ವಾಹ್ ಉಸ್ತಾದ್ | ಭಾರತೀಯ ಸಂಗೀತವನ್ನು ವಿಶ್ವದಾದ್ಯಂತ ವಿಸ್ತರಿಸಿದ ಝಾಕಿರ್ ಹುಸೇನ್

Date:

Advertisements
ಝಾಕಿರ್ ಹುಸೇನ್ ಇಲ್ಲದ ಈ ಹೊತ್ತಿನಲ್ಲಿ, ಅವರು ಕಲಾಕಾರರಾಗಿ ನಿರ್ವಹಿಸಿದ ಪಾತ್ರ, ಭಾರತೀಯ ಸಂಗೀತಕ್ಕೆ ಮುಸ್ಲಿಮರು ಕೊಟ್ಟ ಕೊಡುಗೆ, ಭಾರತೀಯ ಸಂಗೀತವನ್ನು ವಿಶ್ವದಾದ್ಯಂತ ವಿಸ್ತರಿಸಿದ ರೀತಿ ಬಹಳ ಮಹತ್ವದ್ದು, ಮಾದರಿಯಾಗಿ ನಿಲ್ಲುವಂಥದ್ದು. ತಬಲಾದ ಸದ್ದು ಹೊರಹೊಮ್ಮಿದಾಗಲೆಲ್ಲ ನೆನಪಾಗುತ್ತದೆ… ವಾಹ್ ಉಸ್ತಾದ್!

‘ವಾಹ್ ಉಸ್ತಾದ್ ವಾಹ್‌’ ಎಂಬ ಮಾತಿಗೆ ‘ವಾಹ್ ತಾಜ್ ಎನ್ನಿ’ ಎಂಬ 30 ಸೆಕೆಂಡ್‌ಗಳ ತಾಜ್ ಮಹಲ್ ಚಹಾದ ಜಾಹೀರಾತಿನಲ್ಲಿ ತಬಲಾ ಮೇಲೆ ಕುಣಿದಾಡುತ್ತಿದ್ದ ಬೆರಳುಗಳು, ಅತ್ತಿಂದಿತ್ತ ತೂಗುತ್ತಿದ್ದ ಕತ್ತು, ಅದರಂತೆಯೇ ತೊನೆದಾಡುತ್ತಿದ್ದ ದಟ್ಟ ಗುಂಗುರು ಕೂದಲು, ಹಿನ್ನೆಲೆಯಲ್ಲಿ ಓಡುತ್ತಿದ್ದ ಕುದುರೆಗಳು, ಅದರ ನಡುವೆ ಹೊಗೆಯಾಡುತ್ತಿದ್ದ ತಾಜ್ ಟೀ… ಆಗ ಹೊರಹೊಮ್ಮುತ್ತಿದ್ದ ತಬಲಾ ಸದ್ದು ವೀಕ್ಷಕರನ್ನು ತಲೆದೂಗುವಂತೆ ಮಾಡುತ್ತಿತ್ತು. ಮತ್ತೆ ಮತ್ತೆ ನೋಡಿಸಿಕೊಳ್ಳುತ್ತಿತ್ತು. ಈ ಪುಟ್ಟ ಜಾಹೀರಾತು 90ರ ದಶಕದಲ್ಲಿ, ಜಾಹೀರಾತು ಜಗತ್ತಿನಲ್ಲಿ ಭಾರೀ ಸಂಚಲನವನ್ನು ಸೃಷ್ಟಿಸಿತ್ತು.

ತಬಲಾ ಮಾಂತ್ರಿಕ ಉಸ್ತಾದ್ ಝಾಕಿರ್ ಹುಸೇನ್‌ ಹೆಸರು ಕೇಳಿದ ಕೂಡಲೇ, ತಬಲಾ ಮೇಲೆ ಆ ಬೆರಳುಗಳ ನರ್ತನದ ಸದ್ದಿನಲೆಗಳು ಇನ್ನೂ ಕಿವಿಯೊಳಗೆ ಗುಂಯ್ ಗುಡುತ್ತಿವೆ. ಅಂತಹ ಸಂಗೀತವನ್ನು ಆರು ದಶಕಗಳ ಕಾಲ ಉಣಬಡಿಸಿದ ಝಾಕಿರ್ ಬೆರಳುಗಳು ಈಗ ಸ್ತಬ್ಧವಾಗಿವೆ. ತಬಲಾಗಳು ತಬ್ಬಲಿಗಳಾಗಿವೆ. ಮಾಂತ್ರಿಕ ಉಸ್ತಾದ್ ಹುಸೇನ್‌, ತಮ್ಮ 73ನೇ ವಯಸ್ಸಿನಲ್ಲಿ ಪರಲೋಕವಾಸಿಯಾಗಿದ್ದಾರೆ.

