ಬಿಹಾರದ ವಿದ್ಯಾರ್ಥಿ ಚಳವಳಿ ಮತ್ತು ನಿರುದ್ಯೋಗಿಗಳ ಮೋದಿ ಭಾರತ

Date:

Advertisements
ಬಿಹಾರದ ವಿದ್ಯಾರ್ಥಿ ಚಳವಳಿ ಸ್ವಾರ್ಥ ರಾಜಕಾರಣಿಗಳ, ದೂರಾಲೋಚನೆಯ ಸಂಘಟಕರ, ಧನದಾಹಿ ಖಾಸಗಿ ಕೋಚಿಂಗ್ ಸೆಂಟರ್ ಮಾಫಿಯಾದ ಕೈವಶವಾಗಿದೆ. ಬಿಹಾರ ಸರ್ಕಾರಕ್ಕೆ ವಿದ್ಯಾರ್ಥಿಗಳು ಕೊಟ್ಟಿರುವ ಜನವರಿ 4ರ ಗಡುವು, ಏನಾಗಲಿದೆ...?

ಬಿಹಾರದ ರಾಜಧಾನಿ ಪಾಟ್ನಾದಲ್ಲಿ ಭಾನುವಾರ ತಡರಾತ್ರಿ ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲೆ ಪೊಲೀಸರು ಅಮಾನುಷವಾಗಿ ಲಾಠಿ ಚಾರ್ಜ್ ಮಾಡಿದ್ದಾರೆ. ಕೊರೆಯುವ ಚಳಿಯಲ್ಲಿ ಜಲಫಿರಂಗಿ ಪ್ರಯೋಗಿಸಿದ್ದಾರೆ. ವಿದ್ಯಾರ್ಥಿಗಳೆಂದರೆ ಭವಿಷ್ಯದ ಭಾರತ ಎನ್ನುತ್ತಾರೆ. ಆದರೆ ಬಿಹಾರದಲ್ಲಿ ಆಳುವ ಸರ್ಕಾರವೇ ಮುಂದೆ ನಿಂತು ಆ ಭವಿಷ್ಯವನ್ನು ಬರಿದು ಮಾಡುತ್ತಿದೆ.

ಬಿಹಾರ ಲೋಕಸೇವಾ ಆಯೋಗ (ಬಿಪಿಎಸ್‌ಸಿ) ನಡೆಸಿದ 70ನೇ ಸಂಯೋಜಿತ (ಪೂರ್ವಭಾವಿ) ಸ್ಪರ್ಧಾತ್ಮಕ ಪರೀಕ್ಷೆ 2024ರಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂಬ ಆರೋಪ ಕೇಳಿಬಂದಿದೆ. ಸಿಟ್ಟಿಗೆದ್ದ ವಿದ್ಯಾರ್ಥಿಗಳಿಂದ ಪಾಟ್ನಾದ ಗಾಂಧಿ ಮೈದಾನದಲ್ಲಿ ಡಿಸೆಂಬರ್ ಮಧ್ಯಭಾಗದಲ್ಲಿ ಆರಂಭವಾದ ಪ್ರತಿಭಟನೆಗೆ ಈಗ ಹತ್ತು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳ ಬೆಂಬಲ ಸಿಕ್ಕಿದೆ, ಆಂದೋಲನವಾಗಿ ಮಾರ್ಪಟ್ಟಿದೆ.

