ಸಿಂಗಾಪುರದಲ್ಲಿ ನಡೆದ ‘ವಿಶ್ವ ಚೆಸ್ ಚಾಂಪಿಯನ್‌ಶಿಪ್-2024’ ಟೂರ್ನಿಯಲ್ಲಿ ಡಿ ಗುಕೇಶ್ ಗೆದ್ದು, ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿದ್ದಾರೆ. 14ನೇ ಸುತ್ತಿನಲ್ಲಿ ಚೀನಾದ ಡಿಂಗ್ ಲಿರೆನ್ ಅವರನ್ನು ಸೋಲಿಸಿ ಗೆದ್ದು ಬೀಗಿದ್ದಾರೆ. ಟ್ರೋಫಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ವಿಶ್ವ ಚೆಸ್‌ನ ಕಿರಿಯ ಚಾಂಪಿಯನ್ ಎಂಬ ಹೆಗ್ಗಳಿಕೆಗೆ ಭಾಜನರಾಗಿದ್ದಾರೆ. ಈ ಹಿಂದೆ, 1985ರಲ್ಲಿ ನಡೆದಿದ್ದ ವಿಶ್ವ ಚೆಸ್ ಚಾಂಪಿಯನ್‌ಶಿಪ್ ಟೂರ್ನಿಯಲ್ಲಿ ಆಗ 22 ವರ್ಷದವರಾಗಿದ್ದ ಗ್ಯಾರಿ ಕಾಸ್ಪರೋವ್ ಗೆಲುವು ಸಾಧಿಸಿದ್ದರು. ಕಿರಿಯ ಚಾಂಪಿಯನ್ ಎನ್ನಿಸಿಕೊಂಡಿದ್ದರು. ಇದೀಗ, ಅವರ ದಾಖಲೆಯನ್ನು ಗುಕೇಶ್ ಮುರಿದಿದ್ದಾರೆ.
ಗುಕೇಶ್ ಅವರು ಮೂಲತಃ ತಮಿಳುನಾಡಿನವರು. ಅವರು ಜನಿಸಿದ್ದು 2006ರ ಮೇ 7ರಂದು. ಅವರ ಪೋಷಕರು ವೈದ್ಯಕೀಯ ಕ್ಷೇತ್ರದಲ್ಲಿ ತೊಡಿದ್ದಾರೆ. ಗುಕೇಶ್ ತಮ್ಮ ಏಳನೇ ವಯಸ್ಸಿನಲ್ಲಿ ಚೆಸ್ ಆಡಲು ಪ್ರಾರಂಭಿಸಿದರು. ಅವರಿಗೆ ಚೆಸ್ ಮಾಂತ್ರಿಕನೆಂದೇ ಖ್ಯಾತಿ ಪಡೆದಿರುವ ವಿಶ್ವನಾಥನ್ ಆನಂದ್ ತರಬೇತಿ ನೀಡಿದ್ದಾರೆ.
2015ರಲ್ಲಿ ನಡೆದ ಏಷ್ಯನ್ ಸ್ಕೂಲ್ ಚೆಸ್ ಚಾಂಪಿಯನ್‌ಶಿಪ್ (9 ವರ್ಷದೊಳಗಿನ ಸ್ಪರ್ಧಿಗಳ ವಿಭಾಗ) ಮತ್ತು 2018ರಲ್ಲಿ ನಡೆದ ವಿಶ್ವ ಯೂತ್ ಚೆಸ್ ಚಾಂಪಿಯನ್‌ಶಿಪ್ (12 ವರ್ಷದೊಳಗಿನವರ ವಿಭಾಗ) ಗೆದ್ದಿದ್ದಾರೆ. ಇದೀಗ, ವಿಶ್ವ ಚೆಸ್ ಚಾಂಪಿಯನ್‌ಶಿಪ್‌ಅನ್ನೂ ತಮ್ಮ ಮುಡಿಗೇರಿಸಿಕೊಂಡಿದ್ದಾರೆ.