ಮಸೀದಿಗಳ ಸಮೀಕ್ಷೆಗೆ ಅನುಮತಿ ನೀಡುವ ಮೂಲಕ ಚಂದ್ರಚೂಡ್ ಅವರು ಸಂವಿಧಾನ ಹಾಗೂ ದೇಶಕ್ಕೆ ದೊಡ್ಡ ಅಪಚಾರ ಮಾಡಿದ್ದಾರೆ. ಬಿಜೆಪಿ ನೇತೃತ್ವದ ಸರ್ಕಾರ ದೇಶವನ್ನು ಅಸ್ಥಿರಗೊಳಿಸುವುದರ ಜೊತೆಗೆ ಅಲ್ಪಸಂಖ್ಯಾತ ಸಮುದಾಯವನ್ನು ನಿಗ್ರಹಿಸಲು ದಬ್ಬಾಳಿಗೆ ನಡೆಸುತ್ತಿದೆ. ಒಂದು ಸಮುದಾಯ ಅಥವಾ ಒಂದು ಸರ್ಕಾರದ ಪರವಾಗಿ ಪ್ರಮುಖ ತೀರ್ಪುಗಳನ್ನು ನೀಡಿರುವುದನ್ನು ಸೂಕ್ಷ್ಮವಾಗಿ ಗಮನಿಸಿದರೆ ರಾಜಕೀಯ ನಾಯಕರಿಂದ ಚಂದ್ರಚೂಡ್ ಪ್ರಭಾವಿತರಾಗಿದ್ದರು.
ಅಯೋಧ್ಯೆ ತೀರ್ಪು, 370 ರದ್ದತಿ ಎತ್ತಿ ಹಿಡಿಯುವ ತೀರ್ಪು, ಮಸೀದಿಗಳ ಸಮೀಕ್ಷೆಗಳ ತೀರ್ಪು ಸೇರಿದಂತೆ ದೇಶದ ಐತಿಹಾಸಿಕ ತೀರ್ಪುಗಳನ್ನು ನೀಡಿದವರು ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್. ಬಹುತೇಕ ತೀರ್ಪುಗಳು ಹಲವಾರು ವರ್ಷಗಳಿಂದ ವಿವಾದಕ್ಕೊಳಗಾಗಿದ್ದವು. ಚಂದ್ರಚೂಡ್ ಅವರ ತೀರ್ಪುಗಳನ್ನು ಗಮನಿಸಿದರೆ ಅವರು ಕೆಲವರ ಕೈಗೊಂಬೆಯಾಗಿದ್ದರು ಎಂಬ ಅನುಮಾನ ಬಾರದೆ ಇರದು. ಬಾಬ್ರಿ ಮಸೀದಿ – ಅಯೋಧ್ಯೆ ತೀರ್ಪು ಬಹುತೇಕ ಇಂದಿನ ಕೇಂದ್ರ ಸರ್ಕಾರದ ಪರವಾಗಿಯೇ ಇತ್ತು. ಅಯೋಧ್ಯೆ ತೀರ್ಪನ್ನು ದೇವರೆ ನನ್ನ ಕೈಯಿಂದ ಕೊಡಿಸಿದ ಎಂಬ ಮಾತನ್ನು ಆನಂತರದ ದಿನಗಳಲ್ಲಿ ಚಂದ್ರಚೂಡ್ ಅವರು ಹೇಳಿದ್ದುಂಟು. ಚಂದ್ರಚೂಡ್‌ನ ಹಲವು ವಿಷಯಗಳ ಬಗ್ಗೆ ಸುಪ್ರೀಂ ಕೋರ್ಟ್‌ನ ಹಿರಿಯ ನ್ಯಾಯವಾದಿ ಹಾಗೂ ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್‌ನ ಮಾಜಿ ಅಧ್ಯಕ್ಷರಾದ ದುಷ್ಯಂತ್ ದವೆ ಅವರು ತುಂಬಾ ನೋವಿನಿಂದ ಹೇಳಿಕೊಂಡಿದ್ದಾರೆ.
