ಕಲಬುರಗಿ ನಗರದ ಕೋಟೆಯ ಒಳಗೆ ಭಾರತದ ಮತ್ತೊಂದು ಅನನ್ಯ ಸ್ಮಾರಕವಿದೆ. ಅದು ಜಾಮಿಯಾ ಮಸೀದಿ ಶ್ರೇಷ್ಠ ಮಸೀದಿ ಎಂದು ಪರಿಚಿತವಾಗಿದೆ. ಇದು ಭಾರತದಲ್ಲಿ ಕೇವಲ ದೊಡ್ಡ ಮಸೀದಿಯಷ್ಟೇ ಅಲ್ಲ, ಈ ಮಸೀದಿಯ ಸುತ್ತಲೂ ಕೋಟೆ ಆವರಿಸಿರುವ ಏಕೈಕ ಮಸೀದಿಯಾಗಿದೆ. ಈ ಜಾಮಿಯಾ ಮಸೀದಿಯನ್ನು ಒಂದನೇ ಮುಹಮ್ಮದ್ ಷಾ ಅವಧಿ 1367ರಲ್ಲಿ ನಿರ್ಮಿಸಲಾಗಿದೆ ಎಂದು ಇತಿಹಾಸದ ಮೂಲಗಳು ಹೇಳುತ್ತವೆ.
ಮಸೀದಿಯ ಉತ್ತರ ಬಾಗಿಲಿನಲ್ಲಿರುವ ಶಿಲಾಶಾಸನದ ಪ್ರಕಾರ ಶಾಮರುರವರ ಮಗನಾದ ರಫಿ ಎಂಬುವರು ಈ ಮಸೀದಿಯನ್ನು ನಿರ್ಮಿಸಿದನು. ರಫಿಯು ಇರಾನ್ ದೇಶದ ಖಜ್ಜಿನ್ ಪ್ರದೇಶದ ಮನ್ಸೂರನ ಮಗನಾಗಿದ್ದನು. ಭಾರತ-ಇಸ್ಲಾಂ ವಾಸ್ತುಶಿಲ್ಪದ ಲಕ್ಷಣಗಳನ್ನು ಈ ಮಸೀದಿಯಲ್ಲಿ ಕಾಣಬಹುದು.
ಆಗಿನ ಗುಲ್ಬರ್ಗಾ ಈಗಿನ ಕಲಬುರಗಿ ಬಹಮನಿ ಸುಲ್ತಾನರ ರಾಜಧಾನಿಯಾಗಿ ಸ್ಮರಿಸುವುದಕ್ಕಾಗಿ ದಕ್ಷಿಣ ಭಾರತದಲ್ಲಿ ಈ ಮಾದರಿಯ ಮೊದಲನೇ ಮಸೀದಿಯನ್ನು ನಿರ್ಮಿಸಲಾಯಿತು. ವಿನ್ಯಾಸದಲ್ಲಿ ಸರಳವಾದ ಮಸೀದಿ. ಆದರೆ ಸುವ್ಯವಸ್ಥಿತವಾದ ಯೋಜನೆಯನ್ನು ಉತ್ತಮವಾಗಿ ಸಂಘಟಿತವಾಗಿರುವ ಭಾಗಗಳನ್ನು ಹೊಂದಿದೆ. ಭಾರತದಲ್ಲಿನ ಈ ರೀತಿಯ ಒಂದು ಮಸೀದಿಯ ಕಟ್ಟಡವು 66×54 (216×176 ಅಡಿ) ಉದ್ದಗಲವಿದ್ದು, 3531.8 ಚ. ಮೀಟರ್(38106 ಚದರ ಅಡಿ) ಸ್ಥಳವಿದೆ. ವಾಸ್ತವವಾಗಿ ಈ ಕಟ್ಟಡವು ಒಂದೇ ಬಾರಿಗೆ 5,000 ಮಂದಿಗೆ ಒಳಗೆ ಸ್ಥಳ ನೀಡಬಲ್ಲದು.

