ಮಂಡ್ಯದಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟದ ಜತೆಗೆ ಬಾಡಿಲ್ಲದೂಟವನ್ನು ನೀಡುವ ಮೂಲಕ ಆಹಾರ ಅಸ್ಪೃಶ್ಯತೆ ಕೊನೆಗಾಣಿಸಬೇಕೆಂದು ಹೋರಾಟ ಮಾಡುತ್ತಿರುವ ಮಂಡ್ಯದ ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರ ಜತೆಗೆ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ಸೋಮವಾರ ಸಭೆ ನಡೆಸಿ ಅಭಿಪ್ರಾಯ ಆಲಿಸಿದರು.

ಮಂಡ್ಯ ನಗರದ ಜಿ.ಪಂ. ಕಾವೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿ, ಮಾಂಸಾಹಾರ ಇರಬೇಕೆಂದು ಹೋರಾಟ ನಡೆಸುತ್ತಿರುವ ಹಲವು ಮುಖಂಡರು ತಮ್ಮ ಅಹವಾಲುಗಳನ್ನು ಸಚಿವರ ಮುಂದಿಟ್ಟರು. ಎಲ್ಲರ ಅಭಿಪ್ರಾಯಗಳನ್ನು ಆಲಿಸಿದ ಸಚಿವರು, “ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಗೊಳಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ನಾಳೆ ಮಂಡ್ಯದಲ್ಲಿ ‘ಕನ್ನಡಕ್ಕಾಗಿ ಓಟ’ ಮ್ಯಾರಥಾನ್ ನಡೆಯಲಿದೆ. ಇದನ್ನು ಯಶಸ್ವಿಗೊಳಿಸಿ, ನಂತರ ಮತ್ತೊಂದು ಬಾರಿ ನಿಮ್ಮೆ ಜತೆ ಸಭೆ ನಡೆಸಿ ಈ ಬಗ್ಗೆ ಅಂತಿಮ ನಿರ್ಧಾರಕ್ಕೆ ಬರೋಣ” ಎಂದು ಭರವಸೆ ನೀಡಿದರು.
ಪ್ರಗತಿಪರ ಸಂಘಟನೆಗಳ ಹಕ್ಕೊತ್ತಾಯಗಳೇನು?
“87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮಂಡ್ಯದಲ್ಲಿ ನಡೆಯುತ್ತಿರುವುದು ಹೆಮ್ಮೆಯ ವಿಚಾರವಾಗಿದೆ. ಸಮ್ಮೇಳನದ ಊಟೋಪಚಾರದಲ್ಲಿ ಅಘೋಷಿತ ಮಾಂಸಾಹಾರ ನಿಷೇಧ ಜಾರಿಯಲ್ಲಿದೆ. ಮನುಷ್ಯನ ಮೂಲಭೂತ ಅಗತ್ಯವಾದ ಆಹಾರದ ವಿಚಾರದಲ್ಲಿರುವ ತಾರತಮ್ಯ ಕೊನೆಗಾಣಿಸುವುದು ನಮ್ಮ ಉದ್ಧೇಶವಾಗಿದೆ. ಈ ಕುರಿತು ಪ್ರಗತಿಪರ ಸಂಘಟನೆಗಳ ಒಕ್ಕೂಟ ಕೆಲವು ವಿಚಾರಗಳನ್ನು ನಿಮ್ಮ ಗಮನಕ್ಕೆ ತರಲು ಬಯಸುತ್ತದೆ” ಎಂಬುದನ್ನು ಮುಖಂಡರು ತಿಳಿಸಿದರು.
“ಬಾಡೂಟದ ಆಗ್ರಹವೆಂದರೆ ಭರ್ಜರಿ ಬೀಗರೂಟವಲ್ಲ. ಸಮ್ಮೇಳನದಲ್ಲಿ ಸಸ್ಯಾಹಾರದೊಂದಿಗೆ ಕೋಳಿ ಮಾಂಸದ ಸಣ್ಣ ತುಂಡುಗಳು ಮತ್ತು ಮೊಟ್ಟೆ ಕೊಡುವುದನ್ನು ಮಾತ್ರ ನಾವು ನಿರೀಕ್ಷಿಸುತ್ತಿದ್ದೇವೆ. ನಮ್ಮ ಬೇಡಿಕೆ ‘ಪ್ರಾತಿನಿಧ್ಯ’ ಮಾತ್ರ” ಎಂದರು.
