ಐದು ಟೆಸ್ಟ್ ಪಂದ್ಯಗಳ ಬಾರ್ಡರ್-ಗವಾಸ್ಕರ್ ಟ್ರೋಫಿಯ ಎರಡನೇ ದಿನದಾಟದಲ್ಲಿ ಹಂಗಾಮಿ ನಾಯಕ ಜಸ್ಪ್ರೀತ್ ಬುಮ್ರಾ ನೇತೃತ್ವದ ಟೀಮ್ ಇಂಡಿಯಾ, ಆಸ್ಟ್ರೇಲಿಯಾ ತಂಡದ ವಿರುದ್ಧ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾಗಿದೆ.
ಎರಡನೇ ದಿನದ ಮೊದಲ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ ತಂಡವು 181 ರನ್ ಗಳಿಸುವಷ್ಟರಲ್ಲಿ ಆಲೌಟ್ ಆಗಿದೆ.
ಟೆಸ್ಟ್ ಸರಣಿಯ ಅಂತಿಮ ಟೆಸ್ಟ್ ಪಂದ್ಯದ ಮೊದಲ ದಿನ ಮೊದಲು ಬ್ಯಾಟಿಂಗ್ ನಡೆಸಿದ್ದ ಟೀಮ್ ಇಂಡಿಯಾ, 185 ರನ್ ಗಳಿಸುವಷ್ಟರಲ್ಲಿ ಆಲೌಟ್ ಆಗಿತ್ತು. ಮೊದಲ ದಿನದ ಅಂತಿಮ ಕ್ಷಣದಲ್ಲಿ ಬ್ಯಾಟಿಂಗ್‌ಗೆ ಇಳಿದಿದ್ದ ಆಸ್ಟ್ರೇಲಿಯಾ, ಬುಮ್ರಾ ಎಸೆದಿದ್ದ ಕೊನೆಯ ಓವರ್‌ನ ಕೊನೆಯ ಎಸೆತದಲ್ಲಿ ಉಸ್ಮಾನ್ ಖ್ವಾಜಾ ವಿಕೆಟ್ ಪಡೆಯುವಲ್ಲಿ ಸಫಲರಾಗಿದ್ದರು. ಆ ಮೂಲಕ ಮೊದಲ ದಿನದಾಟದ ಅಂತ್ಯದ ವೇಳೆಗೆ ಆತಿಥೇಯ ಆಸ್ಟ್ರೇಲಿಯಾ 9 ರನ್‌ಗೆ ಒಂದು ವಿಕೆಟ್ ಕಳೆದುಕೊಂಡಿತ್ತು.
ಎರಡನೇ ದಿನ 9 ರನ್‌ಗಳಿಂದ ಬ್ಯಾಟಿಂಗ್ ಮುಂದುವರಿಸಿದ ಪ್ಯಾಟ್ ಕಮ್ಮಿನ್ಸ್ ನೇತೃತ್ವದ ಆತಿಥೇಯ ತಂಡವು ಟೀಮ್ ಇಂಡಿಯಾದ ಮಾರಕ ಬೌಲಿಂಗ್‌ಗೆ ತತ್ತರಿಸಿ 181 ರನ್ ಗಳಿಸುವಷ್ಟರಲ್ಲಿ ಆಲೌಟ್ ಆಗಿದೆ. ಆ ಮೂಲಕ ಟೀಮ್ ಇಂಡಿಯಾ, 4 ರನ್‌ಗಳ ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾಗಿದೆ.
ನಾಯಕ ಬುಮ್ರಾ ನೇತೃತ್ವದಲ್ಲಿ ಬೌಲಿಂಗ್ ದಾಳಿ ನಡೆಸಿದ ಟೀಮ್ ಇಂಡಿಯಾ ವೇಗದ ಬೌಲರ್‌ಗಳು, ಆಸೀಸ್‌ನ ಬ್ಯಾಟರ್‌ಗಳು ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲು ಅವಕಾಶ ನೀಡಲಿಲ್ಲ.
ಟೀಮ್ ಇಂಡಿಯಾ ಪರ ಮೊಹಮ್ಮದ್ ಸಿರಾಜ್ ಹಾಗೂ ತಲಾ ಮೂರು ವಿಕೆಟ್, ಜಸ್ಪ್ರೀತ್ ಬುಮ್ರಾ ಹಾಗೂ ನಿತೀಶ್ ಕುಮಾರ್ ರೆಡ್ಡಿ ತಲಾ ಎರಡು ವಿಕೆಟ್ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆಸ್ಟ್ರೇಲಿಯಾ ಪರ ಮೊದಲ ಟೆಸ್ಟ್ ಪಂದ್ಯವನ್ನಾಡುತ್ತಿರುವ ಬ್ಯೂ ವೆಬ್‌ಸ್ಟರ್ 57 ರನ್ ಗಳಿಸಿ, ಅರ್ಧಶತಕ ಗಳಿಸುವ ಮೂಲಕ ಮಿಂಚಿದರು.
