ಅಸ್ಸಾದಿಯವರು ಎಂದಿಗೂ ಯಾರದ್ದೇ ಆಗಲಿ ಹಿನ್ನೆಲೆಯನ್ನು ನೋಡಿ ಬೆಂಬಲಿಸಿದವರಲ್ಲ. ನನ್ನನ್ನೂ ಸೇರಿದಂತೆ ಇಂದು ಅವರ ಮಾರ್ಗದರ್ಶನದಲ್ಲಿ ಬದುಕು ಕಟ್ಟಿಕೊಂಡಿರುವ ನೂರಾರು ಜನ, ಸಮಾಜದ ಅಂಚಿನ ಸಮುದಾಯಗಳಿಂದ ಬಂದವರು. ಆ ಕಾರಣಕ್ಕೆ ಅವರು ಭೋಧಿಸಿದ ರಾಜ್ಯಶಾಸ್ತ್ರ ಜನರ ರಾಜ್ಯಶಾಸ್ತ್ರವಾಗಿತ್ತು.
ಅದು 2005ರ ಸಮಯ ನಾನು ಆಗ ಕುವೆಂಪು ವಿವಿಯಲ್ಲಿ ಎಂ.ಎ ರಾಜ್ಯಶಾಸ್ತ್ರ ಓದುತ್ತಿದ್ದೆ. ನಮ್ಮ ವಿವಿಗೆ ಆಗಾಗ ಪ್ರೊ. ಅಸ್ಸಾದಿಯವರು ಬರುತ್ತಿದ್ದರು. ಅವರು ಬಂದಾಗಲೆಲ್ಲಾ ಹೊಸ ಚೈತನ್ಯವೊಂದು ವಿಭಾಗಕ್ಕೆ ಬಂದಂತಹ ಭಾವ. ಆ ಹೊತ್ತಿಗಾಗಲೇ ಬೌದ್ಧಿಕ ಜಗತ್ತಿನಲ್ಲಿ ದೊಡ್ಡ ಹೆಸರು ಮಾಡಿದ್ದ ಮೇಸ್ಟ್ರು ಇರುತ್ತಿದ್ದದ್ದು ಮಾತ್ರ ಸರಳ ಸ್ನೇಹಿತರಂತೆ.
ಅವರು ಎಂದಿಗೂ ಅವರಿಗಿದ್ದ ಪ್ರೊಫೆಸರ್ ಹುದ್ದೆಯನ್ನಾಗಲಿ, ಬೌದ್ಧಿಕ ಗುರುತಿಸುವಿಕೆಯನ್ನಾಗಲಿ ಹೊತ್ತುಕೊಂಡು ತಿರುಗಿದವರಲ್ಲ. ಎಲ್ಲರೊಂದಿಗೂ ನಗು ನಗುತ್ತಾ ಮಾತನಾಡುತ್ತಿದ್ದರು, ಆ ಮಾತುಗಳು ಎದುರಿಗಿರುವ ಹುಡುಗರಲ್ಲಿ ಹೊಸ ನೋಟವೊಂದನ್ನು ಹುಡುಕುವ ಚೈತನ್ಯ ತುಂಬುತ್ತಿರುವಂತಿದ್ದವು.
ಎಂ.ಎ. ಮುಗಿದ ಮೇಲೆ ಪಿಹೆಚ್ಡಿ ಪದವಿ ಸೇರಿದೆ, ಆಗ ಇನ್ನೂ ಹತ್ತಿರವಾದರು. ಸಾಕಷ್ಟು ಚರ್ಚೆಗಳು ನಮ್ಮ ನಡುವೆ ನಡೆಯುತ್ತಿದ್ದವು. ಬಹಳ ಮುಖ್ಯವಾಗಿ ಕರ್ನಾಟಕದ ರಾಜಕಾರಣವನ್ನು ನೋಡುವ ಹೊಸ ಕಣ್ಣೋಟವೊಂದರ ಹುಡುಕಾಟದಲ್ಲಿ ಅಸ್ಸಾದಿಯವರು ಇದ್ದರು. ಅವರ ಒಟ್ಟು ಬದುಕು ಮತ್ತು ಬರಹ ಸಮುದಾಯಗಳು ಕೂಡಿಬಾಳುವ ಒಂದು ಸೆಕ್ಯುಲರ್ ರಾಜಕೀಯದ ಕುರಿತೇ ಆಗಿತ್ತು.