ಮಾಂಸಾಹಾರ ಯಾಕೆ ಬೇಕು?
“ನಮ್ಮ ಸಮಾಜದ ಆಹಾರ ರಾಜಕಾರಣವು ಮಾಂಸವನ್ನು ‘ಕೀಳು’ ಎಂದು ಬಿಂಬಿಸಿ ಅದನ್ನು ಅಸ್ಪೃಶ್ಯವಾಗಿಸಿದೆ. ಸಮ್ಮೇಳನಗಳಲ್ಲಿ ‘ನಿಷೇಧಿಸಲಾಗಿದೆ’. ಅದನ್ನು ತೊಡೆದುಹಾಕುವುದು ಸರ್ಕಾರ ಮತ್ತು ನಾಗರಿಕ ಸಮಾಜದ ಕರ್ತವ್ಯವಾಗಿದೆ. ಆಹಾರದ ಅಸ್ಪೃಶತೆಯು ಸಂಪೂರ್ಣವಾಗಿ ಇಲ್ಲವಾಗಬೇಕು. ಅದಕ್ಕಾಗಿ ಮಾಂಸಾಹಾರವು ಜನರಿಗೆ ಸಿಗಬೇಕು” ಎಂದು ಒತ್ತಾಯಿಸಿದರು.
ಕಳೆದ 86 ವರ್ಷಗಳಿಂದ ಇಲ್ಲದ ಮಾಂಸಾಹಾರದ ಬೇಡಿಕೆ ಇವಾಗ ಯಾಕೆ?
ಮೈಸೂರು ಒಡೆಯರ ಕಾಲದಲ್ಲಿ ಶುರುವಾದ ಕನ್ನಡ ಸಾಹಿತ್ಯ ಸಮ್ಮೇಳನವು ಬಹಳ ವರ್ಷಗಳ ಕಾಲ ಜನಸಾಮಾನ್ಯರ ಸಮ್ಮೇಳನವಾಗಿರಲಿಲ್ಲ. ವಿದ್ವಾಂಸರು, ಬರಹಗಾರರು ಮಾತ್ರವೇ ಇರುತ್ತಿದ್ದರು. ಈಗ ಜನಸಾಮಾನ್ಯರ ಪಾಲ್ಗೊಳ್ಳುವಿಕೆ ಲಕ್ಷಗಟ್ಟಲೆ ಇದೆ. ವರ್ಷದಿಂದ ವರ್ಷಕ್ಕೆ ಸಂಖ್ಯೆಯು ಹೆಚ್ಚುತ್ತಲೇ ಇದೆ. ಇವರೆಲ್ಲ ಮತದಾರರೂ ಹೌದು. ಅವರ ಆಯ್ಕೆಯ ಆಹಾರ ಒದಗಿಸಬೇಕಾದ್ದು ಪ್ರಜಾಸತ್ತಾತ್ಮಕ ವ್ಯವಸ್ಥೆಯ ಹೊಣೆ.
ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲೇ ಮಾಂಸಾಹಾರದ ಪ್ರಾತಿನಿಧ್ಯವನ್ನು ಯಾಕೆ ಒದಗಿಸಬೇಕು?
ಕರ್ನಾಟಕದ ಭೌಗೋಳಿಕತೆಯಲ್ಲೇ ಮಂಡ್ಯ ಜಿಲ್ಲೆಯು ಹೆಚ್ಚು ಮಂದಿ ಕನ್ನಡ ಭಾಷೆ ಮಾತನಾಡುವ ಮತ್ತು ಮಾಂಸಾಹಾರ ಸೇವಿಸುವವರ ಜಿಲ್ಲೆಯಾಗಿದ್ದು, ಧರ್ಮ, ಸಮಾಜ ಮತ್ತು ಆಹಾರದ ಸಮನ್ವಯತೆ, ಸಹಿಷ್ಣುತೆ, ಅನನ್ಯತೆ ಮತ್ತು ಆದರತೆಗಳಲ್ಲಿ ಹೆಸರುವಾಸಿಯಾಗಿದೆ. ಹಾಗಾಗಿ ಮಾಂಸಾಹಾರದ ಪ್ರಾತಿನಿಧ್ಯವನ್ನು ಆರಂಭಿಸಲು ಇದು ಪ್ರಶಸ್ತ ಕಾಲ ಮತ್ತು ಸ್ಥಳವಾಗಿದೆ.
