ಹೊಸ ವರ್ಷದ ದಿನದಂದು ನಟ ಶಾರೂಖ್ ಖಾನ್ ಕುಟುಂಬವು ಮೆಕ್ಕಾಗೆ ತೆರಳಿದೆ. ಶಾರೂಖ್ ಅವರ ಪತ್ನಿ ಗೌರಿ ಅವರು ಮುಸ್ಲಿಂ ಧರ್ಮಕ್ಕೆ ಮತಾಂತರ ಆಗಿದ್ದಾರೆ ಎಂದು ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಚಿತ್ರದಲ್ಲಿ – ಶಾರುಖ್ ಖಾನ್, ಗೌರಿ ಖಾನ್, ಆರ್ಯನ್ ಖಾನ್ ಇದ್ದಾರೆ. ಆದರೆ, ಆ ಚಿತ್ರ ಅಸಲಿಯಲ್ಲ ನಕಲಿ ಎಂದು ತಿಳಿದುಬಂದಿದೆ.
ವೈರಲ್ ಆಗಿರುವ ಚಿತ್ರದಲ್ಲಿ, ನಟ ಶಾರುಖ್ ಖಾನ್, ಅವರ ಪತ್ನಿ, ಇಂಟೀರಿಯರ್ ಡಿಸೈನರ್ ಗೌರಿ ಹಾಗೂ ಮಗ, ಚಲನಚಿತ್ರ ನಿರ್ಮಾಪಕ ಆರ್ಯನ್ ಖಾನ್ ಇದ್ದಾರೆ. ಗೌರಿ ಅವರು ಕಪ್ಪು ಕುರ್ತಿ, ಬೂದು ಬಣ್ಣದ ಹಿಜಾಬ್ ಹಾಗೂ ಬಿಳಿ ಕುರ್ತಾ ಧರಿಸಿದ್ದು, ತಮ್ಮೆದುರು ನಿಂತಿರುವ ಶಾರುಖ್ ಅವರನ್ನು ನೋಡಿ ನಗುತ್ತಿದ್ದಾರೆ. ಆರ್ಯನ್ ಕೂಡ ಗೌರಿ ಅವರ ಹಿಂದೆ ಬಿಳಿ ಕುರ್ತಾ ಧರಿಸಿ ಶಾರುಖ್ ಅವರನ್ನು ನೋಡುತ್ತಿದ್ದಾರೆ. ಚಿತ್ರದ ಹಿನ್ನೆಲೆಯಲ್ಲಿ (ಬ್ಯಾಕ್‌ಗ್ರೌಂಡ್) ಮೆಕ್ಕಾದ ಪೂಜನಾ ಸ್ಥಳ ಕಾಣಿಸುತ್ತದೆ.
ಆ ಚಿತ್ರವನ್ನು ನಿಜವೆಂದು ನಂಬಿರುವ ಹಲವರು ಶಾರೂಖ್ ಅವರ ಪತ್ನಿ ಇಸ್ಲಾಂಗೆ ಮತಾಂತರವಾಗಿದ್ದಾರೆ ಎಂದು ಹಂಚಿಕೊಳ್ಳುತ್ತಿದ್ದಾರೆ. ಆದರೆ, ವಾಸ್ತವ ಬೇರೆಯೇ ಇದೆ.
ಆ ಚಿತ್ರ ನಕಲಿಯಾಗಿದ್ದು, ಖಾನ್ ಕುಟುಂಬ ಮೆಕ್ಕಾಗೆ ತೆರಳಿಲ್ಲ ಎಂದು ತಿಳಿದುಬಂದಿದೆ. ಚಿತ್ರವನ್ನು ಡೀಪ್‌ಫೇಕ್ ಅಥವಾ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಳಸಿ ರಚಿಸಲಾಗಿದೆ ಎಂದು ಸ್ಪಷ್ಟವಾಗಿದೆ.
ಧರ್ಮದ ಬಗ್ಗೆ ಗೌರಿ ಹೇಳಿರುವುದೇನು?
2005ರಲ್ಲಿ ‘ಕಾಫಿ ವಿಥ್ ಕರಣ್’ ಸೀಸನ್ 2ರ ಚಾಟ್ ಶೋನಲ್ಲಿ ಮಾತನಾಡಿದ್ದ ಗೌರಿ, “ಶಾರೂಖ್ ಮತ್ತು ತಮ್ಮ ನಡುವೆ ಧಾರ್ಮಿಕವಾಗಿ ಉತ್ತಮ ಹೊಂದಾಣಿಕೆ ಇದೆ. ನಾನು ಶಾರುಖ್ ಅವರ ಧರ್ಮವನ್ನು ಗೌರವಿಸುತ್ತೇನೆ. ಹಾಗೆಂದ ಮಾತ್ರಕ್ಕೆ, ನಾನು ಇಸ್ಲಾಂಗೆ ಮತಾಂತರವಾಗುತ್ತೇನೆ ಎಂದಲ್ಲ. ಮತಾಂತರದಲ್ಲಿ ನನಗೆ ನಂಬಿಕೆ ಇಲ್ಲ. ಪ್ರತಿಯೊಬ್ಬರೂ ವೈಯಕ್ತಿಕವಾಗಿ ಅವರ ಧರ್ಮವನ್ನು ಅನುಸರಿಸುತ್ತಾರೆ. ಸಹಜವಾಗಿ, ಪರಸ್ಪರರ ಧಾರ್ಮಿಕ ನಂಬಿಕೆ ಬಗ್ಗೆ ಗೌರವ ಇರಬೇಕು. ಶಾರುಖ್ ಎಂದಿಗೂ ನನ್ನ ಧರ್ಮಕ್ಕೆ ಅಗೌರವ ತೋರಿಸಿಲ್ಲ. ನಾನು ಕೂಡ ಅವರ ಧರ್ಮಕ್ಕೆ ಅಗೌರವ ತೋರುವುದಿಲ್ಲ” ಎಂದು ಹೇಳಿದ್ದರು.
ಶಾರುಖ್ ಮತ್ತು ಗೌರಿ 1991 ರಲ್ಲಿ ವಿವಾಹವಾದರು. ಅವರಿಗೆ ಮೂವರು ಮಕ್ಕಳಿದ್ದಾರೆ – ಆರ್ಯನ್, ಸುಹಾನಾ ಖಾನ್ ಮತ್ತು ಅಬ್ರಾಮ್ ಖಾನ್.