ಮನಮೋಹನ್‌ ಸಿಂಗ್‌ ಅವರಿಗೆ ಅಹಮದಾಬಾದ್‌ನ ಯಾರೋ ವ್ಯಾಪಾರಿ ಮಾರ್ಗದರ್ಶನ ಮಾಡಿರಲಿಲ್ಲ: ಯೋಗೇಂದ್ರ ಯಾದವ್

Date:

Advertisements

“ಡಾ. ಮನಮೋಹನ್‌ ಸಿಂಗ್‌ ಅವರನ್ನು ಆಕಸ್ಮಿಕ ಪ್ರಧಾನಮಂತ್ರಿ ಎಂದು ಹೇಳಲಾದ ಟೀಕೆಗಳನ್ನೂ ಕೇಳಿದ್ದೇವೆ. ವಿಷಯ ಏನೆಂದರೆ ‘ಯಾವುದು ಉತ್ತಮ ಆಕಸ್ಮಿಕ, ಯಾವುದು ಬಹಳ ಬಹಳ ಕೆಟ್ಟ ಆಕಸ್ಮಿಕ’ ಎಂಬುದಷ್ಟೇ ಮುಖ್ಯ. ಅವರಿಗೆ ಯಾರೋ ಹಿಂದಿನಿಂದ ಮಾರ್ಗದರ್ಶನ ಮಾಡುತ್ತಿದ್ದಾರೆ ಎಂದು ಟೀಕಿಸುತ್ತಿದ್ದರು. ಆದರೆ, ಅವರಿಗೆ ಅಹಮದಾಬಾದ್‌ನ ಯಾರೋ ವ್ಯಾಪಾರಿ ಮಾರ್ಗದರ್ಶನ ಮಾಡಿರಲಿಲ್ಲ. ಸಲಹೆ ನೀಡಿ ಮುನ್ನಡೆಸುವವರನ್ನೇ ದೇಶವು ಪ್ರಧಾನಮಂತ್ರಿಯಾಗಿ ಆಯ್ಕೆ ಮಾಡಿತ್ತು. ಯಾರಿಂದಲೋ ಮಾರ್ಗದರ್ಶಿಸಲ್ಪಡದ ನಾಯಕರಿಗಿಂತ ಯಾರಿಂದಲಾದರೂ, ಮಾರ್ಗದರ್ಶಿಸಲ್ಪಡುವವರೇ ಉತ್ತಮ. ಮೋದಿಯವರಿಗೆ ಯಾರಾದರೂ ಮಾರ್ಗದರ್ಶನ ಮಾಡಿದ್ದರೆ ನೋಟು ರದ್ದತಿಯಂತಹವನ್ನು ಯಾರೂ ಜಾರಿ ಮಾಡಿರುತ್ತಿರಲಿಲ್ಲ” ಎಂದು ರಾಜಕೀಯ ವಿಶ್ಲೇಷಕ ಯೋಗೇಂದ್ರ ಯಾದವ್‌ ಹೇಳಿದರು.

ಶುಕ್ರವಾರ ಜಾಗೃತ ಕರ್ನಾಟಕ ಡಾ ಮನಮೋಹನ್‌ ಸಿಂಗ್‌ ನೆನಪಿನಲ್ಲಿ ಆಯೋಜಿಸಿದ್ದ ಡಾ.ಮನಮೋಹನ್‌ ಸಿಂಗ್‌ ಅವರ ನೀತಿಗಳು: ಭಾರತದ ವರ್ತಮಾನ ಹಾಗೂ ಭವಿಷ್ಯ ಕಾರ್ಯಕ್ರಮದಲ್ಲಿ ಅವರು ಸಿಂಗ್‌ ಅವರ ಆರ್ಥಿಕ ನೀತಿಗಳ ಬಗ್ಗೆ ಮಾತನಾಡಿದರು. ಅವರ ಭಾಷಣದ ಪೂರ್ಣಪಾಠ ಇಲ್ಲಿದೆ.

“ನೀವೂ ಕೂಡಾ ಅವರನ್ನು ಟೀಕಿಸಿದ್ದೀರಿ ಎಂಬ ಮಾತನ್ನು ಕೇಳಿದ್ದೇನೆ. ಹೌದು ನಾನು ಭ್ರಷ್ಟಾಚಾರ ವಿರೋಧಿ ವೇದಿಕೆಯಿಂದ, ಪ್ರಧಾನಮಂತ್ರಿ ವ್ಯಕ್ತಿಗತವಾಗಿ ಪ್ರಾಮಾಣಿಕರು, ಆದರೆ ಉಳಿದದ್ದು ಏನು ಎಂದು ಕೇಳಿದ್ದೆ. ಲೋಹಿಯಾ ಅವರು ಹೇಳಿದ್ದರು, ಗಾಂಧಿ ಅವರ ವಿಚಾರಗಳಿಗೆ ಇರುವ ಅತಿದೊಡ್ಡ ಅಪಾಯ ಗಾಂಧಿವಾದಿಗಳೇ. ಯಾರು ಗಾಂಧಿಯನ್ನು ಉಳಿಸುತ್ತಾರೆಂದರೆ, ಗಾಂಧಿಯವರನ್ನು ವಿಚಾರದ ಮೇಲೆ ಟೀಕಿಸುವವರು ಎಂದು. ಇಂದು ಹಿಂತಿರುಗಿ ನೋಡಿದಾಗ ಅದು ನಿಜ ಅನ್ನಿಸುತ್ತದೆ.

