ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು... ಆಗಾಗ
ಓಡಿನಲುಂಟೆ ಕನ್ನಡಿಯ ನೋಟ?
ಮರುಳಿನ ಕೂಟ ವಿಪರೀತಚರಿತ್ರ.
ನೋಟದ ಸುಖ ತಾಗಿ ಕೋಟಲೆಗೊಳ್ಳುತ್ತಿದೆ ಲೋಕ
ಗುಹೇಶ್ವರನೆಂಬ ಲಿಂಗವು ಒಬ್ಬನೆ ಅಚಲ. ಉಳಿದವರೆಲ್ಲರೂ ಸೂತಕಿಗಳು.
ಪದಾರ್ಥ:
ಓಡು = ಮಡಕೆಯ ತುಂಡು
ವಿಪರೀತ = ವಿರುದ್ಧ
ಚರಿತ್ರ = ನಡವಳಿಕೆ
ಕೋಟಲೆ = ತೊಂದರೆ
ಸೂತಕಿ = ಅಬಲ
ವಚನಾರ್ಥ:
ಕಣ್ಣು, ಕನ್ನಡಿ, ಕಾಣ್ಕೆ ಇವು ವಚನದಲ್ಲಿ ಅಲ್ಲಮ ಬಳಸಿರುವ ಮೂರು ರೂಪಕಗಳು. ಕನ್ನಡಿಯಲ್ಲಿ ಕಣ್ಣಿರಿಸಿದಾಗ ಕಾಣುವ ಕಾಣುವಿಕೆ ಮಣ್ಣಿನ ಮಡಕೆಯ ತುಂಡಿನಲ್ಲಿ ಕಂಡುಬರುವುದೇ? ಮಣ್ಣಿನ ಮಡಕೆಯ ಚೂರಿನಲ್ಲಿ ತನ್ನ ಪ್ರತಿಬಿಂಬ ಕಂಡೀತು ಎಂಬ ಅಜ್ಞಾನ ಮತ್ತು ಭ್ರಮೆಯಿಂದ ಮರುಳುಗೊಂಡ ಲೋಕದ ಜನರ ನಡವಳಿಕೆಗಳೇ ವಿಪರೀತ ವೈಪರೀತ್ಯದಿಂದ ಕೂಡಿರುತ್ತವೆ. ಅವರ ಕಾಣ್ಕೆ, ನೋಟ, ಚಾರಿತ್ರ್ಯ ಎಲ್ಲವೂ ಇಂದ್ರಿಯ ನಿಯಂತ್ರಿತ. ಕಣ್ಣು ಕಿವಿ ಮೂಗು ನಾಲಗೆ ಚರ್ಮ ಎಂಬ ಪಂಚೇಂದ್ರಿಯಗಳು ಸ್ಪುರಿಸುವ ಸುಖದಿಂದ ನಿರ್ದೇಶಿತವಾದ ಜನರ ವಿಪರೀತದ ನಡವಳಿಕೆಗಳಿಂದಾಗಿ ಲೋಕ ಕಷ್ಟ ಕೋಟಲೆಗೊಳಗಾಗಿದೆ. ಈ ಎಲ್ಲಾ ವಿಪರೀತಗಳ ನಡುವೆಯೂ ಅಚಲನಾಗಿ ಸ್ಥಿರನಾಗಿ ನಿಲ್ಲುವವ ಆ ಗುಹೇಶ್ವರನೊಬ್ಬನೇ. ಉಳಿದವರೆಲ್ಲರೂ ನೋಟದ ಸುಖದ ಸೋಂಕು ತಾಗಿ ನೊಂದ ಬೆಂದ ಮಲಿನವಾದ ಮನದವರು, ಅಬಲರು.
ಪದಪ್ರಯೋಗಾರ್ಥ:
ಇಡೀ ವಚನವನ್ನು “ನೋಟದ ಸುಖ” ಎಂಬ ಅಪರೂಪದ ಪದ ನಿಯಂತ್ರಿಸುತ್ತದೆ.
ಪಂಚೇಂದ್ರಿಯಗಳಲ್ಲಿ ಪ್ರಧಾನವಾದ ಕಣ್ಣನ್ನು ಕೇಂದ್ರಿಕರಿಸಿ ಇಂದ್ರಿಯ ಸುಖಗಳ ಪ್ರಲೋಭನೆಗೆ ಕಣ್ಣೋಟವೇ ಕಾರಣವೆಂದು ಪ್ರತಿಪಾದಿಸುವ ಅಲ್ಲಮನ ದೃಷ್ಟಿಯಲ್ಲಿ “ನೋಟದ ಸುಖ”ವೇ ಲೋಕದ ಜನರ ಸಕಲ ಕಷ್ಟ ಕಾರ್ಪಣ್ಯಗಳಿಗೆ ಮೂಲ ಬೀಜವಾಗಿದೆ.
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅನುಪಮಸುಖಿ
ಲೋಕದ ಚೇಷ್ಟೆಗೆ ರವಿ ಬೀಜವಾದಂತೆ ಕರಣಂಗಳ ಚೇಷ್ಟೆಗೆ ಮನವೇ ಬೀಜ ಎಂಬ ಅಕ್ಕನ ಮಾತಿನಂತೆ ನೋಟದ ಸುಖವೇ ಕರಣಂಗಳ ಚೇಷ್ಟೆಗೆ ಕಾರಣ ಎಂಬ ಅಲ್ಲಮನ ಪದ ಪ್ರಯೋಗ ಈ ವಚನದಲ್ಲಿ ಅತ್ಯಂತ ಪರಿಣಾಮಕಾರಿಯಾಗಿದೆ.

ಹರಿಹರ ಶಿವಕುಮಾರ್
ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.