ಝಾಕಿರ್ ಹುಸೇನ್ ಅಲ್ಲಾಹ್ ರಖಾ ಖುರೇಷಿ ಒಬ್ಬ ಸುಪ್ರಸಿದ್ಧ ಭಾರತೀಯ ತಬಲಾ ವಾದಕ, ಸಂಯೋಜಕ ಮತ್ತು ತಾಳವಾದ್ಯ ವಾದಕ. ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಕ್ಕೆ ಅವರು ನೀಡಿದ ಕೊಡುಗೆ ಅವಿಸ್ಮರಣೀಯ. ಅದರಲ್ಲೂ ಭಾರತೀಯ ಸಂಗೀತವನ್ನು ವಿಶ್ವದಾದ್ಯಂತ ವಿಸ್ತರಿಸುವಲ್ಲಿ ಅವರ ಪಾತ್ರ ಪ್ರಾತಃಸ್ಮರಣೀಯ.

Advertisements

ಝಾಕಿರ್ ಹುಸೇನ್ ಹುಟ್ಟಿದ್ದು, ಬೆಳೆದದ್ದೆಲ್ಲ ಮುಂಬೈನಲ್ಲಿ. ವಿಶ್ವವಿಖ್ಯಾತ ತಬಲಾ ವಾದಕ ಅಲ್ಲಾಹ್ ರಖಾ ಅವರ ಹಿರಿಯ ಮಗನಾಗಿ 1951ರ ಮಾರ್ಚ್ 9ರಂದು ಜನಿಸಿದರು. ಅಲ್ಲಾಹ್ ರಖಾ ಅವರು ಆ ಕಾಲದ ಸಂಗೀತ ದಿಗ್ಗಜರಾದ ರವಿಶಂಕರ್ ಮತ್ತು ಅಲಿ ಅಕ್ಬರ್ ಖಾನ್ ಅವರಂತಹ ಪ್ರಸಿದ್ಧ ಸಂಗೀತಗಾರರೊಂದಿಗೆ ಒಡನಾಟವಿಟ್ಟುಕೊಂಡಿದ್ದವರು. ಅಂತಹವರ ಮಗನಾಗಿ ಜನಿಸಿದ ಝಾಕಿರ್, ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸೇಂಟ್ ಮೈಕಲ್ಸ್ ಹೈಸ್ಕೂಲ್, ಪದವಿಯನ್ನು ಸೇಂಟ್ ಕ್ಸೇವಿಯರ್ ಕಾಲೇಜಿನಲ್ಲಿ ಮುಗಿಸಿದರು. ಆನಂತರ ಅವರು ವಾಷಿಂಗ್ಟನ್ ವಿಶ್ವವಿದ್ಯಾಲಯದಿಂದ ಸಂಗೀತದಲ್ಲಿ ಡಾಕ್ಟರೇಟ್ ಪಡೆದರು.

ಇದನ್ನು ಓದಿದ್ದೀರಾ?: ವಿಶ್ವವಿಖ್ಯಾತ ತಬಲ ವಾದಕ ಉಸ್ತಾದ್ ಝಾಕೀರ್ ಹುಸೇನ್ ಅಮೆರಿಕದಲ್ಲಿ ನಿಧನ

ಆದರೆ ತಬಲಾ ತರಬೇತಿಗೆ ಮನೆಯನ್ನೇ ಮೊದಲ ಪಾಠಶಾಲೆಯನ್ನಾಗಿಸಿಕೊಂಡರು. ತಂದೆಯನ್ನೇ ಗುರುವನ್ನಾಗಿ ಸ್ವೀಕರಿಸಿದರು. ಅವರ ಸಂಗೀತ ವೃತ್ತಿಜೀವನವು ನವಿರಾದ ವಯಸ್ಸಿನಲ್ಲಿಯೇ ಪ್ರಾರಂಭವಾಯಿತು. ಎಳೆಯ ಬೆರಳುಗಳು ತಬಲಾದ ಮೇಲೆ ಕುಣಿಯಲು ಪ್ರಾರಂಭಿಸಿದಾಗ ಅವರಿಗೆ ಕೇವಲ ಮೂರು ವರ್ಷ. ಬಾಲ್ಯದಲ್ಲೇ ತನ್ನ ಪ್ರತಿಭೆಯ ಮೂಲಕ ಗಮನಸೆಳೆದರು. ಏಳನೇ ವರ್ಷದ ಬಾಲಕನಿದ್ದಾಗಲೇ ಸಾರ್ವಜನಿಕವಾಗಿ ತಬಲಾ ವಾದನ ಪ್ರದರ್ಶನ ನೀಡಿದ್ದ ಝಾಕಿರ್ ಹುಸೇನ್‌, ಹನ್ನೆರಡನೇ ವರ್ಷಕ್ಕೆ ಅಂತಾರಾಷ್ಟ್ರೀಯ ಮಟ್ಟದ ಸಂಗೀತ ಕಛೇರಿ ಪ್ರವಾಸ ಶುರು ಮಾಡಿಕೊಂಡರು. ಆರು ದಶಕಗಳ ವೃತ್ತಿ ಬದುಕಿನಲ್ಲಿ ಸಾಧನೆಯ ಮೈಲುಗಲ್ಲುಗಳನ್ನು ನೆಡುತ್ತಲೇ ಸಾಗಿದರು.

