ಸಾಹಿತ್ಯ ಸಮ್ಮೇಳನ ಮುಖ್ಯವಾಗಿ ಸಮಸ್ತ ಕನ್ನಡಿಗರ, ದುಡಿಯುವ ವರ್ಗದ ಸಮಗ್ರ ಅಭಿವೃದ್ಧಿ ಹಾಗೂ ಅವರ ನಡುವಿನ ಸಾಂಸ್ಕೃತಿಕ ತಲ್ಲಣಗಳ ಕುರಿತಂತೆ ಚರ್ಚಿಸುವ ಸಾಹಿತ್ಯಿಕ ವೇದಿಕೆಯಾಗಿದೆ. ಅಂತಹ ಗಂಭೀರ ವಿಚಾರಗಳು ಬೆಳಕಿಗೆ ಬರುವ ಮುನ್ನವೆ, ನಾಡಿನ ಸಮಸ್ತ ನಾಗರೀಕರ ಆಹಾರ ಸಂಸ್ಕೃತಿಯ ಮೇಲೆ ವೈದಿಕಶಾಹಿ ದಬ್ಬಾಳಿಕೆಯು ಈ ಮೂಲಕ ಅನಾವರಣವಾಗಿರುವುದು ಆತಂಕಕಾರಿಯಾಗಿದೆ ಎಂದು ಸಿಪಿಐಎಂ ಕಲಬುರಗಿ ಜಿಲ್ಲಾ ಕಾರ್ಯದರ್ಶಿ ಕೆ ನೀಲಾ ಅಭಿಪ್ರಾಯಪಟ್ಟಿದ್ದಾರೆ.
ನಗರದಲ್ಲಿ ಶುಕ್ರವಾರ ಪತ್ರಿಕಾ ಹೇಳಿಕೆಯಲ್ಲಿ ಮಾತನಾಡಿರುವ ಅವರು, ಸಾಹಿತ್ಯ ಸಮ್ಮೇಳನದ ಅತಿಥಿಗಳು, ಸಾಹಿತಿಗಳು, ಸಾಹಿತ್ಯ ಪ್ರೇಮಿಗಳಿಗೆ ನಾಡಿನ ಸಂಸ್ಕೃತಿಯನ್ನು ಬಿಂಬಿಸುವ ಅಡುಗೆಯ ಮೂಲಕ ಆತಿಥ್ಯ ನೀಡಬೇಕೆಂದು ಮಂಡ್ಯ ಜಿಲ್ಲೆಯ ಜನತೆ ಬಯಸಿರುವುದು ಸರಿ ಇದೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಆಹಾರವು ವ್ಯಕ್ತಿಯ ವೈಯಕ್ತಿಕ ಹಕ್ಕಾಗಿದೆ. ಅವರು ಇಷ್ಢ ಪಡುವ ಆಹಾರ ತಿನ್ನಲು ಅವರು ಬದ್ಧರಾಗಿದ್ದಾರೆ. ಯಾರ ಮೇಲೂ ಮತ್ತೊಬ್ಬರ ಆಹಾರ ಪದ್ಧತಿಯನ್ನು ಬಲವಂತವಾಗಿ ಹೇರುವುದು ಅಪರಾಧವಾಗುತ್ತದೆ. ಆದರೆ, ಇಲ್ಲಿ ಭಾಗಿಯಾಗುವ ಎಲ್ಲ ನಾಗರೀಕರು, ಗಣ್ಯರು, ಸಾಹಿತಿಗಳು ನಾಡಿನ ವೈವಿದ್ಯಮಯವಾದ ಆಹಾರ ಸೇವಿಸುವವರು ಆಗಿರುತ್ತಾರೆಂಬುದನ್ನು ಮತ್ತು ಈ ತಾರತಮ್ಯವು ಈ ಎಲ್ಲರನ್ನು ಅಪಮಾನಿಸುತ್ತದೆಂಬುದನ್ನು ಇದೇ ಸಂದರ್ಭದಲ್ಲಿ ಗಮನಿಸಲೇಬೇಕಾಗಿದೆ ಎಂದು ಎಚ್ಚರಿಸಿದ್ದಾರೆ.
