ಏಷ್ಯಾ ಖಂಡದಲ್ಲೇ ದೊಡ್ಡ ಮಾರುಕಟ್ಟೆ ಎಂದು ಹೆಸರುವಾಸಿಯಾದ ವಾಷಿಜ್ಯ ನಗರಿ ಹುಬ್ಬಳ್ಳಿ ಎಪಿಎಂಸಿ ಮಾರುಕಟ್ಟೆಯಲ್ಲಿ ರೈತರಿಗೆ ಅನುಕೂಲವಾಗುವ ಸಲುವಾಗಿ 2015-16 ನೇ ಸಾಲಿನ ಬಜೆಟ್’ನಲ್ಲಿ ಭಾನುವಾರ ಸಂತೆ (ಸಂಡೇ ಬಜಾರ್) ಮಾರುಕಟ್ಟೆ ಕಟ್ಟಡ ನಿರ್ಮಾಣವಾಗಿದ್ದು, ಇದೀಗ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿತನದಿಂದ ಹಲವು ಅನೈತಿಕ ಚಟುವಟಿಕೆಗಳ ತಾಣವಾಗಿದ್ದು, ಯಾವುದಕ್ಕೂ ಪ್ರಯೋಜನವಾಗದೆ ಹಾಳುಬಿದ್ದಿದೆ.
ಈ ಕಟ್ಟಡದಲ್ಲಿ ಒಟ್ಟು 14 ಅಂಗಡಿಗಳಿದ್ದು, ಎಲ್ಲ ಅಂಗಡಿಗಳಿಗೂ ಬೀಗ ಬಿದ್ದಿವೆ. ಮಾರುಕಟ್ಟೆ ಸುತ್ತಲೂ ಮತ್ತು ಒಳಾಂಗಣದಲ್ಲಿ ಕಸ-ಕಡ್ಡಿ ಬೆಳೆದು, ಎಲ್ಲೆಂದರಲ್ಲಿ ಸಾರಾಯಿ ಬಾಟಲಿಗಳೇ ಕಾಣುತ್ತವೆ. ಇದೇ ಕಟ್ಟಡದಲ್ಲಿ ನಿರ್ಮಿಸಲಾದ ರೈತರ ವಿಶ್ರಾಂತಿ ಗೃಹವೂ ಸಹಿತ ಯಾವ ಉಪಯೋಗಕ್ಕೂ ಬಂದಿಲ್ಲ. ಇದಕ್ಕೆ ಎಪಿಎಂಸಿ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿತನವೇ ಕಾರಣ ಮತ್ತು ಈ ಕಟ್ಟಡವು ಅನೇಕ ಅನೈತಿಕ ಚಟುವಟಿಕೆಗಳ ತಾಣವಾಗಿ ನಿರ್ಮಾಣಗೊಂಡಿದೆ ಎಂದು ಸ್ಥಳೀಯರು ಮಾತನಾಡಿಕೊಳ್ಳುತ್ತಿದ್ದಾರೆ ಮತ್ತು ಎಪಿಎಂಸಿ ಅಧಿಕಾರಿಗಳು ಸರಿಯಾಗಿ ಕಚೇರಿಯಲ್ಲಿಯೂ ಇರುವುದಿಲ್ಲ ಎಂಬುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಕುರಿತು ಕಳಸಾಬಂಡೂರಿ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಸಿದ್ದಣ್ಣ ತೇಜಿ ಮಾತನಾಡಿ, ಭಾನುವಾರ ಸಂತೆ ಮಾರುಕಟ್ಟೆಯಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ. ಎಪಿಎಂಸಿ’ಯಲ್ಲಿ ಸಾಕಷ್ಟು