ಕೃಷಿ ಆಧಾರದ ಸಹಕಾರ ಬ್ಯಾಂಕ್‌ಗಳಲ್ಲದೇ ರಾಜ್ಯದಲ್ಲಿ ನೂರಾರು ವಿವಿಧ ರೂಪಗಳ ಸಹಕಾರ ಬ್ಯಾಂಕ್‌ಗಳು ಅಸ್ತಿತ್ವದಲ್ಲಿವೆ. ಹಾಲು ಉತ್ಪಾದನೆ, ಗೃಹ ನಿರ್ಮಾಣ, ಕೈಗಾರಿಕೆ, ಸ್ಪಿನ್ನಿಂಗ್‌ ಮಿಲ್‌, ಸಕ್ಕರೆ ಕಾರ್ಖಾನೆ, ಮಾರುಕಟ್ಟೆ, ನೀರಾವರಿ, ಕೂಡುಬೇಸಾಯ, ಸಂಸ್ಕರಣ, ನೌಕರರು, ಬಳಕೆದಾರರು, ನಗರ ಸಹಕಾರ ಸಂಸ್ಥೆಗಳು ಸೇರಿದಂತೆ 38,430 ಸಹಕಾರ ಸಂಸ್ಥೆಗಳು, ಬ್ಯಾಂಕ್‌ಗಳು ಅಸ್ತಿತ್ವದಲ್ಲಿವೆ. ಇವುಗಳಲ್ಲಿ 2,364 ಸಂಘಗಳು ಬಾಗಿಲು ಮುಚ್ಚಿವೆ. 2,388 ಅವನತಿಯ ಹಾದಿಯಲ್ಲಿವೆ.

ಗ್ರಾಮೀಣ ಪ್ರದೇಶದ ಸಹಕಾರ ಸಂಘಗಳಿಗೆ ಹೋಲಿಸಿದರೆ, ನಗರ ಪ್ರದೇಶದ ಸಂಘಗಳು ಹೆಚ್ಚು ಯಶಸ್ವಿಯಾಗಿವೆ. ರಾಜ್ಯದಲ್ಲಿ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಸಹಕಾರ ಸಂಸ್ಥೆಗಳು ಹೆಚ್ಚಿನ ಯಶಸ್ಸು ಕಂಡಿವೆ. ಸಹಕಾರ ಸಕ್ಕರೆ ಕಾರ್ಖಾನೆಗಳು ಮಾತ್ರ ಬೆಳಗಾವಿ ಹೊರತುಪಡಿಸಿ ಉಳಿದೆಡೆ ಯಶಸ್ಸು ಕಂಡಿಲ್ಲ.

ಸಹಕಾರ ಕ್ಷೇತ್ರದಲ್ಲಿ ಅಧಿಕಾರದ ಕುರ್ಚಿ ಮೇಲೆ ಕೂತವರು ಪ್ರತಿ ಕ್ಷಣವೂ ಆ ಸಂಸ್ಥೆಯ ಅಭಿವೃದ್ಧಿಯ ಬಗ್ಗೆ ಚಿಂತಿಸಬೇಕು. ಎಂತಹ ಸಂದರ್ಭದಲ್ಲೂ ಸ್ವಾರ್ಥಕ್ಕೆ ಅವಕಾಶ ನೀಡಬಾರದು. ಸಮಗ್ರ ದೃಷ್ಟಿಕೋನ ಮತ್ತು ಇಚ್ಛಾಶಕ್ತಿ ಹೊಂದಿರಬೇಕು. ನಂಬಿಕೆ ವಿಶ್ವಾಸದ ಮೇಲೆ ಎಲ್ಲ ಸಹಕಾರ ಸಂಸ್ಥೆಗಳ ಭವಿಷ್ಯ ನಿಂತಿರುತ್ತದೆ. ನಂಬಿಕೆಯೇ ಸಹಕಾರ ಕ್ಷೇತ್ರದ ಬುನಾದಿ. ಅದನ್ನು ಹಾಳು ಮಾಡಿದರೆ ಆ ಸಂಸ್ಥೆ ಅವಸಾನದತ್ತ ಸಾಗಿತೆಂದೇ ಅರ್ಥ.

