ಕೆನಡಾ ಅಧ್ಯಕ್ಷ ಸ್ಥಾನಕ್ಕೆ ಜಸ್ಟಿನ್ ಟ್ರುಡೊ ರಾಜೀನಾಮೆ ಘೋಷಿಸಿದ್ದಾರೆ. ಅಮೆರಿಕ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅಧಿಕಾರ ಸ್ವೀಕರಿಸಲಿರುವ ಎರಡು ವಾರಗಳಲ್ಲೇ ಟ್ರುಡೊ ರಾಜೀನಾಮೆ ನೀಡಿದ್ದಾರೆ. ಇದಾದ ಬೆನ್ನಲ್ಲೇ ಟ್ರಂಪ್ ಕೆನಡಾವನ್ನೇ ಅಮೆರಿಕ ಜೊತೆ ಸೇರಿಸಿಕೊಳ್ಳುವ ತನ್ನ ಸಾಮ್ರಾಜ್ಯಶಾಹಿ ವಹಿವಾಟಿಗೆ ಇಳಿದಿದ್ದಾರೆ. ಕೆನಡಾದ ಮೇಲೆ ಆರ್ಥಿಕ ಒತ್ತಡವನ್ನು ಹೇರಿ ಈಗ ತನ್ನ ತಿಕ್ಕಲುತನವನ್ನು ಟ್ರಂಪ್ ಪ್ರದರ್ಶಿಸುತ್ತಿದ್ದಾರೆ.
ಡೊನಾಲ್ಡ್ ಟ್ರಂಪ್ ತಾನು ಅಧಿಕಾರವನ್ನು ಸ್ವೀಕರಿಸಿದ ಬಳಿಕ ಕೆನಡಾದ ಮೇಲೆ ಅಧಿಕ ಆಮದು ಸುಂಕವನ್ನು ಹೇರುವ ಬೆದರಿಕೆಯನ್ನು ಹಾಕಿದ್ದಾರೆ. ಇದಾದ ಕೆಲವೇ ದಿನಗಳಲ್ಲಿ ಟ್ರುಡೋ ರಾಜೀನಾಮೆ ನೀಡುತ್ತಿದ್ದಂತೆ ಕೆನಡಾ ಯುಸ್‌ನೊಂದಿಗೆ ವಿಲೀನವಾದರೆ ಸುಂಕದ ಹೊರೆಯಿಂದ ತಪ್ಪಿಸಿಕೊಳ್ಳಬಹುದು ಎಂಬ ಬಾಲಿಶ ಆಫರ್ ಅನ್ನು ನೀಡಿದ್ದಾರೆ.
ಟ್ರುಡೋ ರಾಜೀನಾಮೆ ಬೆನ್ನಲ್ಲೇ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಟ್ರಂಪ್, “ಕೆನಡಾದ ಹಲವು ಮಂದಿ ಯುಎಸ್‌ನ 51ನೇ ರಾಜ್ಯವಾಗುವ ಒಲವು ಹೊಂದಿದ್ದಾರೆ. ಕೆನಡಾ ಯುಎಸ್‌ನೊಂದಿಗೆ ವಿಲೀನವಾಗಬಹುದು. ಹಾಗಾದರೆ ಕೆನಡಾದ ಮೇಲೆ ಯಾವುದೇ ತೆರಿಗೆ, ಸುಂಕ ಇರಲಾರದು. ಅವರು (ಕೆನಡಾ) ರಷ್ಯನ್ನರ ಮತ್ತು ಚೀನೀಯರ ಉಪಟಳದಿಂದ ತಪ್ಪಿಸಿಕೊಳ್ಳಬಹುದು. ಜೊತೆಯಾಗಿ ನಮ್ಮದು ಉತ್ತಮ ದೇಶವಾಗಲಿದೆ” ಎಂದು ಹೇಳಿಕೊಂಡಿದ್ದಾರೆ. ಈ ಮೂಲಕ ಕೆನಡಾಗೆ ಸುಂಕದ ಬೆದರಿಕೆ ಹಾಕುತ್ತಿದ್ದಾರೆ.
