ಎಂಟಿವಿ, ಮನೋರಥಂಗಳ್ ಮತ್ತು ಮಲಯಾಳಂ

Date:

Advertisements
ಇತ್ತೀಚೆಗೆ ಇಲ್ಲವಾದ ಎಂಟಿ ವಾಸುದೇವನ್ ನಾಯರ್, ಭಾರತದ ಸಾರ್ವಕಾಲಿಕ ಶ್ರೇಷ್ಠ ಬರಹಗಾರರಲ್ಲಿ ಒಬ್ಬರು. ಅವರ ಕತೆಗಳನ್ನು ಮಲಯಾಳಂ ಚಿತ್ರರಂಗದ ಖ್ಯಾತನಾಮರೆಲ್ಲ ಸೇರಿ 'ಮನೋರಥಂಗಳ್' ಎಂಬ ವೆಬ್ ಸರಣಿ ನಿರ್ಮಿಸಿ, ಆ ಮೂಲಕ ಗೌರವ ಸಲ್ಲಿಸಿದರು. ಅಂಥದ್ದು ಕನ್ನಡದಲ್ಲೇಕೆ ಸಾಧ್ಯವಾಗುವುದಿಲ್ಲ?

ಭಾರತದ ಸಾರ್ವಕಾಲಿಕ ಶ್ರೇಷ್ಠ ಬರಹಗಾರರಲ್ಲಿ ಒಬ್ಬರಾದ ಎಂಟಿ ವಾಸುದೇವನ್ ನಾಯರ್ ಅವರು ಇತ್ತೀಚೆಗೆ ಕೋಝಿಕೋಡ್‌ನಲ್ಲಿ ನಿಧನರಾದರು. ಅವರಿಗೆ 91 ವರ್ಷ ವಯಸ್ಸಾಗಿತ್ತು.

ಆಧುನಿಕ ಮಲಯಾಳಂ ಸಾಹಿತ್ಯದಲ್ಲಿ ಬಹುಮುಖ ಬರಹಗಾರರಾದ ಎಂಟಿವಿಯವರು ಸುಮಾರು ಹತ್ತು ಕಾದಂಬರಿಗಳು, ಹದಿನೈದಕ್ಕೂ ಹೆಚ್ಚು ಸಣ್ಣ ಕತೆಗಳು ಮತ್ತು ಮಕ್ಕಳ ಸಾಹಿತ್ಯವನ್ನು ರಚಿಸಿದ್ದಾರೆ. ಅವರು ಸುಮಾರು ಐವತ್ನಾಲ್ಕು ಚಿತ್ರಗಳಿಗೆ ಚಿತ್ರಕಥೆ ಬರೆದಿದ್ದಾರೆ ಮತ್ತು ಆರು ಚಲನಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಕೆಲ ವರ್ಷಗಳ ಕಾಲ ಅವರು ‘ಮಾತೃಭೂಮಿ’ ವಾರಪತ್ರಿಕೆಯ ಸಂಪಾದಕರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಪ್ರತಿಷ್ಠಿತ ಪ್ರಶಸ್ತಿಗಳಾದ ಜ್ಞಾನಪೀಠ, ಪದ್ಮಭೂಷಣ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳನ್ನು ಪಡೆದಿದ್ದಾರೆ. 3 ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು, 7 ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಹಾಗೂ 21 ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

Advertisements

ಎಂಟಿವಿಯವರ ತಂದೆ ಸಿಲೋನ್ ನಲ್ಲಿದ್ದರು. ಅವರ ಜನ್ಮಸ್ಥಳವು ಹಿಂದಿನ ಮದ್ರಾಸ್ ಪ್ರೆಸಿಡೆನ್ಸಿಯ ಬ್ರಿಟಿಷ್ ರಾಜ್‌ನಲ್ಲಿ ಮಲಬಾರ್ ಜಿಲ್ಲೆಗೆ ಒಳಪಟ್ಟಿತ್ತು. ಅವರ ಕುಟುಂಬವು ಓದುವ-ಬರೆಯುವ ಆಸಕ್ತಿಯನ್ನು ಬೆಳೆಸದಿದ್ದರೂ, ಎಂಟಿವಿ ಚಿಕ್ಕ ವಯಸ್ಸಿನಲ್ಲೇ ಬರೆಯಲು ಪ್ರಾರಂಭಿಸಿದರು. ಅಲ್ಲಿನ ಮಾಧ್ಯಮಗಳು ಅವರ ಬರೆಹಗಳನ್ನು ಪ್ರಕಟಿಸಿ ಪ್ರೋತ್ಸಾಹಿಸಿದವು.    

