ಭಾರತೀಯ ಜನತಾ ಪಕ್ಷದ ಹಿರಿಯ ನಾಯಕರಾದ ವಾಜಪೇಯಿ ಮತ್ತು ಅಡ್ವಾಣಿಯವರು, ನೆಹರೂ ಅವರ ಆದರ್ಶಗಳನ್ನು, ಸ್ವಾತಂತ್ರ್ಯ ಚಳವಳಿಗೆ ನೀಡಿದ ಕೊಡುಗೆಗಳನ್ನು ಸ್ಮರಿಸಿದ್ದಾರೆ. ಸ್ವತಂತ್ರ ಭಾರತದ ಪ್ರಧಾನಿಯಾಗಿ ದೇಶವನ್ನು ಮುನ್ನಡೆಸಿದ ರೀತಿಯನ್ನು ಮುಕ್ತಕಂಠದಿಂದ ಹೊಗಳಿದ್ದಾರೆ. ಇಂದಿನ ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿ ಬೌದ್ಧಿಕವಾಗಿ ಮತ್ತು ನೈತಿಕವಾಗಿ ಕುಸಿದುಹೋಗಿದೆ. ಅದಕ್ಕೆ ನೆಹರೂ ಹಗೆತನವೇ ಸಾಕ್ಷಿಯಾಗಿ ನಿಂತಿದೆ.
ಕಳೆದ ಶನಿವಾರ ನೀತಿ ಆಯೋಗದ ಮಾಜಿ ಉಪಾಧ್ಯಕ್ಷ ಅರವಿಂದ್ ಪನಗರಿಯ ರಚಿಸಿರುವ ‘ದಿ ನೆಹರೂ ಮಾಡೆಲ್’ ಕೃತಿ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿದ್ದ ಕೇಂದ್ರದ ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್, ಕೃತಿ ಕುರಿತು ಮಾತನಾಡುತ್ತಾ ನೆಹರೂ ಬಗ್ಗೆ ಕಟಕಿಯಾಡಿದ್ದಾರೆ.
ಸುಖಾಸುಮ್ಮನೆ ಟೀಕಿಸುವುದರ ಬದಲಿಗೆ ನೆಹರೂ ಕುರಿತ ಕೃತಿ ಬಿಡುಗಡೆಯನ್ನು ನೆಪ ಮಾಡಿಕೊಂಡು, ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಸಂಘಿಗಳನ್ನು ಸಂತುಷ್ಟರನ್ನಾಗಿಸಿದ್ದಾರೆ.
‘ನೆಹರೂ ಅವರ ಅಭಿವೃದ್ಧಿ ಮಾದರಿ ಅನಿವಾರ್ಯವಾಗಿ ನೆಹರೂ ವಿದೇಶಾಂಗ ನೀತಿಯನ್ನೂ ಹುಟ್ಟು ಹಾಕಿದ್ದು, ನಾವದನ್ನು ಸರಿಪಡಿಸಲು ಬಯಸುತ್ತಿದ್ದೇವೆ. 2014ರ ನಂತರ, ನೆಹರೂ ಮಾದರಿಯಿಂದ ದೇಶದಲ್ಲಿ ಉದ್ಭವಿಸಿರುವ ಪರಿಣಾಮಗಳನ್ನು ಸುಧಾರಿಸುವ ಪ್ರಯತ್ನ ನಡೆಸುತ್ತಿದ್ದೇವೆ. ಆದರೆ, ಅದಿನ್ನೂ ಕಠಿಣ ಪ್ರಯಾಸವಾಗಿ ಉಳಿದಿದೆ’ ಎಂದಿದ್ದಾರೆ.