ಹಿರಿಯ ಪತ್ರಕರ್ತ ಕರಣ್ ತಾಪರ್ ಅವರು ‘ದಿ ವೈರ್’ ಸುದ್ದಿ ಮಾಧ್ಯಮಕ್ಕೆ ಕೊಟ್ಟ ಸಂದರ್ಶನದಲ್ಲಿ ಹಲವು ಗಂಭೀರ ವಿಚಾರಗಳನ್ನು ದುಷ್ಯಂತ್ ದವೆ ಪ್ರಸ್ತಾಪಿಸಿದ್ದಾರೆ. ಮಸೀದಿಗಳ ಸಮೀಕ್ಷೆಗೆ ಅನುಮತಿ ನೀಡುವ ಮೂಲಕ ಚಂದ್ರಚೂಡ್ ಅವರು ಸಂವಿಧಾನ ಹಾಗೂ ದೇಶಕ್ಕೆ ದೊಡ್ಡ ಅಪಚಾರ ಮಾಡಿದ್ದಾರೆ. ಬಿಜೆಪಿ ನೇತೃತ್ವದ ಸರ್ಕಾರ ದೇಶವನ್ನು ಅಸ್ಥಿರಗೊಳಿಸುವುದರ ಜೊತೆಗೆ ಅಲ್ಪಸಂಖ್ಯಾತ ಸಮುದಾಯವನ್ನು ನಿಗ್ರಹಿಸಲು ದಬ್ಬಾಳಿಗೆ ನಡೆಸುತ್ತಿದೆ. ಒಂದು ಸಮುದಾಯ ಅಥವಾ ಒಂದು ಸರ್ಕಾರದ ಪರವಾಗಿ ಪ್ರಮುಖ ತೀರ್ಪುಗಳನ್ನು ನೀಡಿರುವುದನ್ನು ಸೂಕ್ಷ್ಮವಾಗಿ ಗಮನಿಸಿದರೆ ರಾಜಕೀಯ ನಾಯಕರಿಂದ ಚಂದ್ರಚೂಡ್ ಪ್ರಭಾವಿತರಾಗಿದ್ದರು. ಚಂದ್ರಚೂಡ್ ನೀಡಿದ ತೀರ್ಪುಗಳು ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ನೇತೃತ್ವದ ಸರ್ಕಾರಕ್ಕೆ ಪರೋಕ್ಷವಾಗಿ ಅನುಕೂಲವಾಗಿವೆ.
ಅಯೋಧ್ಯೆ ತೀರ್ಪು ಪ್ರಕಟವಾದ ನಂತರದ ವರ್ಷಗಳಲ್ಲಿ ವಾರಣಾಸಿ, ಮಥುರಾ, ಶಾಹಿ ಈದ್ಗಾ, ಅಜ್ಮೀರ್‌ನ ಮಸೀದಿ ಸೇರಿದಂತೆ ಹತ್ತಾರು ಸ್ಥಳಗಳಲ್ಲಿರುವ ಪ್ರಮುಖ ಮಸೀದಿಗಳ ಬಳಿ ಹಿಂದೂ ದೇವಾಲಯಗಳ ಪುರಾವೆಯಿವೆ ಎಂಬ ಕಾರಣದಿಂದ ಕೆಳ ಹಂತದ ನ್ಯಾಯಾಲಯಗಳು ಸಮೀಕ್ಷೆಗೆ ಅನುಮತಿ ನೀಡುತ್ತಿವೆ. ಇತ್ತೀಚಿಗೆ ಉತ್ತರ ಪ್ರದೇಶದ ಸಂಭಲ್‌ನಲ್ಲಿ ಘಟಿಸಿದ ಗಲಭೆಗಳಿಂದ ಅಮಾಯಕರು ಪ್ರಾಣ ಕಳೆದುಕೊಳ್ಳುವಂತಾಯಿತು. ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರ ತನ್ನ ರಾಜಕೀಯ ದುರುದ್ದೇಶಗಳನ್ನು ಈಡೇರಿಸಿಕೊಳ್ಳಲು ದೇಶಕ್ಕೆ ಕೋಮು ದ್ವೇಷದ ಬೆಂಕಿ ಹಚ್ಚುವುದರ ಜೊತೆ ಸಾಮಾನ್ಯ ಜನರ ಪ್ರಾಣಗಳ ಜೊತೆ ಆಟವಾಡುತ್ತಿದೆ. ಅಭಿವೃದ್ಧಿ ಹೊಂದುತ್ತಿರುವ ಭಾರತ ದೇಶದಲ್ಲಿ ಇದೊಂದು ಅಸಾಧಾರಣ ಗಂಭೀರ ಪರಿಸ್ಥಿತಿ. 1991ರ ಪೂಜಾಸ್ಥಳಗಳ ಕಾಯಿದೆ (ಪಿಒಡಬ್ಲ್ಯೂ-ದಿ ಪ್ಲೇಸಸ್ ಆಫ್ ವರ್ಶಿಪ್ ಆಕ್ಟ್-1991) ಪ್ರಕಾರ ಈ ಕಾಯಿದೆಯ ಪ್ರಕಾರ ದೇಶದ ಎಲ್ಲ ಪೂಜಾಸ್ಥಳಗಳನ್ನು 1947ರ ಆಗಸ್ಟ್ 15ರಂದು ಇದ್ದ ಸ್ಥಿತಿಯಲ್ಲಿಯೇ ಇರಿಸಬೇಕು.
