ಉಡುಪಿ ಪೇಜಾವರ ಮಠದ ವಿಶ್ವತೀರ್ಥ ಸ್ವಾಮೀಜಿ(ಪೇಜಾವರ ಸ್ವಾಮಿ) ʼಸ್ವಾತಂತ್ರ್ಯ ಪೂರ್ವದಲ್ಲಿ ಭಾರತವು ಹಿಂದೂ ರಾಷ್ಟ್ರವಾಗಿತ್ತು. ಸ್ವಾತಂತ್ರ್ಯಾ ನಂತರ ಜಾತ್ಯತೀತ ರಾಷ್ಟ್ರವಾಗಿದೆ. ಈಗ ನಮ್ಮನ್ನು ಗೌರವಿಸುವ ಸಂವಿಧಾನ ಬರಬೇಕುʼ ಎಂದು ಹೇಳಿಕೆ ನೀಡಿರುವುದನ್ನು ಅಂಬೇಡ್ಕರ್ ಯುವಸೇನೆ ತಾಲೂಕು ಅಧ್ಯಕ್ಷ ಗೋಪಾಲ ಎಲ್ ನಾಟೇಕರ್ ಖಂಡಿಸಿದ್ದಾರೆ.
ಕಲಬುರಗಿ ನಗರದಲ್ಲಿ ಪತ್ರಿಕಾ ಹೇಳಿಕೆ ನೀಡಿರುವ ಅವರು “ಇಲ್ಲಿ ಅಗೌರವಕ್ಕೆ ಬಲಿಯಾಗಿರುವ ಹಿಂದೂಗಳು ಯಾರು? ಯಾವ ರೀತಿಯಾಗಿ ಅವರಿಗೆ ಅವಮಾನವಾಗಿದೆ. ಸಂವಿಧಾನದಲ್ಲಿ ಹಿಂದೂಗಳಿಗೆ ಅಗೌರವಿಸುವ ಅಂಶ ಯಾವುದಿದೆ. ಇಲ್ಲಿಯತನಕ ಯಾವ ಹಿಂದೂಗಳು ತಮ್ಮ ಗೌರವಕ್ಕೆ ಚ್ಯುತಿಯಾಗಿದೆಯೆಂದು ಯಾವ ಕೋರ್ಟ್‌ನಲ್ಲಿ ದಾವೆ ಹೂಡಿದ್ದಾರೆ. ಇವರು ಯಾವುದೇ ಆಧಾರಗಳಿಲ್ಲದೆ ಗಾಳಿಯಲ್ಲಿ ಗುಂಡು ಹೊಡೆದಂತೆ ಮಾತಾಡಿರುವುದರ ಉದ್ದೇಶ ಬೇರೆಯೇ ಇದ್ದಂತೆ ಕಾಣುತ್ತದೆ” ಎಂದು ಕಿಡಿಕಾರಿದರು.
“ದೌರ್ಜನ್ಯಕ್ಕೆ ಬಲಿಯಾಗುತ್ತಿರುವ ಹಿಂದೂಗಳೆಲ್ಲರಿಗೂ ಸ್ವತಂತ್ರ ಭಾರತದ ಸಂವಿಧಾನವೇ ಸನ್ಮಾನ ಮತ್ತು ಸಂರಕ್ಷಣೆ ನೀಡಿದೆ. ವಾಸ್ತವವಾಗಿ ಅಗೌರವ, ಅಪಮಾನ, ಹಿಂಸೆ, ಹತ್ಯೆಗಳಿಗೆ ಬಲಿಯಾಗುತ್ತಿರುವವರೆಲ್ಲರೂ ಹಿಂದೂಗಳೆಂದೇ ಗುರುತಿಸಲ್ಪಟ್ಟಿರುವ ಎಸ್‌ಸಿ/ಎಸ್‌ಟಿಗಳೇ ಆಗಿದ್ದಾರೆ ಮತ್ತು ತಾವೂ ಕೂಡಾ ಹಿಂದೂಗಳೆಂದು ಹೇಳಿಕೊಳ್ಳುತ್ತಿರುವವರಿಂದಲೇ ಈ ಹಿಂದೂಗಳೆಲ್ಲರೂ ಅಗೌರವ, ಅಪಮಾನ ಮತ್ತು ದೌರ್ಜನ್ಯಕ್ಕೆ ಬಲಿಯಾಗುತ್ತಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಪಕ್ಷಾತೀತವಾಗಿ ಕೋಲಿ ಸಮಾಜದ ಸಂಘಟನೆಯಾಗಲಿ: ಭೀಮಣ್ಣ ಸಾಲಿ
“ಬ್ರಾಹ್ಮಣ್ಯದ ಸಂರಕ್ಷಕರಾದ ಪೇಜಾವರರು, ತಮ್ಮವರ ಬ್ರಾಹ್ಮಣ್ಯ ಧೋರಣೆಗೆ ಬಲಿಯಾಗುತ್ತಿರುವ ಎಸ್‌ಸಿ/ಎಸ್‌ಟಿ ಮತ್ತಿತರರ ಶೋಷಿತರಿಗೆ ಸಂರಕ್ಷಣೆ ನೀಡುತ್ತಿರುವ ಸಂವಿಧಾನವನ್ನು ಬದಲಿಸಬೇಕು ಎನ್ನುತ್ತಿದ್ದಾರೆ. ಅಂದರೆ, ಹಳೆಯ ಮನುಸ್ಮೃತಿಯನ್ನೇ ಜಾರಿಗೆ ತರಬೇಕು ಎಂಬುದನ್ನು ಪರೋಕ್ಷವಾಗಿ ಹೇಳಿದ್ದಾರೆ. ಇವರ ಸಂವಿಧಾನ-ವಿರೋಧಿ ಹೇಳಿಕೆಯನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಮತ್ತು ಇಂತಹ ಹೇಳಿಕೆ ನೀಡಿರುವ ಈ ಮನುವಾದಿ ಪೇಜಾವರರ ವಿರುದ್ಧ ಕಾನೂನು ರೀತಿಯ ಕಠಿಣ ಕ್ರಮಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.