ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು…
ಅಲ್ಲದಾಟ
ಇಷ್ಟಲಿಂಗವ ತೋರಿ ಮೃಷ್ಟಾನ್ನವ
ಹೊಡೆವವರಿಗೆ ಇಷ್ಟಾರ್ಥಸಿದ್ಧಿಯದೆಲ್ಲಿಯದೊ? ಅದೆಲ್ಲಿಯದೊ ಲಿಂಗ?
ಅದೆಲ್ಲಿಯದೊ ಜಂಗಮ?
ಅದೆಲ್ಲಿಯದೊ ಪಾದೋದಕ ಪ್ರಸಾದ? ಅಲ್ಲದಾಟವನಾಡಿ ಎಲ್ಲರೂ ಮುಂದುಗೆಟ್ಟರು, ಗುಹೇಶ್ವರಾ ನಿಮ್ಮಾಣೆ!
ಪದಾರ್ಥ:
ಇಷ್ಟಾರ್ಥಸಿದ್ದಿ = ಆತ್ಮಜ್ಞಾನ
ಅಲ್ಲದಾಟ = ಸಲ್ಲದ ವರ್ತನೆ
ಮುಂದುಗೆಟ್ಟರು = ಹಾಳಾಗು, ಅವನತಿ
ವಚನಾರ್ಥ:
ದೈವದ ಹೆಸರಿನಲ್ಲಿ ತೋರಿಕೆಗೆ ಪೂಜೆಯ ಮಾಡಿ ಹೊಟ್ಟೆ ಹೊರೆವವರನ್ನು ಉದ್ದೇಶಿಸಿ ಬರೆದ ವಚನವಿದು. ತೋರಿಕೆಗೆ ಲಿಂಗಾರ್ಚನೆ. ಇಷ್ಟಲಿಂಗದ ಪೂಜೆ. ಆ ಲಿಂಗಕ್ಕೆ ಮೃಷ್ಟಾನ್ನದ ನೈವೇದ್ಯ. ಹಾಗೆ ಅರ್ಪಿಸಿದ ನೈವೇದ್ಯವನ್ನು ಮರಳಿ ಪಡೆದು ಮೃಷ್ಟಾನ್ನದ ಭೋಜನ
ಹೊಡೆಯುವ ತಂತ್ರಗಾರಿಕೆ. ಇದರಿಂದ ಮೃಷ್ಟಾನ್ನ ಭೋಜನ ಮಾತ್ರ ದಕ್ಕುವುದಲ್ಲದೆ ಇಷ್ಟಾರ್ಥಸಿದ್ದಿ ಆಗದು. ದೇಹ ಉಂಡೀತು. ಆತ್ಮಜ್ಞಾನ ಸಿದ್ದಿಸದು. ಲಿಂಗ ಜಂಗಮ ಪ್ರಸಾದ ಎಂದು ತೋರಿಕೆಗಷ್ಟೇ ಪ್ರದರ್ಶನ ಮಾಡುತ್ತಾ ಅಂತಿಮವಾಗಿ ಸುಖಭೋಗದ ಜೀವನವನ್ನು ಗುರಿಯಾಗಿಸಿಟ್ಟುಕೊಂಡ ವರ್ತನೆಯೇ ಅಲ್ಲದ ಆಟ. ಅಲ್ಲದಾಟ! ಅಲ್ಲದಾಟ ಅವನತಿಯ ಮಾರ್ಗ. ಅದರಿಂದ ಸದ್ಗತಿ ಸಿದ್ದಿಸದು.
ಪದಪ್ರಯೋಗಾರ್ಥ:
ಸಂಯಮ, ಸಂಹಿತೆ, ಸೌಜನ್ಯ, ಸಂಸ್ಕೃತಿ, ಸಮ್ಮತಿ ಮೀರಿದ ವರ್ತನೆಯನ್ನು ಅಲ್ಲದಾಟ ಎಂದು ಅಲ್ಲಮ ಅಂದಿದ್ದು. ಮಾಡಬಾರದ್ದು ಮಾಡಿದರೆ ಆಗಬಾರದ್ದು ಆಗುತ್ತದೆ ಎಂಬ ಜನಪ್ರಿಯ ಗಾದೆಯಂತೆ ಅಲ್ಲದಾಟವನಾಡಿದರೆ ಆಗಬಾರದ್ದು ಅಂದರೆ ಅವನತಿ ಆಗುತ್ತದೆ. “ತರವಲ್ಲ ತಗಿ ನಿನ್ನ ತಂಬೂರಿ ಸ್ವರ ಬರಿದೆ ಬಾರಿಸದಿರು ತಂಬೂರಿ” ಎಂಬ ಶರೀಫರ ಪ್ರಸಿದ್ಧ ತತ್ವಪದದ ಒಂದಕ್ಷರ ರೂಪವೇ ಅಲ್ಲದಾಟ. ಅಲ್ಲದ ಆಟ. ಇದು ಅತೀ ಅಪರೂಪವಾಗಿ ಬಳಕೆಯಾಗಿರುವ ಪದ. ಇಡೀ ವಚನ ಸಾಹಿತ್ಯದಲ್ಲಿ ಐದಾರು ಕಡೆ ಅಲ್ಲದಾಟ ಎಂಬ ಪದಬಳಕೆ ಆಗಿರುವುದು ಕಂಡುಬರುತ್ತದೆ.
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅನುಪಮಸುಖಿ

ಹರಿಹರ ಶಿವಕುಮಾರ್
ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.