ಬಾಬಾಸಾಹೇಬ್‌ ಮತ್ತು ಗಾಂಧಿ ಅವರನ್ನು ಪೂನಾ ಒಪ್ಪಂದದ ಸಮಯದಲ್ಲಿ ಒಪ್ಪಲು ಸಾಧ್ಯವೇ? ಹಾಗಾದರೆ ನಮಗೆ ಬಾಬಾಸಾಹೇಬರ ಬಗ್ಗೆ ಗೌರವವಿಲ್ಲವೇ, ಖಂಡಿತ ಇದೆ.ನಾವು ಯಾರನ್ನಾದರೂ ಮೆಚ್ಚಲು ಅವರ ಭಕ್ತರಾಗಬೇಕಿಲ್ಲ ಎಂದು ರಾಜಕೀಯ ವಿಶ್ಲೇಷಕ ಯೋಗೇಂದ್ರ ಯಾದವ್‌ ಹೇಳಿದರು

Advertisements

ಅವರ ಆಳವಾದ ವ್ಯಕ್ತಿಗತ ಬದ್ಧತೆ ಬಹಳ ಎದ್ದು ಕಾಣುತ್ತದೆ. ಅವರು ಅರ್ಥ ಸಚಿವರಾಗಿ ಬಜೆಟ್‌ ಮಂಡಿಸಿದಾಗ, ಅವರು ತಮ್ಮ ಮಾರುತಿ 800 ಕಾರನ್ನು ತಾವೇ ಚಲಾಯಿಸಿಕೊಂಡು ಬಂದಿದ್ದರು. ಈ ಸಮಯದಲ್ಲಿ ದೇಶದ ಆರ್ಥಿಕ ನೀತಿ ಬದಲಾಗುವುದರಲ್ಲಿತ್ತು, ಅನೇಕರಿಗೆ ಆ ಸಮಯದ ಪ್ರಧಾನಮಂತ್ರಿಗಳ ವಿಚಾರವನ್ನು ತಿಳಿಯುವುದೂ ಕಷ್ಟವಾಗಿತ್ತು. ಮನಮೋಹನ್‌ ಸಿಂಗ್‌ ಅವರ ವ್ಯಕ್ತಿಗತ ಪ್ರಾಮಾಣಿಕತೆ ಮತ್ತು ಬದ್ಧತೆಯನ್ನು ಪ್ರಶ್ನಿಸುವಂತಿರಲಿಲ್ಲ. ಅವರ ಮೇಲೆ ಕಲ್ಲಿದ್ದಲು ಹಗರಣದ ಸಣ್ಣ ಆರೋಪ ಬಂದಾಗ ಅವರು ಎಷ್ಟು ನೋವುಂಡಿದ್ದರೆಂಬುದನ್ನು ಅನೇಕ ಪತ್ರಕರ್ತರು ಬರೆದಿದ್ದಾರೆ.

ನನ್ನನ್ನು ಪ್ರಧಾನ ಮಂತ್ರಿ ಕಚೇರಿಯಿಂದ ಕರೆಯಲಾಗಿತ್ತು. ಪ್ರಣಬ್‌ ಮುಖರ್ಜಿ ಅವರು ಈ ವಿಷಯಗಳಲ್ಲಿ ನಿಷ್ಣಾತರು. ಮನಮೋಹನ್‌ ಸಿಂಗ್‌ ಅವರು ಸುಮ್ಮನೇ ಕೂತಿದ್ದರು. ಕೊನೆಗೆ ನನಗೆ ಸ್ಯಾಂಪಲ್‌ ಸಂಗ್ರಹದ ಕುರಿತು ಪ್ರಶ್ನೆ ಕೇಳಿದರು. ಅವರು ಸ್ಪಷ್ಟವಾಗಿ ನನಗಿಂತ ಹೆಚ್ಚು ತಿಳಿದಿದ್ದರು, ಆದರೆ ಅದನ್ನು ತೋರಿಸಿಕೊಳ್ಳುವ ಪ್ರಯತ್ನ ಮಾಡಲಿಲ್ಲ. ಕಲಿಯುವ ಪ್ರಯತ್ನ ಮಾಡಿದರು. ನಮ್ಮಂತಹ ಅನೇಕರಿಗೆ 10ನಿಮಿಷದ ಸಭೆಯಲ್ಲೂ ನಮಗೆ ಗೊತ್ತಿರುವ ಎಲ್ಲವನ್ನೂ ತೋರಿಸುವ ಆಸೆಯಿರುತ್ತದೆ. ಆದರೆ ಅವರು ಹಾಗಿರಲಿಲ್ಲ.