ಮಸೀದಿಯ ಉತ್ತರ, ದಕ್ಷಿಣ ಹಾಗೂ ಪೂರ್ವ ದಿಕ್ಕಿನ ಒಳಭಾಗಗಳು ತೆರೆದ ಕಮಾನು ಸಾಲುಗಳನ್ನು ಹೊಂದಿವೆ. ಈಗ ತೆರೆದಿದ್ದರೂ, ಈ ಕಮಾನುಗಳಿಗೆ ಹಿಂದೊಮ್ಮೆ ನಿರ್ಮಿಸಿದ್ದ ಪರದೆಗಳ ಕುರುಹುಗಳನ್ನು ಈಗಲೂ ಕಾಣಬಹುದು. ಈ ಮಸೀದಿಗೆ ಪ್ರಮುಖ ಪ್ರವೇಶ ದ್ವಾರವು ಉತ್ತರಭಾಗದಲ್ಲಿದ್ದು, ಕಮಾನುಗಳ ಆಕಾರದಲ್ಲಿದೆ. ಜತೆಗೆ ಇತರೆ ದ್ವಾರಗಳಿಗಿಂತ ದೊಡ್ಡದಿದೆ. ಪಶ್ಚಿಮದ ಗೋಡೆಯ ಉದ್ದಕ್ಕೂ ಮಿಹಬ್ ಇದ್ದು, ಅದರ ಸುತ್ತಲೂ ದೊಡ್ಡ ಗುಮ್ಮಟವಿದೆ. ಮಸೀದಿಯ ಒಳಗೆ ಬರುವ ಎಲ್ಲರಿಗೂ ಕಾಣುವಂತಹ ಸ್ಥಳದಲ್ಲಿ ಮಿಹ್ರಬ್ ಇಟ್ಟಿರುವುದು ಇಲ್ಲಿಯ ವಿಶೇಷ. ಮಿಹ್ರಬ್ ಸುತ್ತ ಇರುವ ಗುಮ್ಮಟವು 63 ಅಡಿಯ ವ್ಯಾಸವಿದ್ದು, ಒಳಭಾಗವನ್ನು ಹೂವು ಮತ್ತು ಬಳ್ಳಿಗಳಿಂದ ಅಲಂಕರಿಸಲಾಗಿದೆ.
ಜಾಮಿಯಾ ಮಸೀದಿಯ ಒಳನೋಟ
ಮಿಹಬ್ ಎಂದರೆ ಮಸೀದಿಯ ಒಳಗೆ ಗೋಡೆಯಲ್ಲಿರುವ ಪೀಠವಾಗಿದ್ದು, ಮೆಕ್ಕಾ ಇರುವ ದಿಕ್ಕನ್ನು ಸೂಚಿಸುತ್ತದೆ. ಕಟ್ಟಡದ ಮಧ್ಯಭಾಗದಲ್ಲಿ ಸಾಮಾನ್ಯವಾಗಿ ಇತರೆ ಭಾರತೀಯ ಮಸೀದಿಗಳಲ್ಲಿ ಪ್ರಾರ್ಥನೆಗೆ ಸೇರಲು ಅಂಗಳವಿದೆ. ಜಾಮಿಯಾ ಮಸೀದಿಯಲ್ಲಿ ಈ ಭಾಗದಲ್ಲಿ 63 ಸಣ್ಣ ಗುಮ್ಮಟಗಳನ್ನು ಕಮಾನು ಸಾಲುಗಳ ಮೇಲೆ ಇರಿಸಲಾಗಿದೆ.