ಪಿಒಡಬ್ಲ್ಯೂ ಕಾಯಿದೆಯ ನಂತರ ಮತಾಂತರ ಕೋರುವ ಯಾವುದೇ ಪ್ರಕರಣಗಳನ್ನು ದಾಖಲಿಸಲು ಅವಕಾಶ ಇಲ್ಲ. 1947ರ ಆಗಸ್ಟ್ 15ರ ನಂತರ ಯಾವುದೇ ಪೂಜಾಸ್ಥಳವನ್ನು ಮತಾಂತರಿಸಲಾಗಿದ್ದು, ಯಾರಾದರೂ ಈ ಸಂಬಂಧ ನ್ಯಾಯಾಲಯದಲ್ಲಿ ದಾವೆ ಹೂಡಿದರೆ ನ್ಯಾಯಾಲಯವು ಸದರಿ ಪೂಜಾಸ್ಥಳದ ಸ್ವರೂಪ 1947ರ ಆಗಸ್ಟ್ 15ರಂದು ಏನಿತ್ತು ಎಂಬುದನ್ನು ಆಧರಿಸಿ ತೀರ್ಪು ನೀಡಬೇಕಾಗುತ್ತದೆ. ಅಂದರೆ ಸಂಬಂಧಪಟ್ಟ ಪೂಜಾಸ್ಥಳದ ಸ್ವರೂಪವನ್ನು 1947ರ ಆಗಸ್ಟ್ 15ರಂದು ಇದ್ದ ಸ್ಥಿತಿಗೆ ಮರುಸ್ಥಾಪಿಸಬೇಕಾಗುತ್ತದೆ. ಕಾಯಿದೆ ಅನ್ವಯ ಅಯೋಧ್ಯೆಯೊಂದಕ್ಕೆ ಮಾತ್ರ ರಿಯಾಯಿತಿ ನೀಡಲಾಗಿದೆ. ಈ ಕಾಯಿದೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಕೂಡ ಸಂವಿಧಾನದ ಮೌಲ್ಯಗಳನ್ನು ರಕ್ಷಿಸುತ್ತದೆ ಮತ್ತು ಭದ್ರಪಡಿಸುತ್ತದೆ ಎಂದು ತೀರ್ಪು ನೀಡಿದೆ. ಸುಪ್ರೀಂ ಕೋರ್ಟಿನ ಸಾಂವಿಧಾನಿಕ ಪೀಠ ಕೂಡ ಯಾವುದೇ ಧಾರ್ಮಿಕ ಸ್ಥಳಗಳ ಸಮೀಕ್ಷೆಗೆ ಅವಕಾಶ ನೀಡಬಾರದೆಂದು ಆದೇಶ ನೀಡಿದ್ದು, ಇದು ಪಿಒಡಬ್ಲ್ಯೂ ಕಾಯಿದೆಯನ್ನು ಉಲ್ಲಂಘಿಸಿದಂತಾಗುತ್ತದೆ ಎಂದು ತೀರ್ಪು ನೀಡಿತ್ತು. ಈ ಮಹತ್ವದ ಕಾಯಿದೆಗೆ ಶಾಸಕಾಂಗ, ಕಾರ್ಯಾಂಗ ಹಾಗೂ ಸುಪ್ರೀಂ ಕೋರ್ಟ್ ಒಳಗೊಂಡ ನ್ಯಾಯಾಂಗ ಕೂಡ ಬದ್ಧವಾಗಿರಬೇಕು.