ನಮ್ಮ ಕಾಲದಲ್ಲಿನ ಧಾರ್ಮಿಕ ಮತ್ತು ಜಾತಿಯಾಧಾರಿತ ಹಿಂಸೆಯನ್ನು ಕಂಡು ಸಾಕಷ್ಟು ನೊಂದಿದ್ದರು ಈ ಸ್ಥಿತಿ ಬದಲಾಗುವ ದಿಕ್ಕಿನಲ್ಲಿ ನಾವು ಚಿಂತಿಸಬೇಕು ಎನ್ನುವುದು ಅವರ ಎಂದಿನ ಮಾತಾಗಿತ್ತು. ಆ ಕಾರಣಕ್ಕೆ ಮುಸ್ಲಿಂ ಸಮುದಾಯದಲ್ಲಿನ ಜಾತಿ ವ್ಯವಸ್ಥೆಯ ಕುರಿತು ಸಾಮಾಜಶಾಸ್ರೀಯ ವಿಶ್ಲೇಷಣೆ ಮಂಡಿಸಿದರು. ಹಿಂದುತ್ವ ರಾಜಕೀಯದ ಸಂಕುಚಿತ ಅಲೋಚನೆಗಳನ್ನು ಬೌದ್ಧಿಕವಾಗಿ ವಿಮರ್ಶಿಸಿದರು. ಆದಿವಾಸಿ ಹಕ್ಕುಗಳ ಕುರಿತ ಅಯೋಗದ ಅಧ್ಯಕ್ಷರಾಗಿ ಹಗಲಿರುಳು ದುಡಿದರು. ನಿಜ ಹೇಳಬೇಕು ಅಂದರೆ ನಮ್ಮ ಕಾಲದಲ್ಲಿ ಕನ್ನಡದಲ್ಲಿ ರಾಜ್ಯಶಾಸ್ತ್ರೀಯ ಚಿಂತನೆಗಳನ್ನು ಮಂಡಿಸಿದವರಲ್ಲಿ ಪ್ರೊ. ಅಸ್ಸಾದಿ ಪ್ರಮುಖರು.

ಅಸ್ಸಾದಿಯವರು ಎಂದಿಗೂ ಯಾರ ಹಿನ್ನಲೆಯನ್ನು ನೋಡಿ ಬೆಂಬಲಿಸಿದವರಲ್ಲ. ನನ್ನನ್ನೂ ಸೇರಿದಂತೆ ಇಂದು ಅವರ ಮಾರ್ಗದರ್ಶನದಲ್ಲಿ ಬದುಕು ಕಟ್ಟಿಕೊಂಡಿರುವ ನೂರಾರು ಜನ, ಸಮಾಜದ ಅಂಚಿನ ಸಮುದಾಯಗಳಿಂದ ಬಂದವರು. ಆ ಕಾರಣಕ್ಕೆ ಅವರು ಬೋಧಿಸಿದ ರಾಜ್ಯಶಾಸ್ತ್ರ ಜನರ ರಾಜ್ಯಶಾಸ್ತ್ರವಾಗಿತ್ತು.
ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ತಮ್ಮ ಸೈದ್ಧಾಂತಿಕ ನಿಲುವಿನಲ್ಲಿ ಎಂದಿಗೂ ರಾಜಿಮಾಡಿಕೊಳ್ಳದ ಆ ಕಾರಣಕ್ಕೆ ಹಲವು ವಿರೋಧಗಳನ್ನು ಎದುರಿಸಿದ, ವಿವಿಯ ಕುಲಪತಿ ಹುದ್ದೆಯಿಂದಲೂ ವಂಚಿತರಾದ ಪ್ರೊ. ಅಸ್ಸಾದಿ ಅಧಿಕಾರಕ್ಕಾಗಿ ಎಂದಿಗೂ ಸೈದ್ಧಾಂತಿಕತೆಯೊಂದಿಗೆ ರಾಜಿಮಾಡಿಕೊಳ್ಳಲಿಲ್ಲ. ಅವರು ಕೇವಲ ಮೇಸ್ಟ್ರಾಗಿರಲಿಲ್ಲ, ಹೋರಾಟಗಾರರಾಗಿದ್ದರು. ಹಲವಾರು ಜನಪರ ಹೋರಾಟಗಳಲ್ಲಿ ಬೀದಿಗೆ ಇಳಿದು ಮಾತನಾಡಿದ್ದರು. ಮೈಸೂರಿನ ಬಳಿ ಗ್ರಂಥಾಲಯವೊಂದನ್ನು ಕಿಡಿಗೇಡಿಗಳು ಸುಟ್ಟಾಗ ಸ್ವತಃ ನಿಂತು ಅದನ್ನು ಮರು ಸ್ಥಾಪಿಸಿದ್ದರು, ಸಾವಿರಾರು ಪುಸ್ತಕಗಳನ್ನು ಸಂಗ್ರಹಿಸಿ ಕೊಟ್ಟಿದ್ದರು. ಒಟ್ಟಾರೆ ಈ ಕಾಲಕ್ಕೆ ಒಬ್ಬ ಮೇಸ್ಟ್ರು ಹೇಗಿರಬೇಕು ಎಂಬುದಕ್ಕೆ ಅವರು ಮಾದರಿಯಾಗಿದ್ದರು.