ಇಪ್ಪತ್ತನೇ ವಯಸ್ಸಿನಲ್ಲಿ, ರಸಾಯನಶಾಸ್ತ್ರದ ಪದವಿಪೂರ್ವ ವಿದ್ಯಾರ್ಥಿಯಾಗಿದ್ದಾಗ ಎಂಟಿವಿ, ನ್ಯೂಯಾರ್ಕ್ ಹೆರಾಲ್ಡ್ ಟ್ರಿಬ್ಯೂನ್ಹಿಂದೂಸ್ತಾನ್ ಟೈಮ್ಸ್ ಮತ್ತು ಮಾತೃಭೂಮಿ ಜಂಟಿಯಾಗಿ ನಡೆಸಿದ ‘ವಿಶ್ವ ಸಣ್ಣ ಕಥೆ ಸ್ಪರ್ಧೆ’ಯಲ್ಲಿ ಮಲಯಾಳಂನ ಅತ್ಯುತ್ತಮ ಸಣ್ಣ ಕತೆ ಬಹುಮಾನವನ್ನು ಗೆದ್ದರು. ‘ಎಂಟಿ’ ಎಂದೇ ಪ್ರಸಿದ್ಧರಾಗಿದ್ದ ಅವರು ಸ್ವಾತಂತ್ರ್ಯೋತ್ತರ ಭಾರತೀಯ ಸಾಹಿತ್ಯದ ಮೇರುವ್ಯಕ್ತಿಗಳಲ್ಲಿ ಒಬ್ಬರಾಗಿ ಹೊರಹೊಮ್ಮಿದರು. ಮಲಯಾಳಂ ಸಾಹಿತ್ಯ ಮತ್ತು ಸಿನೆಮಾ ಕ್ಷೇತ್ರಕ್ಕೆ ಸದಾ ಕಾಲ ಸ್ಮರಿಸುವ ಕೊಡುಗೆ ಕೊಟ್ಟರು.

ಕೇರಳದಲ್ಲಿ ಎಲ್ಲರೂ- ಹಿಂದೂಗಳು, ಬ್ಯಾರಿ ಮುಸ್ಲಿಮರು, ಕ್ರಿಶ್ಚಿಯನ್ನರು- ಮಲಯಾಳಂ ಭಾಷೆಯನ್ನು ಬಹಳ ಪ್ರೀತಿಯಿಂದ ಬಳಸುತ್ತಾರೆ. ಭಾಷೆ ಬೆಳೆಸಿದ ಸಾಹಿತಿ, ಕಲಾವಿದರನ್ನು ಅಪಾರ ಗೌರವದಿಂದ ಕಾಣುತ್ತಾರೆ. ಇದು ‘ಎಂಟಿ’ ವಿಷಯದಲ್ಲೂ ಎದ್ದು ಕಾಣುತ್ತದೆ.

ಕಳೆದ ವರ್ಷ ಜುಲೈನಲ್ಲಿ, ‘ಎಂಟಿ’ಯವರ 91 ಹುಟ್ಟುಹಬ್ಬದ ನೆನಪಿಗಾಗಿ, ಅವರ ಕತೆಗಳನ್ನಾಧರಿಸಿ ಜೀ5 ವೆಬ್ ಸರಣಿ ನಿರ್ಮಿಸಿತು. ಆ ಸರಣಿಗೆ ‘ಮನೋರಥಂಗಳ್’ ಎಂದು ಹೆಸರಿಟ್ಟಿತು. ಆ ಸರಣಿಯ ಪ್ರತಿ ಕತೆಯ ಆರಂಭದಲ್ಲಿ ತಮಿಳಿನ ಖ್ಯಾತ ನಟ ಕಮಲ್ ಹಾಸನ್, ‘ಎಂಟಿ’ಯವರ ಕತೆಗಳ ಕುರಿತು ಪುಟ್ಟ ಪರಿಚಯವಿದೆ. ಅದನ್ನು ಅವರೇ ಮಾತನಾಡಿದ್ದಾರೆ. ಅವರ ಮಾತಿನಲ್ಲಿ ಎಂಟಿವಿ ಬಗೆಗಿರುವ ಪ್ರೀತಿ ಎದ್ದು ಕಾಣುತ್ತದೆ.