ಸಾಹಿತ್ಯ ಸಮ್ಮೇಳನದಲ್ಲಿ ಮಾಂಸಾಹಾರ ವಿತರಣೆ ಸಮಸ್ಯೆಯಾಗುವುದಿಲ್ಲವೇ?!
ನಮ್ಮ ಬೇಡಿಕೆ ಬೀಗರೂಟದ ಬಾಡೂಟವಲ್ಲ. ಕೇವಲ ಎರಡು ತುಂಡು ಕೋಳಿ ಮಾಂಸ ಮತ್ತು ಮೊಟ್ಟೆಯಾಗಿದೆ. ಸಸ್ಯಾಹಾರ ಊಟವನ್ನು ತೆಗೆದುಕೊಂಡ ಮೇಲೆ ಯಾರು ಮಾಂಸಾಹಾರದಲ್ಲಿ ಆಸಕ್ತರೋ ಅವರು ಇವರೆಡನ್ನೂ ಪಡೆದುಕೊಳ್ಳುತ್ತಾರೆ. ಅಲ್ಲದೆ ಸಮ್ಮೇಳನಕ್ಕೆ ಬರುವರಲ್ಲಿ ಬಹಸಂಖ್ಯಾತರು ಮಾಂಸಾಹಾರಿಗಳು. ಇದಕ್ಕಾಗಿ ದೊಡ್ಡ ನೂಕುನುಗ್ಗಲು ಸಂಭವಿಸುವುದಿಲ್ಲ. ಅದಾಗ್ಯೂ ಊಟ ವಿತರಿಸುವ ಆವರಣದಲ್ಲಿ ಯಾವುದೇ ಆಹಾರ ಕೊಟ್ಟರೂ ಜನರ ನಿಯಂತ್ರಣ ಮಾಡಲೇಬೇಕಾಗುತ್ತದೆ. ಅದಕ್ಕಾಗಿ ಜಿಲ್ಲಾಡಳಿತ ಸಮಿತಿಯನ್ನು ನೇಮಿಸಿರುತ್ತದೆ.
ಇದರಿಂದಾಗುವ ಪ್ರಯೋಜನ ಏನು?
ಸಮ್ಮೇಳನದಲ್ಲಿ ಚಾಲ್ತಿಯಲ್ಲಿರುವ ಆಹಾರದ ನಿಷೇಧ ಅಥವಾ ಅಸ್ಪೃಶ್ಯತೆಯನ್ನು ತೆಗೆದುಹಾಕುವುದರಿಂದ ಮಾಂಸಾಹಾರ ಸೇವಿಸುವ ಬಹುಸಂಖ್ಯಾತ ಜನರಿಗೆ ಅವರ ಆಹಾರ ಮತ್ತು ಸಂಸ್ಕೃತಿ ಕುರಿತು ಹೆಚ್ಚಿನ ನೈತಿಕ ಸ್ಥೈರ್ಯ ಬರುತ್ತದೆ. ಇದು ಕೇವಲ ಬರಹಗಾರರು ಮತ್ತು ಸಾಹಿತಿಗಳಳಿಗೆ ಮಾತ್ರ ಅನ್ವಯಿಸುವುದಿಲ್ಲ. ಬದಲಿಗೆ ಭಾಗವಹಿಸುವ ಲಕ್ಷಾಂತರ ಜನಸಾಮಾನ್ಯರಿಗೆ ಅನ್ವಯಿಸಿ ಅವರಿಗೆ ಅವರ ಆಯ್ಕೆಯ ಇಷ್ಟದ ಆಹಾರ ಸಿಗುತ್ತದೆ. ಇದರಿಂದಾಗಿ ಸರ್ಕಾರ, ಕಸಾಪ, ಉಸ್ತುವಾರಿ ಮಂತ್ರಿಗಳು ಮತ್ತು ಸ್ಥಳೀಯ ಶಾಸಕರ ಕುರಿತು ಒಳ್ಳೆಯ ಅಭಿಪ್ರಾಯ ಬರುವುದರಲ್ಲಿ ಸಂದೇಹವೇ ಇಲ್ಲ.