ಸಾಹಿತ್ಯೋತ್ಸವದ ಆಹಾರ ವ್ಯವಸ್ಥೆಯು ಕನ್ನಡ, ಕರ್ನಾಟಕಮಯವಾಗಿರುವಂತೆ ನೋಡಿಕೊಳ್ಳುವುದು ಅಗತ್ಯವಿದೆ. ಆದರೆ, ಅದರಲ್ಲಿ ತಾರತಮ್ಯದ ನೀತಿ ಅನುಸರಿಸಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಇದು ಖಂಡನೀಯ ಎಂದು ಖಂಡಿಸಿದ್ದಾರೆ.
ವೈದಿಕಶಾಹಿಗಳು, ಹಿಂದುತ್ವವಾದಿ ಮತಾಂಧರು ಕರ್ನಾಟಕದ ಮತ್ತು ಕನ್ನಡ ನೆಲದ ಆಹಾರ ಸಂಸ್ಕೃತಿ ಹಾಗೂ ಪದ್ಧತಿಗೆ ವಿರುದ್ಧವಾಗಿ, ಅದರ ಮೇಲೆ ವೈದಿಕಶಾಹಿಯ, ಈರುಳ್ಳಿ ಬೇಡ, ಬೆಳ್ಳುಳ್ಳಿ ಬೇಡಾ ಹಾಗೂ ಮಾಂಸ, ಮೀನು, ಮೊಟ್ಟೆ ವರ್ಜ್ಯವೆಂದು, ಅದು ತುಚ್ಛವೆಂದು, ತನ್ನದೆ ಆಹಾರ ಪದ್ಧತಿಯನ್ನು ಬಲವಂತವಾಗಿ ಹೇರುತ್ತಿರುವುದನ್ನು ನಾಡಿನ ಜನತೆ ತೀವ್ರವಾಗಿ ವಿರೋದಿಸುತ್ತಿದ್ದಾರೆ. ಸಿಪಿಐಎಂ ಇಂತಹ ಸರ್ವಾಧಿಕಾರಿ ನಿಲುಮೆಯನ್ನು ಬಲವಾಗಿ ಪ್ರತಿರೋಧಿಸುತ್ತದೆ ಎಂದು ಕಿರಿಕಾರಿದ್ದಾರೆ.
ಇಂತಹ ಸಂದರ್ಭದಲ್ಲಿ ಇಂತಹ ವಿಚಾರಗಳನ್ನು ಮತ್ತಷ್ಟು ಎಚ್ಚರಿಕೆಯಿಂದ ಸಮ್ಮೇಳನದ ಸಂಘಟಕರು ಮತ್ತು ಆಯೋಜಕರು ಗಮನಿಸಬೇಕಾಗುತ್ತದೆ. ಸಮಸ್ತ ನಾಗರೀಕರ ಆಹಾರದ ಹಕ್ಕಿಗೆ ಧಕ್ಕೆ ಬರದಂತೆ ಆಯೋಜಿಸುವ ಹೊಣೆಗಾರಿಕೆಯನ್ನು ತೋರಬೇಕಾಗುತ್ತದೆ.
ಇದನ್ನೂ ಓದಿದ್ದೀರಾ? : ಕಲಬುರಗಿ | ಕಾರು-ಲಾರಿ ಮುಖಾಮುಖಿ ಡಿಕ್ಕಿ : ದಂಪತಿ ಸಾವು
ಈ ವೈವಿದ್ಯಮಯ ಆಹಾರ ಸಂಸ್ಕೃತಿ ಕೇವಲ ಆಹಾರದ ಹಕ್ಕಿನ ಪ್ರಶ್ನೆ ಮಾತ್ರವೇ ಆಗಿಲ್ಲ. ಅದು ನಾಡಿನ ಬಹು ಸಂಖ್ಯಾತ ದುಡಿಯುವ ಜನತೆಯ ಬದುಕಿನ ಹಾಗೂ ದುಡಿಮೆಯ ಆಧಾರವೂ ಆಗಿದೆ ಎಂಬುದನ್ನು ವಿಶೇಷವಾಗಿ ಗಮನಿಸಬೇಕು. ಆದ್ದರಿಂದ ಅದು ಆಹಾರದ ಹಕ್ಕಿನ ಪ್ರಶ್ನೆ ಮಾತ್ರವಲ್ಲಾ. ಬದುಕುವ ಹಕ್ಕಿನ ಪ್ರಶ್ನೆಯೂ ಆಗಿದೆ. ಇದನ್ನು ಲಘುವಾಗಿ ಯಾರೂ ಪರಿಗಣಿಸುವುದು ಉಚಿತವಲ್ಲ ಎಂದು ಕೆ ನೀಲಾ ಖಂಡಿಸಿದ್ದಾರೆ.