ಮನಮೋಹನ್‌ ಸಿಂಗ್‌ ಅವರ ಅನೇಕ ಗುಣಗಳು ಅವರ ನಂತರ ಅಲ್ಲಿಗೆ ಬಂದು ಕೂತ ವ್ಯಕ್ತಿಯ ಕಾರಣದಿಂದ ಈಗ ಬಹಳ ದೊಡ್ಡವಾಗಿ ತೋರುತ್ತವೆ. ವಿನಯವಂತರಾಗಿರುವುದು, ಪ್ರಾಮಾಣಿಕರಾಗಿರುವುದು ಇತ್ಯಾದಿ. ಭಾರತೀಯರ ಮನಸ್ಸುಗಳಲ್ಲಿ ಒಂದು ವಿಶೇಷ ಸ್ಥಾನ ಇದೆ. ಮಾನವೀಯತೆ, ವಿನಯ ಮತ್ತು ಪ್ರಾಮಾಣಿಕತೆಗೆ ಇರುವ ಸ್ಥಾನ. ಲಾಲ್‌ ಬಹಾದ್ದೂರ್ ಶಾಸ್ತ್ರಿಯವರ ಬಗ್ಗೆ ಅದು ಭಾರತೀಯರಲ್ಲಿದೆ. ಮನ್ ಮೋಹನ್‌ ಸಿಂಗ್‌ ಅವರೂ ಈ ಸ್ಥಾನವನ್ನು ಹೊಂದಿದ್ದಾರೆ. ಆದರೆ ಜನರ ಮನಸ್ಸಿನಿಂದ ಈ ನೆನಪುಗಳು ಬಹಳ ಬೇಗ ಮರೆಯಾಗುತ್ತಿವೆ.

ಯಾವುದು ಅವರ ಅತಿದೊಡ್ಡ ಅವಗುಣ ಎಂದು ಹೇಳಲಾಗುತ್ತದೋ ಅದು ಅವರ ಅತಿದೊಡ್ಡ ಗುಣ ಎಂದು ನಾನು ಭಾವಿಸುತ್ತೇನೆ. ನಿರ್ಧಾರಗಳನ್ನು ಒಬ್ಬರೇ ತೆಗೆದುಕೊಳ್ಳದಿರುವುದು. ಭಾರತದ ನಿರ್ದಿಷ್ಟ ಐತಿಹಾಸಿಕ ಕಾರಣಗಳ ಹಿನ್ನೆಲೆಯಲ್ಲಿ ಭಾರತವು ಸದಾ ಕಾಲ ಐಕ್ಯರಂಗಗಳ ಮೇಲೆ ಆಧರಿಸುತ್ತಲೇ ಬಂದಿದೆ. ಜನರು ಐಕ್ಯರಂಗದ ಸರ್ಕಾರ ಬಂತು ಎಂದಾಗ ನಾನು ಹೇಳುತ್ತಿದ್ದೆ, ಭಾರತ ಯಾವಾಗಲೂ ಹಾಗೇಯೇ ಇತ್ತು ಎಂದು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ಒಂದು ಜಂಟಿ ವೇದಿಕೆಯೇ ಆಗಿತ್ತು.

ಹಾಗೆ ಸಿಂಗ್‌ ಅವರೂ ಕೂಡಾ ಸದಾ ಮಾತುಕತೆಯಾಡುವ, ಕೇಳಿ ತಿಳಿಯುವ ಮತ್ತು ಹಾಗೆ ನಿರ್ಧಾರ ತೆಗೆದುಕೊಳ್ಳುವ ವ್ಯಕ್ತಿಯಾಗಿದ್ದರು. ಇಂತಹ ಜಂಟಿ ವೇದಿಕೆಗಳು ನೋಡಲು ಬಹಳ ನೋವಿನ ವಿಷಯಗಳು, ಆದರೆ ದೀರ್ಘಕಾಲದಲ್ಲಿ ಅವು ನಮ್ಮಂತಹ ದೇಶಕ್ಕೆ ಒಳ್ಳೆಯದು ಮಾಡುತ್ತವೆ.

