ರಾಯಚೂರು ಜಿಲ್ಲೆಯ ದೇವದುರ್ಗ ಕ್ಷೇತ್ರದ ಜೆಡಿಎಸ್ ಶಾಸಕಿ ಕರೆಮ್ಮ ಜಿ ನಾಯಕ ನಿವಾಸ ಪಕ್ಕದಲ್ಲಿದ್ದ ಪೊಲೀಸ್ ಕ್ವಾಟ್ರಸ್ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಮುಖಂಡ ಸುರೇಶ್ ನಾಯಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಶಾಸಕಿ ಕರೆಮ್ಮ ನಾಯಕ್ ಇವರು ಸ.ನಂ. 506 ರ ಕೃಷಿ ಭೂಮಿಯಲ್ಲಿ ಸುಮಾರು 10 ಗುಂಟೆಯಷ್ಟು ಜಾಗವನ್ನು ಮನೆ ಕಟ್ಟಿಸಲು ಕೊಂಡುಕೊಂಡಿರುತ್ತಾರೆ. ಮನೆ ಕಟ್ಟಿಸುವ ಸಮಯದಲ್ಲಿ ಪೊಲೀಸ್ ಇಲಾಖೆಗೆ ಸಂಬಂಧಿಸಿದ ಸುಮಾರು 10 ಫೀಟ್ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಖಾಸಗಿ ಕಚೇರಿ ಮನೆ ಕಟ್ಟಿಸಿಕೊಂಡಿರುತ್ತಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ಶಾಸಕಿ ಕರೆಮ್ಮ ಜಿ ನಾಯಕ ಅವರು ತಮ್ಮ ಮನೆಗೆ ರಸ್ತೆ ನಿರ್ಮಿಸಿಕೊಳ್ಳಲು ಪೊಲೀಸ್ ಇಲಾಖೆ ತಮ್ಮ ವ್ಯಾಪ್ತಿಗೆ ಅಳವಡಿಸಿದ ತಂತಿ ಬೇಲಿಯನ್ನು ಕಿತ್ತು ಬಿಸಾಕಿ, ತಮ್ಮ ಮನೆಗೆ ಹೋಗಲು ರಸ್ತೆ ಮಾರ್ಗ ನಿರ್ಮಾಣ ಮಾಡಿದ್ದಾರೆ ಎಂದು ದೂರಿರುವ ಅವರು, ಶಾಸಕರ ಮನೆಗೆ ಹೋಗಲು ಯಾವುದೇ ರಸ್ತೆ ಮಾರ್ಗವಿರುವುದಿಲ್ಲ. ಆದರೂ ಅಧಿಕಾರ ದುರ್ಬಳಕೆ ಮಾಡಿಕೊಂಡು ಅತಿಕ್ರಮಿಸಿದ್ದಾರೆ ಎಂದು ದೂರಿದ್ದಾರೆ.
ಸ. ನಂಬರ್. 509/1 ರ ಮೂಲಕ ರಸ್ತೆ ಮಾಡಿಕೊಂಡು ಹಾದು ಹೋಗುತ್ತಾರೆ. ಪೊಲೀಸ್ ಇಲಾಖೆಗೆ ಸೇರಿದ ಜಾಗ ಸುಮಾರು 5 ಕೋಟಿಗೂ ಅಧಿಕ ಮೌಲ್ಯದ್ದಾಗಿದ್ದು ಶಾಸಕರಾದ ತಮ್ಮ ಗಂಡ ಗೋಪಾಲಕೃಷ್ಣ, ಮಗ ಸಂತೋಷ್, ಸಹೋದರ ತಿಮ್ಮರೆಡ್ಡಿ ಇವರೊಂದಿಗೆ ಸೇರಿಕೊಂಡು ತಮ್ಮ ಮನೆಗೆ ಹೋಗಲು ರಸ್ತೆ ಮಾರ್ಗ ಮಾಡಿಕೊಳ್ಳುವ ಉದ್ದೇಶದಿಂದ ಸುಮಾರು 20 ಅಡಿಯಷ್ಟು ಅಗಲವಾಗಿ ಜೆಸಿಬಿ ಮುಖಾಂತರ ಅತಿಕ್ರಮ ಪ್ರವೇಶ ಮಾಡಿ ತಂತಿ ಬೇಲಿಯನ್ನು ತೆಗಿಸಿ ಹಾಕಿಸಿರುತ್ತಾರೆ ಮತ್ತು ಸರಕಾರಕ್ಕೆ 20 ಲಕ್ಷದಷ್ಟು ನಷ್ಟ ಉಂಟು ಮಾಡಿರುತ್ತಾರೆ ಎಂದು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಬಾರ್ಡರ್-ಗವಾಸ್ಕರ್ ಟ್ರೋಫಿ | ಟೀಮ್ ಇಂಡಿಯಾಕ್ಕೆ ಸೋಲು; ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಕನಸು ಭಗ್ನ
ಪೊಲೀಸ್ ಇಲಾಖೆಯ ಜಾಗವನ್ನು ವಾಪಸ್ ಪಡೆದು ಒತ್ತುವರಿ ಮಾಡಿಕೊಂಡ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಎಂದು ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸಲ್ಲಿಸಿದ ಮನವಿಯಲ್ಲಿ ಒತ್ತಾಯಿಸಿದ್ದಾರೆ.