ನಿತೀಶ್ ಕುಮಾರ್ ನೇತೃತ್ವದ ಸರ್ಕಾರಕ್ಕೆ ಕಣ್ಣು-ಕಿವಿಯೇ ಇಲ್ಲವೆಂದು ತೀರ್ಮಾನವಾದಾಗ ಪ್ರತಿಭಟನಾಕಾರರು ಮುಖ್ಯಮಂತ್ರಿ ನಿವಾಸದತ್ತ ನುಗ್ಗಲು ಯತ್ನಿಸಿದ್ದಾರೆ. ಪೊಲೀಸರು ನಿರುದ್ಯೋಗಿ ಪದವೀಧರರಿಗೆ ಮನಬಂದಂತೆ ಥಳಿಸಿದ್ದಾರೆ. ಅಷ್ಟೇ ಅಲ್ಲ, 700 ಅಪರಿಚಿತ ವ್ಯಕ್ತಿಗಳು ಸೇರಿದಂತೆ 21 ಮಂದಿ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ವಿದ್ಯಾರ್ಥಿಗಳ ನ್ಯಾಯಯುತ ಪ್ರತಿಭಟನೆಯನ್ನು ಬೆಂಬಲಿಸಿದ ಜನ ಸುರಾಜ್ ಪಕ್ಷದ ಸಂಸ್ಥಾಪಕ ಪ್ರಶಾಂತ್ ಕಿಶೋರ್ ವಿರುದ್ಧ, ಪರೀಕ್ಷಾ ಅಭ್ಯರ್ಥಿಗಳನ್ನು ಬೀದಿಗೆ ತಂದು ಗಲಾಟೆ ಎಬ್ಬಿಸಿದ್ದಾರೆಂಬ ಆರೋಪದ ಮೇಲೆ ದೂರು ದಾಖಲಿಸಲಾಗಿದೆ.

Advertisements

ಇದನ್ನು ಓದಿದ್ದೀರಾ?: ಲಡಾಖ್ | ಸಂಬಂಧವಿಲ್ಲದ ನೆಲದಲ್ಲಿ ಶಿವಾಜಿ ಪ್ರತಿಮೆ: ಇದು ಸಾಂಸ್ಕೃತಿಕ ದಬ್ಬಾಳಿಕೆ!

ಬಿಹಾರದ ಪರೀಕ್ಷೆಯಲ್ಲಿನ ಭ್ರಷ್ಟಾಚಾರವನ್ನು ಕೊನೆಗಾಣಿಸುವಂತೆ ಒತ್ತಾಯಿಸಿ ಪ್ರತಿಭಟನಾನಿರತ ಅಭ್ಯರ್ಥಿಗಳಿಗೆ ಪ್ರಶಾಂತ್ ಕಿಶೋರ್ ಬೆಂಬಲ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ, ಚಳಿಯಲ್ಲಿ ಗಡಗಡ ನಡುಗುತ್ತಿದ್ದ ವಿದ್ಯಾರ್ಥಿಗಳಿಗೆ ಕಂಬಳಿ ವಿತರಣೆಯನ್ನೂ ಮಾಡಿದ್ದಾರೆ. ಆನಂತರ ಅವರು, ‘ಮುಖ್ಯಮಂತ್ರಿಗಳಿಗೆ ಪ್ರತಿಭಟನಾನಿರತ ಆಕಾಂಕ್ಷಿಗಳ ಅಹವಾಲನ್ನು ಆಲಿಸಲು ಸಮಯವಿಲ್ಲದೇ ದಿಲ್ಲಿಗೆ ತೆರಳಿದ್ದಾರೆ. ಪರೀಕ್ಷೆ ರದ್ದುಗೊಳಿಸಬೇಕೆಂಬ ಆಕಾಂಕ್ಷಿಗಳ ಬೇಡಿಕೆಯನ್ನು ಈಡೇರಿಸುವವರೆಗೆ ಪ್ರತಿಭಟನೆ ಮುಂದುವರಿಯಲಿದೆ. ಪ್ರತಿಭಟಿಸುವ ವಿದ್ಯಾರ್ಥಿಗಳ ಜೊತೆ ನಾನು ಸದಾ ಇರುತ್ತೇನೆ’ ಎಂದಿದ್ದಾರೆ.

ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ಮುನ್ನ ಶಿಕ್ಷಣ ಕ್ಷೇತ್ರದ ಅಧಿಕಾರಿಗಳೊಂದಿಗೆ ವಿಸ್ತೃತ ಮಾತುಕತೆ ನಡೆಸಿದ ಕಿಶೋರ್ ಅವರು, ‘ಬಿಹಾರದಲ್ಲಿ ಯಾವುದೇ ಪರೀಕ್ಷೆಯು ಭ್ರಷ್ಟಾಚಾರ ಅಥವಾ ಪೇಪರ್ ಸೋರಿಕೆ ಇಲ್ಲದೆ ನಡೆದಿಲ್ಲ. ಇದು ಕೊನೆಗೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ನಾವು ಒಂದಾಗಬೇಕು’ ಎಂದು ಹೇಳಿದ್ದಾರೆ.

