ಕಲಬುರಗಿ ಬಂದ್ ಯಶಸ್ವಿ: ಸಾವಿರಾರು ಜನರಿಂದ ಬೃಹತ್ ಪ್ರತಿಭಟನೆ

Date:

Advertisements

ಡಿ.17ರಂದು ಸದನದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅವರ ಕುರಿತಾಗಿ ಕೇಂದ್ರ ಸಚಿವ ಅಮಿತ್ ಶಾ ಅವರು ಅವಹೇಳನಕಾರಿಯಾಗಿ ಹೇಳಿಕೆ ನೀಡಿದ್ದನ್ನು ಖಂಡಿಸಿ, ಅಮಿತ್ ಶಾ ರಾಜೀನಾಮೆಗೆ ಒತ್ತಾಯಿಸಿ, ಸಂವಿಧಾನ ರಕ್ಷಣಾ ಹೋರಾಟ ಸಮಿತಿ, ದಲಿತ ಪರ, ಕುರುಬ, ಲಿಂಗಾಯತ್, ಅಲ್ಪಸಂಖ್ಯಾತರ ಸಂಘಟನೆಗಳು ಕರೆ ನೀಡಿದ್ದ ಕಲಬುರಗಿ ಬಂದ್‌ಗೆ ನಗರದಲ್ಲಿ ಉತ್ತಮ ಪ್ರತಿಕ್ರಿಯೆ ದೊರಕಿದೆ. ಸ್ವಯಂಪ್ರೇರಿತವಾಗಿ ಜನರು ಬಂದ್‌ಗೆ ಸ್ಪಂಧಿಸಿದ್ದು ಮಂಗಳವಾರ ನಗರವು ಸಂಪೂರ್ಣ ಸ್ಥಬ್ಧವಾಗಿ ಇದು ಐತಿಹಾಸಿಕ ಬಂದ್ ಸಾಲಿನಲ್ಲಿ ಸೇರಿದೆ.

ಅಮಿತ್ ಶಾ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಬೇಕೆಂದು ಆಗ್ರಹಿಸಿ ನಗರದ ಗಂಜ್ ಪ್ರದೇಶದಲ್ಲಿರುವ ನಗರೇಶ್ವರ ಶಾಲೆಯಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ನಡೆಸಿದ ಬೃಹತ್ ಪ್ರತಿಭಟನೆಯಲ್ಲಿ ಹಲವು ಸಂಘಟನೆಗಳು ಭಾಗಿಯಾಗಿದ್ದವು. ಪ್ರತಿಭಟನೆಯಲ್ಲಿ ಎಲ್ಲಿ ನೋಡಿದರೂ ಅಂಬೇಡ್ಕರ್ ಭಾವಚಿತ್ರ ರಾರಾಜಿಸುತ್ತಿದ್ದವು. ಅಂಬೇಡ್ಕರ್, ಅಂಬೇಡ್ಕರ್ ಎಂಬ ಘೋಷಣೆಗಳು ಮುಗಿಳು ಮುಟ್ಟಿತ್ತು.