ಸಮಸ್ಯೆಗಳಿದ್ದು, ಈ ಕುರಿತು ನೇರವಾಗಿ ಅಧಿಕಾರಿಗಳೂ ತಲೆಕೆಡಿಸಿಕೊಂಡಿಲ್ಲ. ಅದಷ್ಟೇ ಅಲ್ಲದೆ ಮಾರುಕಟ್ಟೆಯಲ್ಲಿ ಮದ್ಯವರ್ತಿಗಳ ಹಾವಳಿ ಹೆಚ್ಚಾಗಿದೆ. ಸರಿಯಾಗಿ ಕುಡಿಯವ ನೀರಿನ ವ್ಯವಸ್ಥೆಯೂ ಇಲ್ಲ. ಸರ್ಕಾರು ರೈತರಿಗೆ ಅನುಕೂಲವಾಗಲಿ ಎಂದು ಸಂಡೇ ಬಜಾರ್ ಕಟ್ಟಡವನ್ನು ನಿರ್ಮಿಸಿದೆ. ಈ ಮಾರುಕಟ್ಟೆಯಿಂದ ರೈತರ ತಮ್ಮ ವ್ಯಾಪಾರ ವಹಿವಾಟು ನಡೆಸಬಹುದಿತ್ತು. ಸಾಕಷ್ಟು ಸಲ ಎಪಿಎಂಸಿ ಹಲವು ಸಮಸ್ಯೆಗಳ ಬಗ್ಗೆ ಅಧಿಕಾರಿಗಳನ್ನು ಸಂಪರ್ಕಿಸಿದರೆ ಯಾವತ್ತಿಗೂ ಅಧಿಕಾರಿಗಳು ಮಾರುಕಟ್ಟೆಯಲ್ಲಿ ಇಲ್ಲದಿರುವುದು ಅವರ ಬೇಜವಾಬ್ದಾರಿತನವನ್ನು ಎತ್ತಿ ತೋರಿಸುತ್ತದೆ. ಇನ್ನಾದರೂ ಭಾನುವಾರ ಸಂತೆ ಮಾರುಕಟ್ಟೆ ಪ್ರಾರಂಭಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದರು.

ಇನ್ನು ಹಲಾಮರ ಸಂಘದ ಅಧ್ಯಕ್ಷ ದುರಗಪ್ಪ ಚಿಕ್ಕತುಂಬಳ್ಳಿ ಮಾತನಾಡಿ, ಅಧಿಕಾರಿಗಳು ಮೇಲ್ನೋಟಕ್ಕೆ ಕಾರ್ಯನಿರ್ವಹಿಸುತ್ತಿದ್ದು, ರೈತರು, ಕಾರ್ಮಿಕರ ಬಗ್ಗೆ ಕಿಂಚಿತ್ತೂ ಖಾಳಜಿ ವಹಿಸುವುದಿಲ್ಲ. ಏಷ್ಯಾ ಖಂಡದಲ್ಲೇ ಅತಿದೊಡ್ಡ ಮಾರುಕಟ್ಟೆ ಎಂಬ ಹೆಗ್ಗಳಿಕೆಗೆ ಪಾತ್ರವಾದ ಹುಬ್ಬಳ್ಳಿ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಅಭಿವೃದ್ಧಿ ವಿಚಾರಕ್ಕೆ ಬಂದಾಗ ಶೂನ್ಯವೇ ಎದ್ದು ಕಾಣುತ್ತದೆ. ಮಾರುಕಟ್ಟೆ ಸಚಿವರೂ ಸಹಿತವಾಗಿ ನಿರ್ಲಕ್ಷ್ಯ ವಹಿಸಿದ್ದಾರೆ. ರೈತ ಬೆಳೆದ ಬೆಳೆಗೆ ಬೆಲೆಯಿಲ್ಲ. ಪ್ರಾಥಮಿಕ ಆರೋಗ್ಯ ಕೇಂದ್ರಗಳಂತಹ ಮೂಲಭೂತ ಸೌಕರ್ಯಗಳನ್ನು ಒದಗಿಸಿದಲ್ಲಿ ಮತ್ತು ವಿಶೇಷವಾಗಿ ರೈತರಿಗೆ ಆದ್ಯತೆ ಕೊಟ್ಟಲ್ಲಿ ಅಭಿವೃದ್ಧಿ ಕಾಣಲು ಸಾಧ್ಯವಾಗುತ್ತದೆ ಎಂದರು.
