ಕೇಂದ್ರ ಗೃಹಸಚಿವ ಅಮಿತ್ ಶಾ ಅಂಬೇಡ್ಕರ್ ಕುರಿತು ಅಪಮಾನಕರ ಹೇಳಿಕೆ ನೀಡಿರುವ ಹಿನ್ನೆಲೆ ಕರ್ನಾಟಕದಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಈಗಾಗಲೇ ರಾಜ್ಯದ ಹಲವು ಜಿಲ್ಲೆಗಳಲ್ಲಿ ಬಂದ್ ಯಶಸ್ವಿ ಆಗಿದೆ. ಅದರಂತೆ ನಾಳೆ ಜನೆವರಿ 8ರಂದು ಹುಬ್ಬಳ್ಳಿ ಮತ್ತು ಧಾರವಾಡದಲ್ಲಿ ದಲಿತ ಸಂಘಟನೆಗಳು ಮತ್ತು ವಿವಿಧ ಸಂಘಟನೆಗಳ ವತಿಯಿಂದ ಬಂದ್ ಗೆ ಕರೆ ನೀಡಿದ್ದಾರೆ.
ಈಗಾಗಲೇ ದಲಿತಪರ ಸಂಘಟಕರು ಹುಬ್ಬಳ್ಳಿಯ ಜನತಾ ಬಜಾರ್ ಮಾರುಕಟ್ಟೆಯಲ್ಲಿ ಬೀದಿ ಬದಿ ವ್ಯಾಪಾರಿಗಳು, ಕಿರಾಣಿ ಅಂಗಡಿಗಳ ಮಾಲೀಕರಿಗೆ ಗುಲಾಬಿ ಹೂ ನೀಡಿ ಬಂದ್’ಗೆ ಸಹಕರಿಸುವಂತೆ ವಿನಂತಿಸಿದ್ದಾರೆ. ಬಂದ್’ಗೆ ಬಿಜೆಪಿಯಿಂದ ವಿರೋಧ ವ್ಯಕ್ತವಾಗಿದೆ. ಈ ಕುರಿತು ಹುಬ್ಬಳ್ಳಿ-ಧಾರವಾಡ ಪೊಲೀಸರು ಮುನ್ನೆಚ್ಚರಿಕೆ ಕ್ರಮವಾಗಿ ನಾಳೆಯ ಬಿಗಿ ಬಂದೋಬಸ್ತ’ಗೆ ತಯಾರಿ ನಡೆಸಿದ್ದಾರೆ.
ಅಮಿತ್ ಶಾ ವಜಾಕ್ಕೆ ಆಗ್ರಹಿಸಿ ಜನವರಿ 9 ರಂದು ಬೆಳಗ್ಗೆ 6 ರಿಂದ ಸಂಜೆ 6 ರ ವರೆಗೆ ಹುಬ್ಬಳ್ಳಿ – ಧಾರವಾಡ ಬಂದ್‌ಗೆ ಕರೆ ನೀಡಲಾಗಿದೆ. ಬಂದ್’ಗೆ 102 ಕ್ಕೂ ಹೆಚ್ಚು ವಿವಿಧ ದಲಿತ ಹಾಗೂ ಪ್ರಗತಿಪರ ಸಂಘಟನೆಗಳು ಬೆಂಬಲ ಸೂಚಿಸಿದ್ದು, ಶಾಂತಿಯುತವಾಗಿ ಬಂದ್ ಆಚರಣೆ ನಡೆಯಲಿದೆ. ಸಂವಿಧಾನ ಮತ್ತು ಸಂವಿಧಾನ ಶಿಲ್ಪಿಯನ್ನು ಗೌರವಿಸುವ ಎಲ್ಲ ಸಮುದಾಯಗಳು ಆಯಾ ಬಡಾವಣೆಗಳಿಂದ ಮೆರವಣಿಗೆ ಮೂಲಕ ಹುಬ್ಬಳ್ಳಿಯ ಚನ್ನಮ್ಮ ವೃತ್ತಕ್ಕೆ ಮತ್ತು ಧಾರವಾಡ ಜುಬ್ಲಿ ವೃತ್ತಕ್ಕೆ ಆಗಮಿಸಲಿವೆ ಎಂದು ದಲಿತಪರ ಸಂಘಟನೆ ಮುಖಂಡ ಗುರುನಾಥ ಉಳ್ಳಿಕಾಶಿ ಹೇಳಿದ್ದಾರೆ.
ಈ ವರದಿ ಓದಿದ್ದೀರಾ? ಹುಬ್ಬಳ್ಳಿ | ಪ್ಲಾಸ್ಟಿಕ್ ಚೀಲದಲ್ಲಿ ನವಜಾತ ಶಿಶು ಪತ್ತೆ
ಈ ಕುರಿತು ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ಪ್ರತಿಕ್ರಿಯೆ ನೀಡಿದ್ದು, ಬಂದ್ ಮಾಡುವ ಪ್ರತಿಭಟನಾಕಾರರು ಶಾಂತಿಯುತವಾಗಿ ತಮ್ಮ ಹೋರಾಟ ನಡೆಸಬಹುದು. ಬಲವಂತವಾಗಿ ಬಂದ್ ಮಾಡಿಸಿದರೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ. ಅಹಿತಕರ ಘಟನೆಗಳ ಮುಂಜಾಗೃತಿಗೆ 1500 ಸಿಬ್ಬಂದಿಯನ್ನು ಭದ್ರತೆಗೆ ನಿಯೋಜನೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.