451474240 7968090789915450 6518291232970316402 n

ಮಲಯಾಳಂನ ಜನಪ್ರಿಯ ನಟ-ನಟಿಯರಾದ ಮಮ್ಮುಟ್ಟಿ, ಮೋಹನ್ ಲಾಲ್, ಫಹಾದ್ ಫಾಝಿಲ್, ಪಾರ್ವತಿ ಮೆನನ್, ಮಧು, ಸುರಭಿ ಲಕ್ಷ್ಮಿ, ಇಶಿತ್ ಯಾಮಿನಿ, ಅಪರ್ಣಾ ಬಾಲಮುರಳಿ, ಬಿಜು ಮೆನನ್, ಶಾಂತಿಕೃಷ್ಣ, ಜಾಯ್ ಮ್ಯಾಥ್ಯೂ, ಹರೀಶ್ ಉತ್ತಮನ್, ಮಾಧೂ, ಆಸಿಫಲಿ, ಜರೀನಾ ಮೊಯ್ದು, ಕೈಲಾಶ್, ಇಂದ್ರನ್, ನೆಡುಮುಡಿ ವೇಣು, ಎಂಜಿ ಪಣಿಕ್ಕರ್, ಸಿದ್ಧಿಕ್, ನಝೀರ್, ಇಂದ್ರಜಿತ್- ಸ್ಟಾರ್ ವರ್ಚಸ್ಸನ್ನು ಬದಿಗಿಟ್ಟು, ಕೊಟ್ಟಷ್ಟು ಸಂಭಾವನೆ ಪಡೆದು ನಟಿಸಿದ್ದಾರೆ. ಎಂಟಿ ವಾಸುದೇವನ್ ನಾಯರ್ ಅವರ ಮೇಲಿನ ಗೌರವಕ್ಕಾಗಿ, ಎಲ್ಲರೂ ಒಂದಾಗಿದ್ದಾರೆ.

‘ಎಂಟಿ’ಯವರ 9 ಸತ್ವಯುತ ಕತೆಗಳನ್ನು ಎಂಟು ಜನ ಹೆಸರಾಂತ ನಿರ್ದೇಶಕರಾದ ಪ್ರಿಯದರ್ಶನ್, ರಂಜಿತ್, ಶ್ಯಾಮಪ್ರಸಾದ್, ಅಶ್ವತಿ ನಾಯರ್, ಮಹೇಶ್ ನಾರಾಯಣನ್, ಜಯರಾಜ್ ನಾಯರ್, ಸಂತೋಷ್ ಶಿವನ್, ರತೀಶ್ ಅಂಬಾಟ್- ತಮ್ಮ ಬಿಗ್ ಸ್ಕ್ರೀನ್‌ನ ಬ್ಯುಸಿ ಕೆಲಸ ಬಿಟ್ಟು ವೆಬ್ ಸರಣಿ ನಿರ್ದೇಶಿಸಿದ್ದಾರೆ. ಅವರೊಂದಿಗೆ ಲೆಕ್ಕವಿಲ್ಲದಷ್ಟು ಜನ ತಂತ್ರಜ್ಞರು, ಬರೆಹಗಾರರು, ಸಹಾಯಕರು ವೆಬ್ ಸರಣಿಗಾಗಿ, ‘ಎಂಟಿ’ ಮೇಲಿನ ಪ್ರೀತಿಗಾಗಿ ಒಂದಾಗಿ ಕೆಲಸ ಮಾಡಿದ್ದಾರೆ.

ಮಲಯಾಳಂ ಚಿತ್ರರಂಗ ಯಾವಾಗಲೂ ಹೀಗೆಯೇ… ಹೊಸತನ ಮತ್ತು ಪ್ರಯೋಗಗಳಿಗೆ ಸುದ್ದಿಯಾಗುತ್ತದೆ. ಸ್ಟಾರ್ ಕಲಾವಿದರು, ಹೆಸರಾಂತ ತಂತ್ರಜ್ಞರು ಇಂತಹ ಪ್ರಯೋಗಗಳ ಭಾಗವಾಗುತ್ತಾರೆ. ಮಿಕ್ಕವರಿಗೆ ಮಾದರಿಯಾಗಿ ನಿಲ್ಲುತ್ತಾರೆ. ಜೀ5 ನಿರ್ಮಾಣ ಮಾಡಿರುವ ಈ ವೆಬ್ ಸರಣಿಯಲ್ಲಿ ಮಲಯಾಳಂ ಮಾತ್ರವಲ್ಲದೇ, ಕನ್ನಡ, ಹಿಂದಿ, ತೆಲುಗು ಹಾಗೂ ತಮಿಳಿನಲ್ಲೂ ‘ಮನೋರಥಂಗಳ್’ ನೋಡಬಹುದಾಗಿದೆ.

‘ಎಂಟಿ’ಯವರ ಕತೆಗಳೇ ಚೆಂದ. ಒಂದಕ್ಕಿಂತ ಒಂದು ಅದ್ಭುತ ಕತೆಗಳು. 70 ಮತ್ತು 80ರ ದಶಕಗಳನ್ನು ಕಣ್ಮುಂದೆ ತಂದು ನಿಲ್ಲಿಸುವಂಥವು. ಆ ಕತೆಗಳ ಪಾತ್ರಗಳಾದ… ವಿಲ್ಪನಾ, ಕಡುಗನ್ನಾವ, ಶಿಲಾ ಲಿಖಿತಂ, ಶರ್ಲಾಕ್, ದೋಣಿಯಲ್ಲಿ ಜೀವನ ನಡೆಸುವವನ ಲವ್ ಸ್ಟೋರಿ, ತಂದೆಯ ಅಕ್ರಮ ಸಂತಾನವನ್ನರಸಿ ಹೋಗುವ ಪತ್ರಕರ್ತ, ಗಂಡನಿಂದ ದೂರವಾದ ಹಾಡುಗಾರ್ತಿ, ತಂದೆಯ ಮಾನವೀಯತೆಯನ್ನು ಪ್ರಶ್ನಿಸುವ ಮಗಳು… ‘ಎಂಟಿ’ಯವರು ಕಟ್ಟಿಕೊಡುವ ಕಥಾಜಗತ್ತು, ಮನುಷ್ಯಲೋಕದ ವ್ಯಾಪಾರಗಳು, ಹೆಣ್ಣ ಕಣ್ಣೋಟದ ಒಳಪದರುಗಳ ಅನಾವರಣ- ಇಡೀ ಕೇರಳದ ಸಂಸ್ಕೃತಿಯೇ ಕಣ್ಮುಂದೆ ಜೀವ ತಳೆಯುತ್ತದೆ. ಇನ್ನು ಆ ಪಾತ್ರಗಳನ್ನು ನಿರ್ವಹಿಸಿರುವ ಕಲಾವಿದರಂತೂ, ಆ ಕಾಲಕ್ಕೇ ಹೋಗಿ, ಅವರಾಗಿಯೇ ಬದುಕಿದ್ದಾರೆ. ಆ ದೃಶ್ಯರೂಪವೇ, ಮನಸಿನ ದೃಶ್ಯಗಳೇ- ಮನೋರಥಂಗಳ್.