ಮಸೀದಿಯ ಒಳಭಾಗದಲ್ಲಿ 140 ಕಂಬಗಳ ಮೇಲೆ, 256 ಕಮಾನುಗಳನ್ನು ನಿರ್ಮಿಸಲಾಗಿದೆ. ಈ ಕಮಾನುಗಳ ವಿನ್ಯಾಸವು ಅಗಲ ಮತ್ತು ವಿಸ್ತಾರವಾಗಿದ್ದು, ಚಿಕ್ಕ ಆಧಾರದ ಮೇಲೆ ನಿಂತಿದೆ. ಮುಂದೆ ಇದು ದಖನಿ ವಾಸ್ತುಶಿಲ್ಪದ ಲಕ್ಷಣವಾಗಿ ಮಾರ್ಪಟ್ಟಿತು. ಈ ತೆರೆದ ಕಮಾನು ಸಾಲುಗಳ ಮಧ್ಯೆ ಸೂರ್ಯನ ಬೆಳಕಿನ ನೃತ್ಯಗಳು, ಕಲ್ಲಿನ ನೆಲದ ಮೇಲೆ ಮೋಡಿಮಾಡುವ ಮಾದರಿಗಳಂತೆ ಬೆಳಕು ಆವರಿಸುತ್ತದೆ. ಇದನ್ನು ನೋಡಿದರೆ ಸ್ಪೇನ್‌ನಲ್ಲಿರುವ ಕೇಂದ್ರ ಗುಮ್ಮಟ ಕಾರ್ಡೋಬಾದ ಪ್ರಸಿದ್ಧ ಮಸೀದಿಯನ್ನು ನೆನಪಿಸುತ್ತದೆ. ಅದು ಎಲ್ಲಕ್ಕಿಂತ ಹೆಚ್ಚು ಆಕರ್ಷಕವಾಗಿ ಕಾಣುತ್ತದೆ. ಜಾಮಿಯಾ ಮಸೀದಿ ವಿಶಾಲ ಕಟ್ಟಡವಾಗಿದ್ದರೂ ಕೂಡಾ ಅಸಾಮಾನ್ಯ ಗಾಂಭೀರ್ಯ ಹಾಗೂ ಸೊಬಗನ್ನು ನೀಡುತ್ತದೆ.

ಕುತೂಹಲಕಾರಿಯಾಗಿ, ಹೈದರಾಬಾದಿನ ಸ್ಪ್ಯಾನಿಷ್ ಮಸೀದಿಯೊಳಗಿನ ಕಮಾನುಗಳೂ ಕೂಡಾ ಜಾಮಿಯಾ ಮಸೀದಿಯ ವಿನ್ಯಾಸವನ್ನು ಪ್ರತಿಧ್ವನಿಸುತ್ತವೆ. ಈ ಎರಡೂ ಮಸೀದಿಗಳು ಕಾರ್ಡೋಬಾದ ಐಕಾನಿಕ್ ಕ್ಯಾಥೆಡ್ರಲ್-ಮಸೀದಿಯಂತಹ ಹೋಲಿಕೆಗಳನ್ನು ಹೊಂದಿರುವ ಭಾರತದ ಏಕೈಕ ಮಸೀದಿಗಳಾಗಿವೆ. ಈ ಸಂಪರ್ಕವು ಭಾರತ ಮತ್ತು ಯುರೋಪ್ ನಡುವೆ ಆಕರ್ಷಕ ಎಳೆಯನ್ನು ಹೆಣೆಯುತ್ತದೆ. ಈ ಯುಗದಲ್ಲಿ ಪ್ರವರ್ಧಮಾನಕ್ಕೆ ಬಂದ ಸಾಂಸ್ಕೃತಿಕ ವಿನಿಮಯವನ್ನು ತೋರಿಸುತ್ತದೆ.

ಮಸೀದಿಯ ಈ ವಿಶಿಷ್ಟ ವಿನ್ಯಾಸ ಬಹಳ ಹಿಂದೆಯೇ ವಾಸ್ತುಶಿಲ್ಪಿಗಳು ಹಾಗೂ ಇತಿಹಾಸಕಾರರನ್ನು ಆಕರ್ಷಿಸಿದೆ. 1876ರಲ್ಲಿಯೇ ಶ್ರೇಷ್ಠ ಆಂಗ್ಲ ವಾಸ್ತುಶಿಲ್ಪ ಇತಿಹಾಸ ತಜ್ಞ ಜೇಮ್ಸ್ ಫರ್ಗ್ಯೂಸನ್ ಈ “ಅತಿ ಶ್ರೇಷ್ಠ” ಕಟ್ಟಡದ ಕುರಿತು ಬರೆದಿದ್ದಾನೆ. ತರುವಾಯ ಇತಿಹಾಸಕಾರರು ಈ ಮಸೀದಿಯಲ್ಲಿ ಪ್ರಾರ್ಥನಾ ಅಂಗಳವಿಲ್ಲ ಎನ್ನುವುದರ ಕುರಿತು ಸಾಕಷ್ಟು ಚರ್ಚೆ ಮಾಡಿದ್ದಾರೆ. ಅವರಲ್ಲಿ ಕೆಲವರು ಈ ಕಟ್ಟಡ ಪ್ರಾಯಶಃ ಮಸೀದಿಯೇ ಆಗಿರಲಿಲ್ಲ. ಬದಲಿಗೆ ಬಹಮನಿ ರಾಜ್ಯದ ಮೇಲ್ವರ್ಗದ ವ್ಯಕ್ತಿಗಳು ಒಟ್ಟು ಸೇರುತ್ತಿದ್ದ ಸ್ಥಳವಾಗಿರಬಹುದು ಎನ್ನುವಷ್ಟರ ಮಟ್ಟಿಗೆ, ತಪ್ಪಾಗಿ ಊಹಿಸಿಕೊಳ್ಳುತ್ತಾರೆ.