ಕರ್ನಾಟಕ ರಾಜ್ಯ ಹಮಾಲರ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಗುರುಸಿದ್ದಪ್ಪ ಮಾತನಾಡಿ, ಈ ಭಾನುವಾರದ ಸಂತೆ ಮಾರುಕಟ್ಟೆ ಕಟ್ಟಡದಲ್ಲಿ ನೀರಿನ ವ್ಯವಸ್ಥೆಯಿಲ್ಲ. ವಿದ್ಯುತ್ ಸಂಪರ್ಕದ ವ್ಯವಸ್ಥೆಯಿಲ್ಲದ ಕಾರಣ ವ್ಯಾಪಾರಸ್ಥರು ವ್ಯವಹಾರ ವಹಿವಾಟು ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಹಲವು ಬಾರಿ ಮನವಿ ಮಾಡಿಕೊಂಡರೂ ಯಾರೂ ತಲೆಕೆಡಿಸಿಕೊಂಡಿಲ್ಲ. ಸರ್ಕಾರದ ಹಣ ನೀರಿನಲ್ಲಿ ಹೋಮ ಮಾಡಿದಂತೆ ಹಾಳಾಗಿದೆ. ಆದ್ಧರಿಂದ ಈ ಕೂಡಲೇ ಟೆಂಡರ್ ಕರೆದು ಹಾಳಾಗುತ್ತಿರುವ ಮಾರುಕಟ್ಟೆಯನ್ನು ಉಳಿಸಬೇಕು ಮತ್ತು ರೈತರಿಗೆ, ಕಾರ್ಮಿಕರಿಗೆ ಅನುಕೂಲ ಮಾಡಿಕೊಡಬೇಕು. ಈ ಕುರಿತು ಜಿಲ್ಲಾಧಿಕಾರಿಗಳು ಗಮನಹರಿಸಿ ಸಮಸ್ಯೆಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಮಾದಿಗ ದಂಡೋರ ಸಂಘಟನೆಯ ಮಂಜುನಾಥ ಕೊಂಡಪಲ್ಲಿ ಮಾತನಾಡಿ, ಅಧಿಕಾರಿಗಳ ಬೇಜವಾಬ್ದಾರಿತನದಿಂದಾಗಿ ಭಾನುವಾರ ಸಂತೆ ಮಾರುಕಟ್ಟೆಯಲ್ಲಿ ಗಿಡಗಂಟಿ ಬೆಳೆದು, ಅನೈತಿಕ ಚಟುವಟಿಕೆಗಳ ತಾಣವಾಗಿದೆ. ಸರ್ಕಾರದ ಯಾವುದೇ ಯೋಜನೆ ಜನರಿಗೆ ಉಪಯೋಗವಾಗಬೇಕು. ಆದರೆ ಇಲ್ಲಿ ಯಾವ ಪ್ರಯೋಜನಕ್ಕೂ ಬಂದಿಲ್ಲ. ಕೂಡಲೇ ಅಧಿಕಾರಿಗಳು ಮತ್ತು ಸರ್ಕಾರ ಎಚ್ಚೆತ್ತುಕೊಂಡು ಮಾರುಕಟ್ಟೆ ಪ್ರಾರಂಭಿಸಬೇಕು. ರೈತರಿಗೆ, ಬಡವರಿಗೆ ಅಥವಾ ದಲಿತರಿಗಾದರೂ ಟೆಂಡರ್ ನೀಡಬೇಕು. ನಾವು ಟೆಂಡರ್ ತೆಗೆದುಕೊಂಡು ನಿರುದ್ಯೋಗಿಗಳಿಗೆ ಉದ್ಯೋಗ ದೊರಕಿಸುವ ಕಾರ್ಯಕ್ಕೆ ಮುಂದಾಗುತ್ತೇವೆ ಎಂದರು.
ಈ ವರದಿ ಓದಿದ್ದೀರಾ? ಧಾರವಾಡ | ತರಕಾರಿ ಸಾಗಿಸುತ್ತಿದ್ದ ಟಾಟಾ ಏಸ್ ವಾಹನ ಪಲ್ಟಿ
ಇನ್ನಾದರೂ ಸರ್ಕಾರ ಮತ್ತು ಜನಪ್ರತಿನಿಧಿಗಳು ಎಚ್ಚೆತ್ತುಕೊಳ್ಳುತ್ತಾರಾ? ಅಧಿಕಾರಿಗಳು ಸಕ್ರಿಯವಾಗಿ ಕಾರ್ಯನಿರ್ವಹಿದುತ್ತಾರಾ? ಏಷ್ಯಾ ಖಂಡದಲ್ಲಿಯೇ ಅತಿದೊಡ್ಡ ಕೃಷಿ ಉತ್ಪನ್ನ ಮಾರುಕಟ್ಟೆ ರಂಬ ಹೆಗ್ಗಳಿಕೆಗೆ ಪಾತ್ರವಾದ ಹುಬ್ಬಳ್ಳಿ ಎಪಿಎಂಸಿ ಅಭಿವೃದ್ಧಿಯನ್ನು ಕಾಣುತ್ತದೆಯೇ? ಎಂಬುದನ್ನು ಕಾದುನೋಡಬೇಕಿದೆ.