ಗ್ಯಾನವಾಪಿ, ಸಂಭಲ್ ಘಟನೆಗಳಿಗೆ ಚಂದ್ರಚೂಡ್ ನೇರ ಹೊಣೆ
ಆದರೆ ಉತ್ತರ ಪ್ರದೇಶದ ಗ್ಯಾನವ್ಯಾಪಿ ಮಸೀದಿಯ ಪ್ರಕರಣದಲ್ಲಿ ಈ ಕಾಯಿದೆಯನ್ನು ಸಂಪೂರ್ಣವಾಗಿ ಉಲ್ಲಂಘಿಸಲಾಗಿದೆ. ವಿಚಾರಣಾ ನ್ಯಾಯಾಲಯ ಹಾಗೂ ಹೈಕೋರ್ಟ್‌ನಿಂದ ತಿರಸ್ಕರಿಸಲ್ಪಟ್ಟ ಅಲ್ಪಸಂಖ್ಯಾತ ಸಮುದಾಯದ ಪರವಾಗಿ ಸಲ್ಲಿಸಲಾದ ಮೊಕದ್ದಮೆಯನ್ನು ವಜಾಗೊಳಿಸಲು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾಗಿದ್ದ ಡಿ ವೈ ಚಂದ್ರಚೂಡ್ ಆದೇಶಿಸದಿರುವುದು ನಿಜಕ್ಕೂ ಆಘಾತಕಾರಿಯಾಗಿದೆ. ಸುಪ್ರೀಂ ಕೋರ್ಟ್ ಸೇರಿದಂತೆ ದೇಶದ ಹಲವು ನ್ಯಾಯಾಲಯಗಳಲ್ಲಿ ಸೇವೆ ಸಲ್ಲಿಸಿರುವ ಚಂದ್ರಚೂಡ್ ಅವರು ಪಿಒಡಬ್ಲ್ಯೂ ಕಾಯಿದೆಯ ಬಗ್ಗೆ ವ್ಯಕ್ತಪಡಿಸಿರುವ ಅಭಿಪ್ರಾಯವನ್ನು ನೋಡಿದರೆ ಎಲ್ಲೋ ಒಂದು ಕಡೆ ಒಂದು ಸಮುದಾಯದ ಅಥವಾ ಒಂದು ಸರ್ಕಾರದ ಪರವಾಗಿ ಸಹಕರಿಸಿರುವುದು ಸ್ಪಷ್ಟವಾಗಿದೆ. ಚಂದ್ರಚೂಡ್ ದೇಶದಲ್ಲೆಡೆ ಜಾತ್ಯತೀತ ಹಾಗೂ ಕಾನೂನಿನ ನಿಯಮಗಳ ಬಗ್ಗೆ ಮಾತನಾಡುತ್ತಾರೆ, ಆದರೆ ಈ ವಿಷಯದಲ್ಲಿ ಮಾತ್ರ ತಾವೆ ದೇಶದ ಕಾನೂನನ್ನು ಮುರಿಯುತ್ತಾರೆ ಎನ್ನುತ್ತಾರೆ ದುಷ್ಯಂತ್ ದವೆ.
ಉತ್ತರ ಪ್ರದೇಶದ ಸಂಭಲ್‌ನಲ್ಲಿ ನಡೆದ ಹಿಂಸಾಚಾರ ಮತ್ತು ಮುಸ್ಲಿಂ ಯುವಕರ ಹತ್ಯೆಗೆ ಮಾಜಿ ಸಿಜೆಐ ಡಿ ವೈ ಚಂದ್ರಚೂಡ್ ಅವರು ನೇರ ಹೊಣೆ. ಚಂದ್ರಚೂಡ್ ಮತ್ತು ಅವರ ಸಹೋದ್ಯೋಗಿಗಳು ಈ ಹಿಂದಿನ ಸುಪ್ರೀಂ ಕೋರ್ಟ್ ಆದೇಶಗಳನ್ನು ಧಿಕ್ಕರಿಸಿದ್ದಾರೆ. ಅವರು ಕಾನೂನಿನ ನಿಯಮವನ್ನು ಮುರಿದಿದ್ದಾರೆ. ಮುಸ್ಲಿಂ ಸಮುದಾಯಗಳ ಮೇಲೆ ದಬ್ಬಾಳಿಕೆ ಮಾಡುವವರಿಗೆ ಮತ್ತು ಮಂದಿರ – ಮಸೀದಿ ವಿಭಜಿಸಿ ಲಾಭ ಪಡೆಯುವವರಿಗೆ ಬೇಕಾದಂತೆ ಚಂದ್ರಚೂಡ್ ನಡೆದುಕೊಂಡಿದ್ದಾರೆ. ಆರಾಧನಾ ಸ್ಥಳಗಳ ಕಾಯ್ದೆಯ ಮೂಲ ಉದ್ದೇಶವನ್ನೇ ತನ್ನ ಅಭಿಪ್ರಾಯದ ಮೂಲಕ ಚಂದ್ರಚೂಡ್ ನುಚ್ಚುನೂರು ಮಾಡಿದ್ದಾರೆ.