ಈ ನಡುವೆ, ‘ಪ್ರಶಾಂತ್ ಕಿಶೋರ್ ವಿದ್ಯಾರ್ಥಿಗಳ ಪ್ರತಿಭಟನೆಯನ್ನು ದಾರಿ ತಪ್ಪಿಸುತ್ತಿದ್ದಾರೆ’ ಎಂದ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ಅವರು, ‘ಆಡಳಿತದ ಎಚ್ಚರಿಕೆಯ ಹೊರತಾಗಿಯೂ ಪ್ರತಿಭಟನಾಕಾರರನ್ನು ಗಾಂಧಿ ಮೈದಾನದಲ್ಲಿ ಮೆರವಣಿಗೆ ಮಾಡಲು ದಾರಿ ತಪ್ಪಿಸಲಾಗಿದೆ. ಲಾಠಿ ಚಾರ್ಜ್ ಮತ್ತು ನೀರಿನ ಫಿರಂಗಿಗಳನ್ನು ಪ್ರಯೋಗಿಸಿದಾಗ ಪ್ರತಿಭಟನೆಯ ನೇತೃತ್ವ ವಹಿಸಿದ್ದವರು ಓಡಿಹೋಗಲು ನಿರ್ಧರಿಸಿದರು’ ಎಂದು ಆರೋಪಿಸಿದ್ದಾರೆ.

ಜೊತೆಗೆ, ‘ಈ ಆಂದೋಲನವನ್ನು ವಿದ್ಯಾರ್ಥಿಗಳು ಪ್ರಾರಂಭಿಸಿದ್ದಾರೆ. ನಾನು ಇತ್ತೀಚೆಗೆ ಹೋಗಿದ್ದ ಗರ್ದಾನಿ ಬಾಗ್‌ನಲ್ಲಿ ಸುಮಾರು ಎರಡು ವಾರಗಳ ಕಾಲ ನಡೆದ ಧರಣಿಯು ಸರ್ಕಾರವನ್ನು ನಡುಗುವಂತೆ ಮಾಡಿದೆ. ಘರ್ಷಣೆಗೆ ಬಿಹಾರ ಸರ್ಕಾರವೇ ಕಾರಣ’ ಎಂದು ಸಿಎಂ ನಿತೀಶ್ ಕುಮಾರ್‍‌ರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಲಾಠಿಚಾರ್ಜ್ ಬಳಿಕ ಬಿಹಾರದಲ್ಲಿ ಭಾರೀ ಕೋಲಾಹಲ ಉಂಟಾಗಿದ್ದು, ವಿದ್ಯಾರ್ಥಿಗಳ ಮೇಲಿನ ಲಾಠಿಚಾರ್ಜ್ ಖಂಡಿಸಿ ವಿರೋಧ ಪಕ್ಷಗಳು, ರಾಜಕೀಯ ನಾಯಕರು ಮತ್ತು ಎಡಪಂಥೀಯ ಸಂಘಟನೆಗಳು ವಿದ್ಯಾರ್ಥಿಗಳ ಬೆಂಬಲಕ್ಕೆ ನಿಂತಿದ್ದಾರೆ. ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ಕೂಡ ವಿದ್ಯಾರ್ಥಿಗಳ ಮೇಲೆ ಆದ ಲಾಠಿ ಚಾರ್ಜ್ ಖಂಡಿಸಿ, ಅವರ ಅಹವಾಲನ್ನು ಕೇಳಲು ನಿತೀಶ್ ಕುಮಾರ್ ಅವರಿಗೆ ಮನವಿ ಮಾಡಿದ್ದಾರೆ.