ಇದನ್ನು ಓದಿದ್ದೀರಾ? ಒತ್ತೆಯಾಳುಗಳನ್ನು ಬಿಡುಗಡೆ ಮಾಡದಿದ್ದರೆ ಭಾರೀ ಪರಿಣಾಮ: ಹಮಾಸ್‌ಗೆ ಡೊನಾಲ್ಡ್ ಟ್ರಂಪ್ ಎಚ್ಚರಿಕೆ
ಇನ್ನು ಕೆನಡಾ ಯುಎಸ್‌ನ ಭಾಗವಾಗಬೇಕು ಎಂದು ಟ್ರಂಪ್ ಹೇಳಿರುವುದೇ ಇದೇ ಮೊದಲೇನಲ್ಲ. ಟ್ರುಡೊ ಜೊತೆ ಮಾರ್-ಎ-ಲಾಗೊ ರೆಸಾರ್ಟ್‌ನಲ್ಲಿ ನಡೆದ ಸಭೆಯ ಸಂದರ್ಭದಲ್ಲಿ, “ಯುಎಸ್‌ನ ಸುಂಕದಿಂದಾಗಿ ಕೆನಡಾದ ಆರ್ಥಿಕತೆ ಕುಸಿಯುವುದಾದರೆ ಯುಎಸ್‌ನೊಂದಿಗೆ ಕೆನಡಾವನ್ನು ವಿನೀನಗೊಳಿಸಬಹುದು” ಎಂದು ಟ್ರಂಪ್ ಹೇಳಿಕೊಂಡಿದ್ದರು.
ಟ್ರುಡೊ ಪಕ್ಷದ ಆಂತರಿಕ ವಿಭಜನೆಯ ನಡುವೆ ಒಂದು ದಶಕದ ಅಧಿಕಾರದ ನಂತರ ತನ್ನ ಅಧಿಕಾರವನ್ನು ತೊರೆದಿದ್ದಾರೆ. ಲಿಬರಲ್ ಪಕ್ಷವು ಹೊಸ ನಾಯಕತ್ವವನ್ನು ಆಯ್ಕೆ ಮಾಡಿದ ನಂತರ ಪಕ್ಷದಲ್ಲಿರುವ ತನ್ನ ನಾಯಕತ್ವದಿಂದ ಕೆಳಗಿಳಿಯುವುದಾಗಿಯೂ ಹೇಳಿದ್ದಾರೆ. ಹೊಸ ನಾಯಕತ್ವ ಬರುವವರೆಗೂ ಟ್ರುಡೊ ಹಂಗಾಮಿ ಪ್ರಧಾನಿಯಾಗಿರಲಿದ್ದಾರೆ.

ಸದ್ಯ ಕೆನಡಾ ಮುಂದಿನ ಅಧ್ಯಕ್ಷರು ಯಾರಾಗಲಿದ್ದಾರೆ ಎಂಬ ಬಗ್ಗೆ ಚರ್ಚೆ ಹೆಚ್ಚಾಗಿದೆ. ವಿದೇಶಾಂಗ ವ್ಯವಹಾರಗಳ ಸಚಿವ ಮೆಲಾನಿ ಜೋಲಿ ಮತ್ತು ಹಣಕಾಸು ಸಚಿವ ಡೊಮಿನಿಕ್ ಲೆಬ್ಲಾಂಕ್ ಸೇರಿದಂತೆ ಹಲವು ನಾಯಕರು ಅಧ್ಯಕ್ಷ ಸ್ಥಾನದ ಸ್ಪರ್ಧೆಯಲ್ಲಿದ್ದಾರೆ.
ಇದನ್ನು ಓದಿದ್ದೀರಾ? ಡಾಲರ್ ಎದುರು ದಾಖಲೆ ಮಟ್ಟಕ್ಕೆ ಕುಸಿದ ರೂಪಾಯಿ: ಡೊನಾಲ್ಡ್ ಟ್ರಂಪ್ ಎಚ್ಚರಿಕೆ
ಇಬ್ಬರೂ ಕೂಡಾ ಡಿಸೆಂಬರ್ ಅಂತ್ಯದಲ್ಲಿ ಟ್ರಂಪ್ ಅವರ ಮಾರ್-ಎ-ಲಾಗೊ ರೆಸಾರ್ಟ್‌ಗೆ ಪ್ರಯಾಣಿಸಿದ್ದು ಒಟ್ಟಾವಾದ ಯೋಜನೆಯ ಬಗ್ಗೆ ಅವರಿಗೆ ತಿಳಿಸಿದ್ದರು. ಈ ವೇಳೆ ಟ್ರಂಪ್ ಮತ್ತು ಅವರ ನಡುವೆ ಸುಂಕದ ಬಗ್ಗೆಯೂ ಮಾತುಕತೆ ನಡೆದಿದೆ ಎನ್ನಲಾಗಿದೆ. ಏನೇ ಆದರೂ ಟ್ರಂಪ್ ಸುಂಕ ಹೆಚ್ಚಳದ ಬೆದರಿಕೆಯನ್ನು ಹಾಕಿ ಒಂದು ದೇಶವನ್ನೇ ಯುಎಸ್‌ಗೆ ಸೇರಿಸುವ ಕೀಳು ರಾಜಕಾರಣ ನಡೆಸುತ್ತಿರುವುದು ಖಂಡನೀಯ.