ಮುಂದುವರೆದರು, ‘ನೆಹರೂ ಮಾದರಿ ರಾಜಕೀಯ, ಅಧಿಕಾರಶಾಹಿ, ಯೊಜನಾ ವ್ಯವಸ್ಥೆ, ನ್ಯಾಯಾಂಗ ಹಾಗೂ ಮಾಧ್ಯಮಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳನ್ನೂ ವ್ಯಾಪಿಸಿದೆ. ನಾವು ಸರಿಪಡಿಸುತ್ತಿದ್ದೇವೆ’ ಎನ್ನುವ ಜೈಶಂಕರ್, ಮಾಜಿ ಪ್ರಧಾನಿ ನೆಹರೂ ಕುರಿತು ಟೀಕಿಸುತ್ತಿರುವುದು ಇದು ಮೊದಲೇನೂ ಅಲ್ಲ. ಮೊದಲಿಗರೂ ಅಲ್ಲ.
ಜೈಶಂಕರ್ ಅವರನ್ನು ವಿದೇಶಾಂಗ ವ್ಯವಹಾರಗಳ ಸಚಿವರನ್ನಾಗಿ ಮಾಡಿರುವ ಸಂಘಪರಿವಾರ ಮತ್ತು ಬಿಜೆಪಿ ನಾಯಕರಿಗೆ, ಅವರು ವಿದೇಶಾಂಗ ಖಾತೆಗೆ ಯೋಗ್ಯರೋ, ಆ ಖಾತೆಯನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರೋ ಇಲ್ಲವೋ, ಅದು ಬೇಕಿಲ್ಲ. ಅವಕಾಶ ಸಿಕ್ಕಾಗಲೆಲ್ಲ ನೆಹರೂ ಅವರ ಆಡಳಿತವನ್ನು ಟೀಕಿಸುತ್ತಿದ್ದಾರಲ್ಲ, ಅಷ್ಟು ಸಾಕು.
ಹಾಗೆ ನೋಡಿದರೆ, ಜೈಶಂಕರ್ ಒಬ್ಬರೇ ಅಲ್ಲ, ಮೋದಿ ಆದಿಯಾಗಿ ಬಿಜೆಪಿ ನಾಯಕರೆಲ್ಲರೂ ನೆಹರೂ ಅವರನ್ನು ಆಧುನಿಕ ಭಾರತದ ಇತಿಹಾಸದ ಪುಟಗಳಿಂದ ಹೊರಗಿಡಲು; ಅವರನ್ನು ಖಳನಾಯಕರಂತೆ ಚಿತ್ರಿಸಲು ತಮ್ಮೆಲ್ಲ ಬುದ್ಧಿ-ಶಕ್ತಿಯನ್ನು ಬಸಿದು ಬಳಸುತ್ತಿದ್ದಾರೆ. ದೇಶದ ಇಂದಿನ ಅನೇಕ ಸಮಸ್ಯೆಗಳಿಗೆ ನೆಹರೂ ಅವರೇ ನೇರ ಕಾರಣ ಎಂದು ಜನಮಾನಸದಲ್ಲಿ ಬಲವಂತವಾಗಿ ಬಿತ್ತುತ್ತಿದ್ದಾರೆ. ನೆಹರೂ ಅವರನ್ನು ಜನಹಿತ, ದೇಶಹಿತ ಮರೆತು ವಿಲಾಸಿ ಜೀವನದಲ್ಲಿ ಮೈ ಮರೆತ ನಾಯಕನೆಂದೂ, ಅದಕ್ಕೊಪ್ಪುವ ಚಿತ್ರಗಳನ್ನು ಬಳಸಿ ವ್ಯಕ್ತಿತ್ವಹರಣಕ್ಕೂ ಕೈಹಾಕಿದ್ದಾರೆ. ದೇಶ ಕಟ್ಟಿದ ಮುಂಚೂಣಿ ಮಹಾಪುರುಷರ ಸಾಲಿನಿಂದ ಅವರ ಹೆಸರನ್ನು, ಕೆಲಸ ಕಾರ್ಯಗಳನ್ನು, ನೆನಪುಗಳನ್ನು ಅಳಿಸಿ ಹಾಕುವುದು ದೇಶಭಕ್ತಿ ಎಂದು ನಂಬಿಸುತ್ತಿದ್ದಾರೆ. ಮೆದುಳನ್ನು ಮಾರಿಕೊಂಡ ಅಂಧಭಕ್ತರು, ಅದನ್ನೇ ಸತ್ಯವೆಂದು ನಂಬಿ ಹಂಚುತ್ತಿದ್ದಾರೆ.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ‘ಕಾಂಗ್ರೆಸ್ ಒಂದು ಪಕ್ಷವಾಗುವುದು’ ಯಾವಾಗ?