ಬಿಹಾರ ರಾಜ್ಯಾದ್ಯಂತ 900ಕ್ಕೂ ಹೆಚ್ಚು ಕೇಂದ್ರಗಳಲ್ಲಿ ಐದು ಲಕ್ಷ ಅಭ್ಯರ್ಥಿಗಳು ಡಿಸೆಂಬರ್ 13ರಂದು ನಡೆದ ಬಿಪಿಎಸ್‌ಸಿ ಪರೀಕ್ಷೆ ಬರೆದಿದ್ದರು. ಬರೆಯುವಾಗಲೇ ಪ್ರಶ್ನೆಪತ್ರಿಕೆ ಸೋರಿಕೆಯ ಸುದ್ದಿ ಹಬ್ಬಿತು. ಆ ಪರೀಕ್ಷೆಯನ್ನು ರದ್ದುಗೊಳಿಸುವ ಬೇಡಿಕೆಯನ್ನಿಟ್ಟುಕೊಂಡು ಈಗ ವಿದ್ಯಾರ್ಥಿಗಳು ಧರಣಿ ಕೂತಿದ್ದಾರೆ.

ವಿದ್ಯಾರ್ಥಿಗಳು ನಿಜಕ್ಕೂ ಇಲ್ಲಿ ಅನ್ಯಾಯ ಮತ್ತು ವಂಚನೆಗೊಳಗಾಗಿದ್ದಾರೆ. ಡಿಗ್ರಿ, ಮಾಸ್ಟರ್ ಡಿಗ್ರಿ ಓದಿದರೂ ಸಣ್ಣಸಂಬಳದ ಕೆಲಸವೂ ಸಿಗದೆ ಪರಿತಪಿಸುತ್ತಿದ್ದಾರೆ. ನಿರುದ್ಯೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಇವರ ನ್ಯಾಯಯುತ ಬೇಡಿಕೆ ಈಡೇರಿಸಬೇಕಾದ ಸರ್ಕಾರ, ‘ಬಿಪಿಎಸ್‌ಸಿ ಪರೀಕ್ಷೆ ಸರ್ಕಾರದ ಅಡಿಯಲ್ಲಿ ಬರುವುದಿಲ್ಲ’ ಎಂದು ನೆಪ ಹೇಳುವ ಮೂಲಕ ವಿದ್ಯಾರ್ಥಿಗಳನ್ನು ದಾರಿತಪ್ಪಿಸುತ್ತಿದೆ. ಹಸಿವು, ಬಡತನ ಮತ್ತು ನಿರುದ್ಯೋಗದಿಂದಾಗಿ ವಿದ್ಯಾರ್ಥಿಗಳ ಅಸಹನೆಯ ಕಟ್ಟೆ ಒಡೆದಿದೆ. ಇದು ವಿರೋಧ ಪಕ್ಷಗಳಿಗೆ, ಎಡಪಂಥೀಯ ಸಂಘಟನೆಗಳ ನಾಯಕರಿಗೆ ಹಾಗೂ ಖಾಸಗಿ ಕೋಚಿಂಗ್ ಸೆಂಟರ್ ಮಾಫಿಯಾಕ್ಕೆ ಹೊಸ ಅಸ್ತ್ರ ಸಿಕ್ಕಂತಾಗಿದೆ. ಅಮಾಯಕ ವಿದ್ಯಾರ್ಥಿಗಳನ್ನು ಬೆಂಬಲಿಸುತ್ತಲೇ ದಾರಿ ತಪ್ಪಿಸುವವರ ಸಂಖ್ಯೆ ಹೆಚ್ಚಾಗಿದೆ.

ಸೋಜಿಗದ ಸಂಗತಿ ಎಂದರೆ, ಇದೇ ಬಿಹಾರದಲ್ಲಿ 50 ವರ್ಷಗಳ ಕೆಳಗೆ, 1974ರಲ್ಲಿ ಇದೇ ರೀತಿಯ ವಿದ್ಯಾರ್ಥಿ ಚಳವಳಿ- ಆಳುವ ಸರ್ಕಾರದ ದುರಾಡಳಿತ ಮತ್ತು ಭ್ರಷ್ಟಾಚಾರದ ವಿರುದ್ಧ ಸ್ಫೋಟಗೊಂಡಿತ್ತು. ಅದರ ನೇತೃತ್ವವನ್ನು ಅಂದಿನ ಜನನಾಯಕ ಜಯಪ್ರಕಾಶ್ ನಾರಾಯಣ್ ವಹಿಸಿದ್ದರು. ಆನಂತರ ಆ ಚಳವಳಿ ಕೇಂದ್ರ ಸರ್ಕಾರದ, ಅಂದಿನ ಪ್ರಧಾನಿ ಇಂದಿರಾ ಗಾಂಧಿ ವಿರುದ್ಧ ತಿರುಗಿತ್ತು. ಸಂಪೂರ್ಣ ಕ್ರಾಂತಿಗೆ ಕಾರಣವಾಗಿತ್ತು.