ವಿರೋಧಕ್ಕೆ ಅವರಿಗಿದ್ದ ಗೌರವ ಮತ್ತೊಂದು ವಿಷಯ. ಅವರ ಅಭಿಪ್ರಾಯವನ್ನು ಒಪ್ಪದಿರುವರನ್ನೂ ಸಹಿಸುವುದು ಮತ್ತು ಗೌರವಿಸುವುದು. ನಾನು ಅವರನ್ನು ಭೇಟಿಯಾದಾಗ ಅವರಿನ್ನೂ ಪ್ರಧಾನಮಂತ್ರಿಯಾಗಿರಲಿಲ್ಲ, ನಂತರ ಪ್ರಧಾನಮಂತ್ರಿಯಾದಾಗ ನಾನು ಅವರ ವಿರುದ್ಧ ಆಂದೋಲನ ನಡೆಸುತ್ತಿದ್ದೆ. ನಂತರ ಅವರು ಹುದ್ದೆಯಿಂದ ಇಳಿದ ನಂತರ ಭೇಟಿಯಾದೆ. ಯಾವ ಸಮಯದಲ್ಲೂ ನನ್ನ ಜೊತೆಗಿನ ಅವರ ವರ್ತನೆ ಮತ್ತು ಮಮತೆಯಲ್ಲಿ ಯಾವುದೇ ವ್ಯತ್ಯಾಸ ಆಗಿರಲಿಲ್ಲ. ಅವರ ಸರ್ಕಾರ ಉರುಳುವುದಕ್ಕೆ ಕಾರಣರಾದವರು ನಾವೆಂಬ ಯಾವುದೇ ಆಕ್ರೋಶದ ಕಣವೂ ಅವರಲ್ಲಿರಲಿಲ್ಲ.

ಜೆ ಎನ್‌ಯು ವಿ.ವಿ ಯ ವಿದ್ಯಾರ್ಥಿಗಳು ಮನಮೋಹನ್‌ಸಿಂಗ್‌ ಅವರನ್ನು ವಿರೋಧಿಸುವ ನಿರ್ಧಾರ ಮಾಡಿದ್ದರು. ಅವರ ಭೇಟಿಯ ಸಂದರ್ಭದಲ್ಲಿ ವಿದ್ಯಾರ್ಥಿಗಳ ಮೇಲೆ ಕ್ರಮ ಕೈಗೊಳ್ಳಬಾರದೆಂಬ ಸಂದೇಶ ಪಿಎಂ ಕಚೇರಿಯಿಂದ ಹೋಗಿತ್ತು. ಅಷ್ಟರ ಮಟ್ಟಿಗೆ ಅವರು ಸಹಿಷ್ಣುವಾಗಿದ್ದರು.

ನಾವೆಲ್ಲರೂ LPG ನೀತಿಗಳ ವಿರುದ್ಧ ಇದ್ದವರು. ನಾವೆಲ್ಲ ರಾಜಕೀಯವನ್ನು ಕಲಿಯುವ ಸಂದರ್ಭದಲ್ಲಿ ಜಾಗತೀಕರಣ, ಖಾಸಗೀಕರಣ, ಉದಾರೀಕರಣ ನೀತಿಗಳು ಭಾರತಕ್ಕೆ ಬಹಳ ಕೆಟ್ಟವು. ಅದನ್ನು ತಂದವರು ಮನಮೋಹನ್‌ ಸಿಂಗ್‌ ಎಂಬುದನ್ನೇ ನಾವು ಕಲಿಯುತ್ತಾ ಬಂದಿದ್ದೆವು. ಈ ನೀತಿಗಳು ಭಾರತಕ್ಕೆ ದೊಡ್ಡ ಅಪಾಯ ತಂದವು ಎಂದೇ ಇಂದಿಗೂ ಅನೇಕರು ನಂಬಿದ್ದಾರೆ.

ಅವರ ಇತರ ಎಲ್ಲ ಗುಣಗಳ ಬಗ್ಗೆ ಇಂದು ನಾವು ಗೌರವ ಹೊಂದಿದ್ದೇವೆ. ಆದರೆ ಅಷ್ಟು ಮಾತ್ರವಲ್ಲದೆ ಆಗ ಅವರ ಆರ್ಥಿಕ ನೀತಿಗಳಿಂದ ಭಾರತಕ್ಕೆ ಎಂತಹ ಅನಾಹುತ ಕಾದಿದೆ ಎನ್ನಲಾಗಿತ್ತೋ ಅದು ನಡೆಯಿತೇ? ಭಾರತ ಆರ್ಥಿಕ ವಸಾಹತುವಾಗಿ ಅಮೆರಿಕದ ಅಡಿಯಾಳಾಗುತ್ತದೆ ಎಂದು ಹೇಳಲಾಗಿತ್ತು. ಹಾಗೆ ಆಗಿದೆಯೇ? ಮನಮೋಹನ್‌ ಸಿಂಗ್‌ ಅವರು ನಮ್ಮಂತಹವರ ಮುಂದೆ ಒಂದು ಪ್ರಶ್ನೆ ಬಿಟ್ಟು ಹೋಗಿದ್ದಾರೆ. ಅವರ1991ರ ಭಾಷಣದಲ್ಲಿ, ಅವರು ಖಾಸಗೀಕರಣ 50 ವರ್ಷಗಳ ಹಿಂದೆಯೇ ಆಗಬೇಕಿತ್ತು ಎಂದು ಹೇಳುವುದಿಲ್ಲ. ಅವರು ಈಗ ನಾವು ಜಾಗತಿಕ ಸ್ಫರ್ಧೆಯನ್ನು ಎದುರಿಸುವ ಹಂತ ತಲುಪಿದ್ದೇವೆ ಅನಿಸುತ್ತದೆ ಎಂದು ಹೇಳಿದರು.