”ಚಂದ್ರಚೂಡ್ ಅವರೇ ಭಾಗವಾಗಿದ್ದ ಅಯೋಧ್ಯೆ ತೀರ್ಪು ಕೂಡ ಆರಾಧನಾ ಸ್ಥಳಗಳ ಕಾಯಿದೆ 1991ನ್ನು ಶ್ಲಾಘಿಸಿದೆ. ಈ ಕಾಯಿದೆ ಸಂವಿಧಾನದ ಮೂಲಭೂತ ಮೌಲ್ಯಗಳನ್ನು ರಕ್ಷಿಸುತ್ತದೆ ಅಂತ ಹೇಳಿದೆ. ಆದರೆ, ಅದೇ ಚಂದ್ರಚೂಡ್ ಅವರು ಗ್ಯಾನವಾಪಿ ಪ್ರಕರಣದಲ್ಲಿ ನೀಡಿರುವ ಮೌಖಿಕ ಹೇಳಿಕೆ, ಅವರೇ ಭಾಗವಾಗಿದ್ದ ಅಯೋಧ್ಯೆ ತೀರ್ಪಿನ ಪೀಠದ ಹೇಳಿಕೆಗೆ ನೇರವಾಗಿ ವಿರುದ್ದವಾಗಿದೆ” ಎಂದು ದುಷ್ಯಂತ್ ಅವರು ನೋವಿನಿಂದ ಹೇಳಿದ್ದಾರೆ.
ಉದ್ಯೋಗ ಸೃಷ್ಟಿ, ಬಡತನ ಹೋಗಲಾಡಿಸಬೇಕಿದೆ
ಗುಜರಾತ್‌ನಲ್ಲಿ ಎರಡು ಸಮುದಾಯಗಳು ಸರಿಪಡಿಸಲಾಗದಷ್ಟು ಒಡೆದು ಹೋಗಿವೆ. ಮುಸ್ಲಿಮರು ಅಲ್ಲಿ ಎಲ್ಲಿಯೂ ಹಿಂದೂಗಳೊಂದಿಗೆ ಇರಲು ಸಾಧ್ಯವಿಲ್ಲ. ಹಿಂದೂಗಳು ಎಲ್ಲಿಯೂ ಮುಸ್ಲಿಮರೊಂದಿಗೆ ಒಟ್ಟಿಗೆ ವಾಸಿಸುವುದಿಲ್ಲ. ಕೆಲವು ಹಿಂದೂಗಳು ಅಲ್ಪಸಂಖ್ಯಾತರ ಬಹುಸಂಖ್ಯಾತ ಪಟ್ಟಣವಾದ ಜುಹಾವುರವನ್ನು ಮಿನಿ ಪಾಕಿಸ್ತಾನ ಎಂದು ಕರೆಯುತ್ತಾರೆ. ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಹೋರಾಡಿದ್ದು ಈ ದ್ವೇಷಕ್ಕಾಗಿಯೆ? ಸ್ವಾತಂತ್ರ್ಯ ಹೋರಾಟದಲ್ಲಿ ಸಾವಿರಾರು ಮುಸ್ಲಿಂ ಸಮುದಾಯದವರು ತಮ್ಮ ಪ್ರಾಣವನ್ನು ತ್ಯಾಗ ಮಾಡಿದರು. ವಿಭಜನೆಯ ನಂತರ ಪಾಕಿಸ್ತಾನಕ್ಕೆ ಹೋಗಬೇಕೆಂದಿದ್ದ ಮುಸ್ಲಿಮರೆಲ್ಲ ಇಲ್ಲಿಯೇ ಉಳಿದುಕೊಂಡರು. ಇಲ್ಲಿ ಇದ್ದವರೆಲ್ಲ ತಮ್ಮ ಭವಿಷ್ಯವನ್ನು ಬಹುಸಂಖ್ಯಾತರ ಕೈಯಲ್ಲಿ ನೋಡಿದ್ದಾರೆಯೇ? ಅಲ್ಪಸಂಖ್ಯಾತರ ಆಶಯ ಇನ್ನೂ ಸಂವಿಧಾನದಲ್ಲಿದೆ. ಪಾಕಿಸ್ತಾನ ಸೇರಿದಂತೆ ಇಸ್ಲಾಮಿಕ್ ರಾಷ್ಟ್ರಗಳಲ್ಲಿ ಸಾವಿರಾರು ಆತ್ಮಹತ್ಯಾ ಬಾಂಬ್ ದಾಳಿಗಳು ನಡೆದಿವೆ. ನಾವು ಈ ದೇಶದಲ್ಲಿ ಮಾಡಲು ಅನೇಕ ಕೆಲಸಗಳಿವೆ. ಉದ್ಯೋಗಗಳನ್ನು ಸೃಷ್ಟಿಸಬೇಕಿದೆ, ಬಡವರನ್ನು ಹಸಿವಿನಿಂದ ಮೇಲೆತ್ತಬೇಕಿದೆ, ಉತ್ತಮ ಶಿಕ್ಷಣ ಮತ್ತು ಆರೋಗ್ಯ ಅಗತ್ಯವಿದೆ. ನಾವು ಶಾಂತಿ ಮತ್ತು ಶಾಂತಿಯನ್ನು ಬಯಸುತ್ತೇವೆ ಎಂದು ದುಷ್ಯಂತ್ ದವೆ ಹೇಳುತ್ತಾರೆ.
ಮಂದಿರ – ಮಸೀದಿ ಎಂದರೆ ದೇಶ ಹೊತ್ತಿ ಉರಿಯಲಿದೆ
ಸಂಭಲ್ ಹಿಂಸಾಚಾರಕ್ಕೆ ನ್ಯಾಯಾಂಗ ಖಂಡಿತಾ ಹೊಣೆಯಾಗಿದೆ. ಗ್ಯಾನವ್ಯಾಪಿ ಪ್ರಕರಣದಲ್ಲಿ ಸುಪ್ರೀಂನ ಇತರ ನ್ಯಾಯಾಧೀಶರು ಚಂದ್ರಚೂಡ್ ಅಭಿಪ್ರಾಯದ ವಿರುದ್ದ ನಿಲ್ಲಬೇಕಿತ್ತು. ಚಂದ್ರಚೂಡ್ ಅಪ್ರಾಮಾಣಿಕ ವ್ಯಾಖ್ಯಾನ ನೀಡಿದ್ದಾರೆ. ಅವು ಹಾನಿಕರ ಮತ್ತು ಉದ್ದೇಶಪೂರ್ವಕವಾಗಿವೆ. ನಾನು ಹೆಮ್ಮೆಯ ಹಿಂದೂ, ನಾನೂ ಬ್ರಾಹ್ಮಣ. ನಾನು ನನ್ನ ದೇವರುಗಳನ್ನು ಪೂಜಿಸುತ್ತೇನೆ. ಆದರೆ, ನಾನು ಇತರ ಧರ್ಮಗಳನ್ನು ಗೌರವಿಸುತ್ತೇನೆ. ನಾವೀಗ ಮಂದಿರ-ಮಸೀದಿ ಅನ್ನುವುದನ್ನು ನಿಲ್ಲಿಸದಿದ್ದರೆ, ದೇಶ ಹೊತ್ತಿ ಉರಿಯಲಿದೆ. ಸಂಭಲ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತಡೆ ನೀಡಿರುವುದು ಸ್ವಾಗತಾರ್ಹ. ಈ ರೀತಿ ಎಲ್ಲ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್ ಕ್ರಮ ಕೈಗೊಳ್ಳಬೇಕು. ನಾನು ಇನ್ನೊಂದು ಪಾಕಿಸ್ತಾನ, ಬಾಂಗ್ಲಾದೇಶ ಆಗಲು ಬಯಸುವುದಿಲ್ಲ. ನಾವು ನಮ್ಮ ದೇಶದಲ್ಲಿ ಧಾರ್ಮಿಕ ಸಹಿಷ್ಣುತೆ ಬಯಸುತ್ತೇವೆ. ನೂತನ ಮುಖ್ಯ ನ್ಯಾಯಮೂರ್ತಿ ಸಂಜೀವ್ ಕುಮಾರ್ ಖನ್ನಾ ನೇತೃತ್ವದಲ್ಲಿ ಹೊಸ ರೂಪದಲ್ಲಿ ಸುಪ್ರೀಂ ಕೋರ್ಟ್ ನಡೆಯಲಿದೆ ಅಂತ ದವೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸಂವಿಧಾನವನ್ನು ಅವರು ಗೌರವಿಸುತ್ತಾರೆ. 