ಹಂಚುವುದಕ್ಕಾಗಿಯೇ ಆರೆಸ್ಸೆಸ್ ಮತ್ತು ಬಿಜೆಪಿ ಕೋಟ್ಯಂತರ ರೂಪಾಯಿಗಳನ್ನು ಸುರಿದು ಐಟಿ ಫ್ಯಾಕ್ಟರಿ ತೆರೆದಿದೆ. ಹಿಂದುತ್ವದ ಅಮಲೇರಿಸಿಕೊಂಡ ಆಧುನಿಕ ತಂತ್ರಜ್ಞರು ಇಲ್ಲಿ ‘ತಿರುಚುವ ತಿಕ್ಕಲು’ಗಳಾಗಿ ಹಗಲಿರುಳು ದುಡಿಯುತ್ತಿದ್ದಾರೆ. ಇಲ್ಲಿಂದ ತಯಾರಾಗುವ ನೆಹರೂ ಕುರಿತ ತಿರುಚಲ್ಪಟ್ಟ ಸಿದ್ಧಸರಕು- ಚಿತ್ರಗಳು, ವಿಡಿಯೋಗಳು, ವ್ಯಾಖ್ಯಾನಗಳು, ಉಪನ್ಯಾಸಗಳು, ಚರಿತ್ರೆಯ ಪುಟಗಳು, ಭಾಷಣಗಳು- ವಾಟ್ಸ್ ಆ್ಯಪ್ ಮೂಲಕ ಇಡೀ ದೇಶವನ್ನು ತಲುಪುತ್ತಿವೆ. ಯುವ ಜನತೆಯ ಮನಸ್ಸನ್ನು ಕೆಡಿಸುತ್ತಿವೆ. ಅದರಲ್ಲಿ ಮುಖ್ಯವಾಗಿ ಮುಸ್ಲಿಮರನ್ನು ಅನ್ಯರಂತೆ ಕಾಣುವುದು, ವಿನಾಕಾರಣ ದ್ವೇಷಿಸುವಂತೆ ಪ್ರಚೋದಿಸುವುದು ಮುಖ್ಯವಾಗಿದೆ. ದೇಶವನ್ನು ಉಳಿಸುವ ಏಕೈಕ ಹಿಂದೂ ನಾಯಕ ಮೋದಿ ಎಂದು ನಂಬಿಸಲಾಗಿದೆ.
ಹೀಗಾಗಿ ಇವರಿಗೆ, ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾದ, ಜೈಲುವಾಸಿಯಾದ ಮಹಾನ್ ನಾಯಕರ ತ್ಯಾಗ, ಬಲಿದಾನಗಳನ್ನು ಮರೆಸುವುದು ಮುಖ್ಯವಾಗಿದೆ. ಅವರನ್ನು ಖಳನಾಯಕರಂತೆ ಚಿತ್ರಿಸುವುದು ಮುನ್ನೆಲೆಗೆ ಬಂದಿದೆ. ಅದನ್ನವರು ಹೆಚ್ಚೆಚ್ಚು ಮಾಡಿದಂತೆಲ್ಲ ಮೋದಿಯ ಕುರ್ಚಿ ಗಟ್ಟಿಗೊಳಿಸುತ್ತಿದೆ.