ಇದನ್ನು ಓದಿದ್ದೀರಾ? ಕಲಬುರಗಿ ಬಂದ್ | ಇಂದು ಶಾಲಾ-ಕಾಲೇಜುಗಳಿಗೆ ರಜೆ

Advertisements

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ದಲಿತ ಮುಖಂಡ ಮರೆಪ್ಪ ಹಳ್ಳಿ, “ನಾವು ದಿನನಿತ್ಯವೂ ಅಂಬೇಡ್ಕರ್ ಎನ್ನುತ್ತೇವೆ, ಸಾಯೋವರೆಗೂ ಅಂಬೇಡ್ಕರ್ ಎನ್ನುತ್ತೇವೆ, ನಿಮ್ಮ ಹಾಗೆ ನಾವು ಬೇಧ ಭಾವ ಮಾಡುವುದಿಲ್ಲ. ಸಂವಿಧಾನ ಎನ್ನುವುದು ಎಲ್ಲರಿಗೂ ಒಂದೇ ಆಗಿದೆ. ಅದಕ್ಕೆ ದೇಶದಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ, ಪಾರ್ಸಿ, ಸಿಖ್, ಬೌದ್ಧ ಧರ್ಮ ಸೇರಿದಂತೆ ಹಲವು ಧರ್ಮದ ಜನರು ವಾಸಿಸುತ್ತಿದ್ದಾರೆ. ಅಧಿಕಾರದ ಮದ ಏರಿದ ಅಮಿತ್ ಶಾ ಮತ್ತು ಸಂಘ ಪರಿವಾರದ ಮುಖವಾಡಗಳು ದೇಶದಲ್ಲಿ ಮನುಸ್ಮೃತಿ ಜಾರಿ ತರಲು ಷಡ್ಯಂತ್ರ ನಡೆಸುತ್ತಿದ್ದಾರೆ. ಅದಕ್ಕೆ ಮೇಲಿಂದ ಮೇಲೆ ಅಂಬೇಡ್ಕರ್ ಅವರಿಗೆ ಅಪಮಾನ ಮಾಡುತ್ತಿದ್ದಾರೆ. ಇದನ್ನು ನಾವು ಖಂಡಿಸುತ್ತೇವೆ, ಅಮಿತ್ ಶಾ ರಾಜೀನಾಮೆ ನೀಡುವವರೆಗೂ ವಿಶ್ರಮಿಸುವುದಿಲ್ಲ” ಎಂದು ಆಕ್ರೋಶ ಹೊರಹಾಕಿದರು.

“ಮನುಸ್ಮೃತಿ ಜಾರಿಗೆ ತರಲು ಬಿಜೆಪಿ ಸರಕಾರ ಪ್ರಯತ್ನಿಸುತ್ತಿದೆ, ದೇಶದಲ್ಲಿ ದಲಿತರು, ಅಲ್ಪಸಂಖ್ಯಾತ ಜನರಿಗೆ ಗುಲಾಮರಂತೆ ಮಾಡಲು ಯತ್ನಿಸುತ್ತಿದೆ. ನೀವೇನೇ ಮಾಡಿದರೂ ನಾವು ಇನ್ಮುಂದೆ ಜಗ್ಗುವುದಿಲ್ಲ. ನಮಗೆ ಡಾ. ಅಂಬೇಡ್ಕರ್ ಅವರು ಹೋರಾಡುವ ಶಕ್ತಿ ಸಂವಿಧಾನದಲ್ಲಿ ಕೊಟ್ಟಿದ್ದಾರೆ, ಆ ಹಕ್ಕು ಕಸಿದುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ” ಎಂದು ಪ್ರತಿಭಟನಾನಿರತರು ಆಕ್ರೋಶ ವ್ಯಕ್ತಪಡಿಸಿದರು. “ಇಂದು ಕಲಬುರ್ಗಿಯಲ್ಲಿ ಹೋರಾಟ ಮಾಡಿದ್ದೇವೆ, ಒಂದು ವೇಳೆ ಅಮಿತ್ ಶಾ ರಾಜೀನಾಮೆ ನೀಡದಿದ್ದರೆ ನಾಳೆ ದಿಲ್ಲಿಗೆ ಬರುತ್ತೇವೆ” ಎಂದು ಸ್ಲಂ ಜನಾಂದೋಲನ ಜಿಲ್ಲಾ ಸಂಚಾಲಕಿ ರೇಣುಕಾ ಸರಡಗಿ ಕಿಡಿಕಾರಿದರು.

ಕಲಬುರಗಿ 24

ಬೆಳಗ್ಗೆಯೇ ಪ್ರಾರಂಭವಾಯ್ತು ಪ್ರತಿಭಟನೆಯ ಬಿಸಿ:

ನಗರ ಬಂದ್ ಕರೆ ನೀಡಿದ್ದ ಹಿನ್ನೆಲೆ ಮಂಗಳವಾರ ಬೆಳಗ್ಗೆ ಪ್ರತಿಭಟನೆ ಕಾವು ಶುರುವಾಯಿತು. ಪ್ರತಿನಿತ್ಯ ಮುಂಜಾನೆ ನಾಲ್ಕು- ಐದು ಗಂಟೆಗೆ ಮತ್ತು 6 ಗಂಟೆಗೆ ತೆರೆಯುವ ಅಂಗಡಿ ಮುಂಗಟ್ಟುಗಳು ಮಂಗಳವಾರ ಎಲ್ಲಾ ಕಡೆಯೂ ಮುಚ್ಚಿರುವುದು ಕಂಡು ಬಂತು.

