ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು…
ನಾಟಕ ನಾಟಕವ ನಟಿಸುತ್ತ
ಕಂಗಳಾಲಿಯ ಕರಿಯ ನಾಳದಲ್ಲಿ,
ಈರೇಳು ಭುವನಂಗಳಡಗಿದವು!
ನಾಟಕ ನಾಟಕವ ನಟಿಸುತ್ತ,
ಆಡಿಸುವ ಸೂತ್ರದ ಪರಿ,
ಗುಹೇಶ್ವರಲಿಂಗ ನಿರಾಳಚೈತನ್ಯ.
ಪದಾರ್ಥ:
ಕಂಗಳಾಲಿ = ಕಣ್ಣುಗುಡ್ಡೆ
ಭುವನ = ಲೋಕ
ನಿರಾಳಚೈತನ್ಯ = ಮುಕ್ತ ಜೀವಿ
ವಚನಾರ್ಥ:
ಪುರಾಣ ಮತ್ತು ಶಾಸ್ತ್ರಗಳಲ್ಲಿ ಏಳು ಎಂಬ ಸಂಖ್ಯೆಗೆ ಹೆಚ್ಚಿನ ಮಹತ್ವವಿದೆ. ಏಳು ವರ್ಷ, ಏಳು ದಿನ, ಏಳು ತಿಂಗಳು, ಏಳು ಬಣ್ಣ, ಏಳು ಸಮುದ್ರ, ಸಪ್ತ ಋಷಿಗಳು, ಸಪ್ತ ಮಾತೃಕೆಯರು, ಸಪ್ತಪದಿ, ಸಪ್ತಸ್ವರ, ಏಳುಮಲೆ, ಎಪ್ಪತ್ತೇಳು ಮಲೆ, ಏಳು ಕುಂಡಲವಾಡ, ಏಳೇಳು ಜನ್ಮ, ಏಳುಮಲ್ಲಿಗೆ ತೂಕದ ರಾಜಕುಮಾರಿ ಹೀಗೆ ಏಳು ಎಂಬ ಸಂಖ್ಯೆ ಮಹತ್ತರವಾದುದು.
ಭೂಮಿಯು ಬ್ರಹ್ಮಾಂಡದ ಕೇಂದ್ರ ಬಿಂದು.
ವೇದಗಳಲ್ಲಿ ಮತ್ತು ಪುರಾಣಗಳಲ್ಲಿ ಭೂಮಿಯ ಕೆಳಗೆ ಏಳು ಲೋಕಗಳಿವೆ ಎಂದು ಹೇಳಲಾಗಿದೆ. ಅವುಗಳೆಂದರೆ ಅತಳ, ವಿತಳ, ಪಾತಾಳ, ಸುತಳ, ತಳಾತಳ, ರಸಾತಳ ಮತ್ತು ಮಹಾತಳ. ಆ ದೇವನ ಕಣ್ಣುಗುಡ್ಡೆಗಳ ಕಪ್ಪು ರಂಧ್ರದಲ್ಲಿ ಈ ಏಳು ಲೋಕಗಳೇ ಅಡಗಿವೆ ಎಂಬುದು ಅಲ್ಲಮನ ಅಭಿಪ್ರಾಯ.
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅಲ್ಲದಾಟ
ಕಂಗಳಾಲಿಯ ಕರಿಯ ನಾಳದಲ್ಲಿ ಏಳು
ಭುವನಗಳನ್ನು ಅಡಗಿಸಿಟ್ಟುಕೊಂಡವ ಈ ಭೂಮಿಯ ಮೇಲೆ ಮಾಡುತ್ತಿರುವುದೇನು? ನಾಟಕ! ಜಗದೀಶನಾಡುವ ಜಗವೇ ನಾಟಕರಂಗ. ಆ ನಾಟಕರಂಗದಲ್ಲಿ ನಾವು ಪಾತ್ರಧಾರಿಗಳಲ್ಲ. ನಾವೂ ನಾಟಕ ಮಾಡುತ್ತಿದ್ದೇವೆ. ಜಗತ್ತಿನ ಈ ನಾಟಕದಲ್ಲಿ ಜೀವನ ನಡೆಸುವುದೇ ಒಂದು ನಾಟಕ. ನಾಟಕದಲ್ಲಿ ನಾಟಕ ನಟಿಸುತ್ತಿದೆ. ನಾಟಕದಲ್ಲಿ ನಾಟಕವನಾಡಿಸುವವನ ಕೈಯಲ್ಲಿ ಆಡುತ್ತಿರುವ ಸೂತ್ರದ ಪರಿಗೆ ತಕ್ಕಂತೆ ತಕಥೈ ಎಂದು ನಟಿಸುತ್ತಿದ್ದೇವೆ. ಆ ಆಡಿಸುವಾತನೋ ಸ್ವಲ್ಪವೂ ಆತಂಕಗೊಳ್ಳದ ವಿಚಲಿತನಾಗದ ನಿರ್ಲಿಪ್ತ, ನಿರಾಳ. ಸದಾ ಚೈತನ್ಯ ಚಿಮ್ಮವ ಚಿನ್ಮಯಿ.
ಪದಪ್ರಯೋಗಾರ್ಥ:
ನಾಟಕ ನಾಟಕವ ನಟಿಸುತ್ತ ಎಂಬ ಪದ ಪ್ರಯೋಗವೇ ಅತ್ಯಂತ ನಾಟಕೀಯವಾಗಿದೆ. ನಾಟಕವೊಂದು ನಡೆಯುತ್ತಿದೆ. ಆ ನಾಟಕದೊಳಗೆ ಇನ್ನೊಂದು ನಾಟಕ ನಟಿಸುತ್ತಿದೆ. ಎಲ್ಲದರ ಸೂತ್ರದಾರ ಮತ್ತು ನಾಟಕಕಾರ ಒಬ್ಬನೇ. ಇತ್ತೀಚಿಗೆ ಬೆಂಗಳೂರಿನಲ್ಲಿ “ಕಾಂತ ಮತ್ತು ಕಾಂತ” ಎಂಬ ನಾಟಕ ಯಶಸ್ವಿ ಪ್ರದರ್ಶನ ಕಂಡಿತು. ಮುಖ್ಯಮಂತ್ರಿ ಚಂದ್ರು ಮತ್ತು ಸಿಹಿಕಹಿ ಚಂದ್ರು ಇಬ್ಬರೇ ನಟಿಸಿದ ನಾಟಕದಲ್ಲಿ ಆ ಎರಡು ಪಾತ್ರಗಳೇ ನಾಟಕದಲ್ಲಿ “ಸ್ವಾಮಿ ಮತ್ತು ಸ್ವಾಮಿ” ಎಂಬ ಮತ್ತೊಂದು ನಾಟಕ ನಟಿಸುತ್ತವೆ. ನಾಟಕದೊಳಗೆ ನಾಟಕ ನಟಿಸುತ್ತದೆ. ರಂಗಕರ್ತೃವಿನ ನಾಟಕೀಯ ಕಲ್ಪನೆಗೂ ಅಲ್ಲಮನ ಕಾವ್ಯ ಕಾಣ್ಕೆಗೂ ಹೀಗೊಂದು ಕಾಕತಾಳೀಯ ನಾಟಕೀಯತೆ ಈ ವಚನದಲ್ಲಿ.

ಹರಿಹರ ಶಿವಕುಮಾರ್
ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.