ರಾಜ್ಯಸಭೆಯಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿದ್ದ ಹೇಳಿಕೆ ಖಂಡಿಸಿ ಸೋಮವಾರ ಕರೆ ನೀಡಿದ ಚಿಂಚೋಳಿ ಬಂದ್ ಯಶಸ್ವಿಯಾಯಿತು. ಪ್ರತಿಭಟನೆಯಲ್ಲಿ ಅಮಿತ್ ಶಾ ಅವರ ಶವಯಾತ್ರೆ ಅಣಕು ಶವಯಾತ್ರೆ ನಡೆಸಿ, ಭಾವಚಿತ್ರ ಪ್ರತಿಕೃತಿ ದಹಿಸಲಾಯಿತು.
ನಾಗರಿಕ ಹಿತರಕ್ಷಣಾ ಸಮಿತಿ ಕರೆ ನೀಡಿದ ಬಂದ್‌ಗೆ ವಿವಿಧ ಸಂಘಟನೆಗಳು ಬೆಂಬಲ ಸೂಚಿಸಿದರು. ಬೆಳಿಗ್ಗೆ 6 ರಿಂದ ಪ್ರತಿಭಟನೆ ಆರಂಭಿಸಿದ ಹೋರಾಟಗಾರರು, ಮಧ್ಯಾಹ್ನ 2 ಗಂಟೆವರೆಗೆ ಪಾದಯಾತ್ರೆ, ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಬಂದ್ ಶಾಂತಿಯುತವಾಗಿ ನಡೆಯಿತು.

ಆಸ್ಪತ್ರೆ ಮತ್ತು ಔಷಧಿ ಅಂಗಡಿಗಳು ಹೊರತುಪಡಿಸಿ ಉಳಿದೆಲ್ಲಾ ಅಂಗಡಿಗಳು ಮುಚ್ಚಲ್ಪಟ್ಟಿದ್ದವು. ಬೆಳ್ಳಿಗೆಯಿಂದಲೇ ವ್ಯಾಪಾರಸ್ಥರು ಸ್ವಯಂ ಪ್ರೇರಣೆಯಿಂದ ಅಂಗಡಿ ಮುಚ್ಚಿ ಬಂದ್‌ಗೆ ಬೆಂಬಲಿಸಿದರು. ಸಾರಿಗೆ ಸಂಸ್ಥೆಯ ಬಸ್‌ಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಬಸ್‌ಗಳು ರಸ್ತೆಗಿಳಿಯದ ಕಾರಣ ಪ್ರಯಾಣಿಕರು ಪರದಾಡುತ್ತಿದ್ದ ದೃಶ್ಯಗಳು ಕಂಡು ಬಂದವು. ಶಾಲಾ-ಕಾಲೇಜುಗಳಿಗೆ ಒಂದು ದಿನದ ರಜೆ ಘೋಷಿಸಲಾಗಿತ್ತು.
ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಅಮಿತ್ ಶಾ ಅವರ ಅಣಕು ಶವಯಾತ್ರೆ ನಡೆಸಿ, ಬಸವೇಶ್ವರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಶವವನ್ನು ದಹಿಸಿ ಆಕ್ರೋಶ ಹೊರ ಹಾಕಿದರು. ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಅಪಮಾನಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಸಂಪುಟದಿಂದ ವಜಾಗೊಳಿಸಿ, ಗಡಿಪಾರು ಮಾಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಬಹಳಷ್ಟು ಮಾಧ್ಯಮಗಳು ಉದ್ದಿಮೆಯಾಗಿ ಬದಲಾಗಿವೆ: ಶಾಸಕ ಬಿ ಆರ್ ಪಾಟೀಲ್
ಪ್ರತಿಭಟನೆಯಲ್ಲಿ ಪ್ರಮುಖರಾದ ಕನ್ನಡ ಪರ ಸಂಘಟನೆಯ ಮುಖಂಡ ಸಚಿನ್ ರಾಠೋಡ್, ತಾಲ್ಲೂಕು ಬಂಜಾರಾ ಸಮಾಜದ ಅಧ್ಯಕ್ಷ ರಾಮಶೆಟ್ಟಿ ಪವಾರ್, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಶರಣು ಪಾಟೀಲ್ ರವಿ ಪೋತಕಪಳ್ಳಿ, ತಾಲ್ಲೂಕು ಕೋಲಿ ಸಮಾಜದ ಮುಖಂಡ ಅನೀಲಕುಮಾರ ಪಾಟೀಲ್ ಹಾಗೂ ಪ್ರಮುಖರಾದ ಗೋಪಾಲ್ ರಾಂಪೂರೆ, ಕಾಮರಾವ್ ಕೊರವಿ, ಗೌತಮ್ ಬೊಮ್ಮನಳ್ಳಿ ಮಾರುತಿ ಗಂಜಗಿರಿ, ಸಂತೋಷ್ ಗುತ್ತೇದಾರ್, ಮಾಣಿಕರಾವ್ ಗುಲಗುಂಜಿ, ಮುಸ್ಲಿಂ ಸಮಾಜದ ಮುಖಂಡ ಅಬ್ದುಲ್ ಬಾಸಿತ್, ರೈತ ಸಂಘಟನೆ ಶರಣಬಸಪ್ಪ ಮಮ್ಮಶೆಟ್ಟಿ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಪಾಲ್ಗೊಂಡಿದ್ದರು.