ಸಾಲದ ಮೇಲೆ ಖರೀದಿಸಲಾಗಿದ್ದ ಬೈಕ್ಗೆ ‘ಇಎಂಐ’ ಕಂತು ಕಟ್ಟಿಲ್ಲವೆಂದು ಫೈನಾನ್ಸ್ ಕಂಪನಿಯ ಸಿಬ್ಬಂದಿ ಬೈಕ್ಅನ್ನು ತೆಗೆದುಕೊಂಡು ಹೋಗಿದ್ದಾರೆ. ಬೈಕ್ನ ಇಎಂಐ ಕಂತನ್ನು ತಮ್ಮ ಅತ್ತೆ-ಮಾವ ಕಟ್ಟಿಲ್ಲವೆಂದು ಕೋಪಗೊಂಡ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಿಹಾರದಲ್ಲಿ ನಡೆದಿದೆ.
ಮೃತನನ್ನು ಬಿಹಾರದ ಬನ್ಮಂಖಿ ಪ್ರದೇಶದ ಪಾಸ್ವಾನ್ ಟೋಲಾದ ನಿವಾಸಿ ದೀಪಕ್ ಕುಮಾರ್ ಪಾಸ್ವಾನ್ ಎಂದು ಹೆಸರಿಸಲಾಗಿದೆ. ಈತ ಕಳೆದ ವರ್ಷ ವಿವಾಹವಾಗಿದ್ದ. ವಿವಾಹ ಸಂದರ್ಭದಲ್ಲಿ ವರದಕ್ಷಿಣೆಯಾಗಿ ಬೈಕ್ ನೀಡುವಂತೆ ವಧುವಿನ ಕುಟುಂಬದ ಎದರು ಬೇಡಿಕೆ ಇಟ್ಟಿದ್ದ. ಪೂರ್ಣ ಹಣ ಪಾವತಿಸಿ ಬೈಕ್ ಖರೀದಿಸಲಾಗದ ದೀಪಕ್ ಅವರ ಮಾವ (ಪತ್ನಿಯ ತಂದೆ) ರಾಜ್ಕುಮಾರ್ ಪಾಸ್ವಾನ್ ಇಎಂಐ ಮೇಲೆ ಬೈಕ್ ಕೊಡಿಸಿದ್ದರು. ಪ್ರತಿ ತಿಂಗಳು ರಾಜ್ಕುಮಾರ್ ಅವರೇ ಇಎಂಐ ಪಾವತಿಸುತ್ತಿದ್ದರು ಎಂದು ವರದಿಯಾಗಿದೆ.
ಆದರೆ, ಮೂರು ತಿಂಗಳಿಂದ ಯಾವುದೇ ಹಣ ದೊರೆಯದ ಕಾರಣ ರಾಜ್ಕುಮಾರ್ ಅವರಿಗೆ ಇಎಂಐ ಕಟ್ಟಲು ಸಾಧ್ಯವಾಗಿರಲಿಲ್ಲ. ಇಎಂಐ ಕಟ್ಟುವಂತೆ ದೀಪಕ್ ಪದೇ-ಪದೇ ರಾಜ್ಕುಮಾರ್ ಅವರನ್ನು ಪೀಡಿಸುತ್ತಿದ್ದರು. ಆದರೆ, ಹಣವನ್ನು ಹೊಂದಿಸಲಾಗದ ರಾಜ್ಕುಮಾರ್ ಅವರು ಇಎಂಐ ಪಾವತಿಸಿರಲಿಲ್ಲ ಎಂದು ತಿಳಿದುಬಂದಿದೆ.
ಪರಿಣಾಮ, ಫೈನಾನ್ಸ್ ಕಂಪನಿಯ ಸಿಬ್ಬಂದಿ ದೀಪಕ್ ಬಳಿಯಿದ್ದ ಬೈಕನ್ನು ತೆಗೆದುಕೊಂಡು ಹೋಗಿದ್ದಾರೆ. ಆ ನಂತರೂ, ಇಎಂಐ ಕಟ್ಟಿ, ಬೈಕ್ ಬಿಡಿಸಿಕೊಡುವಂತೆ ತನ್ನ ಪತ್ನಿಯ ಪೋಷಕರಿಗೆ ದೀಪಕ್ ಒತ್ತಡ ಹಾಕಿದ್ದಾನೆ. ಆದಾಗ್ಯೂ, ಹಣ ಪಾವತಿಸುವಲ್ಲಿ ರಾಜ್ಕುಮಾರ್ ಕುಟುಂಬ ಅಸಹಾಯಕವಾಗಿದೆ ಎಂದು ಹೇಳಲಾಗಿದೆ.
ಇದರಿಂದ ಕೋಪಗೊಂಡ ದೀಪಕ್ ತನ್ನ ಕೋಣೆಗೆ ಹೋಗಿ ಒಳಗಿನಿಂದ ಚಿಲಕ ಹಾಕಿಕೊಂಡಿದ್ದಾರೆ. ಬಹಳ ಹೊತ್ತಾದರೂ ಬಾಗಿಲು ತೆರೆಯದ್ದನ್ನು ಗಮನಿಸಿದ ಕುಟುಂಬಸ್ಥರು, ಬಾಗಿಲು ತೆರೆಯುವಂತೆ ಕರೆದಿದ್ದಾರೆ. ಆದರೆ, ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಗಾಬರಿಗೊಂಡ ಕುಟುಂಬಸ್ಥರು ನೆರೆಹೊರೆಯವರನ್ನು ಕರೆದು, ಬಾಗಿಲು ಮುರಿದಿದ್ದಾರೆ. ಆ ವೇಳೆಗೆ, ದೀಪಕ್ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದರು ಎಂದು ವರದಿಯಾಗಿದೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.
ಗಮನಿಸಿ: ವರದಕ್ಷಿಣ ಕಾನೂನುಬಾಹಿರ ಕೃತ್ಯ. ವರದಕ್ಷಿಣ ಪಡೆಯುವುದು ಮಾತ್ರವಲ್ಲ, ವರದಕ್ಷಿಣೆ ಕೊಡುವುದು ಕೂಡ ಅಪರಾಧ. ವರದಕ್ಷಿಣೆ ಕಿರುಕುಳದಿಂದ ಹಲವಾರು ಹೆಣ್ಣುಮಕ್ಕಳು ಸಾವನ್ನಪ್ಪಿದ್ದಾರೆ, ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಹತ್ಯೆಗೀಡಾಗಿದ್ದಾರೆ. ಭಾರತದಲ್ಲಿ ವರದಕ್ಷಿಣೆಯ ವಿರುದ್ಧ ಕಾನೂನುಗಳಿವೆ. ವರದಕ್ಷಿಣ ಕೇಳುವುದು, ಪೀಡಿಸುವುದು, ಕಿರುಕುಳ ನೀಡುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುತ್ತದೆ. ಜೈಲು ಶಿಕ್ಷೆಯನ್ನೂ ವಿಧಿಸಲಾಗುತ್ತದೆ. ವರದಕ್ಷಿಣೆಯ ವಿರುದ್ಧ ನಿರಂತರ ಹೋರಾಟಗಳೂ ನಡೆಯುತ್ತಿವೆ. ವರದಕ್ಷಿಣೆಯನ್ನು ಸಮಾಜದಿಂದ ತೊಡೆದು ಹಾಕಬೇಕಿದೆ. ಅದಕ್ಕಾಗಿ ಎಲ್ಲರೂ ಸನ್ನದ್ಧರಾಗಬೇಕಿದೆ.