ಬಹಮನಿಗಳು ನಿರ್ಮಿಸಿದ ನಂತರ ಮತ್ಯಾವ ಮಸೀದಿಯಲ್ಲಿಯೂ ಜಾಮಿಯಾ ಮಸೀದಿಯ ಯೋಜನಾ ವಿನ್ಯಾಸವನ್ನು ಬಳಸಲಿಲ್ಲ ಅಥವಾ ಭಾರತದ ಮತ್ತ್ಯಾವ ರಾಜರೂ ಈ ರೀತಿಯ ಮಸೀದಿಯನ್ನು ನಿರ್ಮಿಸಲಿಲ್ಲ ಎಂಬುದು ಕೆಲವು ಮೂಲಗಳಿಂದ ತಿಳಿದುಬಂದಿದೆ.

ದಕ್ಷಿಣ ಭಾರತದ ಮೊದಲ ದೊಡ್ಡ ಮಸೀದಿ ಎಂಬ ಹೆಗ್ಗಳಿಕೆಯೂ ಇದರದ್ದಾಗಿದೆ. 13ನೇ ಶತಮಾನದಿಂದಲೂ ನೋಡುಗರ ಗಮನ ಸೆಳೆಯುವ ಈ ಕಟ್ಟಡ ಇದೀಗ ಮಳೆಯಿಂದ ಸೋರುತ್ತಿರುವುದು ಕಂಡುಬಂದಿದೆ. ಜೀರ್ಣೋದ್ಧಾರವಿಲ್ಲದೆ ಅದರ ಹೊಳಪನ್ನು ಕಳೆದುಕೊಳ್ಳುತ್ತಿದೆ.

ಹವ್ಯಾಸಿ ಪ್ರವಾಸಿ ಮಾರ್ಗದರ್ಶಿ ಬಿ ಎಂ ರಾವೂರ್ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ವಿಜಯಪುರ ಗೋಲಗುಮ್ಮಟಕ್ಕಿಂತ ಪೂರ್ವದಲ್ಲಿ ಈ ಜಾಮಿಯಾ ಮಸೀದಿ ನಿರ್ಮಾಣವಾಗಿದೆ. ಈ ಸ್ಮಾರಕ ವಿಶ್ವದ ಅತ್ಯಂತ ಎರಡನೇ ವಿಶಾಲವಾದ ಸ್ಮಾರಕವಾಗಿದೆ. ನೂರಾರು ಗುಣಮಟ್ಟಗಳನ್ನು ಈ ಸ್ಮಾರಕ ಹೊಂದಿದೆ. ಈ ಸ್ಮಾರಕ ಎರಡು ಕೋಟೆ ಸುತ್ತಳತೆ ಹೊಂದಿದ್ದು, ಒಬ್ಬರು ಮಾತಾನಾಡಿದರೆ ಐದು ಸಾವಿರ ಜನರಿಗೆ ಕೇಳಿಸುತ್ತದೆ. ಬಹುಮನಿ ಸುಲ್ತಾನರು ಮುಸ್ಲಿಂ, ಪರ್ಷಿಯನ್ ರಾಜರಾಗಿದ್ದರು. ಅದರೆ ಪ್ರಜೆಗಳು ಹಿಂದೂಗಳು ಆಗಿದ್ದರು. ಶಾಂತಿ ಸೌಹಾರ್ದತೆ ಪ್ರತಿಯೊಂದರಲ್ಲಿ ಪ್ರಗತಿ ಕಾಣುತ್ತಿತ್ತು. ದೆಹಲಿ ಜಾಮಿಯಾ ಮಸೀದ್ ಬಿಟ್ಟರೆ ಕಲಬುರಗಿ ಜಾಮಿಯಾ ಮಸೀದಿ ವಿಶಾಲವಾದ ಸ್ಮಾರಕವಾಗಿದೆ. ಸ್ಮಾರಕದ ಕಾಮಾನುಗಳನ್ನು ಯಾವುದೇ ಸ್ಥಳದಲ್ಲಿ ನಿಂತು ನೋಡಿದರೂ ದ್ವಾರ ಕಾಣಿಸುತ್ತದೆ. ಒಂದು ಗೋಡೆ ಇನ್ನೊಂದು ಗೋಡೆಗೆ ಅಡ್ಡಿಪಡಿಸುವುದಿಲ್ಲ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಫೆಂಗಲ್ ಚಂಡಮಾರುತ; ಅಕಾಲಿಕ ಮಳೆ ಅವಾಂತರಕ್ಕೆ ಭತ್ತ, ರಾಗಿ, ಕಾಫಿ ಫಸಲು ಹಾನಿ
ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ(ಎಎಸ್‌ಐ)ಯ ಸ್ಮಾರಕ ಕಾರ್ಯ ನಿರ್ವಾಹಕ ಮೊಹಮ್ಮದ್ ಶಫಿ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಈ ಜಾಮಿಯಾ ಮಸೀದಿಯಲ್ಲಿ ಫ್ಯಾನ್, ಮೈಕ್, ಲೈಟ್ ಯಾವುದರ ಅವಶ್ಯಕತೆಯಿಲ್ಲ. ಕಲ್ಲು, ಗಾರ್‌ಗಳಿಂದ ಈ ಕಟ್ಟಡವನ್ನು ನಿರ್ಮಾಣ ಮಾಡಿದ್ದು, ಬೇಸಿಗೆಯ ಬಿಸಿಲಿನಲ್ಲಿಯೂ ಈ ಸ್ಮಾರಕ ತುಂಬಾ ತಂಪಾಗಿರುತ್ತದೆ. ಅಲ್ಲದೆ ಸ್ಮಾರಕದ ಯಾವುದೇ ಭಾಗದಲ್ಲಿ ನಿಂತು ಮಾತನಾಡಿದರೂ ಸ್ಪಷ್ಟವಾಗಿ ಕೇಳಿ ಬರುತ್ತದೆ. ಇಲ್ಲಿ ಆರು ಸಾವಿರ ಮಂದಿ ಒಂದೇ ಸಮಯದಲ್ಲಿ ಕೂತು ನಮಾಜ್ ಮಾಡಬಹುದು. ಜನರು ಸ್ಮಾರಕದ ಗೋಡೆಗಳ ಮೇಲೆ ಗೀಚಿ ಅದರ ಅಂದ ಹಾಳು ಮಾಡಿದ್ದರು. ಬಳಿಕ ಎಎಸ್ಐ ವತಿಯಿಂದ ಬಣ್ಣ ಹಚ್ಚಲಾಗಿದೆ. ಮಳೆ ಬಂದರೆ ಸ್ವಲ್ಪ ಸೋರುತ್ತದೆ. ಅದು ದುರಸ್ತಿಯಾಗಬೇಕಿದೆ” ಎಂದು ತಿಳಿದರು.

ಎಎಸ್ಐ ಅಧಿಕಾರಿ ವಿನಾಯಕ್ ಶಿರಹಟ್ಟಿ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ನಮ್ಮ ಪುರಾತತ್ವ ಇಲಾಖೆಯಿಂದ ಯಾವುದೇ ಅನುದಾನ ಬಿಡುಗಡೆಯಾಗಿಲ್ಲ. ಆದ ಕಾರಣ ಸ್ಮಾರಕ ದುರಸ್ತಿ ಮಾಡಲು ಸಾಧ್ಯವಾಗುತ್ತಿಲ್ಲ” ಎಂದು ತಿಳಿಸಿದರು.