ಸದ್ಯದ ಸಹಕಾರ ಕ್ಷೇತ್ರದ ಸ್ಥಿತಿ ಹೇಗಿದೆ? ಹಣದ ಹರಿವಿದೆ. ರಾಜಕೀಯ ಪ್ರವೇಶ ಪಡೆದಿದೆ. ಪಕ್ಷ ರಾಜಕಾರಣ ಮೇಳೈಸಿದೆ. ಜಾತಿಯಲ್ಲಿ ಬಲಾಢ್ಯರು, ಬಹುಸಂಖ್ಯಾತರ ಕೈಯಲ್ಲಿ ಸಂಘಗಳು, ಸೊಸೈಟಿಗಳು, ಬ್ಯಾಂಕ್‌ಗಳಿವೆ. ಕಾರ್ಯದರ್ಶಿ ಮತ್ತು ನಿರ್ದೇಶಕರ ಸ್ಥಾನಗಳು ಬಲಿಷ್ಠರ ಕೈಯಲ್ಲಿವೆ. ಅದರಲ್ಲೂ ಡಿಸಿಸಿ ಬ್ಯಾಂಕ್ ನಿರ್ದೇಶಕರು ಸ್ಥಳೀಯ ಶಾಸಕರೇ ಆಗಿರುತ್ತಾರೆ. ಅವರ ಮಾತು ಕೇಳುವವರೇ ಕಾರ್ಯದರ್ಶಿಯಾಗಿರುತ್ತಾರೆ. ಅವರಿಗೆ ಮತ ನೀಡಿ ಗೆಲ್ಲಿಸಿದ ಪಕ್ಷದ ಕಾರ್ಯಕರ್ತರು ಮತ್ತು ಪುಢಾರಿಗಳೇ ಹೆಚ್ಚಿನ ಫಲಾನುಭವಿಗಳಾಗಿರುತ್ತಾರೆ.

ಇದನ್ನು ಓದಿದ್ದೀರಾ?: ಏನಿದು ಅದಾನಿ ಲಂಚದ ಹಗರಣ: ಇಲ್ಲಿದೆ ಸಂಪೂರ್ಣ ಮಾಹಿತಿ

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮಾತುಗಳಿಗೇ ಮರುಳುವುದಾದರೆ, ‘2023-24ನೇ ಹಣಕಾಸು ವರ್ಷದಲ್ಲಿ ಅಲ್ಪಾವಧಿ ಸಹಕಾರಿ ಸಾಲ ವ್ಯವಸ್ಥೆಯಡಿ ಕರ್ನಾಟಕದಲ್ಲಿ ರೂ. 22,902 ಕೋಟಿ ಅಲ್ಪಾವಧಿ ಕೃಷಿ ಸಾಲವನ್ನು ವಿತರಿಸಲಾಗಿದೆ’ ಎಂದಿದ್ದಾರೆ. ಆದರೆ, ಈ ಸಾಲ ಸೌಲಭ್ಯ ಎಷ್ಟು ರೈತರ ಬದುಕನ್ನು ಬದಲಿಸಿದೆ, ಯಾರಿಗೆಲ್ಲ ಸಹಾಯವಾಗಿದೆ, ರಾಜ್ಯದ ಕೃಷಿ ವಲಯ ಅಭಿವೃದ್ಧಿಯಾಗಿದೆಯೇ ಎಂಬ ಪ್ರಶ್ನೆ ಎದುರಾಗುತ್ತದೆ. ಸರ್ಕಾರ ಈ ಬಗ್ಗೆ ಗಮನ ಹರಿಸಿದೆಯೇ?

