ದೆಹಲಿ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ನವದೆಹಲಿಯಲ್ಲಿ ಲೋಕಸಭೆಯ ಮಾಜಿ ಸಂಸದ ಪರ್ವೇಶ್ ವರ್ಮಾ ಅವರನ್ನು ದೆಹಲಿ ಮಾಜಿ ಮುಖ್ಯಮಂತ್ರಿ, ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ವಿರುದ್ಧ ಬಿಜೆಪಿ ಕಣಕ್ಕಿಳಿಸಿದೆ.
ದೆಹಲಿ ವಿಧಾನಸಭೆ ಚುನಾವಣೆಗೆ ಬಿಜೆಪಿ 29 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಕಲ್ಕಾಜಿ ಕ್ಷೇತ್ರದಲ್ಲಿ ಎಎಪಿಯಿಂದ ಸ್ಪರ್ಧಿಸುತ್ತಿರುವ ದೆಹಲಿ ಮುಖ್ಯಮಂತ್ರಿ ಆತಿಶಿ ವಿರುದ್ಧ ಬಿಜೆಪಿ ಹಿರಿಯ ನಾಯಕ ರಮೇಶ್ ಬಿಧುರಿ ಸ್ಪರ್ಧಿಸಲಿದ್ದಾರೆ.
ಇದನ್ನು ಓದಿದ್ದೀರಾ? ದೆಹಲಿ ವಿಧಾನಸಭೆ ಚುನಾವಣೆ | ಎಎಪಿಯ ಅಂತಿಮ ಅಭ್ಯರ್ಥಿ ಪಟ್ಟಿ ಬಿಡುಗಡೆ
ಇನ್ನು ಎಎಪಿ ಮಾಜಿ ಸಚಿವರಾದ ರಾಜ್ ಕುಮಾರ್ ಆನಂದ್ ಮತ್ತು ಕೈಲಾಶ್ ಗಹ್ಲೋಟ್ ಕೂಡಾ ಬಿಜೆಪಿ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ. ಕಳೆದ ವರ್ಷ ಎಎಪಿಯಿಂದ ಬಿಜೆಪಿಗೆ ಪಲಾಯನಗೊಂಡ ಇಬ್ಬರೂ ಕೂಡಾ ಈ ಬಾರಿ ದೆಹಲಿ ಚುನಾವಣೆಯಲ್ಲಿ ಬಿಜೆಪಿಯ ಅಭ್ಯರ್ಥಿಗಳಾಗಿದ್ದಾರೆ.
ಇನ್ನು ಮತದಾರರಿಗೆ ಹಣ ಹಂಚುತ್ತಿರುವ ಆರೋಪ ಎದುರಿಸಿರುವ ಪರ್ವೇಶ್ ವರ್ಮಾ ಅವರು ಕೇಜ್ರಿವಾಲ್ ಎದುರು ಸ್ಪರ್ಧೆಗಿಳಿದಿದ್ದಾರೆ. ಇವರಿಬ್ಬರ ಜೊತೆ ಕಾಂಗ್ರೆಸ್‌ನಿಂದ ದೆಹಲಿಯ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರ ಪುತ್ರ ಸಂದೀಪ್ ದೀಕ್ಷಿತ್ ಅವರು ಕಣಕ್ಕಿಳಿದಿದ್ದಾರೆ.
ಕೇಜ್ರಿವಾಲ್ 2013ರಿಂದ ನವದೆಹಲಿ ಕ್ಷೇತ್ರದ ಶಾಸಕರಾಗಿದ್ದಾರೆ. ಈ ಕ್ಷೇತ್ರವನ್ನು ತನ್ನ ಹಿಡಿತಕ್ಕೆ ಪಡೆಯಲು ಈಗ ವರ್ಮಾ ಮುಂದಾಗಿದ್ದಾರೆ. ಈ ನಡುವೆ ದೆಹಲಿಯ ಮಾಜಿ ಮುಖ್ಯಮಂತ್ರಿ ಸಾಹಿಬ್ ಸಿಂಗ್ ವರ್ಮಾ ಅವರ ಪುತ್ರ ವರ್ಮಾ ಮಹಿಳೆಯರಿಗೆ 1,100 ರೂಪಾಯಿಗಳನ್ನು ಹಂಚಿದ್ದಾರೆ ಎಂಬ ಆರೋಪವೂ ಇದೆ. ವರ್ಮಾ ವಿರುದ್ಧ ಎಎಪಿ ಇಡಿಗೆ ದೂರು ಸಲ್ಲಿಸಿದೆ. ಆದರೆ ವರ್ಮಾ ಈ ಆರೋಪವನ್ನು ಅಲ್ಲಗಳೆದಿದ್ದಾರೆ.
ಇದನ್ನು ಓದಿದ್ದೀರಾ? ದೆಹಲಿ| ಚುನಾವಣೆ ಹೊಸ್ತಿಲಲ್ಲೇ ಐವರು ಕಾಂಗ್ರೆಸ್ ನಾಯಕರು ಬಿಜೆಪಿ ಸೇರ್ಪಡೆ
ಇನ್ನು ಬಿಜೆಪಿ ತನ್ನ ಗಾಂಧಿ ನಗರ ಶಾಸಕ ಅನಿಲ್ ಬಾಜ್‌ಪೇಯ್ ಅವರನ್ನು ಕೈಬಿಟ್ಟು ದೆಹಲಿಯ ಕಾಂಗ್ರೆಸ್ ಮಾಜಿ ಮುಖ್ಯಸ್ಥ ಅರವಿಂದರ್ ಸಿಂಗ್ ಲವ್ಲಿಗೆ ಟಿಕೆಟ್ ನೀಡಿದೆ. ಕಾಂಗ್ರೆಸ್ ಸರ್ಕಾರದಲ್ಲಿ 2003ರಿಂದ 2013ರವರೆಗೆ ಸಚಿವರಾಗಿದ್ದ ಲವ್ಲಿ ಕಳೆದ ವರ್ಷ ಬಿಜೆಪಿ ಸೇರಿದ್ದರು.
ಇನ್ನು ಎಎಪಿ ಮಾಜಿ ಸಚಿವ ಕೈಲಾಶ್ ಗಹ್ಲೋಟ್ ಟರ್ಫ್ ನಜಾಫ್‌ಗಢ್ ಬದಲಿಗೆ ಬಿಜ್ವಾಸನ್‌ನಿಂದ ಕಣಕ್ಕಿಳಿದಿದ್ದಾರೆ. ರಾಜ್ ಕುಮಾರ್ ಆನಂದ್ ಅವರು ಪಟೇಲ್ ನಗರದ ಅಭ್ಯರ್ಥಿಯಾಗಿದ್ದಾರೆ.
ಎಎಪಿ ಈಗಾಗಲೇ ದೆಹಲಿಯ ಎಲ್ಲಾ 70 ವಿಧಾನಸಭಾ ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಘೋಷಿಸಿದ್ದು, ಕಾಂಗ್ರೆಸ್ ಇದುವರೆಗೆ 47 ಸ್ಥಾನಗಳಿಗೆ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ.