ಝಾಕಿರ್ ಹುಸೇನ್ ಹುಟ್ಟಿ ಬೆಳೆದ ಮುಂಬೈ, ಕಲಾವಿದರ ತವರೂರು. ಕಲೆ, ಸಾಹಿತ್ಯ, ಸಂಗೀತ, ಸಿನೆಮಾ, ನೃತ್ಯಕ್ಕೆ ಬೇರೆಯದೇ ಆಯಾಮ ನೀಡುವ ಕೇಂದ್ರವಾಗಿತ್ತು. ಅದು ಸಹಜವಾಗಿಯೇ ಝಾಕಿರ್ ಹುಸೇನ್‌ರಂತವರಿಗೆ ಹೊಸ ಹೊಸ ಆವಿಷ್ಕಾರಗಳಿಗೆ ಕಾರಣವಾಯಿತು. 1970ರ ದಶಕದಲ್ಲಿ ಝಾಕಿರ್ ಮತ್ತು ತಾಳವಾದ್ಯ ವಾದಕ ವಿನಾಯಕರಾಮ್ ಜೊತೆಗೂಡಿ ‘ಶಕ್ತಿ ಫ್ಯೂಶನ್ ಗ್ರೂಪ್’ ರಚಿಸಿದರು. ಆ ಗುಂಪಿನಲ್ಲಿ ಹೆಸರುವಾಸಿ ಗಿಟಾರ್ ವಾದಕ ಜಾನ್ ಮೆಕ್ಲಾಫ್ಲಿನ್, ಪಿಟೀಲು ವಾದಕ ಎಲ್. ಶಂಕರ್ ಗುರುತಿಸಿಕೊಂಡರು.

ಈ ‘ಶಕ್ತಿ ಫ್ಯೂಶನ್ ಗ್ರೂಪ್’ ಭಾರತದ ಶಾಸ್ತ್ರೀಯ ಸಂಗೀತವನ್ನು ಜಾಝ್‌ನೊಂದಿಗೆ ಬೆಸೆಯಿತು. ಸಮಕಾಲೀನ ಸಂಗೀತ ಕ್ಷೇತ್ರದಲ್ಲಿ ಅಳಿಸಲಾಗದ ಹೊಸ ಮಾದರಿಯ ಸಂಗೀತ ಪ್ರಕಾರವನ್ನು ಸೃಷ್ಟಿಸಿ ತನ್ನದೇ ಛಾಪು ಮೂಡಿಸಿತು. ಅವರ ಸಂಗೀತ ವೃತ್ತಿಜೀವನವು ಅವರ ಬಹುಮುಖ ಪ್ರತಿಭೆಯನ್ನು ಹೊರಹಾಕಿತು. ಸಂಗೀತದ ಲಯ, ಮಾಧುರ್ಯದ ಜೊತೆಗೆ ಸಂಸ್ಕೃತಿಯ ಆಳ ತಿಳಿವಳಿಕೆಗೆ ಸಾಕ್ಷಿಯಾಯಿತು. ಆ ನಂತರ ಝಾಕಿರ್, ಹೆಸರಾಂತ ಕಲಾವಿದರಾದ ಜಾರ್ಜ್ ಹ್ಯಾರಿಸನ್, ರವಿ ಶಂಕರ್ ಮತ್ತು ವ್ಯಾನ್ ಮಾರಿಸನ್ ಅವರೊಂದಿಗೆ ಕೆಲಸ ಮಾಡಿದರು. ಗ್ರೇಟ್‌ಫುಲ್ ಡೆಡ್ ಅಂಡ್ ಅರ್ಥ್, ವಿಂಡ್ ಅಂಡ್ ಫೈರ್‌ ಆಲ್ಬಂಗಳಲ್ಲಿ ಸಹ ಪ್ರದರ್ಶನ ನೀಡಿದರು. 1991ರಲ್ಲಿ ಮಿಕ್ಕಿ ಹಾರ್ಟ್ ಅವರೊಂದಿಗೆ ರಚಿಸಲಾದ ಅವರ ಆಲ್ಬಂ ಪ್ಲಾನೆಟ್ ಡ್ರಮ್, ಅತ್ಯುತ್ತಮ ವಿಶ್ವ ಸಂಗೀತ ಆಲ್ಬಂಗಾಗಿ ಮೊದಲ ಬಾರಿಗೆ ಪ್ರತಿಷ್ಠಿತ ಗ್ರ್ಯಾಮಿ ಅವಾರ್ಡ್ ಗೆದ್ದುಕೊಂಡಿತು. ಅದು ಭಾರತೀಯ ಸಂಗೀತದ ಜಾಗತಿಕ ರಾಯಭಾರಿಯಾಗಿ ಝಾಕಿರ್ ಸ್ಥಾನವನ್ನು ಗಟ್ಟಿಗೊಳಿಸಿತು.