ಬೆಂಗಳೂರು ಕೇಂದ್ರಿಯ ವಿವಿಯ ರಾಜ್ಯಶಾಸ್ರ್ತ ಅಧ್ಯಯನ ಮಂಡಳಿಯ ಸದಸ್ಯರಾಗಿದ್ದ ಕಾಲದಲ್ಲಿ ಅಪರೂಪದ ಪಠ್ಯಕ್ರಮವೊಂದನ್ನು ರೂಪಿಸಿಕೊಟ್ಟಿದ್ದರು. ಅಸ್ಸಾದಿಯಂತವರ ವಿದ್ವತ್ತು ಮತ್ತು ಅವರು ಹೊಂದಿದ್ದ ದೃಷ್ಟಿಕೋನ ಕರ್ನಾಟಕದ ಉನ್ನತ ಶಿಕ್ಷಣದ ಭವಿಷ್ಯದ ದೃಷ್ಟಿಯಿಂದ ಬಹಳ ಮಹತ್ವವಾಗಿತ್ತು. ಕನಿಷ್ಠ ವಿವಿಯೊಂದರ ಕುಲಪತಿಗಳಾಗಿದ್ದರೂ ಅವರು ಮಾದರಿ ವಿಶ್ವವಿದ್ಯಾಲಯ ರೂಪಿಸಿ ತೋರಿಸುತ್ತಿದ್ದರು.

ಕಳೆದ ವಾರವಷ್ಟೆ ಮೈಸೂರಿನ CIIL ಗೆ ಸ್ವತಃ ಬಂದು ಇಡೀ ದಿನ ನಮ್ಮೊಂದಿಗೆ ಇದ್ದು ಮಾತನಾಡಿದ್ದರು, ಎಷ್ಟೆಲ್ಲಾ ನೆನಪುಗಳನ್ನು ನಾವು ಹಂಚಿಕೊಂಡಿದ್ದೆವು. ಫೋಟೋ ತೆಗೆಸಿಕೊಂಡು I am still Young ಅಂತ ಮನಸಾರೆ ನಕ್ಕಿದ್ದರು..! ನನ್ನ ಬದುಕಿನ ಪ್ರತಿ ಬೆಳವಣಿಗೆಯಲ್ಲೂ ಅವರ ಗಾಢ ಪ್ರಭಾವವಿದೆ, ಮೊನ್ನೆ ಗಾಂಧಿ ಅಧ್ಯಯನ ಕೇಂದ್ರದಲ್ಲಿ ಸುಮ್ಮನೆ ಕುಳಿತು ಅವರ ಮಾತುಗಳನ್ನು ಕೇಳಿಸಿಕೊಂಡಿದ್ದೆ. ಅವರು ಇಲ್ಲ ಅಂದರೆ ನಂಬಲಾಗುತ್ತಿಲ್ಲ..! ಕರ್ನಾಟಕದ ರಾಜ್ಯಶಾಸ್ತ್ರ ಕುಟುಂಬ ಮಹತ್ವದ ಕೊಂಡಿಯೊಂದನ್ನು ಕಳೆದುಕೊಂಡಿದೆ. ನಾನು ನನ್ನ ನಿಜ ಗುರುವೊಬ್ಬರನ್ನು ಕಳೆದುಕೊಂಡು ಅನಾಥನಾಗಿದ್ದೇನೆ.
ಇದನ್ನೂ ಓದಿ ನುಡಿ ನಮನ | ಅಗಲಿದ ಗೆಳೆಯ ಅಸ್ಸಾದಿ ಕುರಿತು ರಹಮತ್ ತರೀಕೆರೆ ಮಾತುಗಳು
ವಾಸ್ತವದಲ್ಲಿ ನಮ್ಮ ನಡುವಿನ ವ್ಯವಸ್ಥೆ ಮಾಡಿದ ತೊಂದರೆಗಳಿಂದ ಅವರಿಗೆ ಏನೂ ಆಗಲಿಲ್ಲ. ಅವರು ಎಂದಿನಂತೆ ನಗುನಗುತ್ತಲೇ ಇದ್ದರು. ಆದರೆ ಅವರಿಗೆ ಧಕ್ಕಬೇಕಾದ್ದನ್ನು ವಂಚಿಸಿ ಸ್ವತಃ ವ್ಯವಸ್ಥೆಯೇ ದೊಡ್ಡ ನಷ್ಟವೊಂದನ್ನು ಮಾಡಿಕೊಂಡಿತು ಅನ್ನಿಸುತ್ತದೆ. ಕಾಲದಲ್ಲಿ ಇವೆಲ್ಲವೂ ಪಾಠಗಳೇ. ಆದರೆ ನನ್ನಂತಹ ನೂರಾರು ವಿದ್ಯಾರ್ಥಿಗಳ ಪಾಲಿಗೆ ಅವರು ಎಂದಿಗೂ ಅಮರ. . ಎಂದೆಂದಿಗೂ ಅಮರ. . .

ಡಾ. ಕಿರಣ್ ಎಂ ಗಾಜನೂರು
ಸಹಾಯಕ ಪ್ರಾಧ್ಯಾಪಕರು, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ, ಕಲಬುರಗಿ