ಕೊಲೆ ಪ್ರಕರಣದಲ್ಲಿ ಕೇರಳದ ನರ್ಸ್ ನಿಮಿಷಾ ಪ್ರಿಯಾ ಅವರಿಗೆ ಯೆಮನ್ ನ್ಯಾಯಾಲಯವು ಮರಣದಂಡಣೆ ಶಿಕ್ಷೆ ವಿಧಿಸಿದೆ. ಮರಣದಂಡನೆ ಶಿಕ್ಷೆಯನ್ನು ಅಲ್ಲಿನ ಅಧ್ಯಕ್ಷ ಶಾದ್ ಅಲ್-ಅಲಿಮಿ ಅನುಮೋದಿಸಿದ್ದಾರೆ. ಆ ಶಿಕ್ಷೆಯಿಂದ ಪ್ರಿಯಾ ಅವರನ್ನು ಪಾರು ಮಾಡಲು ಅವರ ಕುಟುಂಬಕ್ಕೆ ಬೇಕಾದ ಎಲ್ಲ ರೀತಿಯ ಸಹಾಯ ಒದಗಿಸುವುದಾಗಿ ಭಾರತದ ವಿದೇಶಾಂಗ ಸಚಿವಾಲಯ ಹೇಳಿದೆ.
ಯೆಮನ್ ಪ್ರಜೆ ತಲಾಲ್ ಅಬ್ದೋ ಮೆಹದಿ ಅವರನ್ನು ಕೊಲೆ ಮಾಡಿದ ಅಪರಾಧದಲ್ಲಿ ನರ್ಸ್ ನಿಮಿಷಾ ಪ್ರಿಯಾ ಅವರಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ. ಹತ್ಯೆಗೀಡಾದ ವ್ಯಕ್ತಿಯ ಕುಟುಂಬದಿಂದ ಪ್ರಿಯಾ ಅವರು ಕ್ಷಮೆ ಪಡೆಯಲು ಒಂದು ತಿಂಗಳ ಕಾಲಾವಕಾಶವಿದೆ. ಈ ಅವಧಿಯೊಳಗೆ ಅವರು ಕ್ಷಮೆ ಪಡೆಯಲು ಸಾಧ್ಯವಾಗದಿದ್ದರೆ, ಅವರನ್ನು ಮರಣದಂಡನೆಗೆ ಗುರಿಪಡಿಸಲಾಗುತ್ತದೆ ಎಂದು ಯೆಮನ್ ಹೇಳಿದೆ.
ಮೃತ ತಲಾಲ್ ಅಬ್ದೋ ಅವರ ಕುಟುಂಬವು ಕ್ಷಮೆ ನೀಡುವುದರ ಮೇಲೆ ಪ್ರಿಯಾ ಅವರ ಬಿಡುಗಡೆ ಅಥವಾ ಶಿಕ್ಷೆಯ ಪ್ರಮಾಣ ಕಡಿಮೆಯಾಗುವುದು ಅವಲಂಬಿತವಾಗಿದೆ. ಮೃತ ವ್ಯಕ್ತಿಯ ಕುಟುಂಬವು ಪ್ರಿಯಾ ಅವರನ್ನು ಕ್ಷಮಿಸಿ, ಪರಿಹಾರ ಹಣವನ್ನು ಸ್ವೀಕರಿಸಿದರೆ ಆಕೆಯ ಮರಣದಂಡನೆಯನ್ನು ಮನ್ನಾ ಮಾಡಲು ಅವಕಾಶವಿದೆ.
ಈ ಕುರಿತು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ (MEA) ವಕ್ತಾರ ರಣಧೀರ್ ಜೈಸ್ವಾಲ್ ಹೇಳಿಕೆ ಬಿಡುಗಡೆ ಮಾಡಿದ್ದು, “ಪ್ರಿಯಾ ಅವರ ಕುಟುಂಬವು ಪರ್ಯಾಯ ಆಯ್ಕೆಗಳನ್ನು ಹುಡುಕುತ್ತಿದೆ ಎಂಬುದು ನಮಗೆ ಅರಿವಾಗಿದೆ. ಆ ಕುಟುಂಬಕ್ಕೆ ಸರ್ಕಾರ ಸಾಧ್ಯವಿರುವ ಎಲ್ಲ ಸಹಾಯಹಸ್ತವನ್ನು ಚಾಚಲಿದೆ” ಎಂದು ಹೇಳಿದ್ದಾರೆ.
ಮೃತ ವ್ಯಕ್ತಿಯ ಕುಟುಂಬದಿಂದ ಕ್ಷಮಾಪಣೆ ಪಡೆಯುವ ಕುರಿತು ಚರ್ಚೆಗಳು ನಡೆಯುತ್ತಿವೆ. ಪ್ರಿಯಾ ಅವರ ಪರವಾಗಿ ನೇಮಕವಾಗಿದ್ದ ವಕೀಲರಿಗೆ ಪಾವತಿ ವಿಳಂಬವಾಗಿದ್ದು, ಮಾತುಕತೆ ಸ್ಥಗಿತಗೊಂಡಿದೆ ಎಂದು ತಿಳಿದುಬಂದಿದೆ. ತಮಗೆ ನೀಡಬೇಕಾದ ಶುಲ್ಕವನ್ನು ಪೂರ್ಣವಾಗಿ ನೀಡದ ಹೊರತು ಮಾತುಕತೆಯನ್ನು ಮುಂದುವರೆಸುವುದಿಲ್ಲ ಎಂದು ವಕೀಲರು ಹೇಳಿದ್ದಾರೆ ಎಂದು ವರದಿಯಾಗಿದೆ.