ಮುಕ್ತ ಮಾರುಕಟ್ಟೆಯ ಮೂಲಭೂತವಾದಿಗಳ ವಾದವನ್ನು ನಾನು ಒಪ್ಪುವುದಿಲ್ಲ, ಅಂತಹವರು ಕೃಷಿ ಸಾಲ ಮನ್ನಾ ಮಾಡುವುದನ್ನು ಒಪ್ಪುತ್ತಿರಲಿಲ್ಲ. ನಮಗಿರುವ ಆಯ್ಕೆ ಎರಡೇ, ಬಂಡವಾಳವಾದ ಅಥವಾ ಬಂಡವಾಳವಾದ 20% ರಿಯಾಯಿತಿಯೊಂದಿಗೆ ಎಂದು ನಾನು ಜೋಕ್‌ ಮಾಡುತ್ತಿದ್ದೆ. ಈಗ ನಾನು ನನ್ನ ಜೋಕ್‌ ಬಗ್ಗೆ ಯೋಚಿಸಿದಾಗ, ಅದು ಬಹಳಷ್ಟು ದೊಡ್ಡ ಜನಸಮೂಹಕ್ಕೆ ಸಾವು ಬದುಕಿನ 20% ಎಂದು ಅನಿಸುತ್ತದೆ. ಎಂಎಸ್‌ಪಿ ಯನ್ನು ಬಹಳ ದೊಡ್ಡ ಮಟ್ಟಕ್ಕೆ ಏರಿಸಲಾಗಿತ್ತು. 2002-2013ವರೆಗೆ ಕೃಷಿ ಕ್ಷೇತ್ರದಲ್ಲಿ ಬಂದ ಅಭಿವೃದ್ಧಿ ಹಿಂದೆಂದೂ ಇಲ್ಲದಂಥದ್ದು.

ರಾಜಕೀಯ ಭಿನ್ನ ಅಭಿಪ್ರಾಯಗಳ ಬಹಳ ದೊಡ್ಡ ಸರಣಿಯ ನಡುವೆ, ನೆಹರೂ ಅವರ ರಾಷ್ಟ್ರ ನಿರ್ಮಾಣವನ್ನು ಹೊಸ ಸನ್ನಿವೇಶದಲ್ಲಿ ಮುಂದಿಡುವ ಪ್ರಯತ್ನ ಅವರದಾಗಿತ್ತು. ಬಹುಶಃ ಸಾರ್ವಜನಿಕ ಶಿಕ್ಷಣದ ಬಗ್ಗೆ, ಅದರ ಆದ್ಯತೆಯ ಬಗ್ಗೆ ಪ್ರಧಾನ ಹುದ್ದೆಯಲ್ಲಿದ್ದ ವ್ಯಕ್ತಿಯೊಬ್ಬರು ಚಿಂತಿಸಿದ ಕೊನೆಯ ಅವಧಿ ಅದಾಗಿತ್ತು. ಅದಿನ್ನು ಮುಂದೆ ನಮಗೆ ಕಾಣುವುದಿಲ್ಲ.

ಅವರ ಆರ್ಥಿಕ ನೀತಿಗಳು ಯಾವುದೇ ಒಂದು ವ್ಯಾಪಾರಿ ಗುಂಪಿನ ಅಥವಾ ವ್ಯಕ್ತಿಯ ಪರವಾಗಿ ಕಳ್ಳತನದಲ್ಲಿ ನಡೆಸಿದಂತಹವು ಆಗಿರಲಿಲ್ಲ. ಭ್ರಷ್ಟಾಚಾರದ ಆರೋಪ ಖಂಡಿತ ಇತ್ತು. ಅದನ್ನು ನಾವು ಮರೆಯಲಾಗದು. ಆದರೆ ಒಟ್ಟಾರೆ ನೀತಿ ಅದಾಗಿರಲಿಲ್ಲ.