ನಗರಕ್ಕೆ ಮಧ್ಯರಾತ್ರಿಯಲ್ಲಿ ಬಂದಿಳಿದಿದ್ದ ಪ್ರಯಾಣಿಕರು ಕೇಂದ್ರ ಬಸ್ ನಿಲ್ದಾಣದಲ್ಲಿ ಅಲೆದಾಡಿದ ಪ್ರಸಂಗವೂ ನಡೆಯಿತು. ಇನ್ನೂ ಬೆಳಕಾಗದೆ ಇರುವ ಹೊತ್ತಿನಲ್ಲಿ ಇಲ್ಲಿನ ಬಿದ್ದಾಪುರ ಕ್ರಾಸ್, ಜಾಫರಬಾದ್ ಕ್ರಾಸ್, ಆಳಂದ ಚೆಕ್ ಪೋಸ್ಟ್, ರಾಮಮಂದಿರ, ಖರ್ಗೆ ಪೆಟ್ರೋಲ್ ಬಂಕ್ ಸರ್ಕಲ್ ಸೇರಿದಂತೆ ಹಲವು ಕಡೆಗಳಲ್ಲಿ ಅಮಿತ್ ಶಾ ಪ್ರತಿಕೃತಿ ದಹನ ಮಾಡಿ, ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಅದರಂತೆಯೇ ಕ್ರಮವಾಗಿ ನಗರದ ಒಳಗಡೆ ಪ್ರವೇಶಿಸುವ ವಾಹನಗಳನ್ನು ತಡೆಯುವ ಮೂಲಕ ಪ್ರತಿಭಟನೆಯ ಕಿಚ್ಚು ದುಪ್ಪಟ್ಟಾಯಿತು.

ಇದನ್ನು ಓದಿದ್ದೀರಾ? ಕಲಬುರಗಿ| ವಾಡಿ ಪಟ್ಟಣ ಬಂದ್‌ : ಅಮಿತ್ ಶಾ ಶವಯಾತ್ರೆ ಮಾಡಿ ಆಕ್ರೋಶ

ಅಂಗಡಿ ಮುಂಗಟ್ಟುಗಳು ಸ್ವಯಂಪ್ರೇರಿತ ಬಂದ್:

ನಗರ ಬಂದ್ ಕರೆಗೆ ಉತ್ತಮ ಪ್ರತಿಕ್ರಿಯೆ ನೀಡಿದ ವ್ಯಾಪಾರಿಗಳು, ವರ್ತಕರು, ಕೂಲಿ ಕಾರ್ಮಿಕರು ಸೇರಿದಂತೆ ಇತರ ವಾಣಿಜ್ಯ ಮಳಿಗೆಯ ಮಾಲಕರು ತಮ್ಮ ಅಂಗಡಿ ಮುಂಗಟ್ಟುಗಳನ್ನು ಸ್ವಯಂ ಪ್ರೇರಿತವಾಗಿ ಬಂದ್ ಮಾಡಿಕೊಂಡು ಬೆಂಬಲ ಸೂಚಿಸಿದರು.
ನಗರದಾದ್ಯಂತ ಸ್ವಯಂಪ್ರೇರಿತ ಬಂದ್‌ನಿಂದಾಗಿ ಹಿಂದೆಂದೂ ಕಂಡರಿಯದ ಪ್ರತಿಕ್ರಿಯೆ ನಗರ ನಿವಾಸಿಗಳಿಂದ ದೊರೆತಿರುವುದು ಡಾ. ಅಂಬೇಡ್ಕರ್ ಅವರ ಮೇಲಿನ ಅಪಾರ ಅಭಿಮಾನಕ್ಕೆ ಮಾತ್ರ ಎಂದು ಪ್ರತಿಭಟನಕಾರರ ಅಭಿಪ್ರಾಯ. ಈ ಬಂದ್‌ಗೆ ಹೆಚ್ಚಿನ ಪ್ರಮಾಣದಲ್ಲಿ ಬೆಂಬಲ ವ್ಯಕ್ತವಾಗಿರುವುದರಿಂದ ಐತಿಹಾಸಿಕ ಬಂದ್ ಸಾಲಿನಲ್ಲಿ ಸೇರಿತು ಎನ್ನುತ್ತಾರೆ ಇಲ್ಲಿನ ಹೋರಾಟಗಾರರು.