ಈ ಬಗ್ಗೆ ಹುಬ್ಬಳ್ಳಿಯ ರೈತ ನಾಯಕ ಸಿದ್ದು ತೇಜಿಯವರನ್ನು ಮಾತಿಗೆಳೆದರೆ, ‘ಪತ್ತಿನ ಸಹಕಾರ ಸಂಘಗಳು, ಡಿಸಿಸಿ ಬ್ಯಾಂಕ್‌ಗಳು ರೈತರಿಗೆ ಸಾಲ ನೀಡ್ತವೆ. ನೀಡದಿದ್ರೆ ನಡೀಬೇಕಲ್ಲ. ಆದರೆ ಎಲ್ರಿಗೂ ಅಲ್ಲ. ಪಕ್ಷದ ಕಾರ್ಯಕರ್ತರಿಗೆ, ಶಾಸಕರ ಹಿಂಬಾಲಕರಿಗೆ ಹೆಚ್ಚಿನ ಸೌಲಭ್ಯ ಸಿಗ್ತದೆ. ಫೈಲ್ ಚೆನ್ನಾಗಿ ರೆಡಿ ಮಾಡಿವ ಬುದ್ಧಿವಂತ್ರಿಗೆ ಸಾಲ ಸಿಗ್ತದೆ. ಬಡ, ಅನಕ್ಷರಸ್ಥ ರೈತ್ರಿಗೆ ಎಲ್ ತಿಳಿಬೇಕ್ರಿ ಇದೆಲ್ಲ. ಸರಿಯಾದ ಪಹಣಿ, ಪಟ್ಟೆಗಳೇ ಇರಲ್ಲ. ಅವರಿಗೆ ದೊಡ್ಡ ಮೊತ್ತದ ಸಾಲವೂ ಸಿಗುವುದಿಲ್ಲ. ಇನ್ನಾ… ಸರ್ಕಾರಗಳು ಬದಲಾದಾಗ, ಕೆಲವೊಂದು ಸಲ ಬಡ್ಡಿ ಮನ್ನಾ, ಸಾಲ ಮನ್ನಾ ಮಾಡ್ತವೆ. ಆ ಸೌಲಭ್ಯಗಳಿಂದಲೂ ಸಣ್ಣ-ಬಡ ರೈತರು ವಂಚಿತರಾಗ್ತರೆ. ಇವತ್ತು ರೈತರನ್ನು ಉದ್ಧಾರ ಮಾಡ್ತೀವಿ ಅನ್ನುವ ಬ್ಯಾಂಕ್‌ಗಳು ಬಲಿಷ್ಠ ಜಾತಿಗಳ ಕೈಯಲ್ಲಿವೆ. ಅಲ್ಲಿ ಅವರದ್ದೇ ದರ್ಬಾರು, ಕಾರುಬಾರು ಎಲ್ಲ’ ಎಂದರು.

5 8

ತರಕಾರಿ ಬೆಳೆಯುವ ಕೋಲಾರದ ಮುನಿಸ್ವಾಮಿಯವರನ್ನು ಮಾತಿಗೆಳೆದರೆ, ‘ನಮ್ಮ ದಾಖಲೆಗಳನ್ನು ಈಸ್ಕೊಂಡು ಸೈನ್ ಮಾಡಿಸ್ಕಂಡು 25 ಸಾವಿರ ಸಾಲ ಕೊಟ್ರು. ಒಳ್ಳೆ ಬೆಳೆ ಬಂತು ಸಾಲನೂ ತೀರ್ತು. ಆಮ್ಯಾಲೆ ಗೊತ್ತಾಗಿದ್ದೇನೆಂದರೆ, ನನಗೆ ಸ್ಯಾಂಕ್ಷನ್ ಆಗಿದ್ದು 1 ಲಕ್ಷ ಸಾಲ. ಕೈಗೆ ಕೊಟ್ಟಿದ್ದು 25 ಸಾವಿರ. ಮಿಕ್ಕ 75 ಸಾವಿರ, ಸೆಕ್ರೆಟರಿ ಎತ್ಕಂಡಿದ್ದ. ನನ್ ಥರಾನೆ ಸುಮಾರು ಜನರ ಸಾಲ ಎತ್ತಿದ್ದ. ಪ್ರೈವೇಟಾಗಿ ಲೇವಾದೇವಿ ಮಾಡ್ತಿದ್ದ. ಮೀಟರ್ ಬಡ್ಡಿ ಜಡೀತಿದ್ದ. ನಾನು ಬ್ಯಾಂಕಿಗೆ ಕಟ್ಟೋ ಟೇಮಿಗೆ ಸರಿಯಾಗಿ, ಅವನು ಕಟ್ತಿದ್ದ. ಯಾರ್‍ಗೆ ಹೇಳದು?’ ಎಂದು ತಮ್ಮ ಅಸಹಾಯಕತೆ ತೋಡಿಕೊಂಡರು.  

ಈಗ ಮತ್ತೆ ನಾವು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಮಾತಿಗೆ ಮರಳುವುದಾದರೆ, ‘ರಾಷ್ಟ್ರೀಕೃತ ಬ್ಯಾಂಕ್‌ಗಳು ಜನರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುತ್ತಿವೆ. ಹೀಗಾಗಿ, ನಬಾರ್ಡ್‌ ಮೂಲಕ ನೀಡುತ್ತಿರುವ ಕೃಷಿ ಸಾಲದ ಮೊತ್ತವನ್ನು ಕಡಿತಗೊಳಿಸಲಾಗಿದೆ’ ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ‘ವಾಣಿಜ್ಯ ಬ್ಯಾಂಕುಗಳಲ್ಲಿ ಶೆ. 10 ರಿಂದ 12 ಬಡ್ಡಿ ಹಾಕುತ್ತಾರೆ. ಇದು ರೈತರಿಗೆ ಮಾಡುತ್ತಿರುವ ಅನ್ಯಾಯವಲ್ಲವೇ?’ ಎಂದಿದ್ದಾರೆ.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ನಬಾರ್ಡ್ ಸಾಲ ಖೋತಾ ಮಾಡಿದ ಮೋದಿ ಸರ್ಕಾರ ರೈತಪರವೇ?