80 ಕೋಟಿ ಜನರಿಗೆ ಉಚಿತ ಆಹಾರ ಮೋದಿಯ ಕೊಡುಗೆಯಲ್ಲ, ಅದು ಕಾಂಗ್ರೆಸ್‌ ನ ಕಾರ್ಯಕ್ರಮ, ನರೇಗಾದಂತಹ ಯೋಜನೆಗಳು. ನಾವು ಸಮಾಜವಾದಿಗಳು ವೆಚ್ಚ ಮಾಡುವ ಮಂತ್ರಿಗಳಾಗಬಯಸುವವರು. ಹಣ ಜೋಡಿಸುವ ಕೆಲಸವನ್ನು ಮನಮೋಹನ್‌ ಸಿಂಗ್‌ ಅಂತಹವರಿಗೆ ಬಿಟ್ಟುಬಿಟ್ಟಿರುತ್ತೇವೆ ಎಂದು ನಾನು ತಮಾಷೆ ಮಾಡುತ್ತಿರುತ್ತೇನೆ.

ಅವರ ಆರ್ಥಿಕ ನೀತಿಗಳ ಪೂರ್ತಿ ಪರವಾದ ವ್ಯಕ್ತಿ ನಾನು ಈಗಲೂ ಅಲ್ಲ. ಆದರೂ ಅವರ ನೀತಿಗಳು ಪ್ರಾಮಾಣಿಕ ಉದ್ದೇಶ ಹೊಂದಿದ್ದವು ಮತ್ತು ಮಾನವೀಯವಾಗಿದ್ದವು. ಭಾರತದ ಭವಿಷ್ಯದ ಬಗ್ಗೆ ಕಾಳಜಿ ಹೊಂದಿದ್ದವು. ದೊಡ್ಡ ಮನುಷ್ಯರ ದೊಡ್ಡ ಆಲೋಚನೆಗಳ ಕುರಿತು ನಮ್ಮನ್ನು ಚಿಂತಿಸುವಂತೆ ಮಾಡುತ್ತವೆ. ಅವರನ್ನು ಮನದಾಳದಿಂದ ನೆನೆದು ಅವರಿಗೆ ಶೃದ್ಧಾಂಜಲಿ ಸಲ್ಲಿಸುತ್ತೇನೆ”.

1991ರಲ್ಲಿ ನಡೆದದ್ದು ಬಂಡವಾಳವಾದದ ಉದ್ಘಾಟನೆಯಲ್ಲ, ಅದು ಆಗಲೇ ಇತ್ತು.
ನಾವು ಬದುಕುತ್ತಿರುವುದು ಬಂಡವಾಳವಾದಿ ಆರ್ಥಿಕತೆಯಲ್ಲಿ ಇದರಲ್ಲಿ ಅದರ ರಚನೆಯಲ್ಲೇ ಇರುವ ಅಸಮಾನತೆಗಳಿವೆ. ನಾವು ಅದರ ವಿರುದ್ಧ ಟೀಕೆ ಮಾಡುತ್ತಿದ್ದೇವೆ. ಆದರೆ ಉತ್ತಮ ಪರ್ಯಾಯ ಏನು? ಸೋವಿಯತ್‌ ಅಥವಾ ಚೀನಾವನ್ನು ಅದರ ಅತ್ಯುತ್ತಮ ಉದಾಹರಣೆಯೊಂದಿಗೆ ನೋಡಿದಾಗಲೂ, ಸಿಪಿಎಂ ಆಳುವಾಗಲೂ ಜಾತೀಯತೆ, ಆರ್ಥಿಕ ಅಸಮಾನತೆ ಇದ್ದೇ ಇದೆ. ಮನಮೋಹನ್‌ ಸಿಂಗ್‌ ಇದನ್ನು ಬಗೆಹರಿಸಿದರೇ? ಇಲ್ಲ. ಬೇರೆಯವರು ಬಗೆಹರಿಸಿದರೇ? ಇಲ್ಲ. ಇದು ಬಹಳ ದೊಡ್ಡ ಸಂಕೀರ್ಣ ಪ್ರಶ್ನೆ ನಾವು ಉತ್ತರ ಕಂಡುಕೊಳ್ಳಬೇಕಿದೆ.

