ಹುಬ್ಬಳ್ಳಿ ಧಾರವಾಡ ಪೌರಕಾರ್ಮಿಕರ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ನಡೆಸಿದ ಆಮರಣ ಉಪವಾಸ ಸತ್ಯಾಗ್ರಹ ಹೋರಾಟಕ್ಕೆ ಇಂದು ಪೂರ್ಣವಿರಾಮ ಇರಿಸಿದ್ದಾರೆ. ಹೋರಾಟ ಯಶಸ್ವಿಯಾದ ಹಿನ್ನೆಲೆಯಲ್ಲಿ ಪೌರಕಾರ್ಮಿಕರು ಪರಸ್ಪರ ಬಣ್ಣ ಹಚ್ಚಿ, ಸಿಹಿ ಹಂಚಿ, ಮೆರವಣಿಗೆಯ ಮೂಲಕ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದರು.
ಕಳೆದ 28 ದಿನಗಳಿಂದ ಹುಬ್ಬಳ್ಳಿ ಮಹಾನಗರ ಪಾಲಿಕೆ ಎದುರು ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಪೌರಕಾರ್ಮಿಕರು ಆಮರಣ ಉಪವಾಸ ಸತ್ಯಾಗ್ರಹ ಹೋರಾಟ ನಡೆಸಿದ್ದರು. ಈ ಕುರಿತು ಈದಿನ.ಕಾಮ್ ವರದಿಯನ್ನು ಮಾಡಿತ್ತು. ವಿಡಿಯೋ ಸುದ್ದಿ ಪ್ರಕಟಿಸಿತ್ತು. ಪೌರಕಾರ್ಮಿಕರ ನಿರಂತರ ಹೋರಾಟ ಮತ್ತು ಈದಿನ ವರದಿಗೆ ಎಚ್ಚೆತ್ತ ಪಾಲಿಕೆ ಅಡಳಿತವು ಪೌರಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಿ, ಮಹಾಪೌರರು ವತಿಯಿಂದ ನೇರ ನೇಮಕಾತಿ ಆದೇಶ ಪತ್ರಗಳನ್ನು ನೀಡಿದರು.
ಈ ಸಂದರ್ಭದಲ್ಲಿ ಮಹಾಪೌರರಾದ ರಾಮಣ್ಣ ಬಡಿಗೇರ ಮಾತನಾಡಿ, 2-3 ದಿನಗಳಲ್ಲಿ 252 ಪೌರಕಾರ್ಮಿಕರ ನೇಮಕಾತಿ ಅಧಿಸೂಚನೆ ಹೊರಡಿಸಲಾಗುವುದು. ಅಲ್ಲದೇ 799 ಗುತ್ತಿಗೆ ಪೌರಕಾರ್ಮಿಕರಿಗೆ ನೇರ ವೇತನ ಪಾವತಿಸುವಂತೆ 1 ತಿಂಗಳಿನಲ್ಲಿ ಅನುಮೋದನೆ ಪಡೆದು ನೇರ ವೇತನ ಪಾವತಿಸುವಂತೆ ಕ್ರಮ ಜರುಗಿಸಲಾಗುವುದು ಎಂದರು. ಧಾರವಾಡ ಜಿಲ್ಲಾ ಪರಿಶಿಷ್ಟ ಜಾತಿ /ಪರಿಶಿಷ್ಟ ಪಂಗಡಗಳ ಪೌರಕಾರ್ಮಿಕರ ಮತ್ತು ನೌಕರರ ಸಂಘಕ್ಕೆ ಕೊಠಡಿ ನೀಡಿದರು. 5 ತಿಂಗಳಿನ ಸಂಕಷ್ಟ ಬತ್ತೆ ಒಟ್ಟು ರೂ 10,000/- ಪೌರಕಾರ್ಮಿಕರಿಗೆ ಪಾವತಿಸಿದರು. 868 ಮಹಿಳಾ ಪೌರಕಾರ್ಮಿಕರಿಗೆ ರೂ 2500/-ರಂತೆ ಒಟ್ಟು ರೂ 21.70 ಲಕ್ಷ ಮೆಡಿಕಲ್ ಬೋನಸ್ ಹಣ ಪಾವತಿಸುವ ಬಗ್ಗೆ, ಇನ್ನುಳಿದ ಬೇಡಿಕೆಗಳ ಬಗ್ಗೆ ಜಂಟಿ ಸಭೆಯನ್ನು ನಡೆಸಿ ಲಿಖಿತ ನಡಾವಳಿ ಮೂಲಕ ನಿಗದಿತ ಸಮಯದಲ್ಲಿ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಮಹಾಪೌರರಾದ ರಾಮಣ್ಣ ಬಡಿಗೇರ, ಉಪ ಮಹಾಪೌರರಾದ ದುರಗಮ್ಮ ಬಿಜವಾಡ, ಸಭಾ ನಾಯಕ ವೀರಣ್ಣ ಸವಡಿ, ರಾಜಣ್ಣ ಕೊರವಿ ಉಪಸ್ಥಿತರಿದ್ದರು. ಪೌರಕಾರ್ಮಿಕರ ಸಂಘದ ಧಾರವಾಡ ಜಿಲ್ಲಾಧ್ಯಕ್ಷ ಡಾ. ವಿಜಯ ಗುಂಟ್ರಾಳ, ಬಸಪ್ಪ ಮಾದರ, ಆನಂದ ಬೆನಸಮಟ್ಟಿ, ಗುರುಶಾಂತಪ್ಪ ಚಂದಾಪುರ, ಮರಿಯಪ್ಪ ರಾಮಯ್ಯನವರ, ಗಾಳೆಪ್ಪ ದ್ವಾಸಲಕೇರಿ, ಗಂಗಮ್ಮ ಸಿದ್ರಾಮಪುರ, ದತಪ್ಪ ಆಪುಸಪೇಟ್, ಲಕ್ಷ್ಮೀ ಬೆಳ್ಳಾರಿ, ಅನಿತಾ ಈನಗೊಂಡ, ಲಕ್ಷ್ಮೀ ವಾಲಿ, ಮಂಜುಳಾ ವಜ್ಜಣ್ಣವರ, ಶಾಂತವ್ವ ಮಾದರ, ಪಾರವ್ವ ಹೊಸಮನಿ, ರೇಣುಕಾ ನಾಗರಾಳ, ಫಕೀರವ್ವ ಕಡಕೋಳ, ರೇಣುಕಾ ಸಾಂಬ್ರಾಣಿ, ಕನಕಪ್ಪ ಕೋಟಬಾಗಿ, ಭಾಗ್ಯಲಕ್ಷ್ಮೀ ಮಾದರ, ಅನ್ನಪೂರ್ಣ ಕೋಟಬಾಗಿ, ಸುನೀಲ್ ದೊಡ್ಡಮನಿ, ನಾಗೇಶ ಚುರಮುರಿ, ಪರಶುರಾಮ ಶಿಕ್ಕಲಗಾರ, ಗಾಳೆಪ್ಪ ರಣತುರ, ಲಕ್ಷ್ಮೀ ತೂರಿಹಾಲ್, ಕಸ್ತೂರಿ ತಮದಡ್ಡಿ, ಹುಲಿಗೆಮ್ಮ ಚಿಕ್ಕತುoಬಳ, ಯಲಪ್ಪ ಪಾಳೇದ, ಸಣ್ಣ ವೆಂಕಟೇಶ ಪಾಲವಾಯಿ ಮುಂತಾದ ಪೌರಕಾರ್ಮಿಕರು ಇದ್ದರು.