ಮಂಡ್ಯದಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನದಲ್ಲಿ ಸಸ್ಯಾಹಾರದ ಜೊತೆಗೆ ಮಾಂಸಾಹಾರ ನೀಡಬೇಕೆಂದು ಹಲವು ದಿನಗಳಿಂದ ವಿವಿಧ ಪ್ರಗತಿಪರ ಸಂಘಟನೆಗಳು ವಿಭಿನ್ನವಾದ ಹೋರಾಟ ನಡೆಸುತ್ತಿವೆ, ಆದರೆ ಈ ಹೋರಾಟಕ್ಕೆ ಸಾಹಿತ್ಯ ಸಮ್ಮೇಳನ ಆಯೋಜನೆಯ ಮುಂಚೂಣಿಯಲ್ಲಿರುವ ನಾಯಕರು, ಸ್ಪಷ್ಟವಾಗಿ ಏನನ್ನು ತಿಳಿಸಿಲ್ಲದ ಕಾರಣ ಮಾಂಸಾಹಾರ ನೀಡುವ ವಿಚಾರದಲ್ಲಿ ಹಗ್ಗ-ಜಗ್ಗಾಟ ಮುಂದುವರಿದಿದೆ.

ಇಂದು ಮಂಗಳವಾರ ಖಾಸಗಿ ಹೋಟೇಲ್‌ನಲ್ಲಿ ಸಚಿವ ಚಲುವರಾಯಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲೂ ಕೂಡ ಹೋರಾಟಗಾರರು, ಈ ಸಮ್ಮೇಳನದಲ್ಲಿ ಮಾಂಸಾಹಾರ ಇರಲೇಬೇಕು. ಸಮ್ಮೇಳನವು ಮೂರು ದಿನಗಳ ಕಾಲ ನಡೆಯಲಿದೆ, ಈ ಪೈಕಿ ಒಂದು ಊಟದ ಸಮಯದಲ್ಲಾದರೂ ಕನಿಷ್ಠ ಪ್ರಮಾಣದ ಕೋಳಿ ಮಾಂಸ ಹಾಗೂ ಮೊಟ್ಟೆಯನ್ನು ಬಡಿಸಬೇಕು ಎಂದು ಪಟ್ಟು ಹಿಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ‘ನಾವು ಮಾಂಸಾಹಾರವನ್ನು ಕೀಳೆಂದು ಪರಿಗಣಿಸಿಲ್ಲ, ಎಲ್ಲ ಆಹಾರದ ಬಗ್ಗೆಯೂ ಗೌರವವಿದೆ. ನಿಮ್ಮ ಹೋರಾಟ, ಉದ್ದೇಶದ ಬಗ್ಗೆ ಗೌರವವಿದೆ. ನಮ್ಮ ಮೇಲೆ ಭರವಸೆ ಇಡಿ’ ಎಂದಷ್ಟೇ ತಿಳಿಸಿದರು ಎನ್ನಲಾಗಿದೆ.
ಇದನ್ನು ಓದಿದ್ದೀರಾ? ಮಂಡ್ಯ | ಕಳಪೆ ಕಾಮಗಾರಿ: ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಕೆಆರ್‌ಎಸ್ ಆಗ್ರಹ
ಸಭೆಯಲ್ಲಿ ಶಾಸಕ ರವಿಕುಮಾರ್ ಗಣಿಗ, ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಕರುನಾಡು ಸೇವಕರು ಸಂಘಟನೆಯ ಎಂ.ಬಿ.ನಾಗಣ್ಣಗೌಡ, ಸಿಪಿಐಎಂ ಕೃಷ್ಣೇಗೌಡ, ಜಾಗೃತ ಕರ್ನಾಟಕದ ಸಂತೋಷ್, ಸಿಐಟಿಯು ಸಿ.ಕುಮಾರಿ, ದಸಂಸ ಎಂ.ವಿ.ಕೃಷ್ಣ, ಕರ್ನಾಟಕ ಸಮ ಸಮಾಜ ಸಂಘಟನೆಯ ನರಸಿಂಹಮೂರ್ತಿ, ಅಂಬೇಡ್ಕರ್ ವಾರಿಯರ್ಸ್ ನ ಗಂಗರಾಜು, ಪರಿವರ್ತನ ಸಂಸ್ಥೆಯ ಟಿ.ಡಿ.ನಾಗರಾಜು, ವಕೀಲರಾದ ಲಕ್ಷ್ಮಣ್ ಚೀರನಹಳ್ಳಿ, ಜೆ.ರಾಮಯ್ಯ ಸೇರಿದಂತೆ ಮತ್ತಿತರರತು ಉಪಸ್ಥಿತರಿದ್ದರು.