1991ರಲ್ಲಿ ನಡೆದದ್ದು ಬಂಡವಾಳವಾದದ ಉದ್ಘಾಟನೆಯಲ್ಲ, ಅದು ಆಗಲೇ ಇತ್ತು. ಅದರಲ್ಲಿ ಮಾಡಲಾದ ಬದಲಾವಣೆಗಳನ್ನು ಖಾಸಗೀಕರಣ ಎಂದು ಒಂದು ಬ್ರಾಕೆಟ್‌ ಅಡಿ ಹಾಕುವುದು ಸರಿಯಲ್ಲ. ಹೋಟೆಲ್‌, ರೆಸ್ಟೋರೆಂಟ್‌, ರೆಸಾರ್ಟ್‌ ಇತ್ಯಾದಿಗಳನ್ನು ಸರ್ಕಾರ ಏಕೆ ಮಾಡಬೇಕು? ಅದನ್ನು ಖಾಸಗಿಯವರು ಮಾಡಲಿ. ಹಾಗೆಯೇ ಖಾಸಗೀಕರಣವನ್ನು ಆಧರಿಸಿರುವ ಸರ್ಕಾರಗಳು ಶಿಕ್ಷಣ ಮತ್ತು ಆರೋಗ್ಯದ ಮೇಲೆ ಬಂಡವಾಳ ಹೂಡಿಕೆ ಮಾಡಬಾರದೆಂದಿಲ್ಲ, ಯುರೋಪಿನ ದೇಶಗಳು ಕೆನಡಾ ಮೊದಲಾದವನ್ನು ನೋಡಬಹುದು.

ವಿಶಾಲ ಬಂಡವಾಳಶಾಹಿ ಚೌಕಟ್ಟಿನಲ್ಲೂ ಇವೆಲ್ಲ ಜನರ ಪರವಾದ ನೀತಿಗಳು. ಯಾಕೆ ಬಂಡವಾಳವಾದದ ಚೌಕಟ್ಟಿನ ಹೊರಗೆ ನೋಡಬಾರದು ಎಂದು ನನ್ನ ಸ್ನೇಹಿತರು ಕೇಳಬಹುದು. ಖಂಡಿತ ನಾನು ನೋಡಬಯಸುತ್ತೇನೆ. ಅಂತಹ ವ್ಯವಸ್ಥೆಯನ್ನು ಸೂಚಿಸಿ ಎಂದು ಕೇಳುತ್ತಿದ್ದೇನೆ.

ನಾವೆಲ್ಲ ಅರೆಸತ್ಯಗಳನ್ನು ಹೇಳುತ್ತಿದ್ದೇವೆ. ಬಡತನ ಹೆಚ್ಚಿದ್ದರೆ ಅದು ಯಾಕೆ ಎಂದು ಹೇಳುತ್ತಿಲ್ಲ. ಕಡುಬಡವರ ಸ್ಥಿತಿ ಮೊದಲಿಗಿಂತ ಉತ್ತಮವಾಗಿದೆ. ಆದರೆ ಆರ್ಥಿಕ ಅಂತರ ಜಾಸ್ತಿಯಾಗಿದೆ. ಇದನ್ನು ನಾವು ಸರಿಯಾಗಿ ಒಡೆದು ನೋಡಬೇಕು. ನಾವು ಡಬ್ಬದೊಳಗೆ ಇರುವ ವಿಚಾರವನ್ನಷ್ಟೇ ನೋಡುತ್ತಾ ನೋಡುತ್ತಾ, ಖಾಸಗೀಕರಣ ಎಂಬುದನ್ನು ಬೈಗುಳದ ಪದವಾಗಿಸಿ ಅದರೊಳಗೆ ಇರುವ ಆಯ್ಕೆಗಳನ್ನು ನೋಡುತ್ತಿಲ್ಲ ಎಂದೆನಿಸುತ್ತದೆ- ಎಂದು ಪ್ರಶ್ನೆಯೊಂದಕ್ಕೆ ಯಾದವ್‌ ಉತ್ತರಿಸಿದರು.

