ಸೊಸೆಗೆ ಕಿರುಕುಳ ನೀಡಿದ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿ ಪೇರೋಲ್ ಮೇಲೆ ಬಿಡುಗಡೆಯಾಗಿದ್ದ ಜೇವರ್ಗಿ ಪಟ್ಟಣದ ವೃದ್ಧೆ ಖೈದಿ ನಾಗಮ್ಮ ಅಣ್ಣಾರಾವ್ (93) ಶುಕ್ರವಾರ ಮನೆಯಲ್ಲಿಯೇ ನಿಧನರಾಗಿದ್ದಾರೆ.
ನ.16ರಂದು ಸಾರ್ವಜನಿಕ ಅಹವಾಲು ಸ್ವೀಕರಿಸಲು ಜಿಲ್ಲೆಗೆ ಆಗಮಿಸಿದ್ದ ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಅವರು ಕಲಬುರಗಿ ಜಿಲ್ಲಾ ಕಾರಾಗೃಹಕ್ಕೆ ಭೇಟಿ ನೀಡಿದ್ದರು. ಕಳೆದ ಒಂದು ವರ್ಷದಿಂದ ಜೈಲಿನಲ್ಲಿದ್ದ ವೃದ್ಧೆ ನಾಗಮ್ಮ ಅವರನ್ನು ಭೇಟಿ ಮಾಡಿದ್ದರು. ಅನಾರೋಗ್ಯದಿಂದ ಹಾಸಿಗೆಯಲ್ಲಿದ್ದ ನಾಗಮ್ಮ ಅವರ ಸ್ಥಿತಿಯನ್ನು ಕಂಡು ಉಪಲೋಕಾಯುಕ್ತರು ಮರುಗಿದ್ದರು. ತಕ್ಷಣವೇ ಕಾನೂನು ಸೇವಾ ಪ್ರಾಧಿಕಾರಕ್ಕೆ ಕರೆ ಮಾಡಿ ಮಹಿಳೆಯ ಶಿಕ್ಷೆ ಪ್ರಮಾಣ ಕಡಿತಗೊಳಿಸಿ ಬಿಡುಗಡೆಗೊಳಿಸಲು ಮೇಲ್ಮನವಿ ಸಲ್ಲಿಸಲು ಉಪಲೋಕಾಯುಕ್ತರು ಸಲಹೆ ನೀಡಿದ್ದರು.
ನ್ಯಾಯಮೂರ್ತಿ ಬಿ.ವೀರಪ್ಪ ಅವರು ಕಲಬುರಗಿ ಎಸ್ಪಿ ಅವರಿಗೆ ವೃದ್ಧೆಯನ್ನು ಪೆರೋಲ್ ಮೇಲೆ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದ್ದರು. ನ.28ರಂದು ವೃದ್ಧೆಗೆ ಒಂದು ತಿಂಗಳ ಪೆರೋಲ್ ಮಂಜೂರಾಗಿದ್ದರಿಂದ ಅವರ ಇಬ್ಬರು ಹೆಣ್ಣು ಮಕ್ಕಳು ಬಂದು ಮನೆಗೆ ಕರೆದುಕೊಂಡು ಹೋಗಿದ್ದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಆನ್‌ಲೈನ್ ಜೂಜಿನಲ್ಲಿ ₹80 ಲಕ್ಷ ಹಣ ಕಳೆದುಕೊಂಡ ವಿದ್ಯಾರ್ಥಿ ಆತ್ಮಹತ್ಯೆ
ಸಾವಿನ ಕೊನೆ ಕ್ಷಣದಲ್ಲಿ ಮನೆ ಸೇರಬೇಕೆಂದು ಕೋರಿಕೆ ಇಟ್ಟಿದ್ದ 93 ವರ್ಷದ ವೃದ್ಧೆಯ ಕೊನೆ ಆಸೆಯನ್ನು ಉಪಲೋಕಾಯುಕ್ತ ನ್ಯಾ.ಬಿ.ವೀರಪ್ಪ ಈಡೇರಿಸಿದ್ದಾರೆ. ಆದರೆ ಮನೆಗೆ ತೆರಳಿದ ವಾರದ ಬಳಿಕ ವೃದ್ಧೆ ನಾಗಮ್ಮ ವಯೋಸಹಜ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಆ ಮೂಲಕ ಅಂತಿಮ ಕ್ಷಣ ಮನೆಯಲ್ಲಿ ಕಳೆಯಬೇಕೆಂಬ ಅವರ ಆಸೆಯನ್ನು ಈಡೇರಿಸಲಾಗಿದೆ.