ಕಲಬುರಗಿ1 2

ನಗರದ ಪ್ರಮುಖ ವೃತ್ತಗಳಾದ ಹುಮನಾಬಾದ್ ರಿಂಗ್ ರೋಡ್, ರಾಮಮಂದಿರ, ಖರ್ಗೆ ಪೈಟ್ರೋಲ್ ಪಂಪ್, ಆಳಂದ ಚೇಕ್ ಪೋಸ್ಟ್, ಖಾದರಿ ಚೌಕ್, ನಾಗನಹಳ್ಳಿ ಕ್ರಾಸ್, ಹಿರಪುರ್ ಕ್ರಾಸ್, ಹೈಕೋರ್ಟ್ ಸರ್ಕಲ್ ತಿಮ್ಮಾಪುರಿ ಸರ್ಕಲ್ ಸೇರಿದಂತೆ ಅನೇಕ ಕಡೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪ್ರತಿಕೃತಿಯನ್ನು ದಹಿಸಲಾಯಿತು, ರ‍್ಯಾಲಿಯಲ್ಲಿ ಪೂರ್ಣವಾಗಿ ಅಮಿತ್ ಶಾ ಅವರ ಶವಯಾತ್ರೆ ಅಣುಕು ಪ್ರದರ್ಶನ ಮಾಡಿರುವುದು ಕಂಡುಬಂತು.