ಅತೀಕ್

ಸಾಲಮನ್ನಾ ಆರ್ಥಿಕತೆಗೆ ಅನಿವಾರ್ಯ ಎಂದಿದ್ದರು ಸಿಂಗ್‌ : ಎಲ್‌ ಕೆ ಅತೀಕ್‌
ಮನಮೋಹನ್‌ ಸಿಂಗ್‌ ಅವರ ಎರಡನೇ ಅವಧಿಯಲ್ಲಿ ರೈತರ ಸಾಲ ಮನ್ನಾ ಮಾಡಬೇಕು ಎಂಬ ಚರ್ಚೆ ಶುರುವಾದಾಗ ಬಹುತೇಕ ಅಧಿಕಾರಿಗಳು ಅದರ ವಿರುದ್ಧ ಇತ್ತು. ರೈತರ ಅಭ್ಯಾಸಗಳು ಕೆಡುತ್ತವೆ. ಬ್ಯಾಂಕಿಂಗ್‌ ವ್ಯವಸ್ಥೆ ನಾಶವಾಗುತ್ತದೆ ಎಂದೇ ನಾವೆಲ್ಲ ಅಧಿಕಾರಿಗಳು ಚರ್ಚೆ ಮಾಡುತ್ತಿದ್ದೆವು. ಆದರೆ ಮನಮೋಹನ್‌ ಸಿಂಗ್‌ ಅವರು ನಮ್ಮ ಮನವರಿಕೆ ಮಾಡಿದ್ದರು. ರೈತ ಬೆಳೆ ಬೆಳೆಯಲು ಮಾಡುವ ವೆಚ್ಚ ಆತನಿಗೆ ಬರುವ ಲಾಭಕ್ಕಿಂತ ಹೆಚ್ಚು ಇದೆ. ಹಾಗಾಗಿ ರೈತರು ಸದಾ ಸಂಕಷ್ಟಕ್ಕೆ ಸಿಲುಕುತ್ತಾರೆ. ಆದರೆ ಸಾಲ ಮನ್ನಾ ದಶಕಗಳಿಗೆ ಒಮ್ಮೆ ಮಾಡುವ ಅಗತ್ಯವಿದೆ. ಅದರಿಂದ ಅವರ ಕಷ್ಟಗಳು ಕಡಿಮೆಯಾಗುತ್ತದೆ ಎಂದಿದ್ದರು. ಇದರ ಪರಿಣಾಮವೇ 65 ಸಾವಿರ ಕೋಟಿ ಸಾಲ ಮನ್ನಾ ಮಾಡಲಾಯಿತು. ಸಿಂಗ್‌ ಅವರು ನಿಜವಾಗಿಯೂ ಉದಾರವಾದಿ ಆರ್ಥಿಕ ನೀತಿ ಜಾರಿಗೆ ತರುವ ಮೂಲಕ ಸಮಾಜವಾದದತ್ತ ದೇಶವನ್ನು ಕೊಂಡೊಯ್ದರು ಎಂದು ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್‌ ಕೆ ಅತೀಕ್‌ ಹೇಳಿದರು.

ಆಹಾರ ಭದ್ರತಾಕಾಯ್ದೆ, ಮಾಹಿತಿ ಹಕ್ಕು ಕಾಯ್ದೆ, ಶಿಕ್ಷಣದ ಹಕ್ಕು ಕಾಯ್ದೆ, ನರೇಗಾದಂತಹ ಯೋಜನೆಗಳ ಮೂಲಕ ವಿಸ್ತೃತ ಕಲ್ಯಾಣ ರಾಜ್ಯದ ಕಾರ್ಯಸೂಚಿಯನ್ನು ಅನುಷ್ಠಾನಕ್ಕೆ ತಂದರು. ನರೇಗಾದಂತಹ ಒಂದೇ ಒಂದು ದೀರ್ಘಾವಧಿಯ ಕಲ್ಯಾಣ ಯೋಜನೆಗಳು ಬೇರೆ ಇಲ್ಲ ಎಂದು ಅವರು ಹೇಳಿದರು.

ಅಜೀಂ ಪ್ರೇಮ್‌ಜಿ ಯುನಿವರ್ಸಿಟಿಯ ಪ್ರಾಧ್ಯಾಪಕ ಎ ನಾರಾಯಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಾಗೃತ ಕರ್ನಾಟಕದ ಡಾ ವಾಸು ಸಂವಾದ ನಡೆಸಿಕೊಟ್ಟರು. ಸುಚಿತ್ರಾ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಡಾ. ಬಿ ಸಿ ಬಸವರಾಜು ಕಾರ್ಯಕ್ರಮ ನಿರೂಪಣೆ ಮಾಡಿದರು. ಸಂವಾದದಲ್ಲಿ ಸೀತಾಲಕ್ಷ್ಮಿ, ಡಾ ಹಿಮಾಂಶು, ವಿನಯ್‌ ಮಾಳಗೆ, ಸುಹೇಲ್‌ ಅಹ್ಮದ್‌, ಸುಬ್ರಹ್ಮಣ್ಯ ಮುಂತಾದವರು ಭಾಗವಹಿಸಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬ್ರಹ್ಮಾವರ | ಮಹೇಶ್ ಶೆಟ್ಟಿ ತಿಮರೋಡಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ

ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ವಿರುದ್ಧ ಅವಹೇಳನಾಕಾರಿ ಹೇಳಿಕೆ...

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

ಒಳಮೀಸಲಾತಿ | ಅಲೆಮಾರಿ ಸಮುದಾಯಗಳಿಗೆ ಸರ್ಕಾರದಿಂದ ನ್ಯಾಯ ಸಿಗಲಿ: ಬರಗೂರು ರಾಮಚಂದ್ರಪ್ಪ

ರಾಜ್ಯ ಸರ್ಕಾರವು ಜಾರಿಗೊಳಿಸಿರುವ ಒಳಮೀಸಲಾತಿಯಲ್ಲಿ ಅಲೆಮಾರಿ ಸಮುದಾಯಗಳಿಗೆ ನ್ಯಾಯ ಸಿಗಬೇಕು ಎಂದು...

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

Download Eedina App Android / iOS

X