ಇದನ್ನು ಓದಿದ್ದೀರಾ?: ಮನಮೋಹನ್ ಸಿಂಗ್ ಎಂಬ ‘ಕುರಿಮರಿ’ಯ ಮುಂದೆ ಸೋತಿದ್ದ ‘ಉಕ್ಕಿನ ಮನುಷ್ಯ’ ಆಡ್ವಾಣಿ

ನನಗಿಲ್ಲಿ ನೆನಪಾಗುವುದು ನೊಬೆಲ್ ಪ್ರಶಸ್ತಿ ಪುರಸ್ಕೃತರಾದ ರಬೀಂದ್ರನಾಥ ಠಾಗೂರ್ ಅವರ ಕತೆಗಳನ್ನು ಹೀಗೆಯೇ 2015ರಲ್ಲಿ ‘ಸ್ಟೋರೀಸ್ ಬೈ ರಬೀಂದ್ರನಾಥ್ ಠಾಗೂರ್’ ಎಂಬ ಹೆಸರಿನಲ್ಲಿ ವೆಬ್ ಸರಣಿ ನಿರ್ಮಿಸಲಾಗಿತ್ತು. ಠಾಗೂರರ ಜನಪ್ರಿಯ ಕತೆಗಳಾದ ಚೋಖರ್ ಬಾಲಿ, ಕಾಬೂಲಿವಾಲಾ, ಅತಿಥಿ, ವಫಾದಾರ್, ಸಂಪತಿ, ಪನಿಷ್ ಮೆಂಟ್, ಡಿಟೆಕ್ಟಿವ್, ಮಾನ್‌ಭಂಜನ್, ಮೃನಾಲ್ ಕಿ ಚಿಟ್ಟಿ, ದಿ ಸ್ಟೋರಿ ಆಫ್ ಎ ಮುಸ್ಲಿಂ ಗರ್ಲ್… ಹೀಗೆ 20 ಕತೆಗಳನ್ನು ಹಿಂದಿ ಚಿತ್ರರಂಗದ ಖ್ಯಾತ ನಿರ್ದೇಶಕ ಅನುರಾಗ್ ಬಸು ಸೇರಿದಂತೆ ಹಲವರು ನಿರ್ದೇಶಿಸಿದ್ದರು. ಆ ಸರಣಿಯಲ್ಲಿ ಖ್ಯಾತನಾಮರೆಲ್ಲ ನಟಿಸಿದ್ದರು. ಆನಂತರ ಅದನ್ನು ಮುಂದುವರೆಸಿ, 2020ರಲ್ಲಿ ಠಾಗೂರರ ಮತ್ತಷ್ಟು ಕತೆಗಳ ಮತ್ತೊಂದು ವೆಬ್ ಸರಣಿಯನ್ನೂ ನಿರ್ಮಿಸಲಾಯಿತು.  

ನಮ್ಮಲ್ಲೂ, ಕನ್ನಡದಲ್ಲೂ ಕತೆಗಳಿಗೇನು ಕೊರತೆ ಇಲ್ಲ. ಸೇಡಿಯಾಪು ಕೃಷ್ಣಭಟ್ಟರ ‘ನಾಗರ ಬೆತ್ತ’ದಿಂದ ಹಿಡಿದು ಇವತ್ತಿನ ಕತೆಗಾರರಾದ ಗುರುಪ್ರಸಾದ್ ಕಂಟಲಗೆರೆಯವರ ‘ಜಾತಿ ಮಾಂಸ’ದವರೆಗೆ ಸಾವಿರಾರು ಉತ್ಕೃಷ್ಟ ಗುಣಮಟ್ಟದ ಕತೆಗಳಿವೆ. ಕನ್ನಡದ ಕಸುವನ್ನು ಕಡೆದಿಟ್ಟ, ಬದುಕನ್ನು ಬಸಿದಿಟ್ಟ ಕಥನಗಳಿವೆ. ಬಳಸಿಕೊಳ್ಳುವ ಮನಸ್ಸುಗಳು ಬೇಕಷ್ಟೇ.

Basavaraju Megalkeri
+ posts

ಲೇಖಕ, ಪತ್ರಕರ್ತ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಬಸವರಾಜು ಮೇಗಲಕೇರಿ
ಬಸವರಾಜು ಮೇಗಲಕೇರಿ
ಲೇಖಕ, ಪತ್ರಕರ್ತ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗದಗ | ಮುಶಿಗೇರಿ ವಸತಿ ನಿಲಯಕ್ಕೆ ಮೂಲ ಸೌಕರ್ಯಗಳ ಕೊರತೆ; ವಿದ್ಯಾರ್ಥಿಗಳ ಗೋಳು ಕೇಳೋರ್ಯಾರು?

ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ವಸತಿ...

Download Eedina App Android / iOS

X