ಝಾಕಿರ್ ಹುಸೇನ್ ಕೇವಲ ತಬಲಾ ವಾದಕರಷ್ಟೇ ಆಗಿರಲಿಲ್ಲ. ಸ್ಫುರದ್ರೂಪಿಯಾಗಿದ್ದು ಕೆಲವು ಚಲನಚಿತ್ರಗಳಲ್ಲೂ ನಟಿಸಿ, ನಟರಾಗಿಯೂ ಗುರುತಿಸಿಕೊಂಡಿದ್ದರು. ಅವರ ಏಕವ್ಯಕ್ತಿ ಆಲ್ಬಂ ‘ಮೇಕಿಂಗ್ ಮ್ಯೂಸಿಕ್’ನಿಂದ ಭಾರಿ ಜನಪ್ರಿಯತೆ ಪಡೆದ ಝಾಕಿರ್, ತಮಗೇ ಗೊತ್ತಿಲ್ಲದಂತೆ ಸಿನೆಮಾ ಜಗತ್ತಿನ ಮೇಲೂ ಪ್ರಭಾವ ಬೀರಿದ್ದರು.

ಅದರ ಫಲವಾಗಿ ‘ದಿ ಪರ್ಫೆಕ್ಟ್ ಮರ್ಡರ್’, ‘ಮಿಸ್ ಬೀಟೀಸ್ ಚಿಲ್ಡ್ರನ್’, ‘ಸಾಜ್’ ಮತ್ತು ‘ಮಂಟೋ’ ಮುಂತಾದ ಚಿತ್ರಗಳಿಗೂ ಕೆಲಸ ಮಾಡಿದ್ದರು. ಅವರೊಬ್ಬ ಕಲಾತ್ಮಕ ನಟ ಕೂಡ ಆಗಿದ್ದರು. ಅವರು ಮೊದಲು 1983ರಲ್ಲಿ ತೆರೆಕಂಡ ‘ಹೀಟ್ ಅಂಡ್ ಡಸ್ಟ್’ ಚಿತ್ರದಲ್ಲಿ ನಟರಾಗಿ ಕಾಣಿಸಿಕೊಂಡರು. ಆ ಚಿತ್ರದಲ್ಲಿ ಶಶಿಕಪೂರ್ ಪ್ರಮುಖ ಪಾತ್ರದಲ್ಲಿದ್ದರು. ಆನಂತರ ಅವರು, 1998ರಲ್ಲಿ, ‘ಸಾಜ್’ ಚಿತ್ರದಲ್ಲಿ ಶಬನಾ ಅಜ್ಮಿಯ ಪ್ರೇಮಿಯ ಪಾತ್ರದಲ್ಲಿ ನಟಿಸಿದ್ದರು. ಈ ಚಿತ್ರದ ಕತೆ- ಲತಾ ಮಂಗೇಶ್ಕರ್ ಮತ್ತು ಆಶಾ ಭೋಂಸ್ಲೆ ಅವರ ವೈಯಕ್ತಿಕ ಜೀವನದಿಂದ ಪ್ರೇರಿತವಾಗಿದ್ದರಿಂದ ಸಾಕಷ್ಟು ವಿವಾದಕ್ಕೂ ಕಾರಣವಾಗಿತ್ತು, ಸುದ್ದಿಯಾಗಿತ್ತು. ಝಾಕಿರ್ ನಟನೆ ಸಿನೆಮಾ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿತ್ತು. ಆದರೆ, ಆ ನಟನಾ ಹಾದಿ ಅಲ್ಲಿಗೇ ಕೊನೆಯಾಗಿತ್ತು.