ಅಂದರೆ, ರೈತರು ದೇಶದ ಬೆನ್ನೆಲುಬು ಎನ್ನುವ ಸರ್ಕಾರಗಳೇ ಮುಂದೆ ನಿಂತು, ಕೃಷಿಕರಿಗೆ ನೀಡುತ್ತಿರುವ ಸಾಲ ಮತ್ತು ಸಬ್ಸಿಡಿಗಳು ಕೈಗೆಟುಕದಂತೆ ಮಾಡುತ್ತಿವೆ. ಆ ಮೂಲಕ ಅವರನ್ನು ಸಾಲಕ್ಕಾಗಿ ಬಲವಂತವಾಗಿ ವಾಣಿಜ್ಯ ಬ್ಯಾಂಕ್‌ಗಳತ್ತ ನೂಕುತ್ತಿವೆ. ವಾಣಿಜ್ಯ ಬ್ಯಾಂಕಿನವರು ರೈತರನ್ನು ಹತ್ತಾರು ಸಲ ಅಲೆದಾಡಿಸಿ, ನೂರಾರು ದಾಖಲೆ ಪತ್ರಗಳನ್ನು ಅಡಮಾನವಾಗಿಟ್ಟುಕೊಂಡು, ಶೇ. 10-12 ಬಡ್ಡಿದರದಲ್ಲಿ ಸಾಲ ಕೊಡುತ್ತಾರೆ. ದಾಖಲೆಗಳನ್ನು ಒದಗಿಸಲಾರದ ಅನಕ್ಷರಸ್ಥ ರೈತರು, ನೇರವಾಗಿ ತನ್ನೂರಿನ ಶ್ರೀಮಂತರನ್ನು, ಲೇವಾದೇವಿದಾರರನ್ನು ಆಶ್ರಯಿಸುತ್ತಾರೆ. ಬೆಳೆಯನ್ನೇ ಅಡ ಇಡುತ್ತಾರೆ. ಅವರು ಹೆಚ್ಚಿನ ಬಡ್ಡಿದರ ವಿಧಿಸಿದರೂ ಅನಿವಾರ್ಯವಾಗಿ ಕೊರಳೊಡ್ಡುತ್ತಾರೆ.

ಸಾಲ ಪಡೆದ ರೈತನ ಇಡೀ ಕುಟುಂಬ ವರ್ಷವೆಲ್ಲ ಬೆವರು ಸುರಿಸಿ ಬೇಸಾಯ ಮಾಡಿ, ಇನ್ನೇನು ಉಣ್ಣಬೇಕು ಎನ್ನುವಾಗ ನೆರೆಯೋ, ಬರವೋ ಬಂದು ಅಪ್ಪಳಿಸುತ್ತದೆ. ಅಕಸ್ಮಾತ್ ಈ ನೆರೆ-ಬರದಿಂದ ತಪ್ಪಿಸಿಕೊಂಡು ಉತ್ತಮ ಬೆಳೆ ಬೆಳೆದರೆ, ಸರ್ಕಾರಗಳು ಸೂಕ್ತ ಸಂದರ್ಭದಲ್ಲಿ ಕನಿಷ್ಠ ಬೆಂಬಲ ಬಲೆ(ಎಂಎಸ್‌ಪಿ) ಕೊಟ್ಟು ಖರೀದಿಸದೆ ಸತಾಯಿಸುತ್ತವೆ. ಬೇಸತ್ತ ರೈತ ಮಾರುಕಟ್ಟೆಯತ್ತ ಹೆಜ್ಜೆ ಹಾಕಿದರೆ, ದಲ್ಲಾಲಿ ವ್ಯವಸ್ಥೆ ಬೆಲೆ ಇಳಿಸಿ, ರೈತರು ಉತ್ಪನ್ನಗಳನ್ನು ಬೀದಿಗೆ ಸುರಿದು ಹೋಗುವಂತೆ ನೋಡಿಕೊಳ್ಳುತ್ತದೆ.

