ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣದಲ್ಲಿ ದೂರುದಾರನ ತಾಯಿ ಮತ್ತು ಪತ್ನಿಯ ಹೆಸರನ್ನು ಚಾರ್ಜ್‌ಶೀಟ್‌ನಿಂದ ಕೈಬಿಡಲು ಲಂಚ ಸ್ವೀಕರಿಸುವಾಗ ಎಎಸ್ಐ ಒಬ್ಬರು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿರುವ ಘಟನೆ ದಾವಣಗೆರೆಯಲ್ಲಿ ನೆಡೆದಿದೆ.
ದಾವಣಗೆರೆ ನಗರದ ಕೆಟಿಜೆ ನಗರ ಪೊಲೀಸ್ ಠಾಣೆಯ ಎಎಸ್ಐ ಈರಣ್ಣ ₹50,000 ಲಂಚ ಸ್ವೀಕರಿಸುವಾಗ ಲೋಕಾಯುಕ್ತ ದಾಳಿಗೆ ಒಳಗಾದ ಪೊಲೀಸ್ ಅಧಿಕಾರಿಯಾಗಿದ್ದಾರೆ.
ಲೋಕಾಯುಕ್ತ ದೂರುದಾರ ಮಣಿಕಂಠ ಆಚಾರ್ಯ ಮತ್ತು ಅವರ ತಾಯಿ ಭಾಗಮ್ಮ ಆಚಾರ್ಯ ಮತ್ತು ಪತ್ನಿ ಅರ್ಚನ ಆಚಾರ್ಯ ಅವರ ವಿರುದ್ಧ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ದಾಖಲಾದ ಪ್ರಕರಣದಲ್ಲಿ ದೂರುದಾರನ ತಾಯಿ ಮತ್ತು ಪತ್ನಿಯ ಹೆಸರನ್ನು ಚಾರ್ಜ್ ಶೀಟ್‌ನಿಂದ ಕೈಬಿಡಲು ಕೆಟಿಜೆ ನಗರ ಪೊಲೀಸ್ ಠಾಣೆಯ ಎಎಸ್ಐ ಈರಣ್ಣ 1,00,000 ರೂಪಾಯಿ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಿದ್ದಾರೆ.
ಮುಂಗಡವಾಗಿ ₹50,000 ನೀಡಲು ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಲಂಚದ ಹಣ ನೀಡಿ ಕೆಲಸ ಮಾಡಿಸಿಕೊಳ್ಳಲು ಇಷ್ಟವಿಲ್ಲದ ದೂರುದಾರ ಈ ಬಗ್ಗೆ ದಾವಣಗೆರೆ ಲೋಕಾಯುಕ್ತ ಕಚೇರಿಗೆ ಗಣಕೀಕೃತ ದೂರು ದಾಖಲಿಸಿದ್ದರು.
ಆರೋಪಿತ ಎಎಸ್ಐ ವಿರುದ್ಧ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಈ ದೂರಿನ ಬಗ್ಗೆ ಮೊಕದ್ದಮೆ ಪಿಸಿ ಆಕ್ಟ್-1988(ತಿದ್ದುಪಡಿ ಕಾಯ್ದೆ-2018) ರೀತ್ಯ ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಕ್ರಮ ಕೈಗೊಳ್ಳಲಾಗಿತ್ತು. ಈ ಹಿನ್ನೆಲೆಯಲ್ಲಿ ದೂರುದಾರರಿಂದ ಆರೋಪಿತರು ₹50,000 ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎಂ ಎಸ್ ಕೌಲಾಪೂರೆ ಮಾರ್ಗದರ್ಶನದಲ್ಲಿ, ಉಪಾಧೀಕ್ಷಕಿ ಕಲಾವತಿ ನೇತೃತ್ವದಲ್ಲಿ ಪೊಲೀಸ್ ನಿರೀಕ್ಷಕ ಮಧುಸೂದನ್ ಸಿ ಪ್ರಭು ಬಸೂರು, ಸರಳ ಹಾಗೂ ಸಿಬ್ಬಂದಿ ದಾಳಿ ನಡೆಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಅಜ್ಞಾನಕ್ಕೆ ಅಂತ್ಯವಿದೆ, ಜ್ಞಾನವೆಂಬುದು ಅಮರ: ಬಸವ ಹರಳಯ್ಯ ಶ್ರೀ
“ಕಾರ್ಯಾಚರಣೆಯಲ್ಲಿ ₹50,000 ನಗದು ಮತ್ತು ಎಎಸ್ಐ ಈರಣ್ಣ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ” ಎಂದು ಲೋಕಾಯುಕ್ತ ಪೊಲೀಸರು ಮಾಹಿತಿ ನೀಡಿದ್ದಾರೆ.