Zakir Hussain

ಆದರೆ, ಮತ್ತೊಂದು ದೃಷ್ಟಿಯಿಂದ ನೋಡಿದರೆ, ಝಾಕಿರ್ ಹುಸೇನ್ ಅವರ ವೃತ್ತಿಜೀವನವು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕಲಾವಿದರೊಂದಿಗೆ ಬೆರೆತು ಬೇರೆಯೇ ಮಟ್ಟಕ್ಕೆ ಮುಟ್ಟಿದೆ. ಅವರು 1970ರ ದಶಕದಲ್ಲಿಯೇ ಅಮೆರಿಕ ಪ್ರವಾಸಗಳತ್ತ ಹೆಚ್ಚಿನ ಗಮನ ಮತ್ತು ಪ್ರಾಮುಖ್ಯತೆ ಹರಿಸತೊಡಗಿದರು. ಪ್ರತಿ ವರ್ಷ 150ಕ್ಕೂ ಹೆಚ್ಚು ಸಂಗೀತ ಕಛೇರಿಗಳನ್ನು ನೀಡಿದರು. ಸಂಗೀತಕ್ಕೆ ನೀಡಿದ ಅವರ ಹೊಸ ವಿಧಾನವು ಅನೇಕ ಪ್ರಕಾರಗಳು ಮತ್ತು ಶೈಲಿಗಳಿಗೆ ಕಾರಣವಾಯಿತು. ಜಾಝ್ ಮತ್ತು ವಿಶ್ವ ಸಂಗೀತದ ಅನೇಕ ವಿಭಿನ್ನ ಸಂಗೀತಗಾರರೊಂದಿಗೆ ಒಡನಾಡಲು ಸಹಕರಿಸಿತು. ಝಾಕಿರ್, ತಮ್ಮ ವೃತ್ತಿಜೀವನದುದ್ದಕ್ಕೂ ದಿ ಬೀಟಲ್ಸ್, ಜಾನ್ ಮೆಕ್ಲಾಫ್ಲಿನ್, ಹರಿಪ್ರಸಾದ್ ಚೌರಾಸಿಯಾ, ರವಿಶಂಕರ್ ಮತ್ತು ಇತರ ಅನೇಕ ಪ್ರಸಿದ್ಧ ಸಂಗೀತಗಾರರೊಂದಿಗೆ ತಬಲಾ ವಾದಕರಾಗಿ ಗಮನ ಸೆಳೆದರು. ತಬಲಾ ಮಾಂತ್ರಿಕನ ಸ್ಥಾನಕ್ಕೇರಿದರು.

ಇದನ್ನು ಓದಿದ್ದೀರಾ?: ಸಮ್ಮೇಳನದಲ್ಲಿ ಬಾಡೂಟ ನಿಷೇಧಿಸಿದರೆ ಬಹುಸಂಖ್ಯಾತರ ಸ್ವಾಭಿಮಾನಕ್ಕೆ ಧಕ್ಕೆ: ದೇವನೂರು

ಝಾಕಿರ್ ಹುಸೇನ್ ಅವರಿಗೆ 1988ರಲ್ಲಿ ಪದ್ಮಶ್ರೀ, 1990ರಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ರಾಷ್ಟ್ರೀಯ ದತ್ತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. 1999ರಲ್ಲಿ ಆರ್ಟ್ಸ್ ನ್ಯಾಷನಲ್ ಹೆರಿಟೇಜ್ ಫೆಲೋಶಿಪ್ ಕೂಡ ಸಿಕ್ಕಿತು. 2002ರಲ್ಲಿ ಪದ್ಮಭೂಷಣ, 2023ರಲ್ಲಿ ಪದ್ಮವಿಭೂಷಣ ಪ್ರಶಸ್ತಿಗಳ ಗೌರವಕ್ಕೂ ಪಾತ್ರರಾದರು. ಗ್ಲೋಬಲ್ ಡ್ರಮ್ ಪ್ರಾಜೆಕ್ಟ್‌ಗಾಗಿ ಅವರ ನವೀನ ವಿಧಾನವನ್ನು ಪರಿಚಯಿಸಿದ ಸಂಗೀತಕ್ಕೆ 2009ರ ಗ್ರ್ಯಾಮಿ ಪ್ರಶಸ್ತಿಯೂ ಸಿಕ್ಕಿತು. ಅದು ಪ್ರಪಂಚದಾದ್ಯಂತ ವೈವಿಧ್ಯಮಯ ಲಯಗಳು ಮತ್ತು ಧ್ವನಿಗಳನ್ನು ಸಂಯೋಜಿಸಿದ ಸಂಗೀತವಾಗಿತ್ತು. ಇದಲ್ಲದೆ, ಇತ್ತೀಚೆಗೆ, ಫೆಬ್ರವರಿ 2024ರಲ್ಲಿ ನಡೆದ 66ನೇ ವಾರ್ಷಿಕ ಗ್ರ್ಯಾಮಿ ಪ್ರಶಸ್ತಿಗಳಲ್ಲಿ ಒಂದೇ ರಾತ್ರಿಯಲ್ಲಿ ಹಿಂದಿನ ಮೂರು ಸೇರಿದಂತೆ ಈಗಿನ ಎರಡು ಸೇರಿ, ಐದು ಗ್ರ್ಯಾಮಿ ಪ್ರಶಸ್ತಿಗಳನ್ನು ಝಾಕಿರ್ ಹುಸೇನ್ ಗೆದ್ದಿದ್ದಾರೆ. ಆ ಮೂಲಕ ಈ ಸಾಧನೆ ಮಾಡಿದ ಮೊದಲ ಭಾರತೀಯ ಸಂಗೀತಗಾರರಾಗಿದ್ದಾರೆ.