ಕಲಬುರಗಿ ನಗರದ ಗಂಜ ನಗರೇಶ್ವರ್ ಶಾಲೆಯಿಂದ ಬೃಹತ್ ಪ್ರತಿಭಟನಾ ರ‍್ಯಾಲಿಯ ಮೂಲಕ ಜಿಲ್ಲಾಧಿಕಾರಿಗಳ ಕಚೇರಿ ತಲುಪಿ ವಿವಿಧ ಸಂಘಟನೆಯ ಮುಖಂಡರು ಅಮಿತ್ ಶಾ ಅವರನ್ನು ಕೂಡಲೇ ವಜಾ ಮಾಡಬೇಕೆಂದು ಆಗ್ರಹಿಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ದಲಿತ ಹಿರಿಯ ಮುಖಂಡ ವಿಠ್ಠಲ ದೊಡ್ಡಮನಿ, ಸುಭಾಷ್ ರಾಠೋಡ, ಮರಿಯಪ್ಪ ಹಳ್ಳಿ, ಅರ್ಜುನ ಭದ್ರೆ,,ವಹಾಜ್ ಬಾಬಾ ಜುನೈದಿ, ಕೆ.ನೀಲಾ, ಶರಣಕುಮಾರ ಮೋದಿ, ಲಚಪ್ಪ ಜಮಾದಾರ, ಮೀನಾಕ್ಷಿ ಬಾಳಿ, ಭೀಮರಾವ್ ಟಿ ಟಿ , ಗುರುನಾಥ ಪೂಜಾರಿ, ಮಜರ್ ಆಲಂ ಖಾನ್, ಲಿಂಗರಾಜ ತಾರಪೇಲ , ತಿಪ್ಪಣ್ಣ ಒಡೆಯರ್, ಕೃಷ್ಣಾ ರೆಡ್ಡಿ, ರಾಜೇಶ ಗುತ್ತೇದಾರ, ನಂದಕುಮಾರ, ಮಾಲಿಪಾಟೀಲ, ಸೂರ್ಯಕಾಂತ ನಿಂಬಾಳ್ಕರ್, ಶರಣಬಸಪ್ಪ ಸೂರ್ಯವಂಶಿ, ಚಂದು ಜಾಧವ, ಸುರೇಶ್ ಹಾದಿಮನಿ, ರಾಜಕುಮಾರ ಕಪನೂರು, ಹಣಮಂತ ಯಳಸಂಗಿ, ವಿಶಾಲ ನವರಂಗ, ಸಚಿನ್ ಶಿರವಾಳ, ಮಲ್ಲಪ್ಪ ಹೊಸಮನಿ, ಪ್ರಕಾಶ್ ಮೂಲಭಾರತಿ, ರಘುವೀರ ತಾವಡೆ, ಆನಂದ ವಾರಿಕ್, ಸುನೀಲ, ಮಾರುತಿ ಮಾನಪಡೆ, ಸೈಬಣ್ಣಾ ಹೇಳವಾರ, ಎ ಬಿ ಹೊಸಮನಿ, ಶಾಮ್ ನಾಟೇಕರ್, ದೇವಿಂದ್ರ ಸಿನ್ನೂರು, ಪವಿತ್ರ ವಸ್ತ್ರದ, ಸುನೀಲ ದೊಡ್ಡಮನಿ, ಸಂತೋಷ ಮೇಲಿನಮನಿ, ಮಹಾಂತಪ್ಪ ಸಂಗಾವಿ, ಅರವಿಂದ ಚವಾಣ, ಕುಮಾರ ಯಾದವ, ದಿನೇಶ ದೊಡ್ಡಮನಿ, ಲಾಲ್ ಅಹ್ಮದ್ ಶೆಟ್, ಹಣಮಂತ ಬೋದಕರ್, ಲಕ್ಷ್ಮೀಕಾಂತ್ ಹುಬ್ಬಳ್ಳಿ ರಾಜು ಜಾನೇ, ಅಶ್ವಿನಿ ಸಂಕ್, ಅಶ್ವಿನಿ ಮದನಕರ್, ರೇಣುಕಾ ಸಿಂಗೆ,
ಅಲ್ಲಮಪ್ರಭು ನಿಂಬರಗಿ ಸೇರಿದಂತೆ ಹಲವಾರು ಹೋರಾಟಗಾರರು ಪಾಲ್ಗೊಂಡಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಅಡಿಕೆ ಬೆಳೆಗಾರರ ಸಮಸ್ಯೆ ಬಗ್ಗೆ ಕೇಂದ್ರ ಕೃಷಿ ಸಚಿವರೊಂದಿಗೆ ಸಭೆ

ಶಿವಮೊಗ್ಗ, ರಾಜ್ಯ ಅಡಿಕೆ ಬೆಳೆಗಾರರ ಸಮಸ್ಯೆಗಳ ಕುರಿತಂತೆ ಕೇಂದ್ರ ಕೃಷಿ...

ಶಿವಮೊಗ್ಗ | SBUDA ದಿಂದ ಅಪಾರ್ಟ್ಮೆಂಟ್, ನೂತನ ಕಚೇರಿ, ಮಾಲ್ ನಿರ್ಮಾಣಕ್ಕೆ ಹೆಜ್ಜೆ : ಸುಂದರೇಶ್

ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅಪಾರ್ಟ್ಮೆಂಟ್, ನೂತನ ಕಚೇರಿ, ಮಾಲ್ ನಿರ್ಮಾಣಕ್ಕೆ ಹೆಜ್ಜೆ...

ಮಾಲೂರು | ‘ಕೆಲಸ ನೀಡದಿದ್ದರೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ’!

ಮಾಲೂರಿನ ವರ್ಗಾ ಕಂಪನಿ ಮುಚ್ಚುವುದನ್ನು ವಿರೋಧಿಸಿ ಇಂದು ಮಾಲೂರಿನಲ್ಲಿ ಕಾರ್ಮಿಕರು ಬೃಹತ್...

ಗಣೇಶ ಚತುರ್ಥಿಗೆ ಬೆಂಗಳೂರು-ಮಂಗಳೂರು ನಡುವೆ ವಿಶೇಷ ರೈಲು

ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆ ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೆ ಇಲಾಖೆಯು ಬೆಂಗಳೂರು-ಮಂಗಳೂರು...

Download Eedina App Android / iOS

X