ಹುಬ್ಬಳ್ಳಿಯ ಅಯ್ಯಪ್ಪ ಸ್ವಾಮಿ ಸನ್ನಿಧಿಯಲ್ಲಿ ಸಿಲೆಂಡರ್ ಸ್ಫೋಟ ಪ್ರಕರಣದಲ್ಲಿ ಒಟ್ಟು ಹತ್ತು ಮಂದಿ ಮಾಲಾಧಾರಿಗಳು ಗಾಯಗೊಂಡ ಹಿನ್ನೆಲೆಯಲ್ಲಿ ಇದುವರೆಗೆ ಸಾವಿನ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ.
ಡಿಸೆಂಬರ್ 26ಕ್ಕೆ ಇಬ್ಬರು ಸಾವನ್ನಪ್ಪಿದರು ಮತ್ತು ಡಿ. 27 ಮತ್ತಿಬ್ಬರು ಸಾವಪ್ಪಿದ್ದು ಸಾವಿನ ಸಂಖ್ಯೆ ನಾಲ್ಕು ತಲುಪಿದೆ. ಕಳೆದ ಭಾನುವಾರ ಗ್ಯಾಸ್ ಸೋರಿಕೆಯಾದ ಪರಿಣಾಮ ಸಿಲಿಂಡರ್ ಸ್ಫೋಟಗೊಂಡು 10 ಮಂದಿ ಅಯ್ಯಪ್ಪ ಮಾಲಾಧಾರಿಗಳು ಗಾಯಗೊಂಡಿದ್ದರು. ಡಿ. 26ಕ್ಕೆ ನಿಜನಿಂಗಪ್ಪ ಬೇಪೂರಿ ಹಾಗೂ ಸಂಜಯ ಸವದತ್ತಿ ಎಂಬ ಇಬ್ಬರು ಮಾಲಾಧಾರಿಗಳು ಮೃತಪಟ್ಟಿದ್ದಾರೆ. ಡಿ. 27ಕ್ಕೆ ಬೆಳಗ್ಗೆ ರಾಜು ಮೂಗೇರ ಸಾಯಂಕಾಲ 19ವರ್ಷದ ಲಿಂಗರಾಜ ಬೀರನೂರ ಮೃತಪಟ್ಟಿದ್ದಾರೆ.
ಕಿಮ್ಸ್ಗೆ ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಮಾಧ್ಯಮದವರೊಂದಿಗೆ ಮಾತನಾಡಿ, ಗಾಯಾಳುಗಳನ್ನು ಉಳಿಸಿಕೊಳ್ಳಲು ಎಲ್ಲಾ ಪ್ರಯತ್ನ ಮಾಡಲಾಗುತ್ತಿದೆ. ನುರಿತ ವೈದ್ಯರಿಂದ ಚಿಕಿತ್ಸೆ ಕೊಡಿಸಿದ್ವಿ ಆದರೂ ಮೃತಪಟ್ಟಿದ್ದಾರೆ. ಮೃತ ಕುಟುಂಬಕ್ಕೆ ಮುಖ್ಯಮಂತ್ರಿಗಳು 5 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದ್ದಾರೆ. ಹೆಚ್ಚಿನ ಪರಿಹಾರ ಕೊಡಿಸುವುದು ದೊಡ್ಡ ಕೆಲಸವಲ್ಲ. ಅವರನ್ನು ಉಳಿಸಿಕೊಳ್ಳಲು ಪ್ರಯತ್ನ ಮಾಡುತ್ತಿದ್ದೇವೆ. ಆ ಕುಟುಂಬಕ್ಕೆ ಅನುಕೂಲವಾಗುವ ಕೆಲಸ ಮಾಡಲು ಪ್ರಯತ್ನಿಸುತ್ತೇವೆ ಎಂದರು.
ಇನ್ನುಳಿದ ಗಾಯಗೊಂಡ ಐದು ಮಂದಿಗೆ ಕೆಎಂಸಿ/ಆರ್ಐನಲ್ಲಿ ಚಿಕಿತ್ಸೆ ಮುಂದುವರೆದಿದ್ದು, ಐದಾರು ಜನರ ಪರಿಸ್ಥಿತಿ ಚಿಂತಾಜನಕವಾಗಿದೆ.