ಟೀಂ ಇಂಡಿಯಾ ಯುವ ಆಟಗಾರರಾದ ನಿತೀಶ್ ಕುಮಾರ್ ರೆಡ್ಡಿ ಹಾಗೂ ವಾಷಿಂಗ್ಟನ್ ಸುಂದರ್ ಅವರ 8ನೇ ವಿಕೆಟ್‌ಗೆ ಶತಕದ ಜೊತೆಯಾಟದಿಂದ ಟೀಂ ಇಂಡಿಯಾ ಬಾರ್ಡರ್ – ಗವಾಸ್ಕರ್ ಟ್ರೋಫಿಯ ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಫಾಲೋ ಆನ್‌ನಿಂದ ಪಾರಾಗಿದೆ.
ಮೆಲ್ಬೋರ್ನ್‌ನ ಎಂಸಿಜಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್‌ನ ಮೂರನೆ ದಿನದಾಟದಲ್ಲಿ ನಿತೀಶ್ ಕುಮಾರ್ ರೆಡ್ಡಿ ಹಾಗೂ ವಾಷಿಂಗ್ಟನ್ ಸುಂದರ್ ಉತ್ತಮ ಆಟವಾಡಿ ಮುರಿಯದ 8ನೇ ವಿಕೆಟ್ ನಷ್ಟಕ್ಕೆ 193 ಎಸೆತಗಳಲ್ಲಿ 105 ರನ್ ಕಲೆ ಹಾಕಿದರು.
ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸಿದ ನಿತೀಶ್ , 119 ಚೆಂಡುಗಳಲ್ಲಿ 8 ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ ಅಜೇಯ 85 ರನ್ ಗಳಿಸಿ, ಶತಕದತ್ತ ದಾಪುಗಾಲು ಹಾಕಿದ್ದಾರೆ. ಇವರೊಂದಿಗೆ ರಕ್ಷಣಾತ್ಮಕ ಆಟವಾಡಿದ ವಾಷಿಂಗ್ಟನ್ ಸುಂದರ್, 115 ಎಸೆತಗಳಲ್ಲಿ ಒಂದು ಬೌಂಡರಿ ನೆರವಿನಿಂದ ಅಜೇಯ 40 ರನ್ ಗಳಿಸಿ ಅಜೇಯರಾಗಿ ಉಳಿದಿದ್ದಾರೆ.
ಈ ಸುದ್ದಿ ಓದಿದ್ದೀರಾ? ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಪ್ರಕಟ: ಫೈನಲ್‌ಗೆ ಭಾರತ – ಪಾಕ್ ಜೊತೆಯಾದರೆ ಎರಡು ಸ್ಥಳ ನಿಗದಿ!
ಭಾರತವು ಟೀ ವಿರಾಮದ ವೇಳೆಗೆ 98 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 326 ರನ್ ಗಳಿಸಿದೆ. ಆಸೀಸ್‌ನ ಮೊದಲ ಇನಿಂಗ್ಸ್ ಸರಿಗಟ್ಟಲು 148 ರನ್ ಗಳಿಸಬೇಕಿದೆ. ಎರಡನೇ ದಿನ 5 ವಿಕೆಟ್ ನಷ್ಟಕ್ಕೆ 164 ರನ್ ಗಳಿಸಿ, ಫಾಲೋ ಆನ್ ಭೀತಿಗೆ ಒಳಗಾಗಿದ್ದ ಟೀಂ ಇಂಡಿಯಾ ಇಂದು ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಹಾಗೂ ಆಲ್ ರೌಂಡರ್ ರವೀಂದ್ರ ಜಡೇಜಾರನ್ನು ಬಹುಬೇಗನೆ ಕಳೆದುಕೊಂಡಿತು.
ಆದರೆ ಈ ಸಂದರ್ಭದಲ್ಲಿ ಅಪಾಯದಿಂದ ಪಾರು ಮಾಡಿದವರು ಆಲ್‌ರೌಂಡರ್‌ಗಳಾದ ನಿತೀಶ್ ಕುಮಾರ್ ರೆಡ್ಡಿ (ಅಜೇಯ 85) ಹಾಗೂ ವಾಷಿಂಗ್ಟನ್ ಸುಂದರ್.
ಆಸ್ಟ್ರೇಲಿಯ ತಂಡದ ಪರ ಕೇವಲ 49 ರನ್ ನೀಡಿ ಮೂರು ಪ್ರಮುಖ ವಿಕೆಟ್ ಗಳನ್ನು ಕಿತ್ತ ಸ್ಕಾಟ್ ಬೋಲಂಡ್ ಯಶಸ್ವಿ ಬೌಲರ್ ಆದರು.ಉಳಿದಂತೆ ಪ್ಯಾಟ್ ಕಮಿನ್ಸ್ 2 ವಿಕೆಟ್ ಹಾಗೂ ನಥಾನ್ ಲಿಯೋನ್ ಒಂದು ವಿಕೆಟ್ ಪಡೆದರು.