ಹುಸೇನ್ ತಮ್ಮ ಮೊದಲ ಪ್ರದರ್ಶನಕ್ಕೆ ಕೇವಲ ಐದು ರೂ. ಸಂಭಾವನೆ ಪಡೆದಿದ್ದರಂತೆ. ಆ ಸಮಯದಲ್ಲಿ ಅವರ ತಂದೆ ಉಸ್ತಾದ್ ಅಲ್ಲಾಹ್ ರಖಾ ಅವರು ಸಹ ಪ್ರಸಿದ್ಧ ತಬಲಾ ವಾದಕರಾಗಿದ್ದರು. ಬೆಳೆಯುತ್ತ ಕಠಿಣ ಪರಿಶ್ರಮ ಮತ್ತು ಸಮರ್ಪಣಾ ಮನೋಭಾವ ರೂಢಿಸಿಕೊಂಡ ಝಾಕಿರ್ ಪ್ರಪಂಚದಾದ್ಯಂತ ಬಹಳ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿ, ಛಾಪನ್ನು ಮೂಡಿಸಿದರು. ತಮ್ಮ ಒಂದು ಮ್ಯೂಸಿಕ್ ಕನ್ಸರ್ಟ್‌ಗೆ ಐದರಿಂದ ಹತ್ತು ಲಕ್ಷ ರೂಪಾಯಿಗಳನ್ನು ಸಂಭಾವನೆಯಾಗಿ ಪಡೆಯುತ್ತಿದ್ದರಂಬ ಸುದ್ದಿಯೂ ಇದೆ.

ಇದಲ್ಲದೆ, ಹುಸೇನ್ ಶಿಕ್ಷಣತಜ್ಞರಾಗಿ ಪ್ರಿನ್ಸ್‌ಟನ್ ಮತ್ತು ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯಗಳಂತಹ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಕಾರ್ಯಾಗಾರಗಳು, ಉಪನ್ಯಾಸಗಳನ್ನು ನಡೆಸಿಕೊಟ್ಟಿದ್ದಾರೆ. ಸ್ಯಾನ್ ಫ್ರಾನ್ಸಿಸ್ಕೋ ಬೇ ಏರಿಯಾದಲ್ಲಿ ತತ್ವಶಾಸ್ತ್ರ ಕಾರ್ಯಾಗಾರಗಳ ಮೂಲಕ ಜನಪ್ರಿಯರಾಗಿ ಜಾಗತಿಕ ಮನ್ನಣೆಯನ್ನೂ ಗಳಿಸಿದ್ದಾರೆ.

ಝಾಕಿರ್ ಹುಸೇನ್ ಹುಟ್ಟಿ ಬೆಳೆದ ಮುಂಬೈ ಮೊದಲೇ ಕಾಸ್ಮೋ ಸಿಟಿ. ಜೊತೆಗೆ ಸಾಂಸ್ಕೃತಿಕ ಲೋಕಕ್ಕೆ ವಾಣಿಜ್ಯ ಕೇಂದ್ರವಾಗಿದ್ದ ಸ್ಥಳ. ಅದರೊಂದಿಗೆ ಸಹಬಾಳ್ವೆ, ಸೌಹಾರ್ದತೆ, ಸಹೋದರತೆಯೂ ಸೇರಿ, ಪ್ರತಿಭಾವಂತರು ಹೊರಹೊಮ್ಮಲು ಕಾರಣವಾಗಿದ್ದ ನಗರವದು. ಝಾಕಿರ್ ತಂದೆಯ ಕಾಲಕ್ಕೇ ಮನೆಯೇ ಕಲಾದೇಗುಲವಾಗಿತ್ತು. ಜೊತೆಗೆ ಹೊರಗಿನ ಪರಿಸರವೂ ಅವರನ್ನು ಜಾತ್ಯತೀತವಾಗಿ ಬೆಳೆಯಲು ಅನುಕೂಲ ಕಲ್ಪಿಸಿತ್ತು. ಆದಕಾರಣ, ಝಾಕಿರ್ ಅವರ ತಬಲಾ ವಾದನ, ಸಾಂಪ್ರದಾಯಿಕ ವಾದನದ ಜೊತೆಗೆ ಭಾರತದ ಮಣ್ಣಿನ ಗುಣ ಹೊಂದಲು ಕಾರಣವಾಯಿತು. ಅವರ ಕಠಿಣ ಪರಿಶ್ರಮ, ಶ್ರದ್ಧೆ ಅವರ ಸಾಮರ್ಥ್ಯಕ್ಕೆ ಸಾಥ್ ನೀಡಿತು. ಸಮಕಾಲೀನ ತಬಲಾ ವಾದಕರ ಪೈಕಿ ಭಿನ್ನವಾಗಿರಲು, ಜನಪ್ರಿಯರಾಗಲು, ಯಶಸ್ವಿಯಾಗಲು ಕಾರಣವಾಯಿತು.