ಜಯಪ್ರಕಾಶ್ ನಾರಾಯಣ್ ಅವರು ಅಂದು ರ್‍ಯಾಲಿ ಆಯೋಜಿಸಿ, ವಿದ್ಯಾರ್ಥಿಗಳಿಗೆ ಪರೀಕ್ಷೆಗಳನ್ನು ಬಹಿಷ್ಕರಿಸಲು ಹಾಗೂ ಶಾಸಕರಿಗೆ ರಾಜೀನಾಮೆ ಕೊಟ್ಟು ಹೊರಬರಲು ಕರೆ ಕೊಟ್ಟಿದ್ದರು. ಆ ಸಂದರ್ಭದಲ್ಲಿ 1600 ಜನ ಪ್ರತಿಭಟನಾಕಾರರು ಮತ್ತು 65 ಜನ ವಿದ್ಯಾರ್ಥಿ ನಾಯಕರನ್ನು ಪೊಲೀಸರು ಬಂಧಿಸಿದ್ದರು. 318 ಜನ ಶಾಸಕರಲ್ಲಿ 42 ಶಾಸಕರು ರಾಜೀನಾಮೆ ಕೊಟ್ಟು ವಿದ್ಯಾರ್ಥಿ ಚಳವಳಿಯನ್ನು ಬೆಂಬಲಿಸಿದ್ದರು.  

ಆದರೆ, ಇಂದಿನ ಬಿಹಾರದ ವಿದ್ಯಾರ್ಥಿ ಚಳವಳಿ ಸ್ವಾರ್ಥ ರಾಜಕಾರಣಿಗಳ, ದೂರಾಲೋಚನೆಯ ಸಂಘಟಕರ, ಧನದಾಹಿ ಖಾಸಗಿ ಕೋಚಿಂಗ್ ಸೆಂಟರ್ ಮಾಫಿಯಾದ ಕೈವಶವಾಗಿದೆ. ಬಿಹಾರ ಸರ್ಕಾರಕ್ಕೆ ವಿದ್ಯಾರ್ಥಿಗಳು ಕೊಟ್ಟಿರುವ ಜನವರಿ 4ರ ಗಡುವು, ಏನಾಗಲಿದೆ ಎಂಬುದು ಯಾರ ಅಂಕೆಗೂ ಸಿಗದಂತಾಗಿದೆ.

ಇದರ ಜೊತೆಗೆ, ಕಳೆದ ಹತ್ತು ವರ್ಷಗಳ ಮೋದಿ ಆಡಳಿತದಲ್ಲಿ ನಿರುದ್ಯೋಗ ದರವು ಕಳೆದ 45 ವರ್ಷಗಳಲ್ಲಿಯೇ ಅತ್ಯಂತ ಕೆಟ್ಟ ಪರಿಸ್ಥಿತಿಗೆ ತಲುಪಿದೆ. ಮೋದಿ ಅಧಿಕಾರಕ್ಕೆ ಬರುವ ಹಿಂದಿನ ವರ್ಷ- 2012ರಲ್ಲಿ ನಿರುದ್ಯೋಗ ದರವು 2.1% ಇತ್ತು. 2024ರಲ್ಲಿ 9.1%ಗೆ ಏರಿಕೆಯಾಗಿದೆ. ಪದವೀಧರರಲ್ಲಿ ನಿರುದ್ಯೋಗ ದರವು 19.2% ರಿಂದ 35.8%ಕ್ಕೆ ಏರಿದ್ದರೆ, ಸ್ನಾತಕೋತ್ತರ ಪದವಿ ಪಡೆದವರಲ್ಲಿ ನಿರುದ್ಯೋಗ ದರವು 36.2%ಗೆ ದಾಖಲಾಗಿದೆ. 20ರಿಂದ 24 ವಯಸ್ಸಿನ ಯುವಜನರ ನಿರುದ್ಯೋಗ ಪ್ರಮಾಣವು ಬರೋಬ್ಬರಿ 44.49%ಗೆ ಏರಿಕೆಯಾಗಿದೆ. ಅಂತೆಯೇ, 25 ಮತ್ತು 29ರ ನಡುವಿನ ಯುವಜನರಲ್ಲಿ ನಿರುದ್ಯೋಗವು 14.33% ಇದೆ.