2014 ರಿಂದ 2024ರ ನಡುವೆ ನಡೆದಿರುವ ತಪ್ಪುಗಳನ್ನು ಅವರು ಸರಿಪಡಿಸುತ್ತಾರೆ. ನ್ಯಾಯಮೂರ್ತಿ ಖನ್ನಾ ಅವರ 7 ತಿಂಗಳ ಅಲ್ವಾವಧಿಯ ಅಧಿಕಾರದ ಬಳಿಕ, ಅನೇಕ ಒಳ್ಳೆಯ ನ್ಯಾಯಾಧೀಶರು, ಮುಖ್ಯ ನ್ಯಾಯಮೂರ್ತಿಗಳು ಬರುತ್ತಿದ್ದಾರೆ. ನನಗೆ ಅವರ ಮೇಲೆ ಭರವಸೆ ಇದೆ ಎಂದು ದವೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
5 ಕೋಟಿ ಬಾಕಿ ಉಳಿಕೆ ಪ್ರಕರಣಗಳು ಹಾಗೂ ಮಾಧ್ಯಮಗಳ ನ್ಯಾಯಮೂರ್ತಿ
ರಾಷ್ಟ್ರೀಯ ನ್ಯಾಯಾಂಗ ಅಂಕಿಅಂಶಗಳ ಪ್ರಕಾರ ಕಳೆದ 30 ವರ್ಷಗಳಿಂದ 2022ರವರೆಗೆ ದೇಶಾದ್ಯಂತ ವಿವಿಧ ಕೋರ್ಟ್‌ಗಳಲ್ಲಿ 4,50,36,071 ಪ್ರಕರಣಗಳು ಬಾಕಿಯುಳಿದಿದ್ದವು. ಚಂದ್ರಚೂಡ್ ಅಧಿಕಾರ ಸ್ವೀಕರಿಸಿದ 2022ರ ನವೆಂಬರ್ ರಿಂದ ಅವರು ನಿವೃತ್ತಿ ಪಡೆಯುವವರೆಗೂ ಬಾಕಿ ಉಳಿಕೆ ಪ್ರಕರಣಗಳು 5.10 ಕೋಟಿಗೆ ಏರಿಕೆಯಾಗಿದೆ. ಸುಪ್ರೀಂ ಕೋರ್ಟಿನಲ್ಲಿ ಚಂದ್ರಚೂಡ್ ಅಧಿಕಾರ ವಹಿಸಿಕೊಂಡಾಗ 69,647 ಪ್ರಕರಣಗಳು ಬಾಕಿಯುಳಿದಿದ್ದವು. ಈಗ ಆ ಸಂಖ್ಯೆ 82,989ಕ್ಕೆ ಏರಿಕೆಯಾಗಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ. ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿ ಮಾಡುವುದಕ್ಕೆ ಗಂಭೀರ ಪ್ರಯತ್ನವನ್ನು ಮಾಡಲಿಲ್ಲ. ನೀವು ಗುಣಮಟ್ಟದ ನ್ಯಾಯದ ಜೊತೆ ಜನರಿಗೆ ನ್ಯಾಯವನ್ನು ನೀಡದಿದ್ದರೆ ಕಾನೂನು ಸುವ್ಯವಸ್ಥೆ ಸಂಪೂರ್ಣ ವೈಫಲ್ಯಗೊಂಡಿದೆ ಎಂಬುದನ್ನು ತಿಳಿಸಿಕೊಡುತ್ತದೆ.