ಅಸಲಿಗೆ, ಭಾರತೀಯ ಜನತಾ ಪಕ್ಷದ ಹಿರಿಯ ನಾಯಕರಾದ ಅಟಲ್ ಬಿಹಾರಿ ವಾಜಪೇಯಿ ಮತ್ತು ಲಾಲ್‌ಕೃಷ್ಣ ಅಡ್ವಾಣಿಯವರು, ನೆಹರೂ ಅವರನ್ನು ಹೀಗೆ ನೋಡಲಿಲ್ಲ. ಅವರ ವಿರುದ್ಧ ಎಂದೂ ಹಗೆತನ ಸಾಧಿಸಲಿಲ್ಲ. ನೆಹರೂ ಅವರ ಆದರ್ಶಗಳನ್ನು, ಸ್ವಾತಂತ್ರ್ಯ ಚಳವಳಿಗೆ ನೀಡಿದ ಕೊಡುಗೆಗಳನ್ನು ಸ್ಮರಿಸಿದ್ದಾರೆ. ಸ್ವತಂತ್ರ ಭಾರತದ ಪ್ರಧಾನಿಯಾಗಿ ದೇಶವನ್ನು ಮುನ್ನಡೆಸಿದ ರೀತಿಯನ್ನು ಮುಕ್ತಕಂಠದಿಂದ ಹೊಗಳಿದ್ದಾರೆ. ಭಾರತೀಯ ಸಂವಿಧಾನದ ರಚನೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದನ್ನು, ಸಂಸದೀಯ ಪ್ರಜಾಪ್ರಭುತ್ವ ವಿಕಾಸಹೊಂದಲು ಹಾಕಿದ ಬುನಾದಿಯನ್ನು ಮುಕ್ತವಾಗಿ ಪ್ರಶಂಸಿಸಿದ್ದಾರೆ.
ಆದರೆ, ಇಂದಿನ ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿ ಬೌದ್ಧಿಕವಾಗಿ ಮತ್ತು ನೈತಿಕವಾಗಿ ಕುಸಿದುಹೋಗಿದೆ. ಅದಕ್ಕೆ ನೆಹರೂ ಹಗೆತನವೇ ಸಾಕ್ಷಿಯಾಗಿ ನಿಂತಿದೆ. ಕಳೆದ ಹನ್ನೊಂದು ವರ್ಷಗಳ ಆಡಳಿತವೇ ಅದನ್ನು ಎತ್ತಿ ತೋರಿದೆ. ಅದರಲ್ಲೂ ಸಂಸತ್ತು ನಿಧಾನವಾಗಿ ನಿಷ್ಕ್ರಿಯಗೊಳ್ಳುತ್ತಿದೆ. ಪ್ರತಿಪಕ್ಷಗಳ ಜತೆಗಿನ ಸಂವಾದ ಮೋದಿ ಅವರ ಕಾಲದಲ್ಲಿ ಸಂಪೂರ್ಣ ಸ್ಥಗಿತವಾಗಿದೆ. ಪ್ರಜಾಪ್ರಭುತ್ವ ಮರೆಯಾಗಿ ಸರ್ವಾಧಿಕಾರ ನುಸುಳುತ್ತಿದೆ.
ಒಂದಂತೂ ಸತ್ಯ, ನೆಹರೂ ಎನ್ನುವುದು ಭಾರತ ದೇಶ ಮರೆಯಲಾರದ ಮಹಾನ್ ವ್ಯಕ್ತಿತ್ವ. ಅದನ್ನು ಅಳಿಸಿಹಾಕಲು ಹವಣಿಸುವವರು ಅಲ್ಪರಾಗುತ್ತಾರೆಯೇ ಹೊರತು, ನಾಯಕರಾಗುವುದು ಖಂಡಿತ ಸಾಧ್ಯವಿಲ್ಲ.