zakir1

ಇದರ ಜೊತೆಗೆ ಝಾಕಿರ್ ಅವರ ಸ್ವಭಾವವೂ ಕೂಡ ಬಹಳ ಮುಖ್ಯ ಕಾರಣ ಎನ್ನುವುದನ್ನು ಅವರೊಂದಿಗೆ ಒಡನಾಡಿದ ಹಲವು ಕಲಾವಿದರು, ಅವರು ಇಲ್ಲವಾದ ಈ ಹೊತ್ತಿನಲ್ಲಿ ಹಂಚಿಕೊಂಡಿದ್ದಾರೆ. ಭಾರತೀಯ ಶಾಸ್ತ್ರೀಯ ಸಂಗೀತದ ಸಂಕೀರ್ಣ ಲಯಗಳನ್ನು ಜಾಝ್ ಮತ್ತು ರಾಕ್‌ನಂತಹ ಪಾಶ್ಚಾತ್ಯ ಪ್ರಕಾರಗಳೊಂದಿಗೆ ವಿಲೀನಗೊಳಿಸುವುದಕ್ಕೆ ಅವರ ಸೆಕ್ಯುಲರ್ ಮನೋಭಾವ, ವೈಚಾರಿಕ ಪ್ರಜ್ಞೆ ಮತ್ತು ಮಾನವೀಯ ಗುಣಗಳು ಅವರನ್ನು ಭಿನ್ನವಾಗಿ ಕಡೆದು ನಿಲ್ಲಿಸಿದವು. ಆ ನಿಲುವು, ಧೋರಣೆಗಳೇ ಅವರನ್ನು, ತಮ್ಮ ಮ್ಯಾನೇಜರ್ ಆಗಿದ್ದ ಜೊತೆಗೆ ಕಥಕ್ ನೃತ್ಯಗಾತಿಯಾದ ಆಂಟೋನಿಯ ಮಿನ್ನೇಕೋಲ ಎಂಬಾಕೆಯನ್ನು ವರಿಸುವಂತೆ ಮಾಡಿದ್ದವು. ಇವರಿಗೆ ಇಬ್ಬರು ಮಕ್ಕಳು- ಅನಿಶಾ ಖುರೇಷಿ, ಇಸಾಬೆಲ್ಲ ಖುರೇಷಿ.

ಅವರಿಲ್ಲದ ಈ ಹೊತ್ತಿನಲ್ಲಿ, ಅವರು ಕಲಾಕಾರರಾಗಿ ನಿರ್ವಹಿಸಿದ ಪಾತ್ರ, ಭಾರತೀಯ ಸಂಗೀತಕ್ಕೆ ಮುಸ್ಲಿಮರು ಕೊಟ್ಟ ಕೊಡುಗೆ, ಭಾರತೀಯ ಸಂಗೀತವನ್ನು ವಿಶ್ವದಾದ್ಯಂತ ವಿಸ್ತರಿಸಿದ ರೀತಿ ಬಹಳ ಮಹತ್ವದ್ದು, ಮಾದರಿಯಾಗಿ ನಿಲ್ಲುವಂಥದ್ದು. ತಬಲಾದ ಸದ್ದು ಹೊರಹೊಮ್ಮಿದಾಗಲೆಲ್ಲ ನೆನಪಾಗುತ್ತದೆ… ವಾಹ್ ಉಸ್ತಾದ್!  

Basavaraju Megalkeri
+ posts

ಲೇಖಕ, ಪತ್ರಕರ್ತ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಬಸವರಾಜು ಮೇಗಲಕೇರಿ
ಬಸವರಾಜು ಮೇಗಲಕೇರಿ
ಲೇಖಕ, ಪತ್ರಕರ್ತ