ಚಂದ್ರಚೂಡ್ ಅವರು ಭಾರತೀಯ ಕ್ರಿಕೆಟಿಗರಂತೆ, ಮಾಧ್ಯಮದಲ್ಲಿ ಬಹಳ ಯಶಸ್ವಿಯಾಗಿದ್ದಾರೆ. ಆದರೆ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಪಂದ್ಯಗಳ ವಿಷಯಕ್ಕೆ ಬಂದರೆ, ಅವರು ದಯನೀಯವಾಗಿ ವಿಫಲರಾಗಿದ್ದಾರೆ. ಹಾಗಾಗಿ, ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಅವರು ಮಾಧ್ಯಮಗಳ ಅಚ್ಚುಮೆಚ್ಚಿನವರಾಗಿದ್ದರು. ಪ್ರತಿಯೊಂದು ಮಾಧ್ಯಮವೂ ಅವರನ್ನು ಸಂದರ್ಶಿಸಲು ಬಯಸುತ್ತಿತ್ತು. ಅವರು ತಮ್ಮ ಸಂದರ್ಶನಗಳನ್ನು ನೀಡುವಲ್ಲಿ ಮತ್ತು ಸಾರ್ವಜನಿಕವಾಗಿ ತಮ್ಮನ್ನು ಶ್ರೇಷ್ಠರೆಂದು ಬಿಂಬಿಸಿಕೊಳ್ಳಲು ಬಹಳ ಉದಾರವಾಗಿದ್ದರು. ಆದರೆ ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ ಅವರ ನಿಜವಾದ ಪಾತ್ರದ ಬಗ್ಗೆ ಮಾಧ್ಯಮಗಳಲ್ಲಿ ಯಾರೂ ಅವರನ್ನು ಪ್ರಶ್ನಿಸಲಿಲ್ಲ. ಯಾರೂ ಅವರನ್ನು ವಿಮರ್ಶಾತ್ಮಕವಾಗಿ ಮೌಲ್ಯಮಾಪನ ಮಾಡಲಿಲ್ಲ. ಮುಖ್ಯ ನ್ಯಾಯಮೂರ್ತಿಯಾಗಿ ಚಂದ್ರಚೂಡ್ ಅವರು ತಮ್ಮ ಸಾಮರ್ಥ್ಯದಿಂದ, ದೇಶಕ್ಕೆ ಪ್ರಾಮಾಣಿಕವಾಗಿ ಕೊಡುಗೆ ನೀಡಬಹುದಿತ್ತು. ಆದರೆ ಅವರು ಶೋಚನೀಯವಾಗಿ ವಿಫಲರಾದರು ಎಂದು ದುಷ್ಯಂತ್ ದವೆ ಬೇಸರ ವ್ಯಕ್ತಪಡಿಸಿದರು.
ಮಹಿಳೆಯರಿಗೆ ಆದ್ಯತೆ ನೀಡದ ಚಂದ್ರಚೂಡ್
ಚಂದ್ರಚೂಡ್ ಅವರು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಧೀಶರಾಗಿದ್ದ ವೇಳೆ ಮಹಿಳೆಯರ ಸ್ಥಾನಮಾನದ ಬಗ್ಗೆ ಮಾತನಾಡುತ್ತಿದ್ದರು. ಮಹಿಳೆಯರು ನಿಜವಾಗಿಯೂ ಸಮಾಜದಲ್ಲಿ ಮತ್ತು ನ್ಯಾಯಾಂಗದಲ್ಲಿ ಸಕ್ರಿಯ ಪಾತ್ರವನ್ನು ಹೊಂದಿರಬೇಕು ಎಂದು ಹೇಳುತ್ತಿದ್ದರು. ಅವರ ಅವಧಿಯಲ್ಲಿ ಸುಪ್ರೀಂ ಕೋರ್ಟ್‌ಗೆ 17 ನೇಮಕಾತಿಗಳನ್ನು ಮಾಡಲಾಯಿತು. ಆದರೆ ಒಬ್ಬ ಮಹಿಳೆಯನ್ನು ಅವರು ನೇಮಿಸಲಿಲ್ಲ.