ಟ್ರಂಪ್ ಹುಚ್ಚಾಟಕ್ಕೆ ಕೊನೆಯಿಲ್ಲ
ಇನ್ನು ಟ್ರಂಪ್ ತನ್ನನ್ನು ತಾನು ಹುಚ್ಚಾಟದ ಅಧ್ಯಕ್ಷನಾಗಿಯೇ ಜನರ ಮುಂದೆ ಪ್ರಚಾರ ಮಾಡುತ್ತಾ ಅಧ್ಯಕ್ಷಗಾದಿಯನ್ನು ಏರಿದವರು. 2016ರಲ್ಲಿ ಮೊದಲ ಬಾರಿಗೆ ಚುನಾವಣೆಗೆ ನಿಂತಾಗಲೂ ತನ್ನ ಪ್ರಚಾರದಲ್ಲಿ ತಾನೊಬ್ಬ ಹಠವಾದಿ ಎಂಬಂತೆ ಬಿಂಬಿಸಿಕೊಂಡವರು. ಅದಾದ ಬಳಿಕ ತನ್ನ ತಿಕ್ಕಲುತನವನ್ನು ಅಲ್ಲಲ್ಲಿ ಪ್ರದರ್ಶಿಸುತ್ತಾ ಬಂದವರು ಡೊನಾಲ್ಡ್ ಟ್ರಂಪ್. ತನ್ನ ವಿವಾದಾತ್ಮಕ ಹೇಳಿಕೆಗಳಿಂದಲೂ ಹೆಚ್ಚಾಗಿ ಸುದ್ದಿಯಾಗಿರುವ ಟ್ರಂಪ್ ಯುಎಸ್ ಹೊರತುಪಡಿಸಿ ಉಳಿದ ದೇಶಗಳನ್ನು ಕೀಳಾಗಿ ಕಾಣುವ ಹೇಳಿಕೆಗಳನ್ನು ನೀಡಿ ಚರ್ಚೆಗೆ ಗ್ರಾಸರಾದವರು.
ಯುಎಸ್‌ನ ಸಾಮ್ರಾಜ್ಯಶಾಹಿ ಧೋರಣೆ
ವಿಶ್ವದ ದೊಡ್ಡಣ್ಣ ಇತರೆ ದೇಶಗಳ ಮೇಲೆ ತನ್ನ ಹಿಡಿತವನ್ನು ಕಾಪಾಡಿಕೊಳ್ಳಲು ಇದೇ ಮೊದಲು ಪ್ರಯತ್ನಿಸುತ್ತಿರುವುದಲ್ಲ. ಈ ಹಿಂದೆಯೂ ಹಲವು ದೇಶಗಳನ್ನು ತನ್ನ ಕಪಿಮುಷ್ಠಿಯಲ್ಲಿ ಇಟ್ಟುಕೊಳ್ಳುವ ಯತ್ನ ಅಮೆರಿಕ ಮಾಡಿದೆ. ಅಮೆರಿಕದ ಸಾಮ್ರಾಜ್ಯಶಾಹಿ ದಾಹಕ್ಕೆ ಹಲವು ಪುಟ್ಟ ದೇಶಗಳು ಬಲಿಯಾಗಿವೆ. ಯುದ್ಧ ಪಿಪಾಸು, ರಕ್ತದಾಹಕ್ಕೆ ಸಿಲುಕಿ ನಲುಗಿದ ರಾಷ್ಟ್ರಗಳಿಗಿಲ್ಲ ಲೆಕ್ಕ.
ಯುಎಸ್‌ನ ಸಾಮ್ರಾಜ್ಯಶಾಹಿ ಧೋರಣೆಯಿಂದಾಗಿ ಅದೆಷ್ಟೋ ಬಾರಿ ಯುದ್ಧ ಘೋಷಣೆ ಮಾಡಿದೆ. ಮೆಕ್ಸಿಕೋ, ಸ್ಪೇನ್, ಗ್ರೇಟ್ ಬ್ರಿಟನ್, ಜರ್ಮನಿ, ಆಸ್ಟ್ರಿಯಾ, ಹಂಗೇರಿ, ಇಟಲಿ, ಜಪಾನ್, ಬಲ್ಗೇರಿಯಾ, ರೋಮಾನಿಯಾ – ಹೀಗೆ ಹಲವು ದೇಶಗಳು ಯುಎಸ್ ದಾಳಿಗೆ ನಲುಗಿದೆ. ಕೆಲವು ದೇಶ ಮತ್ತೆ ಅಭಿವೃದ್ಧಿಯಾಗಿ ಪುಟ್ಟಿದೆದ್ದರೆ, ಇನ್ನು ಅವೆಷ್ಟೋ ದೇಶಗಳು ದೊಡ್ಡಣ್ಣನ ಬೂಟಿನಡಿ ಸಿಲುಕಿ ತತ್ತರಿಸುತ್ತಿವೆ. ಆದರೂ ಭೂಮಿಯ ದಾಹ ದೊಡ್ಡಣ್ಣನಿಗೆ ಬಿಟ್ಟಿಲ್ಲ.

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.