2 COMMENTS

  1. ತುಂಬಲಾರದ ನಷ್ಟ ಭಾರತೀಯ ಸಂಗೀತ ಕ್ಷೇತ್ರಕ್ಕೆ ಸಂಗೀತ ಕ್ಷತ್ರದಲ್ಲಿ ಅಪಾರ ಸೇವೆ ಸಲ್ಲಿಸಿದ ದಿಗ್ಗಜ ತಬಲವಾದನದಲ್ಲಿ ಅಗ್ರಗಣ್ಯರು ಅವನ್ನು ನೋಡಿ ನಾವುಗಳು ಪ್ರಭಾವಿತರಾಗಿ ತಬಲ ವಾದನವನ್ನು ಶಾಸ್ತ್ರೀಯವಾಗಿ ಅಭ್ಯಾಸ ಮಾಡುತ್ತಿದ್ದೇವೆ ಅದರೆ ಜಾಕೀರ್ ಹುಸೇನ್ ಅವರ ಎನ್ನಿಲ್ಲವಾಗಿದ್ದಾರೆ ಆದರೆ ಅವರ ಕಲಾಸೇವೆ ಮಾತ್ರ ಎಂದಿಗೂ ನಮ್ಮೊಂದಿಗೆ ಇರುತ್ತದೆ ಕಲಾದೇವರು ಮತ್ತೆ ವುಟಿ ಬರಲಿ ಎಂದು ಹಾರೈಸೋಣ 🌹🌹🌹🙏🙏🙏🌹🌹🌹

    • ಪಂಡಿತ್ ಜಾಕೀರ್ ಹುಸೇನ್ ರವರ ಸಾವಿನಸುದ್ಧಿಯನ್ನ ಅಷ್ಟಾಗಿ ಯಾವ ನ್ಯೂಸ್ ಚಾನಲ್ ಬಿತ್ತರಿಸಲಿಲ್ಲ ಯಾಕೇ ಕರ್ನಾಟಕದಲ್ಲಿ ಈ ದಿನ ನಿಮ್ಮ ನ್ಯೂಸ್ ಚಾನಲ್ ಮಾತ್ರ ಬಿತ್ತರಿಸಿದ್ದು ಒಬ್ಬ ಸುಪ್ರಸಿದ್ಧ ಕಲಾವಿದರನ್ನು ಸರ್ಕಾರಗಳು ಸಂತಪಸೂಚಿಸಿದ್ದು ಕಾಣಲಿಲ್ಲ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಲೆಮಾರಿ ಸಮುದಾಯಗಳಿಗೆ ಸಾಂವಿಧಾನಿಕ ನ್ಯಾಯ ಸಿಗಲಿ: ಚಲನಚಿತ್ರ ನಿರ್ದೇಶಕಿ ಸುಮನ್ ಕಿತ್ತೂರು

ಪರಿಶಿಷ್ಟ ಜಾತಿ ಒಳಮೀಸಲಾತಿ ವಿಚಾರದಲ್ಲಿ ಅಲೆಮಾರಿ ಸಮುದಾಯಗಳಿಗೆ ಸಾಂವಿಧಾನಿಕ ನ್ಯಾಯ ಸಿಗಲಿ...

ಉತ್ತರಾಖಂಡ | ಕಪಾಳ ಮೋಕ್ಷ ಮಾಡಿದ ಶಿಕ್ಷಕನಿಗೆ ಗುಂಡು ಹಾರಿಸಿದ ವಿದ್ಯಾರ್ಥಿ

ತರಗತಿಯಲ್ಲಿ ಕಪಾಳ ಮೋಕ್ಷ ಮಾಡಿದ ಕಾರಣಕ್ಕೆ ಕುಪಿತಗೊಂಡ ವಿದ್ಯಾರ್ಥಿಯೊಬ್ಬ ತನ್ನ ಶಿಕ್ಷಕನ...

ಅಯೋಧ್ಯೆ | ಆಸ್ಪತ್ರೆಗೆ ದಾಖಲಿಸಲು ನಿರಾಕರಣೆ, ತಂದೆಯ ತೋಳಿನಲ್ಲಿ ಮೃತಪಟ್ಟ ಬಾಲಕ

ತೀವ್ರವಾಗಿ ಅಸ್ಪಸ್ಥಗೊಂಡಿದ್ದ ತನ್ನ 12 ವರ್ಷದ ಪುತ್ರನನ್ನು ಸರ್ಕಾರಿ ಆಸ್ಪತ್ರೆಗೆ ಕರೆ...

ನಟಿಗೆ ಕಿರುಕುಳ ಆರೋಪ: ಕೇರಳ ಯುವ ಕಾಂಗ್ರೆಸ್ ಅಧ್ಯಕ್ಷನ ಹುದ್ದೆ ತೊರೆದ ರಾಹುಲ್ ಮಾಂಕೂಟತ್ತಿಲ್

ಕೇರಳದ ರಾಜಕೀಯದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿರುವ ಅಶ್ಲೀಲ ಸಂದೇಶ ಹಾಗೂ ದುರ್ವರ್ತನೆ...

Download Eedina App Android / iOS

X