ಹೀಗಿರುವಾಗ ರೈತ-ಕೃಷಿ ಕ್ಷೇತ್ರ ಅಭಿವೃದ್ಧಿ ಹೊಂದುವುದು ಹೇಗೆ? ನಬಾರ್ಡ್ ಸಾಲ ನಿರಾಕರಿಸುವುದು- ವಾಣಿಜ್ಯ ಬ್ಯಾಂಕ್‌ಗಳು ಮತ್ತು ಖಾಸಗಿ ಹಣಕಾಸು ಲೇವಾದೇವಿದಾರರತ್ತ ರೈತರನ್ನು ಬಲವಂತವಾಗಿ ಸರ್ಕಾರಗಳೇ ದೂಡಿದಂತಲ್ಲವೇ? ಹೆಚ್ಚಿನ ಬಡ್ಡಿದರವೆಂಬ ಕುಣಿಕೆಗೆ ರೈತರನ್ನು ಸಿಲುಕಿಸಿ, ಆತ್ಮಹತ್ಯೆಯತ್ತ ನೂಕಿದಂತಲ್ಲವೇ? ರೈತರ ಸಾವಿಗೆ ಸರ್ಕಾರವೇ ಹೊಣೆಯಲ್ಲವೇ?

Basavaraju Megalkeri
+ posts

ಲೇಖಕ, ಪತ್ರಕರ್ತ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಬಸವರಾಜು ಮೇಗಲಕೇರಿ
ಬಸವರಾಜು ಮೇಗಲಕೇರಿ
ಲೇಖಕ, ಪತ್ರಕರ್ತ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಂಸತ್ ಭವನದಲ್ಲಿ ಭದ್ರತಾ ವೈಫಲ್ಯ: ಗೋಡೆ ಹತ್ತಿ ಆವರಣ ಪ್ರವೇಶಿಸಿದ ಯುವಕ

ಸಂಸತ್ ಭವನದಲ್ಲಿ ಭದ್ರತಾ ವೈಫಲ್ಯ ಕಾಣಿಸಿಕೊಂಡಿದ್ದು ವ್ಯಕ್ತಿಯೋರ್ವ ಶುಕ್ರವಾರ ಬೆಳಿಗ್ಗೆ ಮರವನ್ನು...

ಸಿಬಿಐ ಅಧಿಕಾರಿಗಳಂತೆ ನಟಿಸಿ 2.3 ಕೋಟಿ ರೂ. ದೋಚಿದ್ದ ಗ್ಯಾಂಗ್: ಇಬ್ಬರ ಬಂಧನ

ಕೇಂದ್ರ ತನಿಖಾ ದಳ (ಸಿಬಿಐ) ಅಧಿಕಾರಿಗಳಂತೆ ನಟಿಸಿ ಉದ್ಯಮಿಯೊಬ್ಬರ ಕಚೇರಿಯಿಂದ ಗ್ಯಾಂಗ್...

ಬೀದಿ ನಾಯಿಗಳಿಗೆ ಲಸಿಕೆ ಹಾಕಿದ ನಂತರ ಅದೇ ಸ್ಥಳಕ್ಕೆ ತಂದು ಬಿಡಬೇಕು: ಸುಪ್ರೀಂ ಕೋರ್ಟ್‌

ಬೀದಿ ನಾಯಿಗಳಿಗೆ ಸಂಬಂಧಿಸಿದ್ದಂತೆ ಆಗಸ್ಟ್ 11ರ ಆದೇಶವನ್ನು ಮಾರ್ಪಡಿಸಿದ ಸುಪ್ರೀಂ...

ವಿವಾದಾತ್ಮಕ ಯೂಟ್ಯೂಬರ್ ಎಲ್ವಿಶ್ ಮನೆ ಮೇಲೆ ಗುಂಡಿನ ದಾಳಿ: ಎನ್‌ಕೌಂಟರ್ ಮಾಡಿ ಆರೋಪಿ ಬಂಧನ

ಬಲಪಂಥೀಯ, ವಿವಾದಾತ್ಮಕ ಯೂಟ್ಯೂಬರ್ ಮತ್ತು ಬಿಗ್ ಬಾಸ್ ವಿಜೇತ ಎಲ್ವಿಶ್ ಯಾದವ್‌...

Download Eedina App Android / iOS

X