ಇದನ್ನು ಓದಿದ್ದೀರಾ? ಚಿಕ್ಕಬಳ್ಳಾಪುರ | ವಿವಿಧ ಗ್ರಾಪಂಗಳಲ್ಲಿ ಅಕ್ರಮ; ಭ್ರಷ್ಟರ ವಿರುದ್ಧ ಕ್ರಮಕ್ಕೆ ಅಂಬೇಡ್ಕರ್ ಸೇನೆ ಧರಣಿ
ಮಂಡ್ಯದಲ್ಲಿ ನಡೆಯುತ್ತಿರುವ ಈ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕರ್ನಾಟಕದ ಬಹುಸಂಖ್ಯಾತರ ನೆಚ್ಚಿನ ಆಹಾರವಾದ ಮಾಂಸಾಹಾರ ಉಣಬಡಿಸುವುದು ಐತಿಹಾಸಿಕ ದಾಖಲೆಯಾಗಿಯೂ ಅತಿ ಮುಖ್ಯವಾಗಿದೆ ಎಂಬುದನ್ನು ತಾವು ಮನಗಂಡು, ಆಹಾರ ಸಮಾನತೆಯ ಆಶಯವನ್ನು ಎತ್ತಿ ಹಿಡಿಯಬೇಕೆಂದು ಮುಖಂಡರು ಹಕ್ಕೊತ್ತಾಯ ಮಾಡಿದ್ದಾರೆ.
ಇದನ್ನು ನೋಡಿದ್ದೀರಾ? ಸಮ್ಮೇಳನದಲ್ಲಿ ಬಾಡೂಟ: ದೇವನೂರು ಮಹಾದೇವ ಹೇಳಿದ್ದೇನು?
ಸಭೆಯಲ್ಲಿ ಶಾಸಕರಾದ ರಮೇಶ್ ಬಂಡಿಸಿದ್ದೇಗೌಡ, ರವಿಕುಮಾರ್ ಗಣಿಗ, ಜಿಲ್ಲಾಧಿಕಾರಿ ಡಾ.ಕುಮಾರ, ಕರುನಾಡು ಸೇವಕರ ಸಂಘಟನೆಯ ನಾಗಣ್ಣಗೌಡ, ಚಂದ್ರಣ್ಣ, ಸಮಾನ ಮನಸ್ಕರ ವೇದಿಕೆಯ ಲಕ್ಷಣ್, ಜಾಗೃತ ಕರ್ನಾಟಕದ ಸಂತೋಷ್, ಸುಬ್ರಮಣ್ಯ, ಸಿಪಿಐಎಂನ ಸಿ ಕುಮಾರಿ, ಟಿ ಎಲ್ ಕೃಷ್ಣೇಗೌಡ, ಪರಿವರ್ತನ ಸಂಸ್ಥೆಯ ಟಿ ಡಿ ನಾಗರಾಜ್, ನೆಲದನಿ ಬಳಗದ ಲಂಕೇಶ್, ಜಾಣಜಾಣೆಯರ ಜಗದೀಶ್, ಡಾ ಬಿರ್ ಅಂಬೇಡ್ಕರ್ ವಾರಿಯರ್ಸ್ ಗಂಗಾರಾಜು, ಕೃಷ್ಣ ಡಿಎಸ್‌ಎಸ್, ಕರ್ನಾಟಕ ಸ್ವಾಭಿಮಾನಿ ಸಮ ಸಮಾಜದ ನರಸಿಂಹ ಮೂರ್ತಿ, ಸ್ವಾಮಿ ಜಿ ಎಸ್, ವಕೀಲ ರಾಮಯ್ಯ, ಕರವೇ(ಶಿವರಾಮೇಗೌಡ ಬಣ) ಜಯರಾಂ ಶಿವರಾಮ್, ಅಹಿಂದ ಲೋಕೇಶ್ ಇದ್ದರು.