ದೇಶದಲ್ಲಿ ಬಹಳ ದೊಡ್ಡ ಸಂಖ್ಯೆಯಲ್ಲಿರುವ ನಿರುದ್ಯೋಗಿಗಳಿಗೆ ಕೆಲಸ ಕೊಡುವವರೂ ಇಲ್ಲ; ಅವರ ಶಕ್ತಿ ಮತ್ತು ಸಾಮರ್ಥ್ಯವನ್ನು ಸರಿದಾರಿಯಲ್ಲಿ ಸದುಪಯೋಗಪಡಿಸಿಕೊಳ್ಳುವ ನಾಯಕರೂ ಇಲ್ಲ. ಇದು ಭಾರತ.

Basavaraju Megalkeri
+ posts

ಲೇಖಕ, ಪತ್ರಕರ್ತ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಬಸವರಾಜು ಮೇಗಲಕೇರಿ
ಬಸವರಾಜು ಮೇಗಲಕೇರಿ
ಲೇಖಕ, ಪತ್ರಕರ್ತ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಲಕ್ನೋ | ದಲಿತ ಮಹಿಳೆಯ ಗುರುತು ದುರುಪಯೋಗಿಸಿಕೊಂಡು ಸುಳ್ಳು ಆರೋಪ ಸೃಷ್ಟಿ: ವಕೀಲನಿಗೆ ಜೀವಾವಧಿ ಶಿಕ್ಷೆ

ದಲಿತ ಮಹಿಳೆಯ ಗುರುತು ದುರುಪಯೋಗಿಸಿಕೊಂಡ ಮತ್ತು ಸುಳ್ಳು ಆರೋಪಗಳನ್ನು ದಾಖಲಿಸಿದ ವಕೀಲರೊಬ್ಬರಿಗೆ...

ಸಂಸತ್ ಭವನದಲ್ಲಿ ಭದ್ರತಾ ವೈಫಲ್ಯ: ಗೋಡೆ ಹತ್ತಿ ಆವರಣ ಪ್ರವೇಶಿಸಿದ ಯುವಕ

ಸಂಸತ್ ಭವನದಲ್ಲಿ ಭದ್ರತಾ ವೈಫಲ್ಯ ಕಾಣಿಸಿಕೊಂಡಿದ್ದು ವ್ಯಕ್ತಿಯೋರ್ವ ಶುಕ್ರವಾರ ಬೆಳಿಗ್ಗೆ ಮರವನ್ನು...

ಸಿಬಿಐ ಅಧಿಕಾರಿಗಳಂತೆ ನಟಿಸಿ 2.3 ಕೋಟಿ ರೂ. ದೋಚಿದ್ದ ಗ್ಯಾಂಗ್: ಇಬ್ಬರ ಬಂಧನ

ಕೇಂದ್ರ ತನಿಖಾ ದಳ (ಸಿಬಿಐ) ಅಧಿಕಾರಿಗಳಂತೆ ನಟಿಸಿ ಉದ್ಯಮಿಯೊಬ್ಬರ ಕಚೇರಿಯಿಂದ ಗ್ಯಾಂಗ್...

ಬೀದಿ ನಾಯಿಗಳಿಗೆ ಲಸಿಕೆ ಹಾಕಿದ ನಂತರ ಅದೇ ಸ್ಥಳಕ್ಕೆ ತಂದು ಬಿಡಬೇಕು: ಸುಪ್ರೀಂ ಕೋರ್ಟ್‌

ಬೀದಿ ನಾಯಿಗಳಿಗೆ ಸಂಬಂಧಿಸಿದ್ದಂತೆ ಆಗಸ್ಟ್ 11ರ ಆದೇಶವನ್ನು ಮಾರ್ಪಡಿಸಿದ ಸುಪ್ರೀಂ...

Download Eedina App Android / iOS

X